ಬುಧವಾರ, ಆಗಸ್ಟ್ 10, 2022
23 °C

ಜಪಾನ್‌ನ ಪ್ರಧಾನಿಯಾಗಲಿದ್ದಾರೆ ರೈತನ ಮಗ ಸುಗಾ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ದೀರ್ಘಕಾಲದ ಒಡನಾಡಿ ಯೊಶಿಹಿಡೆ ಸುಗಾ ಅವರು ಆಡಳಿತಾರೂಢ ಲಿಬರಲ್‌ ಡೆಮಕ್ರಟಿಕ್‌ ಪಕ್ಷದ (ಎಲ್‌ಡಿಪಿಯ) ನಾಯಕರಾಗಿ ಸೋಮವಾರ ಆಯ್ಕೆಯಾಗಿದ್ದಾರೆ.

ಡೆಮಕ್ರಟಿಕ್‌ ಪಕ್ಷದ ನಾಯಕತ್ವಕ್ಕಾಗಿ ಸೋಮವಾರ ಚುನಾವಣೆ ನಡೆಯಿತು. ಇದರಲ್ಲಿ ಸುಗಾ ಆಯ್ಕೆಯಾದರು. ಈ ವಾರ ಜಪಾನ್‌ ಸಂಸತ್‌ನಲ್ಲಿ ಪ್ರಧಾನಿಯ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಈ ಆಯ್ಕೆಯ ಹಾದಿ ಸದ್ಯ ಸುಗಾ ಅವರಿಗೆ ಸುಗಮವಾಗಿದೆ. ಸಂಸತ್‌ನಲ್ಲಿ ಲಿಬರಲ್‌ ಡೆಮಕ್ರಟಿಕ್‌ ಪಕ್ಷವೇ ಬಹುಮತ ಹೊಂದಿದ್ದು, ಸುಗಾ ಬಹುತೇಕ ಪ್ರಧಾನಿಯಾದಂತೆಯೇ.

ಹಿಂದಿನ ಪ್ರಧಾನಿ ಅಬೆ ಅವರ 8 ವರ್ಷಗಳ ಅಧಿಕಾರವಧಿಯಲ್ಲಿ ಕ್ಯಾಬಿನೆಟ್‌ ಕಾರ್ಯದರ್ಶಿಯಂಥ ಪ್ರಭಾವಿ ಸ್ಥಾನದಲ್ಲಿ 71 ವರ್ಷದ ಸುಗಾ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಮುಂದಿನ ನಡೆಗಳ ಕುರಿತು ಸುಗಾ ಮಾತನಾಡಿದ್ದಾರೆ. ಅಬೆ ಅವರ, ‘ಅಬೆನಾಮಿಕ್ಸ್‌’ನ ಭಾಗವಾಗಿದ್ದ ಸರಳ ವಿತ್ತೀಯ ನೀತಿಯನ್ನು ಮುಂದುವರಿಸುವುದಾಗಿಯೂ, ಸರ್ಕಾರದ ಖರ್ಚುವೆಚ್ಚ, ಸುಧಾರಣೆಯ ವಿಚಾರದಲ್ಲಿ ಅಬೆ ಅವರು ಅನುಸರಿಸುತ್ತಿದ್ದ ನಡೆಗಳನ್ನು ಪಾಲಿಸುವುದಾಗಿಯೂ, ಅಮೆರಿಕದೊಂದಿಗಿನ ರಕ್ಷಣಾ ಮೈತ್ರಿಯಲ್ಲಿ ರಾಜತಾಂತ್ರಿಕ ಮಾರ್ಗ ಕೇಂದ್ರಿತ ನಿಲುವು ಹೊಂದಿರುವುದಾಗಿಯೂ ಸುಗಾ ಸ್ಪಷ್ಟಪಡಿಸಿದ್ದಾರೆ.

ಸುಗಾ ಅವರು ಗ್ರಾಮೀಣ ಜಪಾನ್‌ನ ಉತ್ತರ ಪ್ರಾಂತ್ಯ ಒಗಾಚಿ ಎಂಬಲ್ಲಿನ ನೇರಳೆ ಬೆಳೆಗಾರ ಕುಟುಂಬದವರು. ಅವರ ತಂದೆ ನೇರಳೆ ಬೆಳೆಗಾರರಾಗಿದ್ದರು. ಸದ್ಯ ಸುಗಾ ಲಿಬರಲ್‌ ಡೆಮಕ್ರಟಿಕ್‌ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರೈತನ ಮಗನೊಬ್ಬ ಜಪಾನ್‌ ಪ್ರಧಾನಿಯಾಗುವುದು ಸನ್ನಿಹಿತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು