ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆಯ ಹಗ್ಗಕ್ಕೆ ಸಿಲುಕಿ ನರಳುತ್ತಿರುವಾಗಲೇ ಮರಿಗೆ ಜನ್ಮ ನೀಡಿದ ಕಪ್ಪು ತಿಮಿಂಗಿಲ

Last Updated 8 ಡಿಸೆಂಬರ್ 2021, 2:31 IST
ಅಕ್ಷರ ಗಾತ್ರ

ಸವನ್ನಾ: ಮೀನಿನ ಬಲೆಯ ಹಗ್ಗಕ್ಕೆ ಸಿಲುಕಿಕೊಂಡು ನರಳುತ್ತಿರುವಾಗಲೇ ಕಪ್ಪು ತಿಮಿಂಗಿಲ ಜಾರ್ಜಿಯಾ ಕಡಲಿನಲ್ಲಿ ಇತ್ತೀಚೆಗೆ ಒಂದು ಮರಿಗೆ ಜನ್ಮ ನೀಡಿದೆ. ಸುಮಾರು 20 ಅಡಿ ಉದ್ದದ ಬಲೆಯ ಹಗ್ಗವನ್ನು ಎಳೆಯುತ್ತಲೇ ನವಜಾತ ಮರಿಯ ಜೊತೆ ಸಂಚರಿಸುತ್ತಿರುವುದು ಪ್ರಾಣಿ ಪ್ರಿಯರ ಮನವನ್ನು ಕಲಕಿದೆ.

'ನಾರ್ಥ್‌ ಅಟ್ಲಾಂಟಿಕ್‌ ರೈಟ್‌ ವೇಲ್ಸ್‌ ಅಥವಾ ಬ್ಲಾಕ್‌ ವೇಲ್ಸ್‌' ಎಂದು ಗುರುತಿಸಲ್ಪಡುವ ಕಪ್ಪು ತಿಮಿಂಗಿಲ ಉತ್ತರ ಅಟ್ಲಾಂಟಿಕ್‌ನಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ತನಿಯಾಗಿದೆ. ತಜ್ಞರ ಪ್ರಕಾರ ಇವುಗಳ ಸಂಖ್ಯೆ 350ಕ್ಕಿಂತ ಕಡಿಮೆ. ಚಳಿಗಾಲದಲ್ಲಿ ಜಾರ್ಜಿಯಾ ಮತ್ತು ಫ್ಲೋರಿಡಾ ಕಡೆಗೆ ಮರಿ ಹಾಕಲು ವಲಸೆ ಬರುತ್ತವೆ.

'ಜಾರ್ಜಿಯಾದ ಕುಂಬರ್‌ಲೆಂಡ್‌ ದ್ವೀಪದ ಸಮೀಪ ಗುರುವಾರ ತಾಯಿ ತಿಮಿಂಗಿಲವು ಮರಿಯೊಂದಿಗೆ ಸಾಗುತ್ತಿರುವುದನ್ನು ವೈಮಾನಿಕ ಸಮೀಕ್ಷಾ ತಂಡ ಪತ್ತೆ ಮಾಡಿದೆ. ಮರಿ ತಿಮಿಂಗಿಲವು ಆರೋಗ್ಯವಾಗಿದೆ. ಅದರ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ' ಎಂದು ಜಾರ್ಜಿಯಾದ ನೈಸರ್ಗಿಕ ಸಂಪನ್ಮೂಲ ವಿಭಾಗದ ವನ್ಯಜೀವಿಗಳ ಜೀವಶಾಸ್ತ್ರಜ್ಞ ಕ್ಲೇ ಜಾರ್ಜ್‌ ಹೇಳಿದ್ದಾರೆ.

ಜನವರಿ 2011ರ ನಂತರ ಇದುವರೆಗೆ ಅಟ್ಲಾಂಟಿಕ್‌ ಸಮುದ್ರದಲ್ಲಿ 2 ಮರಿಗಳನ್ನು ಗುರುತಿಸಲಾಗಿದೆ. ಒಂದು ಮರಿಯನ್ನು ಸ್ವತಃ ಕ್ಲೇ ಜಾರ್ಜ್‌ ಅವರೇ ಗುರುತಿಸಿದ್ದಾಗಿ ತಿಳಿಸಿದ್ದಾರೆ. ಮತ್ತೊಂದು ಮರಿಯು ಬಲೆಯ ದಾರಕ್ಕೆ ಸಿಲುಕಿದ ತಾಯಿ ತಿಮಿಂಗಿಲದ ಜೊತೆಗಿರುವುದಾಗಿದೆ.

ಕಳೆದ ವಾರ ಪತ್ತೆಯಾದ ತಾಯಿ ತಿಮಿಂಗಿಲದ ತಲೆಯ ಮೇಲಿನ ನಿರ್ದಿಷ್ಟ ಗುರುತಿನ ಆಧಾರದಲ್ಲಿ ತಜ್ಞರು ಪತ್ತೆ ಮಾಡಿದ್ದಾರೆ. ಕಳೆದ ಮಾರ್ಚ್‌ನಿಂದ ತಿಮಿಂಗಿಲವು ಮೀನಿನ ಬಲೆಯ ಹಗ್ಗವನ್ನು ಎಳೆದಾಡುತ್ತ ಜೀವಿಸುತ್ತಿದೆ. ಮೊದಲ ಬಾರಿಗೆ ಇದನ್ನು ಮಸಾಚುಸೆಟ್ಸ್‌ನ 'ಕೇಪ್‌ ಕೋಡ್‌ ಬೇ'ನಲ್ಲಿ ಗುರುತಿಸಲಾಗಿತ್ತು. ತಿಮಿಂಗಿಲವು ದಕ್ಷಿಣದತ್ತ ವಲಸೆ ಆರಂಭಿಸುವ ಹೊತ್ತಿಗೆ ಬಲೆಯ ಹಗ್ಗದ ಉದ್ದವನ್ನು ಕಡಿಮೆ ಮಾಡುವಲ್ಲಿ ತಜ್ಞರು ಯಶಸ್ವಿಯಾಗಿದ್ದರು. ಆದರೆ ಹಗ್ಗವನ್ನು ಸಂಪೂರ್ಣವಾಗಿ ಅದರ ಬಾಯಿಯಿಂದ ಬಿಡಿಸಲು ಸಾಧ್ಯವಾಗಿರಲಿಲ್ಲ.

'ಬಲೆಯ ಹಗ್ಗಕ್ಕೆ ಸಿಲುಕಿದ್ದ ತಿಮಿಂಗಿಲವು ಜಾರ್ಜಿಯಾ ಕಡೆಗೆ ಬಂದಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಅದ್ಭುತವೆನಿಸುತ್ತಿದೆ. ಆದರೆ ತಾಯಿ ತಿಮಿಂಗಿಲವು ಸಾವಿನಂಚಿನಲ್ಲಿದೆ. ಅದಕ್ಕೆ ಬಲೆಯ ಹಗ್ಗವನ್ನು ಎಳೆಯುತ್ತ ಮರಿಯನ್ನು ಪೋಷಿಸಬೇಕಿದೆ. ಬಾಯಿಯಲ್ಲಾಗಿರುವ ಗಾಯ ಗುಣವಾಗಬೇಕಿದೆ. ಹಿಂತಿರುಗುವ ವರೆಗೆ ನಿರಾಹಾರಿಯಾಗಿರುವ ತಿಮಿಂಗಿಲವು ತನ್ನ ಶಕ್ತಿಯನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿ ತಾಯಿ ತಿಮಿಂಗಿಲದ ಜೀವ ಸಂಕಷ್ಟದಲ್ಲಿದೆ' ಎಂದು ಜಾರ್ಜ್‌ ವಿವರಿಸಿದ್ದಾರೆ.

ತಿಮಿಂಗಿಲಗಳು ದಕ್ಷಿಣದತ್ತ ವಲಸೆ ಬರುವ ಮೊದಲು ನ್ಯೂ ಇಂಗ್ಲೆಂಡ್‌ ಮತ್ತು ಕೆನಡಾದ ಸಮೀಪ ಹೊಟ್ಟೆ ತುಂಬ ಆಹಾರ ಸೇವಿಸುತ್ತವೆ ಹಾಗೂ ಮಿಲನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ನಂತರ ಮರಿಯಿಟ್ಟು ವಾಪಸ್‌ ಆಗುವ ವರೆಗೆ ಸುಮಾರು 3 ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಆಹಾರವನ್ನು ಸೇವಿಸುವುದಿಲ್ಲ.

ಪ್ರಸ್ತುತ, ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳ ವರೆಗೆ ತಿಮಿಂಗಿಲಗಳು ಮರಿಗಳಿಗೆ ಜನ್ಮ ನೀಡುವ ಕಾಲವಾಗಿದೆ.

ತಾಯಿ ತಿಮಿಂಗಿಲ ಮತ್ತು ಅದರ ಮರಿಯ ಮೇಲೆ ವಿಶೇಷ ನಿಗಾ ಇರಿಸಿರುವ ತಜ್ಞರು, ಅದರ ಬಾಯಿಗೆ ಸಿಲುಕಿರುವ ಹಗ್ಗವನ್ನು ಪೂರ್ಣವಾಗಿ ತೆಗೆದು ಹಾಕುವ ಅಥವಾ ಮತ್ತಷ್ಟು ಸಣ್ಣದು ಮಾಡುವ ಸಾಹಸಕ್ಕೆ ಇಳಿಯುವುದು ಹೆಚ್ಚು ಅಪಾಯಕಾರಿ ಎಂದು ತಿಳಿಸಿದ್ದಾರೆ.

ತಿಮಿಂಗಿಲದ ಬಾಯಿಯ ಎಡ ಭಾಗದಲ್ಲಿ ಹಗ್ಗದ ಎರಡು ತುಂಡುಗಳು ಸಿಲುಕಿಕೊಂಡಿವೆ. ಸುಮಾರು 20 ಅಡಿ ಉದ್ದದ ಹಗ್ಗದ ತುಂಡುಗಳು ಪರಸ್ಪರ ಬೆಸೆದುಕೊಂಡು ಗಂಟಾದರೆ, ಅದಕ್ಕೆ ಮರಿಯೂ ಸಿಲುಕಿಕೊಳ್ಳುವ ಸಂಭವವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂದೆ ಎಣ್ಣೆಗಾಗಿ ಕಪ್ಪು ತಿಮಿಂಗಿಲಗಳನ್ನು ಬೇಟೆಯಾಡಲಾಗುತ್ತಿತ್ತು. ಈಗ ಮೀನುಗಾರಿಕೆ ಬೋಟ್‌ ಮತ್ತು ಹಡಗುಗಳ ಸಂಚಾರದಿಂದಾಗಿ ಕಪ್ಪು ತಿಮಿಂಗಿಲಗಳ ಸಂತತಿಗೆ ಸಂಚಕಾರ ಬಂದಿದೆ. ಹುಟ್ಟುವ ಮರಿಗಳಿಗಿಂತ ಕೊಲ್ಲಲ್ಪಡುತ್ತಿರುವ ತಿಮಿಂಗಿಲಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 10ರಷ್ಟು ತಿಮಿಂಗಿಲಗಳು ನಾಶವಾಗಿವೆ. ಒಟ್ಟಾರೆ ಕಪ್ಪು ತಿಮಿಂಗಿಲಗಳ ಸಂಖ್ಯೆ 336ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT