ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಫಲಿಸದ 5ನೇ ಸುತ್ತಿನ ಮಾತುಕತೆ

ಶಸ್ತ್ರಾಸ್ತ್ರ ತ್ಯಜಿಸಿ, ಮರಿಯುಪೊಲ್‌ ತೊರೆಯಲು ನಿರಾಕರಿಸಿದ ಉಕ್ರೇನ್‌ ಸೇನೆ
Last Updated 21 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಲುವಿವ್‌, ಮರಿಯುಪೊಲ್‌: ಕಾರ್ಯತಂತ್ರದ ಬಂದರು ನಗರ ಮರಿಯುಪೊಲ್‌ನಿಂದ ಉಕ್ರೇನ್‌ ಸೈನಿಕರು ಶಸ್ತ್ರಾಸ್ತ್ರ ತ್ಯಜಿಸಿ, ಶ್ವೇತ ಧ್ವಜ ತೋರಿಸಿ ಮಾನವೀಯ ಕಾರಿಡಾರ್‌ ಮೂಲಕ ನಿರ್ಗಮಿಸಬೇಕೆಂದು ರಷ್ಯಾ ಪಡೆಗಳು ಇಟ್ಟಿದ್ದ ಬೇಡಿಕೆಯನ್ನು ಉಕ್ರೇನ್‌ ಸೋಮವಾರ ತಿರಸ್ಕರಿಸಿದೆ.

ಈ ನಡುವೆ ಯುದ್ಧಗೊನೆಗಾಣಿಸಿ, ಶಮನಗೊಳಿಸಲು ಎರಡೂ ರಾಷ್ಟ್ರಗಳ ನಡುವೆ ಸೋಮವಾರ ನಡೆದ 5ನೇ ಸುತ್ತಿನ ನಿರ್ಣಾಯಕ ಶಾಂತಿಮಾತುಕತೆಯೂ ಫಲಿಸಿಲ್ಲ. ಯಾವುದೇ ಗಮನಾರ್ಹ ಪ್ರಗತಿಯೂ ಆಗಿಲ್ಲ. ‘ಸ್ವೀಕಾರಾರ್ಹವಲ್ಲದ ಪ್ರಸ್ತಾವಗಳನ್ನು ಮುಂದಿಡುವ ಮೂಲಕ ಉಕ್ರೇನ್‌ ಶಾಂತಿ ಮಾತುಕತೆಗಳನ್ನು ಮುರಿದಿದೆ’ ಎಂದು ರಷ್ಯಾ ಆರೋಪಿಸಿದೆ.

‘ಉಕ್ರೇನ್ ಮಾತುಕತೆಗೆ ಸಿದ್ಧ ಎನ್ನುತ್ತದೆ. ಆದರೆ, ಕೊನೆಯಲ್ಲಿ ಶರಣಾಗುವುದಿಲ್ಲ ಎನ್ನುತ್ತದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ನಡುವಿನ ಸಂಭವನೀಯ ನೇರ ಮಾತುಕತೆಗೆ ಪೂರಕವಾಗಿ ಗಮನಾರ್ಹ ಪ್ರಗತಿಯನ್ನು ಇನ್ನೂ ಸಾಧಿಸಬೇಕಾಗಿದೆ’ ಎಂದು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಉಕ್ರೇನ್‌ಸ್ಕ ಪ್ರಾವ್ದಾ’ ಸುದ್ದಿ ವಾಹಿನಿಯ ವರದಿಯನ್ನು ಅಲ್ಲಗಳೆದಿರುವ ಉಕ್ರೇನ್‌ನ ಉಪಪ್ರಧಾನಿ ಇರೆನಾ ವೆರೆಸ್‌ಚುಕ್‌, ‘ಶರಣಾಗತಿ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮಾತೇ ಇಲ್ಲ. ರಷ್ಯಾದ ಹೇಳಿಕೆಯು ತಿರುಚಿರುವುದಾಗಿದೆ’ ಎಂದು ಕಿಡಿಕಾರಿದರು.

‘ನಮ್ಮ ನಿಲುವನ್ನು ರಷ್ಯಾಕ್ಕೂ ಸ್ಪಷ್ಟಪಡಿಸಲಾಗಿದೆ. ಸಮಯ ವ್ಯರ್ಥ ಮಾಡುವ ಬದಲು, ಕಾರಿಡಾರ್ ತೆರೆಯಲು 8 ಪುಟಗಳ ಪತ್ರ ಬರೆದಿರುವೆ’ ಎಂದು ಅವರು ‘ಉಕ್ರೇನ್‌ಸ್ಕ ಪ್ರಾವ್ಡಾ’ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ‘ಉಕ್ರೇನ್ ಸೈನಿಕರು ಅಜೋವ್ ಸಮುದ್ರದ ಬಂದರನ್ನು ಸುರಕ್ಷಿತ ಮಾರ್ಗವಾಗಿ ಬಳಸಿಕೊಂಡು ಉಕ್ರೇನ್ ನಿಯಂತ್ರಣದ ಪ್ರದೇಶಗಳಿಗೆ ಹೋಗಬಹುದು. ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಎಲ್ಲರಿಗೂ ಮರಿಯುಪೊಲ್‌ನಿಂದ ಸುರಕ್ಷಿತ ನಿರ್ಗಮನದ ಖಾತ್ರಿ ನೀಡಲಾಗುವುದು. ಉಕ್ರೇನಿನ ಲಿಖಿತ ಉತ್ತರಕ್ಕೆ ರಷ್ಯಾ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕಾಯಲಿದೆ’ ಎಂದು ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂತ್ಸೆವ್‌ ಭಾನುವಾರ ಗಡುವು ನೀಡಿದ್ದರು.

ಉಕ್ರೇನ್ ಪಡೆಗಳು ನಗರ ತೊರೆಯಲು ಒಪ್ಪಿದರೆ ನಗರಕ್ಕೆ ಮಾನವೀಯ ಸರಬರಾಜುಗಳ ವಿತರಣೆ ತಕ್ಷಣವೇ ಆರಂಭವಾಗಲಿದೆ. ಮರಿಯುಪೊಲ್‌ ತೊರೆಯಬೇಕೆ ಅಥವಾ ನಗರದಲ್ಲೇ ಉಳಿಯಬೇಕೆ ಎಂಬುದರ ಆಯ್ಕೆಗೆ ನಾಗರಿಕರು ಸ್ವತಂತ್ರರು ಎಂದು ಮಿಜಿಂತ್ಸೆವ್‌ ಹೇಳಿದ್ದರು.

ರಷ್ಯಾ ಪಡೆಗಳ ಆಕ್ರಮಣಕ್ಕೆ ತುತ್ತಾಗಿರುವ ಈ ನಗರ ಕಳೆದ 20 ದಿನಗಳಿಂದಲೂ ನೀರು, ವಿದ್ಯುತ್‌, ಸಾರಿಗೆ ಇತ್ಯಾದಿ ಮೂಲಸೌಲಭ್ಯಗಳನ್ನು ಕಳೆದುಕೊಂಡಿದೆ. ಈ ನಗರವೊಂದರಲ್ಲೇ ಈವರೆಗೆ 2,300 ನಾಗರಿಕರು ಹತರಾಗಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ ಸೇನೆ ಶರಣಾಗತಿ ತಿರಸ್ಕರಿಸಿದ ಬೆನ್ನಲ್ಲೇ ರಷ್ಯಾ ಪಡೆಗಳು ಮರಿಯುಪೊಲ್‌ ಮೇಲೆ ನಿರಂತರ ಬಾಂಬ್‌ ದಾಳಿ ಮುಂದುವರಿಸಿವೆ. ರಾಜಧಾನಿ ಕೀವ್‌ ನಗರ ಕೇಂದ್ರ ಭಾಗದ ವಾಣಿಜ್ಯ ಸಂಕೀರ್ಣ ಗುರಿಯಾಗಿಸಿ ಭಾನುವಾರ ತಡರಾತ್ರಿ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ 8 ಜನರು ಮೃತಪಟ್ಟಿದ್ದಾರೆ.

‘400 ನಾಗರಿಕರು ಆಶ್ರಯ ಪಡೆದಿದ್ದ ಮರಿಯುಪೊಲ್‌ನ ಕಲಾ ಶಾಲೆಯ ಮೇಲೆ ರಷ್ಯಾದ ನಡೆಸಿದ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ ಎನ್ನುವುದು ಗೊತ್ತಾಗಿಲ್ಲ’ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಸೋಮವಾರ ನಸುಕಿನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾಡಿರುವ ವಿಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ.

‘ವಿಮಾನದಿಂದ ಬಾಂಬ್‌ ಹಾಕಿ ನೂರಾರುನಾಗರಿಕರ ಸಾಮೂಹಿಕ ಹತ್ಯೆಗೆ ಕಾರಣನಾದ ರಷ್ಯಾದ ಆ ಪೈಲಟ್‌ನ್ನು ನಾವು ಕೊಂದೇ ಕೊಲ್ಲುತ್ತೇವೆ’ ಎಂದು ಝೆಲೆನ್‌ಸ್ಕಿ ಗುಡುಗಿದ್ದಾರೆ.

ಸ್ಫೋಟಿಸದ 60 ಸ್ಫೋಟಕ ಪತ್ತೆ ಹಚ್ಚಿದ ಶ್ವಾನ
ಉಕ್ರೇನ್‌ ಆಕ್ರಮಣಕ್ಕಾಗಿ ರಷ್ಯಾ ನಡೆಸುತ್ತಿರುವ ವೈಮಾನಿಕ, ಕ್ಷಿಪಣಿ ಹಾಗೂ ಶೆಲ್‌ ದಾಳಿಯಿಂದ ಉಕ್ರೇನ್‌ನ ಪ್ರಮುಖ ನಗರಗಳೆಲ್ಲ ಛಿದ್ರಛಿದ್ರವಾಗಿ ಸ್ಮಶಾನ ಸದೃಶವಾಗಿವೆ. ಆಕ್ರಮಣ ಆರಂಭವಾದಾಗಿನಿಂದ ಈವರೆಗೆ ಉಕ್ರೇನ್‌ ನೆಲದ ಮೇಲೆ ಬಿದ್ದಿರುವ ಸ್ಫೋಟಗೊಳ್ಳದ ಬಾಂಬುಗಳು, ಕ್ಷಿಪಣಿಗಳು, ಮದ್ದುಗುಂಡುಗಳನ್ನು ನಿಷ್ಕ್ರಿಯಗೊಳಿಸಲು ಹಲವು ವರ್ಷಗಳೇ ಬೇಕಾಗಬಹುದು. ಇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವು ಬೇಕಾಗಲಿದೆ ಎಂದು ಉಕ್ರೇನ್ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿಯುಸ್ಕೈ ಮೊನ್ನೆಯಷ್ಟೇ ಹೇಳಿದ್ದರು.

ಹೌದು, ಉಕ್ರೇನ್‌ನ ನಗರ, ಹಳ್ಳಿ ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲೆಂದರಲ್ಲಿ ಬಾಂಬುಗಳು, ಶೆಲ್‌ಗಳು, ಮದ್ದುಗುಂಡುಗಳು ಬಿದ್ದಿವೆ. ರಷ್ಯಾ ಪಡೆಗಳು ನಗರಗಳನ್ನು ಗುರಿಯಾಗಿಸಿ ನಡೆಸಿದ ಸೇನಾ ದಾಳಿ ವೇಳೆ ಸ್ಫೋಟಿಸದೆ ಬಿದ್ದಿರುವ ಜೀವಂತ ಸ್ಫೋಟಕಗಳನ್ನು ಪತ್ತೆ ಹಚ್ಚಿ, ಭವಿಷ್ಯದಲ್ಲಿ ಘಟಿಸಲಿದ್ದ ಸಂಭವನೀಯ ಅನಾಹುತಗಳನ್ನು ತಡೆಯಲು ಅಳಿಲು ಸೇವೆ ಸಲ್ಲಿಸುತ್ತಿದೆ ಉಕ್ರೇನ್‌ ಸೇನೆಯ ಪುಟ್ಟ ಶ್ವಾನ.

ಯುದ್ಧ ಆರಂಭವಾದಾಗಿನಿಂದ ಮಾರ್ಚ್‌ 19ರವರೆಗೆ ಚೆರ್ನಿವ್‌ ನಗರವೊಂದರಲ್ಲೇ ಸುಮಾರು 90 ಜೀವಂತ ಸ್ಫೋಟಕಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲು ನೆರವಾಗಿದೆಯಂತೆ ಈ ಪುಟ್ಟ ಶ್ವಾನ. ರಾಜ್ಯ ತುರ್ತು ಸೇವೆ ರಕ್ಷಣಾ ಸಿಬ್ಬಂದಿಯ ತಂಡದಲ್ಲಿ ಈ ಶ್ವಾನ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುವ ಮಾಹಿತಿಯನ್ನು ಬೆಂಜಮಿನ್‌ ಲಿಮ್‌ ಎಂಬುವವರು ಟ್ವಿಟರ್‌ನಲ್ಲಿ ವಿಡಿಯೊ ಸಮೇತಹಂಚಿಕೊಂಡಿದ್ದಾರೆ.

ಲುವಿವ್‌ ನಗರದ ರೈಲು ನಿಲ್ದಾಣದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಕಂಡುಬಂದ ಮಕ್ಕಳು – ಎಎಫ್‌ಪಿ ಚಿತ್ರ
ಲುವಿವ್‌ ನಗರದ ರೈಲು ನಿಲ್ದಾಣದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಕಂಡುಬಂದ ಮಕ್ಕಳು – ಎಎಫ್‌ಪಿ ಚಿತ್ರ

26ನೇ ದಿನದ ಬೆಳವಣಿಗೆಗಳು

*ವಾಯವ್ಯ ಪೊಡೊಲ್‌ಸ್ಕಿ ಜಿಲ್ಲೆಯಲ್ಲಿ ಉಕ್ರೇನ್ ಪಡೆಗಳು ರಷ್ಯಾದ ಕ್ಷಿಪಣಿ ಹೊಡೆದುರುಳಿಸಿವೆ– ಕೀವ್‌ ಮೇಯರ್ ವಿಟಾಲಿ ಕ್ಲಿಟೊಸ್ಕ್‌

*ಉಕ್ರೇನ್‌ ಸಂಘರ್ಷದ ಬಗ್ಗೆ ನ್ಯಾಟೊ ಮತ್ತು ಯುರೋಪ್‌ ರಾಷ್ಟ್ರಗಳೊಂದಿಗೆ ಚರ್ಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಶುಕ್ರವಾರ ಪೋಲೆಂಡ್‌ಗೆ ಪ್ರಯಾಣಿಸಲಿದ್ದಾರೆ

*1986ರಲ್ಲಿ ವಿಶ್ವದ ಭಾರೀ ದುರಂತಕ್ಕೆ ಸಾಕ್ಷಿಯಾದ ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದ ಸುತ್ತಲಿನ ವಿಕಿರಣ ಮಾನಿಟರ್‌ಗಳು ಸ್ಥಗಿತಗೊಂಡಿವೆ. ವಿಕಿರಣ ಹರಡುವಿಕೆ ನಿಯಂತ್ರಿಸುವ ಸಾಮರ್ಥ್ಯ ಗಮನಾರ್ಹವಾಗಿ ಕ್ಷೀಣಿಸುತ್ತಿದ್ದು,ಮುಂಬರುವ ವಾರಗಳು ಅಥವಾ ತಿಂಗಳುಗಳಲ್ಲಿಉಕ್ರೇನ್‌ ಗಡಿ ಮೀರಬಹುದು–ಉಕ್ರೇನಿನ ಅಣು ನಿಯಂತ್ರಕ ಏಜೆನ್ಸಿ ಎಚ್ಚರಿಸಿದೆ

*ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್‌ನಲ್ಲಿ ತೀವ್ರತರದ ಯುದ್ಧ ಅಪರಾಧಗಳನ್ನು ಎಸಗಿವೆ ಎಂದು ಯುರೋಪ್‌ ಒಕ್ಕೂಟದ ದೇಶಗಳು ಆರೋಪಿಸಿವೆ

*ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ವಿರಾಮ ಮಾತುಕತೆಗಳಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದ್ದರೂ, ಎರಡೂ ಕಡೆಯಲ್ಲೂ ತುಂಬಾ ಅಂತರಗಳು ಉಳಿದಿವೆ– ಇಸ್ರೇಲ್ ಪ್ರಧಾನಿನಫ್ತಾಲಿ ಬೆನೆಟ್ ಹೇಳಿಕೆ

*ರಷ್ಯಾದ ತೈಲ, ಅನಿಲ, ಕಲ್ಲಿದ್ದಲಿಗೆ ಅವಲಂಬಿಸಿದ್ದ ದೇಶಗಳು ಪರ್ಯಾಯ ವ್ಯವಸ್ಥೆಗೆ ಪರದಾಡುತ್ತಿವೆ. ಇದರಿಂದ ಹವಾಮಾನ ಬದಲಾವಣೆಗಾಗಿ ಪರಸ್ಪರರಲ್ಲಿ ಇದ್ದ ಸಹಕಾರಕ್ಕೆ ಪೆಟ್ಟು ಬೀಳಲಿದೆ– ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟರೆಸ್‌ ಎಚ್ಚರಿಕೆ

*ಉಕ್ರೇನ್‌ ಯುದ್ಧದಲ್ಲಿ ಜೀವಹಾನಿಯ ದುರಂತಕ್ಕೆ ರಷ್ಯಾವೇ ನೇರ ಹೊಣೆ. ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಇಂತಹದ್ದು ಘಟಿಸದಿರಲಿ– ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌

*ಸುಮಿ ನಗರದ ಹೊರವಲಯದ ರಾಸಾಯನಿಕ ಘಟಕದ ಮೇಲೆ ರಷ್ಯಾ ಶೆಲ್‌ ದಾಳಿ ನಡೆಸಿದೆ. ಇದರಿಂದ 50 ಟನ್‌ ಅಮೋನಿಯಾ ಸೋರಿಕೆಯಾಗಿದೆ–ಉಕ್ರೇನ್‌ ಆರೋಪ

*ರಾಸಾಯನಿಕ ಘಟಕದ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿಲ್ಲ. ಸುಳ್ಳು ಆರೋಪ ಮಾಡುತ್ತಿರುವ ಉಕ್ರೇನ್‌ ಪಡೆಗಳು, ಉದ್ದೇಶಪೂರ್ವಕ ಪ್ರಚೋದನೆ ನೀಡುತ್ತಿವೆ– ರಷ್ಯಾ ಸೇನೆ ವಕ್ತಾರ ಇಗೋರ್‌ ಕೊನಶೆಂಕವ್‌

*ಉಕ್ರೇನಿನ ರಿವ್‌ನೆ ಪ್ರದೇಶದಲ್ಲಿರುವ ಸೇನಾ ತರಬೇತಿ ಕೇಂದ್ರ ಮೇಲೆ ಭಾನುವಾರ ತಡರಾತ್ರಿ ಕ್ರೂಸ್‌ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. 80 ಮಂದಿ ವಿದೇಶಿಗರು ಮತ್ತು ಉಕ್ರೇನಿನ ಹಲವು ಯೋಧರು ಹತರಾಗಿದ್ದಾರೆ– ರಷ್ಯಾ

*ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣ ಖಂಡಿಸಲು ನಿರಾಕರಿಸಿರುವ ಚೀನಾದ ನಡೆಯನ್ನು ಅಮೆರಿಕದಲ್ಲಿನ ಚೀನಾ ರಾಯಭಾರಿ ಸಮರ್ಥಿಸಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT