ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪಿಷ್ಟೆ, ಭಯಂಕರ, ಅಸಹ್ಯ: ಭಾರತ ಮೂಲದ ಕಮಲಾ ವಿರುದ್ಧ ಟ್ರಂಪ್‌ ವೈಯಕ್ತಿಕ ದಾಳಿ

Last Updated 13 ಆಗಸ್ಟ್ 2020, 5:28 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಚಾರ ವೈಖರಿ ಈ ಬಾರಿ ಅಸಹ್ಯ ಅಧ್ಯಾಯವೊಂದನ್ನು ಹುಟ್ಟುಹಾಕಿದೆ. ಹಾಲಿ ಅಧ್ಯಕ್ಷ ಟ್ರಂಪ್‌, ರಿಪಬ್ಲಿಕನ್‌ ಪಕ್ಷದ ಅವರ ಮಿತ್ರರು ಮತ್ತು ಸುದ್ದಿ ಮಾದ್ಯಮ ‘ಫಾಕ್ಸ್‌ ನ್ಯೂಸ್‌’ ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ವಿರುದ್ಧ ಅಶ್ಲೀಲ, ವೈಯಕ್ತಿಕ ದಾಳಿ ನಡೆಸುವ ಮೂಲಕ ಈ ಅಧ್ಯಾಯ ಆರಂಭವಾಗಿದೆ.

ಕಮಲಾ ಹ್ಯಾರಿಸ್‌ ಅವರು ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಎಂದು ಅಧ್ಯಕ್ಷ ಅಭ್ಯರ್ಥಿ ಜೋ ಬಿಡೆನ್‌ ಅವರು ಅತ್ತ ಘೋಷಣೆ ಮಾಡುತ್ತಲೇ, ಇತ್ತ ಅಧ್ಯಕ್ಷ ಟ್ರಂಪ್‌ ಅವರು ಕಮಲಾ ಹ್ಯಾರಿಸ್‌ ಅವರನ್ನು ‘ಕೋಪಿಷ್ಟೆ, ಭಯಂಕರ, ಅಸಹ್ಯ’ ಎಂದು ಮೂದಲಿಸಿದ್ದಾರೆ. ಮತ್ತೊಂದೆಡೆ ಕೆಲ ರಾಜಕೀಯ ವಿಶ್ಲೇಷಕರು ಅವರನ್ನು ‘ಸಂಬಳದ ಸಾಲಗಾರ’ರಿಗೆ (payday lenders),’ ಹೋಲಿಸಿ ಅವಹೇಳನ ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ನ ವಿಚಾರಣೆಯೊಂದರಲ್ಲಿ ಕಠಿಣ ಪ್ರಶ್ನೆಗಳನ್ನೆತ್ತಿದ ಹ್ಯಾರಿಸ್‌ ಅವರ ನಡೆಯು ನ್ಯಾಯಮೂರ್ತಿ ಬ್ರೆಟ್ ಎಂ. ಕವನಾಗ್ ಅವರಿಗೆ ಅಪಮಾನ ಮಾಡುವಂಥದ್ದಾಗಿತ್ತು,’ ಎಂದು ಟ್ರಂಪ್‌ ಆರೋಪಿಸಿದ್ದಾರೆ. ಬಿಡೆನ್‌ ಮತ್ತು ಹ್ಯಾರಿಸ್‌ ಅವರು ಮೊಟ್ಟ ಮೊದಲ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡ ನಂತರ ಮತ್ತಷ್ಟು ಕೋಪಗೊಂಡಿರುವ ಟ್ರಂಪ್‌, ಹ್ಯಾರಿಸ್‌ ವಿರುದ್ಧ ಮತ್ತಷ್ಟು ವಾಗ್ದಾಳಿ ಮಾಡಿದ್ದಾರೆ.

‘ಮತಗಳಿಕೆಯಲ್ಲಿ ಕುಸಿದ ಕಮಲಾ ಹ್ಯಾರಿಸ್‌, ಡೆಮಾಕ್ರಾಟಿಕ್ ಪ್ರಾಥಮಿಕ ಸ್ಪರ್ಧೆಯಿಂದ ಹೊರಬಂದಾಗ ಕೋಪೋದ್ರಿಕ್ತಗೊಂಡಿದ್ದರು,’ ಎಂದು ಟ್ರಂಪ್ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆರೋಪಿಸಿದ್ದಾರೆ.

‘ಆಕೆ ಕೋಪೋದ್ರಿಕ್ತಳು, ಆಕೆ ಹುಚ್ಚಿ. ಬಿಡೆನ್‌ರನ್ನು ಹ್ಯಾರಿಸ್‌ಗಿಂತಲೂ ಹೆಚ್ಚು ಯಾರೂ ಅಪಮಾನ ಮಾಡಲಾರರು,’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕ್ಯಾಲಿಫೋರ್ನಿಯಾದ ಕಿರಿಯ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್‌, ಜಮೈಕಾ ಮತ್ತು ಭಾರತದಿಂದ ವಲಸೆ ಬಂದವರ ಕಪ್ಪು ವರ್ಣೀಯ ಮಗು ಎಂದು ಹೇಳಿಕೊಳ್ಳಬಹುದೇ ಎಂದು ಬಲಪಂಥೀಯ ರಾಜಕೀಯ ವಿಶ್ಲೇಷಕ ದಿನೇಶ್ ಡಿಸೋಜಾ ಎಂಬುವವರು ಸುದ್ದಿ ಮಾಧ್ಯಮ ‘ಫಾಕ್ಸ್ ನ್ಯೂಸ್‌’ನಲ್ಲಿ ಕುಳಿತು ಪ್ರಶ್ನೆ ಕೇಳಿದರು.

ಮಂಗಳವಾರ ರಾತ್ರಿ, ಫಾಕ್ಸ್ ನ್ಯೂಸ್ ಅತಿಥಿ ಟಕರ್ ಕಾರ್ಲ್ಸನ್ ಅವರು ಕಮಲಾ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದರು. ಹೆಸರನ್ನು ಸರಿಯಾಗಿ ತಿಳಿಸಿದಾಗ ಕೋಪ ಪ್ರದರ್ಶಿಸಿದರು. ಕಮಲಾ ಎಂಬುದನ್ನು ಅವರು ‘ಕೋಮಾ–ಲಾ’ ಎಂದು ಹೇಳಿದರು. ಅದು ಹಾಗೆ ಉಚ್ಚಾರಣೆಗೊಳ್ಳುವುದಿಲ್ಲ ಎಂದು ತಿಳಿಸಿದಾಗ, ‘ಅದಕ್ಕೇನು,’ ಎಂದು ಪ್ರಶ್ನಿಸಿ ಉದ್ದಟತನ ತೋರಿದರು.

ಟ್ರಂಪ್‌ ಪುತ್ರರಲ್ಲಿ ಒಬ್ಬರಾದ ಎರಿಕ್‌ ಟ್ರಂಪ್‌ ಕಮಲಾ ಹ್ಯಾರಿಸ್‌ ಕುರಿತು ಒಂದು ಟ್ವೀಟ್‌ ಮಾಡಿ ನಂತರ ಅದನ್ನು ಡಿಲೀಟ್‌ ಮಾಡಿದ್ದಾರೆ. ಹ್ಯಾರಿಸ್‌ ಅವರೆಡೆಗೆ ಅಶ್ಲೀಲ ಪದವನ್ನು ಬಳಸಿದ್ದರು ಎಂದು ಹೇಳಲಾಗಿದೆ.

ಜೋ ಬಿಡೆನ್‌ ಅವರೊಂದಿಗಿನ ಕಮಲಾ ಹ್ಯಾರಿಸ್‌ ಅವರ ಮೊದಲ ಭಾಷಣ ನಡೆಯುವ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಟ್ರಂಪ್‌ ಅವರ ಪ್ರಚಾರದ ಕಾನೂನು ಸಲಹೆಗಾರ್ತಿ ಜೆನ್ನಾ ಎಲ್ಲೀಸ್‌, ’ ಕಮಲಾ ಹ್ಯಾರಿಸ್‌ ಅವರು ಮಾರ್ಗ್ ಸಿಂಪ್ಸನ್ (ಅಮೆರಿಕದ ಕಾಲ್ಪನಿಕ ಕಾರ್ಟೂನ್‌ ಪಾತ್ರ) ರೀತಿ ಧ್ವನಿಸುತ್ತಾರೆ,’ ಎಂದು ಹೇಳಿ ಅಪಮಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ಯಾರುಕಮಲಾ ಹ್ಯಾರಿಸ್‌?

ಕಮಲಾ ದೇವಿ ಹ್ಯಾರಿಸ್ ಅಮೆರಿಕದ ವಕೀಲೆ ಮತ್ತು ರಾಜಕಾರಣಿ. ಕ್ಯಾಲಿಫೋರ್ನಿಯದಿಂದ ಅಮೆರಿಕದ ಕಿರಿಯ ಸೆನೆಟರ್ ಆಗಿ 2017 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಸದಸ್ಯೆ. ಭಾರತ ಮೂಲದ ಶ್ಯಾಮಲಾ ಗೋಪಾಲನ್‌ ಮತ್ತು ಜಮೈಕಾ ಮೂಲದ ಡೊನಾಲ್ಡ್‌ ಹ್ಯಾರಿಸ್‌ ಮಗಳು ಕಮಲಾ ಹ್ಯಾರಿಸ್‌.

ಕಮಲಾಗೆ ಏಳು ವರ್ಷವಿದ್ದಾಗಲೇ ತಂದೆ–ತಾಯಿ ವಿಚ್ಛೇದನ ಪಡೆದುಕೊಂಡಿದ್ದರು. ಕಮಲಾ ಅವರು ಹಿಂದೂ ಸಂಪ್ರದಾಯದಂತೆ ಬೆಳೆದಿದ್ದಾರೆ. ಆಕ್ಲೆಂಡ್‌ನಲ್ಲಿ ಹುಟ್ಟಿದ ಅವರು ತಮ್ಮ ಅಮೆರಿಕನ್‌ ಅಸ್ತಿತ್ವ ಮತ್ತು ತಾಯಿ ತಮ್ಮನ್ನು ಬೆಳೆಸಿದ ಬಗೆಯನ್ನು ಆಗಾಗ ನೆನಪಿಸಿಕೊಂಡಿದ್ದಾರೆ. ತಂದೆ ಡೊನಾಲ್ಡ್‌ ಬಗ್ಗೆ ಅವರು ಮಾತನಾಡಿದ್ದು ಕಡಿಮೆ. ಹಾಗಿದ್ದರೂ, ಈಗ ಟ್ರಂಪ್‌ ಮತ್ತವರ ಪ್ರಚಾರಪಡೆ ಕಮಲಾ ಅವರ ಮೂಲವನ್ನು ಕೆದಕಿ, ಜನಾಂಗೀಯ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಅದೇನೇ ಇದ್ದರೂ, ಅಮೆರಿಕದಲ್ಲಿ ಬದುಕು ಕಂಡುಕೊಂಡ ಭಾರತ, ಆಫ್ರಿಕದಂತಹ ದೇಶಗಳ ವಲಸಿಗ ಸಮುದಾಯಕ್ಕೆ ಕಮಲಾ ಅವರ ಆಯ್ಕೆಯು ಬಹುದೊಡ್ಡ ಆಶಾಕಿರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT