ಮಂಗಳವಾರ, ಅಕ್ಟೋಬರ್ 20, 2020
22 °C

ನ್ಯೂಜಿಲೆಂಡ್‌ ಪ್ರಧಾನಿಯಾಗಿ 2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ‘ಅರ್ಡರ್ನ್’

ಎಪಿ Updated:

ಅಕ್ಷರ ಗಾತ್ರ : | |

Prajavani

ಆಕ್ಲೆಂಡ್‌: ನ್ಯೂಜಿಲೆಂಡ್‌ ಪ್ರಧಾನಿಯಾಗಿ ಜೆಸಿಂದಾ ಅರ್ಡರ್ನ್ ಶನಿವಾರ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 

ಚುನಾವಣೆಯಲ್ಲಿ ಶೇ 49ರಷ್ಟು ಮತಗಳು ಜೆಸಿಂದಾ ಅವರ ಲಿಬರಲ್‌ ಲೇಬರ್‌ ಪಕ್ಷದ ಪರವಾಗಿದ್ದು, ಕನ್ಸರ್ವೇಟಿವ್‌ ರಾಷ್ಟ್ರೀಯ ಪಕ್ಷವು ಶೇ 27ರಷ್ಟು ಮತಗಳನ್ನಷ್ಟೇ ಪಡೆದಿದೆ. ನ್ಯೂಜಿಲೆಂಡ್‌ನ ಚುನಾವಣಾ ಇತಿಹಾಸದಲ್ಲಿ 24 ವರ್ಷಗಳ ಬಳಿಕ ಸಂಸತ್‌ನಲ್ಲಿ ಲೇಬರ್ ಪಕ್ಷವು ಏಕಾಂಗಿಯಾಗಿ ಬಹುಮತ ಪಡೆದಿದ್ದು, ಯಾವುದೇ ಮೈತ್ರಿ ಇಲ್ಲದೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಚುನಾವಣೆಯಲ್ಲಿ, ಉಪಪ್ರಧಾನಿ ವಿನ್‌ಸ್ಟನ್‌ ಪೀಟರ್‌ ಅವರ ನ್ಯೂಜಿಲೆಂಡ್‌ ಫಸ್ಟ್‌ ಪಕ್ಷವು ಠೇವಣಿ ಕಳೆದುಕೊಂಡಿದ್ದು, ಲಿಬರಿಟೇರಿಯನ್‌ ಆ್ಯಕ್ಟ್‌ ಪಕ್ಷವು ಶೇ 8ರಷ್ಟು ಹಾಗೂ ಗ್ರೀನ್‌ ಪಕ್ಷವು ಶೇ 7.5ರಷ್ಟು ಮತವನ್ನು ಪಡೆದಿದೆ. 

‘ಹಿಂದೆಂದೂ ನಮ್ಮ ಪಕ್ಷಕ್ಕೆ ಇಂಥ ಅಭೂತಪೂರ್ವ ಬೆಂಬಲ ದೊರಕಿರಲಿಲ್ಲ. ಇದು ಸಾಧಾರಣವಾದ ಚುನಾವಣೆಯಾಗಿರಲಿಲ್ಲ, ಜೊತೆಗೆ ಪ್ರಸ್ತುತ ಸಮಯವೂ ಸಾಧಾರಣವಾಗಿಲ್ಲ. ಧ್ರುವೀಕೃತ ವಿಶ್ವದಲ್ಲಿ ನಾವು ಬದುಕುತ್ತಿದ್ದೇವೆ. ಮತ್ತೊಬ್ಬರ ಅಭಿಪ್ರಾಯವನ್ನು ನೋಡುವ ಸಾಮರ್ಥ್ಯವನ್ನೂ ನಾವು ಕಳೆದುಕೊಂಡಿದ್ದೇವೆ. ಆದರೆ ದೇಶದ ಮತದಾರರು ‘ನಾವು ಈ ರೀತಿಯ ಜನರಲ್ಲ’ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಆಕ್ಲೆಂಡ್‌ನಲ್ಲಿ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಜೆಸಿಂದಾ ಹೇಳಿದರು.

ಜಯಭೇರಿ ಬಾರಿಸಿದ ಜೆಸಿಂದಾ ಅವರನ್ನು ‘ರಾಕ್‌ಸ್ಟಾರ್‌’ ರೀತಿ ಅಭಿನಂದಿಸಿದ ಜನರು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. 

2017ರಲ್ಲಿ ಎರಡು ಪಕ್ಷಗಳ ಜೊತೆಗೂಡಿ ಲೇಬರ್‌ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಜೆಸಿಂದಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮಾದರಿಯಾಗಿ ಜೆಸಿಂದಾ ಅವರು ಗುರುತಿಸಿಕೊಂಡಿದ್ದಾರೆ. 2019ರಲ್ಲಿ ನಡೆದ ಕ್ರೈಸ್ಟ್‌ಚರ್ಚ್‌ ಮಸೀದಿ ದಾಳಿಯ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಎಲ್ಲರೂ ಶ್ಲಾಘಿಸಿದ್ದರು. ಈ ದಾಳಿಯಲ್ಲಿ 51 ಮುಸ್ಲಿಮರು ಮೃತಪಟ್ಟಿದ್ದರು. ಘಟನೆ ನಂತರ ಸೆಮಿ–ಆಟೊಮ್ಯಾಟಿಕ್‌ ಶಸ್ತ್ರಗಳನ್ನು ರಾಷ್ಟ್ರದಲ್ಲಿ ನಿಷೇಧಿಸುವ ಹೊಸ ಕಾನೂನನ್ನು ಅವರು ಜಾರಿಗೊಳಿಸಿದ್ದರು. 

ಕೋವಿಡ್‌ ನಿಯಂತ್ರಣ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಜೆಸಿಂದಾ ಅವರು ತೆಗೆದುಕೊಂಡ ಕ್ರಮಗಳು ಸಾಕಷ್ಟು ಶ್ಲಾಘನೆಗೆ ಕಾರಣವಾಗಿತ್ತು. ಮಾರ್ಚ್‌ನಲ್ಲಿ 100 ಜನರಲ್ಲಿ ಕೋವಿಡ್‌–19 ಪತ್ತೆಯಾದ ಸಂದರ್ಭದಲ್ಲಿ ಕಠಿಣ ಲಾಕ್‌ಡೌನ್‌, ಗಡಿಯನ್ನು ಮುಚ್ಚುವ ಕ್ರಮವನ್ನು ಅವರು ತೆಗೆದುಕೊಂಡಿದ್ದರು. ಈ ಮುಖಾಂತರ ವೈರಾಣುವಿನ ನಿಯಂತ್ರಣ ಮಾತ್ರವಲ್ಲದೇ ಇಡೀ ರಾಷ್ಟ್ರದಿಂದ ವೈರಾಣುವನ್ನು ನಾಶಗೊಳಿಸುವ ಗುರಿ ಹೊಂದಿದ್ದರು. ಇದರಿಂದ ಅವರ ಖ್ಯಾತಿಯೂ ವಿಶ್ವದೆಲ್ಲೆಡೆ ಪಸರಿಸಿತ್ತು. 50 ಲಕ್ಷ ಜನಸಂಖ್ಯೆ ಇರುವ ನ್ಯೂಜಿಲೆಂಡ್‌ನಲ್ಲಿ ಕೋವಿಡ್‌–19 ಸಮುದಾಯದಲ್ಲಿ ಹರಡುತ್ತಿಲ್ಲ. ಹೀಗಾಗಿ ಮುಖಗವಸು ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳುವ ಅಗತ್ಯತೆಯೂ ಈ ರಾಷ್ಟ್ರದಲ್ಲಿ ಇಲ್ಲ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು