ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಬೀಡುಬಿಟ್ಟಿದೆ ರಷ್ಯಾದ ಶೇ 75ರಷ್ಟು ಸೇನಾಪಡೆ

Last Updated 1 ಮಾರ್ಚ್ 2022, 9:33 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದಾಗ ಶೇ 40ರಷ್ಟು ಸೇನಾಪಡೆಗಳನ್ನು ಹೊಂದಿದ್ದ ರಷ್ಯಾ ಇದೀಗ ಅದರ ಸಾಮರ್ಥ್ಯವನ್ನು ಶೇ 75ಕ್ಕೆ ಹೆಚ್ಚಿಸಿಕೊಂಡಿದೆ ಎಂದು ಮಿಲಿಟರಿ ಶಿಕ್ಷಣ ತಜ್ಞರೊಬ್ಬರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಡಾ.ಜ್ಯಾಕ್ ವಾಟ್ಲಿಂಗ್ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೂ ಯುದ್ಧ ಮತ್ತು ಮಿಲಿಟರಿ ವಿಜ್ಞಾನ ವಿಭಾಗದಲ್ಲಿ ಹಿರಿಯ ಸಂಶೋಧಕರಾಗಿರುವ ಅವರು, ‘ಬಿಬಿಸಿ ರೇಡಿಯೊ 4’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

‘ರಷ್ಯಾ ಸೇನಾಪಡೆ ಬೆಲರೂಸ್‌ನ ದಕ್ಷಿಣ ಭಾಗದಲ್ಲಿ ಆಕ್ರಮಣ ಮುಂದುವರಿಸಿದೆ. ಜತೆಗೆ, ಉಕ್ರೇನ್ ರಾಜಧಾನಿ ಕೀವ್‌ನ ಮೇಲೆ ದಾಳಿ ನಡೆಸುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ’ ಎಂದು ಹೇಳಿದ್ದಾರೆ.

ಹಾರ್ಕಿವ್‌ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ, ಪರಿಣಾಮ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಷ್ಯಾ ಶಸ್ತ್ರಾಸ್ತ್ರಗಳ ಉಡಾವಣೆಗೆ ಸುಸಜ್ಜಿತ ರಾಕೆಟ್ ವ್ಯವಸ್ಥೆ ಹೊಂದಿದ್ದು, ಹೆಚ್ಚು ದೂರದ ಪ್ರದೇಶಗಳ ಮೇಲೆ ಆಕ್ರಮಣ ನಡೆಸಲು ಸಾಧ್ಯವಾಗುತ್ತಿದೆ’ ಎಂದು ತಿಳಿಸಿದ್ದಾರೆ.

ರಷ್ಯಾ ಪಡೆಗಳು ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸುತ್ತಿರುವುದು ಸತ್ಯ ಎಂದಿದ್ದಾರೆ.

ರಷ್ಯಾ ಹಾಗೂ ಉಕ್ರೇನ್ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ರಷ್ಯಾ ದಾಳಿ ಮುಂದುವರಿಸಿದೆ. ಹಾರ್ಕಿವ್‌ ನಗರದ ಮೇಲೆ ಮಂಗಳವಾರ ಶೆಲ್‌ ದಾಳಿ ಆರಂಭಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್ ಸಮೀಪಿಸಿವೆ ಎಂದೂ ವರದಿಯಾಗಿದೆ.

ಫೆ.24 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡಿದ್ದು, ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ, 350ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಈ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ರಷ್ಯಾ ಕೂಡಲೇ ದಾಳಿ ನಿಲ್ಲಿಸುವಂತೆ ಆಗ್ರಹಿಸಿ ಅನೇಕ ದೇಶಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT