ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ರಾಜತಾಂತ್ರಿಕರ ಕಾರ್ಯನಿರ್ವಹಣೆ: ಇಮ್ರಾನ್‌ಖಾನ್‌ ಟೀಕೆಗೆ ಆಕ್ಷೇಪ

ವಸಾಹತುಶಾಹಿ ಮನಸ್ಥಿತಿ ಹೊಂದಿರುವ ವಿದೇಶಾಂಗ ಸೇವೆ ಅಧಿಕಾರಿಗಳು ಎಂದಿದ್ದ ಪ್ರಧಾನಿ
Last Updated 7 ಮೇ 2021, 9:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಸೇವೆಗಳ ಅಧಿಕಾರಿಗಳ ನಡವಳಿಕೆಯನ್ನು ಪ್ರಧಾನಿ ಇಮ್ರಾನ್‌ ಖಾನ್‌ ಟೀಕಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾಯಭಾರಿಗಳ ಜತೆ ನಡೆದ ವರ್ಚುವಲ್‌ ಸಭೆಯಲ್ಲಿ ಇಮ್ರಾನ್‌ ಖಾನ್‌ ಅವರು, ‘ವಿದೇಶದಲ್ಲಿರುವ ಪಾಕಿಸ್ತಾನಿಯರ ಜತೆ ನಮ್ಮ ರಾಜತಾಂತ್ರಿಕರು ನಿರ್ದಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಕ್ರೂರ ನಡವಳಿಕೆ. ಈ ಅಧಿಕಾರಿಗಳು ವಸಾಹತುಶಾಹಿ ಮನಸ್ಥಿತಿ ಹೊಂದಿದ್ದಾರೆ’ ಎಂದು ಕಟುವಾಗಿ ಟೀಕಿಸಿದ್ದರು.

ಜತೆಗೆ, ಭಾರತದ ರಾಯಭಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಭಾರತದ ರಾಜತಾಂತ್ರಿಕರು ಭಾರತಕ್ಕೆ ಹೂಡಿಕೆ ತರುವುದು ಸೇರಿದಂತೆ ವಿದೇಶಗಳಲ್ಲಿನ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಇಮ್ರಾನ್‌ ಖಾನ್‌ ಹೇಳಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿ ತೆಹ್ಮಿನಾ ಜಂಝುವಾ ಅವರು, ‘ವಿದೇಶಾಂಗ ಸಚಿವಾಲಯದ ಬಗ್ಗೆ ಈ ರೀತಿಯ ಟೀಕೆಗಳು ಅನಗತ್ಯವಾಗಿದ್ದವು. ವಿದೇಶಾಂಗ ಸೇವೆಗಳ ಬಗ್ಗೆ ಇಮ್ರಾನ್‌ ಖಾನ್‌ ಅವರಿಗೆ ಸಮರ್ಪಕ ತಿಳಿವಳಿಕೆ ಇಲ್ಲ’ ಎಂದು ಹೇಳಿದ್ದಾರೆ.

’ರಾಯಭಾರಿ ಕಚೇರಿಗಳಲ್ಲಿ ಸಂಪನ್ಮೂಲಗಳ ಕೊರತೆ ಇದೆ. ಜತೆಗೆ ವಿವಿಧ ಇಲಾಖೆಗಳ ಪಾತ್ರವೂ ಇದೆ. ಈ ಎಲ್ಲ ಇಲಾಖೆಗಳು ರಾಯಭಾರಿಗಳ ನಿಯಂತ್ರಣದಲ್ಲಿಲ್ಲ’ ಎಂದು ಹೇಳಿದ್ದಾರೆ.

‘ವಿದೇಶಾಂಗ ಸಚಿವಾಲಯದ ಬಗ್ಗೆ ನಿಮ್ಮ ಆಕ್ರೋಶ ಸರಿ ಅಲ್ಲ. ಪಾಕಿಸ್ತಾನ ವಿದೇಶಾಂಗ ಸೇವೆ (ಎಫ್‌ಎಸ್‌ಪಿ) ಮತ್ತು ವಿದೇಶಾಂಗ ಕಚೇರಿ ಯಾವಾಗಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಜನರಿಗೆ ಸ್ಪಂದಿಸಿವೆ. ಹೀಗಾಗಿ, ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್‌ ಬಷೀರ್‌ ಪ್ರತಿಕ್ರಿಯಿಸಿದ್ದಾರೆ.

‘ಸಾರ್ವಜನಿಕವಾಗಿ ಟೀಕೆ ಮಾಡುವುದರಿಂದ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಸಕಾರಾತ್ಮಕ ಶಿಫಾರಸ್ಸುಗಳನ್ನು ಮಾಡಲು ಕಾರ್ಯಪಡೆ ರಚಿಸಿ’ ಎಂದು ಬಷೀರ್‌ ಹೇಳಿದ್ದಾರೆ.

ಜತೆಗೆ, ಭಾರತೀಯ ವಿದೇಶಾಂಗ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೂ ಬಷೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿಯವರ ಟೀಕೆಗಳಿಂದ ಭಾರತೀಯ ಮಾಧ್ಯಮಗಳು ವಿಜೃಂಭಿಸುತ್ತವೆ. ಇದು ಎಂಥಹ ಹೋಲಿಕೆ’ ಎಂದಿದ್ದಾರೆ. ಮತ್ತೊಬ್ಬ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲಿಲ್‌ ಅಬ್ಬಾಸ್‌ ಜಿಲಾನಿ ಅವರು ಸಹ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT