ನೇಪಾಳ ಪ್ರವಾಸದಲ್ಲಿ ಮೋದಿ: ಬುದ್ಧನ ಜನ್ಮಸ್ಥಳದಲ್ಲಿ ಗೌರವ ನಮನ

ಲುಂಬಿನಿ: ನೇಪಾಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸಹ ಇದ್ದರು.
ಇಲ್ಲಿನ ದೆಹಲಿ ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ (ಐಬಿಸಿ) ಸೇರಿದ ಜಾಗದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಭಾಗವಹಿಸಿದರು.
Beginning the Nepal visit with prayers at the sacred Maya Devi Temple, Lumbini. pic.twitter.com/M1YZZhdyTH
— PMO India (@PMOIndia) May 16, 2022
ಇದಕ್ಕೂ ಮುನ್ನ, ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಹಾಗೂ ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಅವರು ಮಾಯಾ ದೇವಿ ದೇವಾಲಯದ ಆವರಣದಲ್ಲಿರುವ ಬುದ್ಧದನ ಜನ್ಮದ ಗುರುತು ಕಲ್ಲಿಗೆ ಗೌರವ ಸಲ್ಲಿಸಿದರು. ಇದನ್ನು ಭಗವಾನ್ ಬುದ್ಧನ ನಿಖರವಾದ ಜನ್ಮ ಸ್ಥಳ ಎಂದು ಗುರುತಿಸಲಾಗುತ್ತದೆ. ಈ ವೇಳೆ ಬೌದ್ಧ ವಿಧಿಗಳ ಪ್ರಕಾರ ಪೂಜೆ ನೆರವೇರಿಸಲಾಯಿತು.
ಈ ನಡುವೆ, ಉಭಯ ನಾಯಕರು ದೇವಾಲಯದ ಪಕ್ಕದಲ್ಲಿರುವ ಅಶೋಕ ಸ್ತಂಭದ ಬಳಿಯ ದೀಪಗಳನ್ನು ಬೆಳಗಿಸಿದರು. ಕ್ರಿಸ್ತಪೂರ್ವ 249 ರಲ್ಲಿ ಚಕ್ರವರ್ತಿ ಅಶೋಕನಿಂದ ಈ ಸ್ತಂಭವು ಸ್ಥಾಪಿಸಲ್ಪಟ್ಟಿದೆ. ಲುಂಬಿನಿಯು ಭಗವಾನ್ ಬುದ್ಧನ ಜನ್ಮಸ್ಥಳವಾಗಿದೆ ಎಂಬುದನ್ನು ಹೇಳುವ ಮೊದಲ ಶಿಲಾಶಾಸನವನ್ನು ಈ ಸ್ತಂಭ ಹೊಂದಿದೆ.
ಇದೇವೇಳೆ, 2014ರಲ್ಲಿ ಮೋದಿ ಲುಂಬಿನಿ ವನಕ್ಕೆ ಕೊಡುಗೆಯಾಗಿ ನೀಡಿದ್ದ ಬೋಧಿ ವೃಕ್ಷದ ಸಸಿಗೆ ಉಭಯ ನಾಯಕರು ನೀರೆರೆದರು. ಈ ಕುರಿತಂತೆ ಚಿತ್ರ ಸಹಿತ ಪ್ರಧಾನಿ ಸಚಿವಾಲಯವು ಟ್ವೀಟ್ ಮಾಡಿದೆ.
2014ರಿಂದ ನೇಪಾಳಕ್ಕೆ ಪ್ರಧಾನಿಯವರ ಐದನೇ ಭೇಟಿ ಇದಾಗಿದೆ. ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೋದಿ ಇಲ್ಲಿಗೆ ಆಗಮಿಸಿದರು.
ಇವನ್ನೂ ಓದಿ.. ಚಾರ್ ಧಾಮ್ ಯಾತ್ರೆಗೆ ಹೋಗಿದ್ದ 39 ಮಂದಿ ಅನಾರೋಗ್ಯದಿಂದ ಸಾವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.