ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ ಆರೋಪ ತಳ್ಳಿ ಹಾಕಿದ ಉತ್ತರ ಕೊರಿಯಾ

ಸಿಯೊಲ್: ಉಕ್ರೇನ್‌ನಲ್ಲಿ ಯುದ್ಧ ನಡೆಸುತ್ತಿರುವ ರಷ್ಯಾಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿಲ್ಲ. ಅಂತಹ ಯಾವ ಆಲೋಚನೆಯೂ ಇಲ್ಲ ಎಂದು ಉತ್ತರ ಕೊರಿಯಾ ಮಂಗಳವಾರ ಸ್ಪಷ್ಟಪಡಿಸಿದೆ. ಹಾಗೆಯೇ, ಅಮೆರಿಕ 'ಆಧಾರವಿಲ್ಲದ' ವದಂತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಕೊರಿಯಾ ಭದ್ರತಾ ಸಚಿವಾಲಯದ ಮಿಲಿಟರಿ ವಿದೇಶಾಂಗ ವ್ಯವಹಾರಗಳ ಉಪ ನಿರ್ದೇಶಕರು ಯುಎಸ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು 'ಯೋನ್‌ಹಾಪ್ ಸುದ್ದಿ ಸಂಸ್ಥೆ' ವರದಿ ಮಾಡಿದೆ.
ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್‌ಕೆ) ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾನೂನು ಬಾಹಿರ 'ನಿರ್ಬಂಧಗಳ ನಿರ್ಣಯ'ಕ್ಕೆ ಕರೆ ನೀಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಹಾನಿಯುಂಟು ಮಾಡುವ ಪ್ರಯತ್ನವನ್ನು ಯುಎಸ್ ಮಾಡಿದೆ. ಆ ಪ್ರಯತ್ನದ ಭಾಗವಾಗಿಯೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕೊರಿಯಾ ಭದ್ರತಾ ಸಚಿವಾಲಯದ ಅಧಿಕಾರಿ ಕಿಡಿಕಾರಿದ್ದಾರೆ.
'ರಷ್ಯಾ ಜೊತೆಗೆ ಯಾವುದೇ ಶಸ್ತ್ರಾಸ್ತ್ರ ವ್ಯವಹಾರ ನಡೆಸುತ್ತಿಲ್ಲ ಎಂಬುದನ್ನು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ. ಭವಿಷ್ಯದಲ್ಲಿಯೂ ಆ ರೀತಿ ಮಾಡುವ ಯಾವ ಯೋಜನೆ ಸದ್ಯಕ್ಕೆ ಇಲ್ಲ' ಎಂದು ಅವರು ಹೇಳಿಕೆ ಬಿಡುಗಡೆ ಮಾಡಿರುವುದಾಗಿ 'ಕೆಸಿಎನ್‌ಎ' ವರದಿ ಮಾಡಿದೆ.
ರಷ್ಯಾವು ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಪ್ರಕ್ರಿಯೆ ನಡೆಸುತ್ತಿದೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಹೇಳಿತ್ತು.
ಇದನ್ನೂ ಓದಿ: ಉತ್ತರ ಕೊರಿಯಾದಿಂದ ರಷ್ಯಾ ಶಸ್ತ್ರಾಸ್ತ್ರ ಖರೀದಿ: ಅಮೆರಿಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.