ಭಾನುವಾರ, ಜನವರಿ 17, 2021
26 °C
ಇಂಡೊನೇಷ್ಯಾದ ಶ್ರೀವಿಜಯ ಏರ್‌ ಕಂಪನಿಗೆ ಸೇರಿದ ವಿಮಾನ

62 ಪ್ರಯಾಣಿಕರಿದ್ದ ಇಂಡೊನೇಷ್ಯಾ ವಿಮಾನ ಸಮುದ್ರದಲ್ಲಿ ಪತನ

ರಾಯಿಟರ್ಸ್‌/ಎಪಿ Updated:

ಅಕ್ಷರ ಗಾತ್ರ : | |

ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನವೊಂದು ಶನಿವಾರ ಇಲ್ಲಿನ ವಿಮಾನ ನಿಲ್ದಾಣದಿಂದ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು. ಘಟನೆಯಲ್ಲಿ ಪ್ರಾಣಹಾನಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಮೀನುಗಾರರಿಗೆ ವಿಮಾನದ ಅವಶೇಷಗಳು ದೊರೆತಿವೆ. ಅವಶೇಷಗಳು ನಾಪತ್ತೆಯಾದ ವಿಮಾನದ್ದೇ ಎಂದು ಪರಿಶೀಲಿಸಲು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆಯ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಬೋಯಿಂಗ್‌ 737–500 ವಿಮಾನವು ಟೇಕ್‌ ಆಫ್‌ ಆಗಿತ್ತು. ಪಶ್ಚಿಮ ಕಾಲಿಮಂತನ್‌ ಪ್ರಾಂತ್ಯದ ಪಾಂಟಿಯಾನಾಕ್‌ಗೆ ತೆರಳುತ್ತಿದ್ದ ಈ ವಿಮಾನವು ಕೆಲವೇ ನಿಮಿಷದಲ್ಲಿ ರೇಡಾರ್‌ನಿಂದ ನಾಪತ್ತೆಯಾಗಿತ್ತು. ವಿಮಾನವು 26 ವರ್ಷ ಹಳೆಯದಾಗಿತ್ತು. ಜಕಾರ್ತ ಮತ್ತು ಪಾಂಟಿಯಾನಾಕ್‌ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ, ಪ್ರಯಾಣಿಕರ ಕುಟುಂಬದವರು ಹಾಗೂ ಸ್ನೇಹಿತರಿಗೆ ಈ ಘಟನೆ ಆಘಾತ ಉಂಟು ಮಾಡಿತ್ತು.   

‘ಫ್ಲೈಟ್‌ ಎಸ್‌ಜೆ 182ನಲ್ಲಿ 62 ಜನರಿದ್ದರು. ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಲಾಕಿ ದ್ವೀಪದ ಸಮೀಪ ವಿಮಾನ ಪತನವಾಗಿದೆ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವ ಬುದಿ ಕರ್ಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ  ಪ್ರಯಾಣಿಕರೆಲ್ಲರೂ ಇಂಡೊನೇಷ್ಯಾದವರೇ ಆಗಿದ್ದಾರೆ ಎಂದು ಸಾರಿಗೆ ಸುರಕ್ಷತಾ ಸಮಿತಿಯು ತಿಳಿಸಿದೆ.

‘ಪ್ರಯಾಣದ ಅವಧಿಯು 90 ನಿಮಿಷವಾಗಿತ್ತು. ಮತ್ತೊಂದು ಸುತ್ತಿನ ಹಾರಾಟಕ್ಕಾಗಿ ವಿಮಾನದಲ್ಲಿ ಆರು ಹೆಚ್ಚುವರಿ ಸಿಬ್ಬಂದಿ ಇದ್ದರು’ ಎಂದು ಏರ್‌ಲೈನ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.  

‘ವಿಮಾನವು ನಾಲ್ಕು ನಿಮಿಷದಲ್ಲಿ 10,900 ಅಡಿ ಎತ್ತರಕ್ಕೆ ತಲುಪಿತ್ತು. ನಂತರದಲ್ಲಿ ಏಕಾಏಕಿ ಪತನವಾಗಲು ಪ್ರಾರಂಭಿಸಿತು. ಇದಾದ 21 ಸೆಕೆಂಡ್‌ಗಳ ಬಳಿಕ ಸಂಪರ್ಕ ಕಳೆದುಕೊಂಡಿತು’ ಎಂದು ವಿಮಾನಗಳ ಹಾರಾಟಪಥವನ್ನು ಗುರುತಿಸುವ ‘ಫ್ಲೈಟ್‌ರೇಡಾರ್‌24’ ತಿಳಿಸಿದೆ. ‘ಟೇಕ್‌ಆಫ್‌ ಆದ ನಾಲ್ಕು ನಿಮಿಷದ ಬಳಿಕ 29 ಸಾವಿರ ಅಡಿಗೆ ಏರಲು ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ಸಂಪರ್ಕಿಸಿದ್ದರು’ ಎಂದು ಬುದಿ ಕರ್ಯಾ ತಿಳಿಸಿದರು.

‘ವಿಮಾನವು ನಿಗದಿತ ಪಥವನ್ನು ಬಿಟ್ಟು, ವಾಯುವ್ಯ ದಿಕ್ಕಿನತ್ತ ಏಕೆ ಚಲಿಸುತ್ತಿದೆ ಎಂದು ಸಂಪರ್ಕ ಕಡಿದುಕೊಳ್ಳುವ ಕೆಲವೇ ಸೆಕೆಂಡ್‌ಗಳ ಮೊದಲು, ಸೊಯಿಕರ್ನೊ ಹಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಪೈಲಟ್‌ ಬಳಿ ಕೇಳಿದ್ದರು’ ಎಂದು ಸಾರಿಗೆ ಸಚಿವಾಲಯದ ವಕ್ತಾರೆ ಅದಿತಾ ಇರಾವತಿ ಹೇಳಿದರು. 

ಇಂಡೊನೇಷ್ಯಾ ನೌಕಾಪಡೆಯು ವಿಮಾನ ಪತನವಾದ ನಿಖರ ಸ್ಥಳವನ್ನು ಗುರುತಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಡಗುಗಳನ್ನು ನಿಯೋಜಿಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹಾರಾಟಕ್ಕೂ ಮುನ್ನ ವಿಮಾನ ಉತ್ತಮ ಸ್ಥಿತಿಯಲ್ಲಿ ಇತ್ತು’ ಎಂದು ಶ್ರೀವಿಜಯ ಏರ್‌ನ ಮುಖ್ಯ ಕಾರ್ಯನಿರ್ವಾಹಕ ಜೆಫರ್‌ಸನ್‌ ಇರ್ವಿನ್‌ ಜೌವೆನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2003ರಲ್ಲಿ ಪ್ರಾರಂಭವಾಗಿದ್ದ ಈ ಏರ್‌ಲೈನ್ಸ್‌, ಹೆಚ್ಚಾಗಿ ಇಂಡೊನೇಷ್ಯಾದ ಒಳಗೆ ವಿಮಾನ ಸೇವೆ ನೀಡುತ್ತಿದೆ.

2018ರ ಅವಘಡ: 2018ರಲ್ಲಿ ಜಕಾರ್ತದಲ್ಲಿ ಲಯನ್‌ ಏರ್‌ ಕಂಪನಿಯ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಪತನವಾಗಿ, ಎಲ್ಲ 189 ಪ್ರಯಾಣಿಕರು ಮೃತಪಟ್ಟಿದ್ದರು. ಶನಿವಾರ ಪತನವಾದ ವಿಮಾನವು ಬೋಯಿಂಗ್‌ 737 ಮ್ಯಾಕ್ಸ್‌ಗಿಂತಲೂ ಹಳೆಯ ವಿಮಾನವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು