ಶನಿವಾರ, ಜೂನ್ 19, 2021
27 °C

ಕೋವಿಡ್‌ ಲಸಿಕೆಗಳಿಗೆ ಪೇಟೆಂಟ್ ಮನ್ನಾ: ಅಮೆರಿಕ ನಿರ್ಧಾರಕ್ಕೆ ಭಾರತ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೋವಿಡ್‌–19 ಲಸಿಕೆಯ ಉತ್ಪಾದನೆ, ಪೂರೈಕೆಯನ್ನು ಹೆಚ್ಚಿಸಲು ವ್ಯಾಪಾರಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳ (ಟಿಆರ್‌ಐಪಿಎಸ್‌) ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕೆಂಬ ಭಾರತ, ದಕ್ಷಿಣ ಆಫ್ರಿಕಾದ ಮನವಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಬೆಂಬಲಿಸಿದಕ್ಕೆ ಭಾರತ ಶ್ಲಾಘಿಸಿದೆ.

ಟಿಆರ್‌ಐಪಿಎಸ್‌ ಒಪ್ಪಂದದ ಕೆಲ ನಿಯಮಗಳ ಜಾರಿಗೆ ಕಾಲಮಿತಿಯ ತಡೆ ನೀಡುವಂತೆ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಭಾರತ ಹಾಗೂ ದಕ್ಷಿಣ ಆಫ್ರಿಕಾ ಮನವಿ ಮಾಡಿದ್ದವು. ಹಲವಾರು ದೇಶಗಳು ಭಾರತದ ಈ ನಡೆಗೆ ಬೆಂಬಲ ಸೂಚಿಸಿದ್ದವು.

ಈ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಮತ್ತು ದಕ್ಷಿಣ ಆಫ್ರಿಕಾದ ರಾಜತಾಂತ್ರಿಕರು ಅಮೆರಿಕದ ಸೆನೆಟರ್‌ಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ್ದರು.

‘ಕೋವಿಡ್‌ ಲಸಿಕೆಗಳಿಗೆ ಐಪಿಆರ್ ಮನ್ನಾ ಮಾಡಲು ಅಮೆರಿಕ ಆಡಳಿತ ನೀಡಿದ ಬೆಂಬಲವನ್ನು ನಾವು (ಭಾರತ) ಪ್ರಶಂಸಿಸುತ್ತೇವೆ’ ಎಂದು ಸಂಧು ತಿಳಿಸಿದ್ದಾರೆ.

ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್‌ ತೈ ಮಾತನಾಡಿ, ‘ಕೋವಿಡ್‌ ಸಾಂಕ್ರಮಿಕವು ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿದೆ. ಅಸಾಧಾರಣ ಕ್ರಮಗಳಿಗೆ ಕರೆ ನೀಡಿದೆ’ ಎಂದು ಹೇಳಿದರು.

‘ಜೋ ಬಿಡೆನ್ ಆಡಳಿತವು ಬೌದ್ಧಿಕ ಆಸ್ತಿ ಸಂರಕ್ಷಣೆಯನ್ನು ಬಲವಾಗಿ ನಂಬುತ್ತದೆ. ಆದರೆ, ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಉದ್ದೇಶದಿಂದ ಕೋವಿಡ್‌ ಲಸಿಕೆಗಳಿಗೆ ಟಿಆರ್‌ಐಪಿಎಸ್‌ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವುದನ್ನು ಬೆಂಬಲಿಸುತ್ತದೆ’ ಎಂದು ತೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಸಿಕೆಗಳನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ಈ ಪ್ರಸ್ತಾಪವನ್ನು ಬೆಂಬಲಿಸುವಂತೆ ಒತ್ತಾಯಿಸಿ ಬಹುಪಾಲು ಡೆಮಾಕ್ರಟಿಕ್ ಕಾಂಗ್ರೆಸ್ಸಿಗರು ಅಧ್ಯಕ್ಷ ಜೋ ಬಿಡನ್ ಅವರಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ... ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು