ಡೆಲ್ಟಾ: ರಷ್ಯಾದಲ್ಲಿ ಸಾವಿನ ಸಂಖ್ಯೆ ಹೆಚ್ಚಳ, ಐರೋಪ್ಯ ಒಕ್ಕೂಟಕ್ಕೂ ಆತಂಕ

ಮಾಸ್ಕೊ: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯ ಸೋಂಕು ರಷ್ಯಾದಲ್ಲಿ ವ್ಯಾಪಕವಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆಸ್ಟ್ರೇಲಿಯಾದಲ್ಲಿ ಸಹ ಈ ರೂಪಾಂತರ ತಳಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ.
ಇನ್ನೊಂದೆಡೆ, ಕುಸಿದು ಹೋಗಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಐರೋಪ್ಯ ಒಕ್ಕೂಟವು, ಒಕ್ಕೂಟದ ರಾಷ್ಟ್ರಗಳಲ್ಲಿ ಮಾನ್ಯತೆ ಹೊಂದಿರುವ ‘ಕೋವಿಡ್–19 ಪ್ರಮಾಣ ಪತ್ರ’ ನೀಡುವ ಕಾರ್ಯಕ್ರಮ ರೂಪಿಸಿದೆ.
ಇಲ್ಲಿವರೆಗೂ ಪತ್ತೆಯಾಗಿರುವ ಕೊರೊನಾ ವೈರಸ್‌ನ ತಳಿಗಳಲ್ಲಿ ಡೆಲ್ಟಾ ರೂಪಾಂತರ ತಳಿ ತೀವ್ರವಾಗಿ ಪ್ರಸರಣವಾಗುವ ಗುಣಲಕ್ಷಣಗಳನ್ನು ಹೊಂದಿದೆ. ವಿಶ್ವದಾದ್ಯಂತ ಸುಮಾರು 40 ಲಕ್ಷ ಮಂದಿ ಈಗಾಗಲೇ ಕೋವಿಡ್ ಪಿಡುಗಿನಿಂದಾಗಿ ಮೃತಪಟ್ಟಿದ್ದು, ಈಗ ರೂಪಾಂತರ ತಳಿಯ ಪ್ರಸರಣ ಆತಂಕವನ್ನು ಹೆಚ್ಚಿಸಿದೆ.
ರಷ್ಯಾದಲ್ಲಿ ಬುಧವಾರ ಒಂದೇ ದಿನ 669 ಜನರು ಡೆಲ್ಟಾ ತಳಿಯ ಸೋಂಕಿನಿಂದ ಮೃತಪಟ್ಟಿದ್ಧಾರೆ. ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ಶುಕ್ರವಾರ ‘ಯುರೊ 2020‘ ಫುಟ್‌ಬಾಲ್ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಸುಮಾರು 26 ಸಾವಿರ ಜನ ಪ್ರೇಕ್ಷಕರು ಕ್ರೀಡೆ ವೀಕ್ಷಿಸಲಿದ್ದಾರೆ. ಈ ಪಂದ್ಯಾವಳಿ ನಡೆಯುವ ಎರಡು ದಿನಗಳಿಗೆ ಮುನ್ನ, ರಷ್ಯಾದಲ್ಲಿ ಡೆಲ್ಟಾ ತಳಿಯ ಸೋಂಕಿನಿಂದ ಇಷ್ಟೊಂದು ಜನರು ಮೃತಪಟ್ಟಿರುವುದು ಸಹ ಆತಂಕಕ್ಕೆ ಕಾರಣವಾಗಿದೆ.
ರಷ್ಯಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ದಾಸ್ತಾನಿದ್ದು, ಡಿಸೆಂಬರ್‌ನಿಂದ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಒಟ್ಟು ಜನಸಂಖ್ಯೆಯ ಶೇ 15ರಷ್ಟು ಮಂದಿ ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ‘ಕೋವಿಡ್ ಲಸಿಕೆ ವಿಷಯದಲ್ಲಿ ಅನುಮಾನ ಪಡಬೇಡಿ. ಎಲ್ಲರೂ ಬೇಗ ಲಸಿಕೆ ತೆಗೆದುಕೊಳ್ಳಿ‘ ಎಂದು ಮನವಿ ಮಾಡಿದ್ದಾರೆ.
ಈ ನಡುವೆ ರಷ್ಯಾದಲ್ಲಿ ಕೊರೊನಾ ಸೋಂಕಿನ ಪ್ರಮಾಣವನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾಸ್ಕೊ ಹಾಗೂ ಕೆಲವು ರಾಜ್ಯಗಳಲ್ಲಿ ಕಡ್ಡಾಯವಾಗಿ ಲಸಿಕೆ ಪಡೆಯುವ ನೀತಿಯನ್ನು ಜಾರಿಗೊಳಿಸಲಾಗಿದೆ. ಆದರೆ, ‘ಈ ಕಡ್ಡಾಯ ನೀತಿಯನ್ನು ತಾನು ಬೆಂಬಲಿಸುವುದಿಲ್ಲ‘ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಇನ್ನೊಂದೆಡೆ, ಆಸ್ಟ್ರೇಲಿಯಾದಲ್ಲಿ ಈ ಬಾರಿ ಡೆಲ್ಟಾ ರೂಪಾಂತರ ತಳಿಯ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ. ಪರಿಣಾಮವಾಗಿ ಆಸ್ಟ್ರೇಲಿಯಾದ ಪ್ರಮುಖ ನಗರಗಳಾದ ಸಿಡ್ನಿ, ಬ್ರಿಸ್ಬೇನ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ಆಸ್ಟ್ರೇಲಿಯಾದಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುತ್ತಿರುವ ನಡುವೆಯೇ, ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿವರೆಗೆ ಶೇ 5ರಷ್ಟು ಮಂದಿಗೆ ಲಸಿಕೆ ಮಾತ್ರ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇಶದ ಗಡಿಭಾಗಗಳನ್ನು ಮುಚ್ಚಿ, ಹೊರದೇಶದಿಂದ ಬರುವ ಪ್ರಯಾಣಿಕ ರನ್ನು ಕಟ್ಟುನಿಟ್ಟಾಗಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಿದ್ದರೂ ಸೋಂಕು ಪ್ರಸರಣ ನಿಯಂತ್ರಣಕ್ಕೆ ಬಂದಿಲ್ಲ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ... ಡೆಲ್ಟಾ: ರಷ್ಯಾದಲ್ಲಿ ಸಾವಿನ ಸಂಖ್ಯೆ ಹೆಚ್ಚಳ, ಐರೋಪ್ಯ ಒಕ್ಕೂಟಕ್ಕೂ ಆತಂಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.