ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಸಂಘರ್ಷ: ತಾಲಿಬಾನ್ ಎದುರು ಐದು ಸವಾಲುಗಳು

Last Updated 31 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನಿಗಳು ಯುದ್ಧ ಗೆದ್ದಾಗಿದೆ, ಅವರೀಗ ಅಫ್ಗಾನಿಸ್ತಾನದ ಆಡಳಿತವನ್ನು ಸೂಕ್ತವಾಗಿ ನಿರ್ವಹಿಸಬೇಕಿದೆ.

ನಾಲ್ಕು ದಶಕಗಳಿಗಿಂತಲೂ ಹೆಚ್ಚು ಅವಧಿಯ ಯುದ್ಧದಿಂದ, ತೀವ್ರವಾದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ಜಟಿಲಗೊಂಡು ಬಡವಾಗಿರುವ, ರಾಜತಾಂತ್ರಿಕವಾಗಿ ಪ್ರತ್ಯೇಕವಾಗಿರುವ ಅಫ್ಗಾನಿಸ್ತಾನದ ಆಡಳಿತವು ತಾಲಿಬಾನ್‌ಗೆಗ ದೊಡ್ಡ ಅಗ್ನಿಪರೀಕ್ಷೆಯೇ ಆಗಿದೆ. ತಾಲಿಬಾನ್‌ ಮುಂದಿನ ಪ್ರಮುಖ ಐದು ಸವಾಲುಗಳು ಹೀಗಿವೆ:

1. 1996ರಿಂದ 2001ರವರೆಗೆ ಆಡಳಿತ ನಡೆಸಿದ್ದ ತಾಲಿಬಾನ್, ಇಸ್ಲಾಂನ ಕಠಿಣ ನಿಯಮಗಳನ್ನು ಅಫ್ಗಾನಿಸ್ತಾನದಲ್ಲಿ ಹೇರಿತ್ತು. ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಶಿಕ್ಷಣ ಪಡೆಯುವುದು ನಿಷಿದ್ಧವಾಗಿದ್ದವು. ರಾಜಕೀಯ ವಿರೋಧಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆದಿತ್ತು.

ಈ ಬಾರಿ ಸುಧಾರಿತ ಆಡಳಿತ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಮೆರಿಕ ಬೆಂಬಲಿತ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಸೇರಿದಂತೆ ವಿವಿಧ ನಾಯಕರ ಜೊತೆ ಮಾತುಕತೆಯನ್ನು ಪ್ರಸ್ತಾಪಿಸಿರುವ ತಾಲಿಬಾನ್, ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸುವುದಾಗಿ ತಿಳಿಸಿದೆ.

2. ಅಫ್ಗಾನಿಸ್ತಾನವು ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದು. 2001ರಲ್ಲಿ ತಾಲಿಬಾನ್ ಪತನದ ಬಳಿಕ ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ನೆರವು ಹರಿದುಬಂದಿತು. 2020ರಲ್ಲಿ ದೇಶದ ಜಿಡಿಪಿಯ ಶೇ 40ರಷ್ಟು ಹಣ ನೆರವಿನದ್ದೇ ಆಗಿತ್ತು. ಆದರೆ ಈ ಪೈಕಿ ಬಹುಪಾಲು ನಿಂತುಹೋಗಿದೆ. ಉಳಿದದ್ದರ ಬಗ್ಗೆ ಖಾತರಿಯಿಲ್ಲ.ಅಮೆರಿಕದಲ್ಲಿರುವ ಅಫ್ಗಾನ್ ಕೇಂದ್ರೀಯ ಬ್ಯಾಂಕ್ ನಿಧಿ ಪಡೆಯಲು ತಾಲಿಬಾನ್‌ಗೆ ಯಾವುದೇ ಅವಕಾಶ ಇಲ್ಲ.

ಅರ್ಥಿಕ ಸಮಸ್ಯೆಯು ದೇಶದ ಬಿಕ್ಕಟ್ಟನ್ನು ಉಲ್ಬಣಗೊಳಿಸಲಿದೆ. ಸರ್ಕಾರಿ ನೌಕರರಿಗೆ ಹೇಗೆ ಸಂಬಳ ನೀಡಬೇಕು ಮತ್ತು ನೀರು, ವಿದ್ಯುತ್ ಮೊದಲಾದ ಮೂಲಸೌಕರ್ಯಗಳ ನಿರ್ವಹಣೆ ಹೇಗೆ ಮಾಡುವುದು ಎಂಬುದಕ್ಕೆ ತಾಲಿಬಾನ್ ಸಿದ್ಧವಾಗಬೇಕಿದೆ. ದೇಶದಲ್ಲಿ ಮುಗಿಯುತ್ತಾ ಬಂದಿರುವ ದಿನಸಿ ದಾಸ್ತಾನು ಹಾಗೂ ಎದುರಾಗಲಿರುವ ತೀವ್ರ ಬರಗಾಲದ ಬಗ್ಗೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.

ಬಂಡುಕೋರರಾಗಿದ್ದಾಗ ತಾಲಿಬಾನ್ ದೊಡ್ಡ ಆದಾಯ ಹೊಂದಿತ್ತು. ಆದರೆ ಅಫ್ಗಾನಿಸ್ತಾನದ ರಾಷ್ಟ್ರೀಯ ಅವಶ್ಯಕತೆಗಳಿಗೆ ಹೋಲಿಸಿದರೆ ಇದು ಒಂದು ಸಣ್ಣ ಮೊತ್ತ ಎಂದು ತಜ್ಞರು ಹೇಳಿದ್ದಾರೆ.ಗಡಿ ದಾಟಲು ಸುಂಕ ಸೇರಿದಂತೆ, ಅಧಿಕಾರ ವಹಿಸಿಕೊಂಡ ಬಳಿಕ ಕೆಲವು ಆದಾಯದ ಮೂಲಗಳನ್ನು ತಾಲಿಬಾನ್ ಕಂಡುಕೊಂಡಿದೆ.

3. ಆರ್ಥಿಕ ಸಂಪನ್ಮೂಲದ ಜೊತೆಗೆ ತಾಲಿಬಾನ್‌ಗೆ ಅತಿಮುಖ್ಯವಾಗಿ ಬೇಕಿರುವುದು ಕೌಶಲಯುತ ಜನ. ಅತ್ತ ಅಮೆರಿಕದ ಪಡೆಗಳು ದೇಶ ತೊರೆಯುತ್ತಿದ್ದಂತೆಯೇ, ಇತ್ತ ಸರ್ಕಾರವು ನಿಯಂತ್ರಣ ಕಳೆದುಕೊಂಡಿತು.ಕೌಶಲ, ಅನುಭವ ಮತ್ತು ಸಂಪನ್ಮೂಲ ಹೊಂದಿರುವ ಅಫ್ಗನ್ನರೂ ನಿರ್ಗಮನಕ್ಕೆ ಮುಂದಾದರು.

ಅಧಿಕಾರಿಗಳು, ಬ್ಯಾಂಕರ್‌ಗಳು, ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಪದವೀಧರರು ತಾಲಿಬಾನ್ ಆಡಳಿತದ ಬಗ್ಗೆ ಭೀತಿ ಹೊಂದಿದ್ದಾರೆ. ಈ ಬಗ್ಗೆ ತಾಲಿಬಾನಿಗಳಿಗೂ ಅರಿವಿದೆ. ಹೀಗಾಗಿಯೇ, ವೈದ್ಯರು, ಎಂಜಿನಿಯರ್‌ಗಳಂತಹ ನುರಿತ ಅಫ್ಗನ್ನರ ಅಗತ್ಯವಿದ್ದು, ಅವರು ದೇಶ ಬಿಡಬಾರದು ಎಂದು ತಾಲಿಬಾನ್ ವಕ್ತಾರರು ಒತ್ತಾಯಿಸಿದ್ದಾರೆ.

4. ತಾಲಿಬಾನ್‌ನ ಮೊದಲ ಅವಧಿಯ ಆಡಳಿತವು ಏಕಮುಖವಾಗಿತ್ತು. ಈ ಬಾರಿ ಅಂತರರಾಷ್ಟ್ರೀಯ ಸಮುದಾಯದ ಒಲವು ಗಳಿಸುವ ಉದ್ದೇಶವನ್ನು ತಾಲಿಬಾನ್ ಹೊಂದಿದೆಯಾದರೂ, ಹಲವು ದೇಶಗಳು ಈಗಾಗಲೇ ಅಫ್ಗನ್‌ನಲ್ಲಿರುವ ರಾಯಭಾರ ಕಚೇರಿಗಳನ್ನು ಮುಚ್ಚಿವೆ.

ಈ ಕಾರಣದಿಂದ ತಾಲಿಬಾನ್ ಸಂಘಟನೆಯು ಪ್ರಾದೇಶಿಕ ಶಕ್ತಿಗಳಾದ ಪಾಕಿಸ್ತಾನ, ಇರಾನ್, ರಷ್ಯಾ ಮತ್ತು ಚೀನಾ ಜೊತೆ ಸಂಪರ್ಕ ಹೊಂದಿದೆ. ಅಮೆರಿಕ ಸೇರಿದಂತೆ ಯಾವ ದೇಶಗಳು ಇದನ್ನು ಮಾನ್ಯ ಮಾಡಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ವೇಳೆಚೀನಾ ಮತ್ತು ರಷ್ಯಾಗಳು ಗೈರಾಗಿರುವುದು,ತಾಲಿಬಾನ್ ಅನ್ನು ಹೇಗೆ ನಿರ್ವಹಿಸಬೇಕು ಎಂಬ ವಿಚಾರದಲ್ಲಿ ಸ್ಪಷ್ಟ ಭಿನ್ನಮತ ಕಂಡುಬಂದಿದೆ.

5. ತಾಲಿಬಾನ್ ಈಗ ಅಫ್ಗಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿದ್ದರೂ, ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಪರಿಹಾರ ಸಿಕ್ಕಿಲ್ಲ. ವಿರೋಧಿ ಬಣವಾದ ಐಎಸ್‌ ಖೊರಾಸನ್ ಈಗಾಗಲೇ ಸಕ್ರಿಯವಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದ ಬಳಿ ಆತ್ಮಾಹುತಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ಜೀವ ಬಲಿ ಪಡೆದಿದೆ.

ಅಫ್ಗಾನಿಸ್ತಾನದಲ್ಲಿ ಹೋರಾಟ ಮುಂದುವರಿಸುವುದಾಗಿ ಐಎಸ್ ಹೇಳಿದೆ. ತಾಲಿಬಾನ್ ಅನ್ನು ಧರ್ಮಭ್ರಷ್ಟ ಎಂದೂ ಕರೆದಿದೆ.ತಾಲಿಬಾನ್ ಈಗ ವಹಿಸುವ ಪಾತ್ರ ನಿರ್ಣಾಯಕವಾಗಿದೆ. ತಮ್ಮ ಬಂಡುಕೋರರು ಹಲವು ವರ್ಷಗಳಿಂದ ನಡೆಸಿದ ಅದೇ ರೀತಿಯ ದಾಳಿಗಳಿಂದ ಈಗ ಅವರು ಅಫ್ಗನ್ ಜನರನ್ನು ರಕ್ಷಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT