ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗು: 6 ದಿನಗಳ ಬಳಿಕ ಚಲಿಸಿದ 'ಎವರ್ ಗಿವೆನ್‌'

Last Updated 29 ಮಾರ್ಚ್ 2021, 6:06 IST
ಅಕ್ಷರ ಗಾತ್ರ

ಕೈರೊ: ಸುಯೆಜ್‌ ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿಕೊಂಡಿದ್ದ ಬೃಹತ್‌ ಕಂಟೇನರ್ ಹಡಗು ಸೋಮವಾರ ಮತ್ತೆ ಸಂಚಾರ ಆರಂಭಿಸಿದೆ. ಇದರಿಂದ ಜಾಗತಿಕ ವಾಣಿಜ್ಯ ವಹಿವಾಟುಗಳ ಪ್ರಮುಖ ಹಾದಿ ತಿಳಿಯಾಗುವ ಭರವಸೆ ಮೂಡಿದೆ.

ನಾಲ್ಕು ಫುಟ್‌ಬಾಲ್‌ ಮೈದಾನಗಳಿಗಿಂತ ಉದ್ದದ 'ಎಂವಿ ಎವರ್‌ ಗ್ರಿವೆನ್‌' ಬೃಹತ್‌ ಹಡಗು ಕಳೆದ ಮಂಗಳವಾರದಿಂದ ಸುಯೆಜ್‌ ಕಾಲುವೆಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯವಾಗಿತ್ತು.

ವೆಸೆಲ್‌ಫೈಂಡರ್‌ ಮತ್ತು ಮೈಶಿಪ್‌ ಟ್ರ್ಯಾಕಿಂಗ್‌ ಸೈಟ್‌ಗಳ ಪ್ರಕಾರ, ಈಗ ಹಡಗು ಕಾಲುವೆಯ ಪಶ್ಚಿಮ ತೀರದಿಂದ ಮುಂದಕ್ಕೆ ಸಂಚರಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಹಡಗು ಮತ್ತೆ ಸಂಚಾರ ಆರಂಭಿಸಿರುವ ಬಗ್ಗೆ ಸುಜೆಯ್‌ ಕಾಲುವೆ ಪ್ರಾಧಿಕಾರದಿಂದ ಇನ್ನು ಅಧಿಕೃತವಾಗಿ ಪ್ರಕಟಣೆ ಹೊರಬಂದಿಲ್ಲ. ಕಾಲುವೆಯಲ್ಲಿ ಉಂಟಾಗಿರುವ ಟ್ರಾಫಿಕ್‌ ಜಾಮ್‌ ಯಾವಾಗ ಸಹಜ ಸ್ಥಿತಿಗೆ ಮರಳಿದೆ ಎಂಬುದು ತಿಳಿದು ಬಂದಿಲ್ಲ. ಸುಮಾರು 360ಕ್ಕೂ ಹೆಚ್ಚು ಹಡಗುಗಳು ಮುಂದಕ್ಕೆ ಸಂಚರಿಸಲಾರದೆ ಕಾಲುವೆ ಎರಡೂ ಕಡೆ ನಿಂತಿವೆ.

'ಹತ್ತು ತಗ್‌ ಬೋಟ್‌ಗಳ ಸಹಕಾರದಿಂದ ಕಂಟೇನರ್‌ ಹಗಡನ್ನು ಮತ್ತೆ ಸಂಚರಿಸುವಂತೆ ಎಳೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ' ಎಂದು ಕಾಲುವೆ ಪ್ರಾಧಿಕಾರವು ಸ್ಥಳೀಯ ಕಾಲಮಾನ ಬೆಳಿಗ್ಗೆ 5ಕ್ಕೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಕಾರ್ಯಾಚರಣೆಗೆ ಸಂಬಂಧಿಸಿದಂತೆ ಟ್ವೀಟಿಸಿದ್ದ ಇಂಚ್‌ಕೇಪ್‌ ಶಿಪ್ಪಿಂಗ್‌ ಸರ್ವೀಸ್‌ ಕಂಪನಿ, 'ಹಡಗು ಯಶಸ್ವಿಯಾಗಿ ಮತ್ತೆ ಸಂಚಾರ ಆರಂಭಿಸಿದೆ ಹಾಗೂ ಅದರ ತೂಗಾಟವನ್ನು ನಿಯಂತ್ರಿಸಲಾಗಿದೆ' ಎಂದಿದೆ.

'ತಾಂತ್ರಿಕ ಸಿಬ್ಬಂದಿ ಹಡಗಿನ ತಾಂತ್ರಿಕ ಭಾಗಗಳ ಪರಿಶೀಲನೆ ನಡೆಸಿದ್ದು, ಹಡಗಿನ ಮೋಟಾರ್‌ ಕಾರ್ಯಾಚರಣೆಯಲ್ಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ' ಎಂದು ಕಾಲುವೆ ಪ್ರಾಧಿಕಾರದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ದೇಶಗಳಿಂದ ವಿಶ್ವದ ವಿವಿಧೆಡೆಗೆ ಹೋಗಬೇಕಿರುವ ತೈಲವಾಹಕ ಹಡಗುಗಳು ಕಾಲುವೆಯಲ್ಲಿ ಸಿಲುಕಿವೆ. ಹಲವು ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣಿಸಿರುವುದರಿಂದ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಹಡಗಿನ ಸುತ್ತಲೂ 59 ಅಡಿಗಳಷ್ಟು ಆಳದವರೆಗೂ ಸುಮಾರು 27,000 ಘನ ಮೀಟರ್‌ನಷ್ಟು ಮರಳನ್ನು ಸಿಬ್ಬಂದಿ ತೆಗೆದಿದ್ದಾರೆ ಎಂದು ಸುಜೆಯ್‌ ಕಾಲುವೆ ಪ್ರಾಧಿಕಾರದ ವಕ್ತಾರ ಜಾರ್ಜ್‌ ಸಫ್ವಾಟ್‌ ಭಾನುವಾರ ತಿಳಿಸಿದ್ದಾರೆ.

ಸಂಚಾರ ಅಡಚಣೆಯಿಂದಾಗಿ ಕೆಲವು ಕಂಪನಿಗಳು ತಮ್ಮ ಹಡಗುಗಳನ್ನು ಆಫ್ರಿಕಾ ಬಳಸಿ ಸಂಚರಿಸುವ ಮಾರ್ಗದಲ್ಲಿ ಕಳುಹಿಸಿವೆ. ಇದರಿಂದಾಗಿ ಸಂಚಾರದ ದೂರ 9,000 ಕಿ.ಮೀ. ಹೆಚ್ಚಿದ್ದು, ಇಂಧನ ವೆಚ್ಚದಲ್ಲಿಯೂ ಏರಿಕೆಯಾಗಿದೆ. ಆ ಮಾರ್ಗದಲ್ಲಿ ಏಷ್ಯಾ ಮತ್ತು ಯುರೋಪ್‌ ನಡುವೆ ಸಂಚರಿಸಲು ಒಂದು ವಾರ ಬೇಕಾಗುತ್ತದೆ.

ಕಾಲುವೆ ಸಂಚಾರ ಅಡಚಣೆಯಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಸುಮಾರು 6ರಿಂದ 10 ಬಿಲಿಯನ್‌ ಡಾಲರ್‌ಗಳಷ್ಟು ಹೊರೆಯಾಗಿದೆ ಎಂದು ಜರ್ಮನ್‌ನ ಅಲಿಯನ್ಜ್‌ ಸಂಸ್ಥೆ ಅಧ್ಯಯ ವರದಿಯಲ್ಲಿ ಪ್ರಕಟಿಸಿದೆ.

ಹನ್ನೊಂದು ಹಡಗುಗಳಲ್ಲಿ ರೊಮೇನಿಯಾದಿಂದ ಸಾಕು ಪ್ರಾಣಿಗಳನ್ನು ದೇಶದಿಂದ ಸಾಗಿಸಲಾಗಿದೆ ಎಂದು ಅಲ್ಲಿನ ಪಶು ಆರೋಗ್ಯ ಸಂಸ್ಥೆ ಹೇಳಿದೆ. ಸಂಚಾರ ಅಡಚಣೆಯು ಸುಮಾರು 1,30,000 ಪ್ರಾಣಿಗಳಿಗೆ ಹಾನಿತರುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ಆತಂಕ ವ್ಯಕ್ತಪಡಿಸಿದೆ.

ಹಡಗು ಮತ್ತೆ ಸಂಚರಿಸಿರುವ ಸುದ್ದಿ ಹೊರ ಬರುತ್ತಿದ್ದಂತೆ ಏಷ್ಯಾದ ರಾಷ್ಟ್ರಗಳು ಸೇರಿದಂತೆ ಹಲವು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ.

ಆಗಿದ್ದೇನು?

ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡವಾಯಿತು. ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.

ಬೃಹತ್ ಹಡಗಿನ ವಿವರ

* 400 ಮೀಟರ್‌ – ಹಡಗಿನ ಉದ್ದ

* 2 ಲಕ್ಷ ಟನ್ – ಹಡಗಿನ ತೂಕ

* 22,000 – ಹಡಗಿನಲ್ಲಿರುವ ಕಂಟೇರ್‌ನಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT