ಸೋಮವಾರ, ಜೂನ್ 14, 2021
27 °C
ಹಮಸ್‌ ಸಂಘಟನೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ ಇಸ್ರೇಲ್‌

ಗಾಜಾ ಮೇಲೆ ವಾಯು ದಾಳಿ: 43 ಮಂದಿ ಸಾವು

ಎಎಫ್‌ಪಿ/ಎಪಿ Updated:

ಅಕ್ಷರ ಗಾತ್ರ : | |

Prajavani

ಗಾಜಾ ನಗರ: ಗಾಜಾ ನಗರದ ಮೇಲೆ ಭಾನುವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 43 ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರಲ್ಲಿ 16 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಗಾಜಾದ ಹಮಸ್‌ ಸಂಘಟನೆಯ ಹಿರಿಯ ನಾಯಕ ಯೆಹಿಯೆಹ್‌ ಸಿನ್ವಾರ್‌ ಮತ್ತು ಆತನ ಸಹೋದರ ಮುಹಮ್ಮದ್‌ ಮನೆಗಳ ಮೇಲೆ ಪ್ರತ್ಯೇಕ ದಾಳಿ ನಡೆಸುವ ಮೂಲಕ ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಹಿದಾಯಿ ಜಿಲ್ಬರ್‌ಮನ್‌ ಭಾನುವಾರ ಹೇಳಿದ್ದಾರೆ.

ಇಸ್ರೇಲ್‌ ಮತ್ತು ಹಮಸ್‌ ಉಗ್ರಗಾಮಿ ಸಂಘಟನೆ ನಡುವೆ ಕಳೆದ ವಾರ ಆರಂಭವಾದ ಘರ್ಷಣೆಯ ಬಳಿಕ ಇದು ಅತಿ ದೊಡ್ಡ ದಾಳಿಯಾಗಿದೆ.

‘ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿಲ್ಲ. ಆದರೆ, ಹಮಸ್‌ ಸಂಘಟನೆ ಉದ್ದೇಶಪೂರ್ವಕವಾಗಿಯೇ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ತನ್ನ ಸೇನಾ ನೆಲೆಗಳನ್ನು ನಿರ್ಮಿಸಿಕೊಂಡಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಕಟ್ಟಡಗಳು, ರಸ್ತೆಗಳು ಹಾನಿಯಾಗಿರುವ ಚಿತ್ರಗಳನ್ನು ಗಾಜಾ ನಿವಾಸಿಗಳು, ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವೈಮಾನಿಕ ದಾಳಿಯಿಂದಾಗಿ ನಗರದ ಮುಖ್ಯರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿ, ನಗರದ ಬೃಹತ್‌ ಆಸ್ಪತ್ರೆ ಶಿಫಾಕ್ಕೆ ಸಂಪರ್ಕ ಕಡಿದು ಹೋಗಿದೆ.

ಕಳೆದ ಸೋಮವಾರದಿಂದ ಹಮಸ್‌ ಮತ್ತು ಇತರ ಉಗ್ರಗಾಮಿ ಸಂಘಟನೆಗಳು, ಇಸ್ರೇಲ್‌ ಮೇಲೆ ಸುಮಾರು ಮೂರು ಸಾವಿರ ರಾಕೆಟ್‌ಗಳ ದಾಳಿ ನಡೆಸಿವೆ. ಇಸ್ರೇಲ್‌ ಸಹ ತಿರುಗೇಟು ನೀಡಿದ್ದು, ಹಮಸ್‌ ಸಂಘಟನೆ ವಿರುದ್ಧ ದಾಳಿಯನ್ನು ತೀವ್ರಗೊಳಿಸಿದೆ.

ಶನಿವಾರ 12 ಅಂತಸ್ತಿನ ಕಟ್ಟಡದ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಈ ಕಟ್ಟಡದಲ್ಲಿ ದಿ ಅಸೋಸಿಯೇಟೆಡ್‌ ಪ್ರೆಸ್, ಅಲ್‌ ಜಝೀರಾ ಸೇರಿದಂತೆ ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಈ ದಾಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

‘ಈ ಕಟ್ಟಡದಲ್ಲಿ ಹಮಸ್‌ ಸಂಘಟನೆಯ ಗುಪ್ತಚರ ವಿಭಾಗ ಕಾರ್ಯನಿರ್ವಹಿಸುತ್ತಿತ್ತು’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಮರ್ಥಿಸಿಕೊಂಡಿದ್ದಾರೆ.

ಗಾಜಾದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಶಾಲೆ, ಮಸೀದಿಗಳು ಮತ್ತು ಇತರ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ಇಸ್ರೇಲ್‌ ತನ್ನ ಸ್ವಯಂ ರಕ್ಷಣೆ ಮಾಡಿಕೊಳ್ಳುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸಮರ್ಥಿಸಿಕೊಂಡಿದ್ದಾರೆ. ಆದರೆ, ಹಿಂಸಾಚಾರ ಮತ್ತು ಪತ್ರಕರ್ತರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ ದಾಳಿಯಿಂದ ವ್ಯಾಕುಲಗೊಂಡಿರುವೆ: ಗುಟೆರಸ್‌

‘ಗಾಜಾ ನಗರದಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಚೇರಿಗಳಿರುವ ಬೃಹತ್‌ ಕಟ್ಟಡ, ಜನವಸತಿಯುಳ್ಳ ಅಪಾರ್ಟ್‌ಮೆಂಟ್‌ಗಳು ಇಸ್ರೇಲ್‌ ನಡೆಸಿರುವ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದ್ದು, ಇದರಿಂದ ಬಹಳ ವ್ಯಾಕುಲಗೊಂಡಿದ್ದೇನೆ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

‘ನಾಗರಿಕರು ಹಾಗೂ ಮಾಧ್ಯಮಗಳ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಅಂತರರಾಷ್ಟ್ರೀಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇಂಥ ಕ್ರಮಗಳಿಗೆ ಮುಂದಾಗಬಾರದು ಎಂದು ಗುಟೆರಸ್‌ ಅವರು ಎಚ್ಚರಿಸಿದ್ದಾರೆ’ ಎಂದು ಅವರ ವಕ್ತಾರ ಸ್ಟೀಫನ್‌ ದುಜಾರಿಕ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು