ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿಭಜನೆಗೆ ರಷ್ಯಾ ಸರ್ವಪ್ರಯತ್ನ: ಭಾರಿ ಬಾಂಬ್‌ ದಾಳಿ

ಮರಿಯುಪೊಲ್‌ ಅಜೋವ್‌ ಉಕ್ಕಿನ ಸ್ಥಾವರದ ಮೇಲೆ ಭಾರಿ ಬಾಂಬ್‌ ದಾಳಿ
Last Updated 20 ಏಪ್ರಿಲ್ 2022, 21:13 IST
ಅಕ್ಷರ ಗಾತ್ರ

ಕೀವ್‌: ಸೇನಾ ಕಾರ್ಯಾಚರಣೆ ಹೊಸ ಘಟ್ಟ ತಲುಪಿದೆ ಎಂದು ರಷ್ಯಾದ ನಾಯಕರು ಹೇಳಿದ ಬೆನ್ನಲ್ಲೇ, ರಷ್ಯಾ ಪಡೆಗಳು, ಬುಧವಾರ ಕೂಡ ಉಕ್ರೇನ್‌ ನಗರಗಳು ಮತ್ತು ಪಟ್ಟಣಗಳ ಮೇಲೆ ಬಾಂಬ್‌ ಮತ್ತು ಕ್ಷಿಪಣಿಗಳ ಭೀಕರ ದಾಳಿ ನಡೆಸಿದವು.

ಸೇನಾ ಕಾರ್ಯಾಚರಣೆಗೆ ಮತ್ತಷ್ಟು ಸೈನಿಕರನ್ನು ನಿಯೋಜಿಸಿ, ಕಲ್ಲಿದ್ದಲು ಗಣಿಗಳು ಮತ್ತು ಕಾರ್ಖಾನೆಗಳು ಆವರಿಸಿರುವ ಪೂರ್ವ ಕೈಗಾರಿಕಾ ಹೃದಯಭಾಗ ನಿಯಂತ್ರಣಕ್ಕೆ ಮುಂದಾಗಿರುವ ರಷ್ಯಾ ಪಡೆಗಳು, ಉಕ್ರೇನ್‌ ಇಭ್ಭಾಗಿಸಲು ಸರ್ವ ಪ್ರಯತ್ನ ನಡೆಸುತ್ತಿವೆ.

‘ಡಾನ್‌ಬಾಸ್‌ ಪ್ರಾಂತ್ಯದಲ್ಲಿ ಧ್ವಂಸಗೊಂಡ ಮರಿಯುಪೊಲ್‌ ನಗರದ ವಿಸ್ತಾರ ಉಕ್ಕಿನ ಸ್ಥಾವರ ಛಿದ್ರಗೊಳಿಸಲು ರಷ್ಯಾ ಭಾರಿ ಬಾಂಬ್‌ಗಳನ್ನು ಹಾಕಿ, ಸ್ಫೋಟಿಸಿದೆ. ನೂರಾರು ಮಂದಿ ಆಶ್ರಯ ಪಡೆದಿದ್ದ ಆಸ್ಪತ್ರೆಯ ಮೇಲೂ ಬಾಂಬ್‌ ದಾಳಿ ನಡೆಸಿದೆ. ಅಜೋವ್‌ ಉಕ್ಕಿನ ಸ್ಥಾವರದ ಹಿಡಿತ ಕೈತಪ್ಪುವ ಕೊನೇ ಘಟ್ಟದಲ್ಲಿದ್ದೇವೆ’ ಎಂದು ಉಕ್ರೇನ್‌ ಸೇನಾ ಮುಖ್ಯಸ್ಥರು ಬುಧವಾರ ತಿಳಿಸಿದರು.

‘ಪೂರ್ವದ ವಿವಿಧೆಡೆ ರಷ್ಯಾ ಆಕ್ರಮಣ ಮುಂದುವರಿಸಿದೆ. ‌ಉಕ್ರೇನ್‌ ಗಡಿ ರೇಖೆಯಲ್ಲಿ ದುರ್ಬಲ ಕೇಂದ್ರಗಳ ಮೇಲೆ ರಷ್ಯಾ ಪಡೆಗಳ ದಾಳಿ ತೀವ್ರಗೊಂಡಿದೆ. ಅಜೋವ್‌ ಉಕ್ಕಿನ ಸ್ಥಾವರದಲ್ಲಿ ಅಂತಿಮ ಪ್ರತಿರೋಧವನ್ನು ಹತ್ತಿಕ್ಕುವುದು ರಷ್ಯಾದ ಪ್ರಮುಖ ಆದ್ಯತೆ’ ಎಂದು ಉಕ್ರೇನ್‌ ಸೇನಾ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾರ್ಕಿವ್ ಮತ್ತು ಕ್ರಾಮಾರೊಸ್ಕಿ ನಗರಗಳ ಮೇಲೂ ಮಾರಕ ದಾಳಿ ನಡೆದಿದ್ದು, ಡಾನ್‌ಬಾಸ್‌ನ ಪಶ್ಚಿಮದ ಝಪೊರಿಝಿಯಾ ಮತ್ತು ನಿಪ್ರೊ ನಗರಗಳ ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಕ್ಷಿಪಣಿಗಳ ದಾಳಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಕ್ರೇನಿನ ಹಲವು ನಗರಗಳು ಮತ್ತು ಹಳ್ಳಿಗಳ ಸಮೀಪದಲ್ಲಿ ಜಮಾವಣೆಗೊಂಡಿದ್ದ ಸೈನಿಕರ ಶಿಬಿರಗಳು, ಕ್ಷಿಪಣಿಗಳು, ಯುದ್ಧಾಸ್ತ್ರಗಳ ಶಸ್ತ್ರಕೋಠಿಗಳು ಸೇರಿ ಹಲವು ಸೇನಾ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೊರ್ ಕೊನಶೆಂಕವ್ ಬುಧವಾರ ತಿಳಿಸಿದರು.

‘ಸರ್‌ಮ್ಯಾಟ್‌’ ಕ್ಷಿಪಣಿ ಪ್ರಯೋಗ ಯಶಸ್ವಿ: ಅಣ್ವಸ್ತ್ರ ಸಾಗಿಸಬಲ್ಲ, ಮುಂದಿನ ತಲೆಮಾರಿನ ಅತ್ಯಾಧುನಿಕ ‘ಸರ್‌
ಮ್ಯಾಟ್‌’ ಖಂಡಾಂತರ ಬ್ಯಾಲೆಸ್ಟಿಕ್‌ ಕ್ಷಿಪಣಿಯ ಪ್ರಯೋಗವನ್ನು ಬುಧವಾರ ರಷ್ಯಾ ಸೇನೆ ಯಶಸ್ವಿಯಾಗಿ ನಡೆಸಿದೆ.

ಶರಣಾಗತಿಗೆ ಮತ್ತೊಮ್ಮೆ ರಷ್ಯಾ ಗಡುವು

ಮರಿಯುಪೊಲ್‌ ರಕ್ಷಣೆಗೆ ನಿಂತಿರುವ ಉಕ್ರೇನ್‌ ಸೈನಿಕರು ಮತ್ತು ಬಾಡಿಗೆ ಸೈನಿಕರು ಶಸ್ತ್ರ ತ್ಯಜಿಸಿ, ಶರಣಾಗಲು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ನೀಡಿದ್ದ ಅಂತಿಮ ಗಡುವನ್ನು ಉಕ್ರೇನ್‌ ಸೇನೆ ತಿರಸ್ಕರಿಸಿದ್ದರಿಂದ ಮಂಗಳವಾರ ಮತ್ತೊಂದು ಅವಕಾಶ ನೀಡಿತ್ತು. ಉಕ್ಕಿನ ಸ್ಥಾವರದ ಮೇಲೆ ಬುಧವಾರ ಬಾಂಬ್‌ ದಾಳಿ ಮಾಡುವ ಜತೆಗೆ, ಪ್ರತಿರೋಧ ಬಿಟ್ಟು, ಶರಣಾಗತಿಗೆ ಮತ್ತೊಮ್ಮೆ ಅಂತಿಮ ಗಡುವು ನೀಡಿದೆ. ಶರಣಾಗುವವರಿಗೆ ಜೀವದಾನದ ಜತೆಗೆ, ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಅಭಯವನ್ನೂ ನೀಡಿದೆ.

ಬುಧವಾರದ ಬೆಳವಣಿಗೆ

l ಡಾನ್‌ಬಾಸ್‌ನಲ್ಲಿನ ದುರಂತವೇ ಉಕ್ರೇನ್‌ನಲ್ಲಿ ವಿಶೇಷ ಸೇನಾ ಕಾರ್ಯಾಚರಣೆ ನಡೆಸಲು ಪ್ರೇರಣೆ. ಡಾನ್‌ಬಾಸ್‌ನಲ್ಲಿ ಶೀಘ್ರ ಶಾಂತಿ ನೆಲೆಸಲಿದೆ– ಸಂವಾದದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರತಿಪಾದನೆ

l ನಮಗೆ ಸೇನಾ ನೆರವು ನೀಡಿ, ಬುಲೆಟ್ಸ್‌, ಯುದ್ಧ ವಿಮಾನಗಳನ್ನು ಪೂರೈಸಿ– ಬಲ್ಗೇರಿಯಾಕ್ಕೆ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಮನವಿ

l ಉಕ್ರೇನ್‌ ಸಂಘರ್ಷ ಶಮನದ ಬದ್ಧತೆಯಿಂದ ಹಿಂದೆ ಸರಿದು, ಮಾತುಕತೆಯ ರಾಗ ಬದಲಿಸಿದೆ. ಹಾಗಾಗಿ ಶಾಂತಿ ಮಾತುಕತೆ ಪ್ರಗತಿ ಮಂದಗತಿಯಲ್ಲಿದೆ– ರಷ್ಯಾ ವಕ್ತಾರ ಡೆಮಿಟ್ರಿ ಪೆಸ್ಕೊವ್‌ ಆರೋಪ

l ಈವರೆಗೆ ಯುದ್ಧಪೀಡಿತ ಉಕ್ರೇನ್‌ನಿಂದ 50 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ದೇಶ ತೊರೆದಿದ್ದಾರೆ– ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ

l ಮರಿಯುಪೊಲ್‌ ನಗರದಿಂದ ನಾಗರಿಕರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗ ತೆರೆಯಲು ರಷ್ಯಾ ಪಡೆ ಸಮ್ಮತಿಸಿದೆ. –ಉಕ್ರೇನ್‌ ಉಪ ಪ್ರಧಾನಿ ಇರಿನಾ

l ಫ್ರಾನ್ಸ್‌ ನಿರ್ಮಿತ ಸುಮಾರು 100 ಮಿಸ್ತ್ರಾಲ್‌ ವಾಯು ರಕ್ಷಣಾ ಕ್ಷಿಪಣಿಗಳನ್ನು ಉಕ್ರೇನ್‌ಗೆ ಕಳುಹಿಸಿಕೊಡಲಾಗಿದೆ– ನಾರ್ವೆ ರಕ್ಷಣಾ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT