ಭಾನುವಾರ, ಜುಲೈ 3, 2022
25 °C

ಭಾರತದೊಂದಿಗಿನ ತಪ್ಪು ಗ್ರಹಿಕೆಯ ನಿವಾರಣೆ: ನೇಪಾಳ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ‘ಭಾರತದೊಂದಿಗಿನ ‘ತಪ್ಪು ಗ್ರಹಿಕೆ’ಯನ್ನು ಬಗೆಹರಿಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಉಭಯ ರಾಷ್ಟ್ರಗಳು ಎಲ್ಲವನ್ನೂ ಮರೆತು ಮುಂದೆ ಸಾಗಬೇಕು’ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಹೇಳಿದ್ದಾರೆ.

ಇತ್ತೀಚಿಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,‘ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾದ ತಪ್ಪು ಗ್ರಹಿಕೆಯನ್ನು ಸರಿಪಡಿಸಲಾಗಿದೆ. ನಾವು ಈಗ ಸಕಾರಾತ್ಮಕ ಸಂಬಂಧವನ್ನು ಹೊಂದಿದ್ದೇವೆ. ಸಾಮಾನ್ಯವಾಗಿ ನೆರೆರಾಷ್ಟ್ರಗಳು ಪ್ರೀತಿ ಮತ್ತು ಸಮಸ್ಯೆಗಳನ್ನು ಹಂಚಿಕೊಂಡಿರುತ್ತವೆ. ಭಾರತದೊಂದಿಗೆ ನೇಪಾಳವು ವಿಭಿನ್ನ ಸಂಬಂಧವನ್ನು ಹೊಂದಿದೆ’ ಎಂದರು.

ಕಳೆದ ವರ್ಷ ನೇಪಾಳವು ಭಾರತದ ಭೂಪ್ರದೇಶಗಳಾದ ಲಿಂಪಿಯಾಧೂರ, ಲಿಪುಲೇಖ್‌ ಹಾಗೂ ಕಾಲಾಪಾನಿ ಪ್ರದೇಶಗಳನ್ನು ತನ್ನ ನಕ್ಷೆಯಲ್ಲಿ ತೋರಿಸಿತ್ತು. ಈ ಮೂರು ಪ್ರದೇಶಗಳು ನೇಪಾಳಕ್ಕೆ ಸೇರಿವೆ ಎಂದು ಪ್ರತಿಪಾದಿಸಿತ್ತು. ಇದಕ್ಕೆ ಭಾರತದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದು ಉಭಯ ರಾಷ್ಟ್ರಗಳ ನಡುವೆ ಭಿನ್ನಭಿ‍ಪ್ರಾಯವನ್ನುಂಟು ಮಾಡಿತ್ತು.

‘ಭಾರತವು ಕೊರೊನಾ ನಿಯಂತ್ರಿಸಲು ಇತರೆ ರಾಷ್ಟ್ರಗಳಿಗಿಂತ ವಿಭಿನ್ನ ರೀತಿಯಲ್ಲಿ ಸಹಾಯ ಮಾಡಬೇಕು. ನೇಪಾಳ ಮತ್ತು ಭಾರತವು ತೆರೆದ ಗಡಿ ಪ್ರದೇಶಗಳನ್ನು ಹೊಂದಿವೆ. ಹಾಗಾಗಿ ಭಾರತವು ನೇಪಾಳದ ಮೇಲೆ ಹೆಚ್ಚಿನ ಗಮನವಹಿಸಬೇಕು. ಕೇವಲ ಭಾರತದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೆ ಸಾಲದು. ನೇಪಾಳದಲ್ಲೂ ಸಾಂಕ್ರಾಮಿಕ ನಿಯಂತ್ರಣಕ್ಕೆ ಬರಬೇಕು. ಇಲ್ಲವಾದಲ್ಲಿ ಸೋಂಕು ಮತ್ತೆ ಹರಡುತ್ತದೆ’ ಎಂದರು.

‘ಭಾರತವು ಮೊದಲ ಬಾರಿ ಲಸಿಕೆ ಮತ್ತು ಆರೋಗ್ಯ ಸಲಕರಣೆಗಳನ್ನು ನೇಪಾಳಕ್ಕೆ ನೀಡಿದೆ. ಇದಕ್ಕೆ ಧನ್ಯವಾದಗಳು. ಆದರೆ ಭಾರತದಿಂದ ಹೆಚ್ಚಿನ ನೆರವು ಸಿಕ್ಕಿಲ್ಲ. ನಮಗೆ ಭಾರತದಿಂದ ಹೆಚ್ಚಿನ ನಿರೀಕ್ಷೆಗಳಿವೆ. ನಾನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ’ ಎಂದು ಅವರು ತಿಳಿಸಿದರು.

‘ಈ ಪರಿಸ್ಥಿತಿಯಲ್ಲಿ ಮಿತ್ರ ರಾಷ್ಟ್ರವಾದ ಭಾರತ ಸಂಪೂರ್ಣ ಸಹಕಾರವನ್ನು ಒದಗಿಸಬೇಕು. ಭಾರತ ಏನೂ ಸಹಾಯ ಮಾಡಿಲ್ಲ ಎಂದು ಹೇಳುತ್ತಿಲ್ಲ. ನೇಪಾಳಕ್ಕೆ ಲಸಿಕೆಯ ಅವಶ್ಯಕತೆಯಿದೆ. ನೆರೆ ರಾಷ್ಟ್ರಗಳು ಸೇರಿದಂತೆ ಇತರೆ ಎಲ್ಲಾ ರಾಷ್ಟ್ರಗಳು ಸಹಾಯ ಮಾಡಬೇಕು’ ಎಂದರು.

‘ಚೀನಾವು 18 ಲಕ್ಷ ಮತ್ತು ಭಾರತ 21 ಲಕ್ಷ ಲಸಿಕೆಯ ಡೋಸ್‌ಗಳನ್ನು ನೀಡಿದೆ. ಈ ಎರಡೂ ರಾಷ್ಟ್ರಗಳು ವೈದ್ಯಕೀಯ ಸಲಕರಣೆಗಳನ್ನು ನೀಡಿವೆ’ ಎಂದು ಅವರು ಹೇಳಿದರು.

ನೇಪಾಳದಲ್ಲಿ ಭಾನುವಾರ 3,479  ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6 ಲಕ್ಷ ದಾಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು