ಶುಕ್ರವಾರ, ಜುಲೈ 30, 2021
25 °C

ಕೊರೊನಾ ಮಾನವ ಸೃಷ್ಟಿ ಎಂಬ ಪೋಸ್ಟ್‌ಗಳನ್ನು ಇನ್ನು ಡಿಲೀಟ್‌ ಮಾಡಲ್ಲ: ಫೇಸ್‌ಬುಕ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಕೊರೊನಾ ವೈರಸ್‌ ಮಾನವನ ಸೃಷ್ಟಿ ಎಂದು ಹೇಳುವ ಪೋಸ್ಟ್‌ಗಳನ್ನು ಇನ್ನು ಮುಂದೆ ಡಿಲಿಟ್‌ ಮಾಡದೇ ಇರಲು ಫೇಸ್‌ಬುಕ್‌ ನಿರ್ಧರಿಸಿದೆ. ವೈರಾಣುವಿನ ಮೂಲದ ಬಗೆಗಿನ ಚರ್ಚೆಗಳಿಗೆ ಈಗಷ್ಟೇ ಹೊಸ ಆಯಾಮ ಸಿಕ್ಕಿರುವ ಹಿನ್ನೆಲೆಯಲ್ಲಿ ಫೇಸ್‌ಬಕ್‌ ಈ ನಿರ್ಧಾರ ಕೈಗೊಂಡಿದೆ.

'ವೈರಾಣುವಿನ ಮೂಲದ ಬಗ್ಗೆ ನಡೆಯುತ್ತಿರುವ ತನಿಖೆಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ' ಎಂದು ಇಮೇಲ್ ಹೇಳಿಕೆಯಲ್ಲಿ ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

"ಸಾಂಕ್ರಾಮಿಕ ರೋಗದ ವಿಕಾಸದ ಸ್ವರೂಪಕ್ಕೆ ತಕ್ಕಂತೆ ಆರೋಗ್ಯ ತಜ್ಞರೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಮತ್ತು ಹೊಸ ಹೊಸ ಸಂಗತಿಗಳು ಹೊರಬಂದಂತೆ ನಿಯಮಿತವಾಗಿ ನಮ್ಮ ನೀತಿಗಳನ್ನು ನವೀಕರಿಸುತ್ತೇವೆ,' ಎಂದೂ ಅವರು ಹೇಳಿದ್ದಾರೆ.

ಕೊರೊನಾ ವೈರಸ್‌ಗೆ ಚೀನಾ ಪ್ರಯೋಗಾಲಯವೇ ಮೂಲ: ವರದಿ

ಕೋವಿಡ್‌–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ಚೀನಾದ ವುಹಾನ್‌ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಭಾನುವಾರ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಬಹಿರಂಗವಾಗದ ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿದೆ.

ಚೀನಾದಲ್ಲಿ ಎಷ್ಟು ಸಂಶೋಧಕರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರು ಎಂಬ ಕುರಿತ ಹೊಸ ವಿವರಗಳನ್ನು ಈ ವರದಿ ಒದಗಿಸುತ್ತದೆ. ಅಲ್ಲದೇ, ಎಷ್ಟು ಸಂಶೋಧಕರು ಸಂಶೋಧನೆ ವೇಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಆಸ್ಪತ್ರೆಗೆಳಿಗೆ ದಾಖಲಾಗಿದ್ದ ಅವಧಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಕೊರೊನಾ ವೈರಸ್‌ ಪ್ರಯೋಗಾಲಯದಿಂದಲೇ ಹಬ್ಬಿರುವ ಸಾಧ್ಯತೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಕ್ಕೆ ಮತ್ತಷ್ಟು ಬಲಬಂದಿದೆ.

ಕೊರೊನಾ ವೈರಸ್‌ ಮೂಲದ ಕುರಿತು ಮುಂದಿನ ಹಂತದ ತನಿಖೆ ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶೀಘ್ರ ಸಭೆ ನಡೆಸಲಿದೆ.

ಕೊರೊನಾ ಚೀನಾದ ಸೃಷ್ಟಿ ಎಂದಿದ್ದ ಅಮೆರಿಕ

ಕೊರೊನಾ ವೈರಸ್‌ ಚೀನಾದ ಸೃಷ್ಟಿ ಎಂದು ಅಮೆರಿಕ ಪ್ರತಿಪಾದಿಸುತ್ತಲೇ ಬಂದಿದೆ. ಇದೇ ವಿಚಾರವಾಗಿ ಎರಡೂ ದೇಶಗಳ ನಡುವೆ ವಾಗ್ವಾದಗಳೂ ನಡೆದಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಹಿರಂಗವಾಗಿಯೇ ಈ ಆರೋಪ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು