ಟೊರೆಂಟೊ: ಕೆನಡಾದ ನೊವಾ ಸ್ಕಾಟಿಯಾ ಪ್ರಾಂತ್ಯದ ಟ್ರುರ‍್ರೊ ಪಟ್ಟಣದ ಅಪಾರ್ಟ್‌ಮೆಂಟ್‌ವೊಂದರಲ್ಲಿ 23 ವರ್ಷದ ಭಾರತೀಯ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಪ್ರಬ್ಜೋತ್ ಸಿಂಗ್ ಕಟ್ರಿ ಎಂದು ಟುರ‍್ರೊ ಪೊಲೀಸ್ ಸರ್ವೀಸ್‌ನ ಅಧಿಕಾರಿ ಮ್ಯಾಕ್ ನೀಲ್ ತಿಳಿಸಿದ್ದಾರೆ. ಸಿಂಗ್, ಲಾಯ್‌ಟನ್ಸ್ ಟ್ಯಾಕ್ಸಿ ಕಂಪನಿ ಹಾಗೂ ಟ್ರುರೊ ಪಟ್ಟಣದಲ್ಲಿರುವ ಎರಡು ಮೂರು ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು ಅಧ್ಯಯನದ ಸಲುವಾಗಿ 2017ರಲ್ಲಿ ಕೆನಾಡಕ್ಕೆ ಬಂದಿದ್ದರು.
‘ಭಾನುವಾರ ಮುಂಜಾನೆ 2 ಗಂಟೆ ವೇಳೆಗೆ 494 ರಾಬಿಸೇಂಟ್ ಅಪಾರ್ಟ್‌ಮೆಂಟ್‌ನಿಂದ 911 ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು. ಕರೆಯ ಅನುಸಾರ ಪೊಲೀಸ್ ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದಾಗ, ಅಲ್ಲಿ ವ್ಯಕ್ತಿಯೊಬ್ಬ ಜೀವನ್ಮರಣದ ನಡುವೆ ಹೋರಾಡುತ್ತಿದ್ದನ್ನು ಕಂಡರು‘ ಎಂದು ಟ್ರುರ‍್ರೊ ಪೋಲಿಸ್ ಸರ್ವೀಸ್‌ನ ಡೇವಿಡ್ ಮ್ಯಾಕ್ ನೀಲ್ ತಿಳಿಸಿದ್ದಾಗಿ ಸಿಬಿಸಿ ಕೆನಡಾ ವರದಿ ಮಾಡಿದೆ.
ಸ್ಥಳೀಯ ಸಮುದಾಯದವರು ‘ಇದೊಂದು ಜನಾಂಗೀಯ ಪ್ರೇರಿತ ದ್ವೇಷದಿಂದ ನಡೆದಿರುವ ಘಟನೆಯಾಗಿದೆ‘ ಎಂದು ಶಂಕೆ ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸರು ಸಿಂಗ್ ಸಾವನ್ನು ಕೊಲೆ ಎಂದು ಪರಿಗಣಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಕೊಲೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿದೆ.
‘ನಾವು ಹಲವು ವಾರಂಟ್‌ಗಳೊಂದಿಗೆ ತನಿಖೆ ನಡೆಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಬಂಧಿಸಿದ್ದೆವು. ಆದರೆ, ಆ ವ್ಯಕ್ತಿಯ ವಿರುದ್ಧ ಹಿಂದೆ ಯಾವುದೇ ಕೊಲೆ ಅಪರಾಧಗಳು ಇಲ್ಲದ ಕಾರಣ ಆತನನ್ನು ಬಿಡುಗಡೆ ಮಾಡಿದೆವು’ ಎಂದು ಮ್ಯಾಕ್ ನೀಲ್ ಹೇಳಿದ್ದಾರೆ.
ಮ್ಯಾಕ್ ನೀಲ್ ಅವರು ಮೃತ ಸಿಂಗ್ ಕುಟುಂಬದವರು ಹಾಗೂ ಕೆನಾಡದಲ್ಲಿರುವ ಭಾರತೀಯ ಸಮುದಾಯದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.