ಭಾನುವಾರ, ಮೇ 22, 2022
23 °C

ಪಾಕಿಸ್ತಾನ ಪ್ರಧಾನಿ ಪದಚ್ಯುತಿ; ಇಮ್ರಾನ್‌ ಆಪ್ತರ ಮನೆಯ ಮೇಲೆ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಪ್ರಧಾನಿ ಇಮ್ರಾನ್‌ ಖಾನ್‌ ಭಾನುವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮೂಲಕ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಅವರ ಆಪ್ತರ ಮನೆಯ ಮೇಲೆ ದಾಳಿ ನಡೆದಿದೆ. ಅವರ ಕುಟುಂಬದ ಸದಸ್ಯರ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷವು ಆರೋಪಿಸಿದೆ.

ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಡಿಜಿಟಲ್‌ ಮೀಡಿಯಾ ತಂಡದಲ್ಲಿ 2019ರಿಂದ ಪ್ರಮುಖ ಪಾತ್ರ ನಿರ್ವಹಿಸಿರುವ ಡಾ.ಅರ್ಸಲಾನ್‌ ಖಾಲಿದ್‌ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ.

'ಪ್ರಧಾನಿ ಇಮ್ರಾನ್‌ ಖಾನ್‌ ಅವರ ಡಿಜಿಟಲ್‌ ಮಾಧ್ಯಮ ತಂಡದ ನೇತೃತ್ವ ವಹಿಸಿದ್ದ ಡಾ.ಅರ್ಸಲಾನ್‌ ಖಾಲಿದ್‌ ಅವರ ಮನೆಯ ಮೇಲೆ ದಾಳಿ ನಡೆದಿದೆ ಹಾಗೂ ಅವರ ಕುಟುಂಬದ ಎಲ್ಲರ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅರ್ಸಲಾನ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನೂ ನಿಂದಿಸಿಲ್ಲ ಹಾಗೂ ಯಾವುದೇ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ' ಎಂದು ಪಿಟಿಐ ಪಕ್ಷವು ಟ್ವೀಟಿಸಿದೆ.

ಕೇಂದ್ರದ ತನಿಖಾ ದಳವು ಈ ಘಟನೆಯ ತನಿಖೆ ತಡೆಸುವಂತೆ ಆಗ್ರಹಿಸಿದೆ.

ಖಾಲಿದ್‌ ಅವರು ಕಿಂಗ್‌ ಎಡ್ವರ್ಡ್ ಮೆಡಿಕಲ್‌ ಯೂನಿವರ್ಸಿಟಿಯ ಪದವೀಧರರು ಮತ್ತು ಉದ್ಯಮಿಯಾಗಿದ್ದಾರೆ. ಪಿಟಿಐ ಪಕ್ಷದ ಲಾಹೋರ್‌ ವಲಯದ ಸಾಮಾಜಿಕ ಮಾಧ್ಯಮದ ಹೊಣೆಯನ್ನು ನಿರ್ವಹಿಸಿದ್ದರು ಎಂದು ಜಿಯೊ ಟಿವಿ ವರದಿ ಮಾಡಿದೆ. 2018ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಡಿಜಿಟಲ್‌ ಮೀಡಿಯಾ ಪ್ರಚಾರ ಹಾಗೂ ಹಲವು ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನಗಳ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ–

'ಡಾ.ಅರ್ಸಲಾನ್‌ ಖಾಲಿದ್‌ ರೀತಿಯ ರಾಷ್ಟ್ರಭಕ್ತ ಯುವಕರು ದೇಶದ ಆಸ್ತಿ. ಅವರ ಮನೆಯ ಮೇಲೆ ದಾಳಿ ನಡೆದಿರುವುದು ಖಂಡನೀಯ' ಎಂದು ಮಾಜಿ ಸಚಿವ, ಪಿಟಿಐ ಮುಖಂಡ ಅಸಾದ್‌ ಉಮರ್‌ ಪ್ರತಿಕ್ರಿಯಿಸಿದ್ದಾರೆ.

ವಿರೋಧ ಪಕ್ಷಗಳು ಈಗಾಗಲೇ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿವೆ.

ಸೋಮವಾರ ಪಾಕಿಸ್ತಾನ ಸಂಸತ್ತು ಹೊಸದಾಗಿ ಸಮಾವೇಶಗೊಳ್ಳಲಿದ್ದು, ಪ್ರತಿಪಕ್ಷ ನಾಯಕ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ತಮ್ಮನಾದ ಶೆಹಬಾಜ್, ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಐತಿಹಾಸಿಕ ಘಟನೆಯಲ್ಲಿ ವಿರೋಧಪಕ್ಷಗಳನ್ನು ಮುನ್ನಡೆಸಿದರು.

ಇದನ್ನೂ ಓದಿ–

342 ಸದಸ್ಯ ಬಲದ ಸಂಸತ್‌ನಲ್ಲಿ ಭಾನುವಾರ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್‌ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು