ಬುಧವಾರ, ಆಗಸ್ಟ್ 10, 2022
21 °C

ಬೈಡನ್‌ ನನ್ನನ್ನು 'ಹಂತಕ' ಎಂದು ಕರೆದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಪುಟಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮನ್ನು ʼಹಂತಕʼ ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ಚಿಂತಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಹೇಳಿದ್ದಾರೆ.

ʼನನ್ನ ಆಡಳಿತಾವಧಿಯಲ್ಲಿ, ಎಲ್ಲಾ ರೀತಿಯ ಕಾರಣಗಳು ಮತ್ತು ನೆಪಗಳಿಂದಾಗಿ ನಾನು ಎಲ್ಲಾ ಆಯಾಮಗಳಿಂದ, ಕ್ಷೇತ್ರಗಳಿಂದ ದಾಳಿ ಎದುರಿಸಿದ್ದೇನೆ. ಇದ್ಯಾವುದೂ ನನ್ನನ್ನು ಅಚ್ಚರಿಗೊಳಿಸಿಲ್ಲʼ ಎಂದು ಪುಟಿನ್‌ ಹೇಳಿರುವುದಾಗಿ ಅಮೆರಿಕ ಸುದ್ದಿ ಸಂಸ್ಥೆ ‘ಎನ್‌ಬಿಸಿ‘ ವರದಿ ಮಾಡಿದೆ. ಪುಟಿನ್‌ ಮುಂದಿನವಾರ ಬೈಡನ್‌ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಬಿಸಿ ಸಂದರ್ಶನ ನಡೆಸಿತ್ತು.

ಈ ವೇಳೆ ರಷ್ಯಾ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧ ತೀರಾ ಕೆಳಮಟ್ಟದಲ್ಲಿದೆ ಎಂದಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುಟಿನ್‌, ಬೈಡನ್‌ ಅವರಿಗಿಂತ ಟ್ರಂಪ್‌ ಸಂಪೂರ್ಣ ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಆಳ–ಅಗಲ: ಕಾಳಗಕ್ಕಿಳಿದ ಬೈಡನ್‌–ಪುಟಿನ್‌

ʼಯುಎಸ್‌ ಮಾಜಿ ಅಧ್ಯಕ್ಷ ಟ್ರಂಪ್‌ ಅಸಾಧಾರಣ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ನಾನು ಈಗಲೂ ನಂಬುತ್ತೇನೆ. ಇಲ್ಲದಿದ್ದರೆ ಅವರು ಅಮೆರಿಕದ ಅಧ್ಯಕ್ಷರಾಗುತ್ತಿರಲಿಲ್ಲ. ಅವರದು ವರ್ಣರಂಜಿತ ವ್ಯಕ್ತಿತ್ವ. ನೀವು ಅವರನ್ನು ಇಷ್ಟಪಡಬಹುದು ಅಥವಾ ಇಷ್ಟಪಡದೆಯೂ ಇರಬಹುದು. ಈ ಹಿಂದೆ ಅವರೇನು ತುಂಬಾ ಕಾಲದಿಂದ ರಾಜಕೀಯದಲ್ಲಿ ಇದ್ದವರಲ್ಲ. ಕೆಲವರು ಅವರನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಆದರೆ ಅದೇ ವಾಸ್ತವʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ಗೆ ಸುಧಾರಿತ ಉಪಗ್ರಹ ವ್ಯವಸ್ಥೆಯನ್ನು ಹಸ್ತಾಂತರಿಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂಬ ಅಮೆರಿಕ ಮಾಧ್ಯಮಗಳ ವರದಿಯನ್ನೂ ಪುಟಿನ್‌ ಇದೇ ವೇಳೆ ಅಲ್ಲಗಳೆದರು.

ಈ ಹಿಂದೆ, ‘ಎಬಿಸಿ ನ್ಯೂಸ್‌’ಗೆ ಸಂದರ್ಶನ ನೀಡಿದ್ದ‌ ಜೋ ಬೈಡನ್‌, ಪುಟಿನ್‌ ಅವರನ್ನು ‘ಹಂತಕ’ ಎಂದು ಕರೆದಿದ್ದರು. ರಷ್ಯಾದ ವಿರೋಧ ಪಕ್ಷದ ನಾಯಕ ‌ಅಲೆಕ್ಸಿ ನವಾಲ್ನಿ ಅವರು ನೋವಿಚೋಕ್‌ ಎಂಬ ವಿಷ ಪದಾರ್ಥ ಸೇವಿಸಿದ್ದ ಪ್ರಕರಣವನ್ನು ಉಲ್ಲೇಖಿಸಿ ಪುಟಿನ್‌ ವಿರುದ್ಧ ಕಿಡಿ ಕಾರಿದ್ದರು.

ಇದನ್ನೂ ಓದಿ: ರಷ್ಯಾ: ಸಾವಿನ ಅಂಚಿನಲ್ಲಿ ಪುಟಿನ್‌ ಕಡು ವಿರೋಧಿ ಅಲೆಕ್ಸಿ ನವಾಲ್ನಿ​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು