ಸೋಮವಾರ, ಆಗಸ್ಟ್ 15, 2022
22 °C

ರಷ್ಯಾದ ಕೋವಿಡ್‌ ಲಸಿಕೆ ಸ್ಪುಟ್ನಿಕ್‌ ವಿ: 7 ಜನರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾಸ್ಕೊದಲ್ಲಿ ಸ್ಪುಟ್ನಿಕ್‌ ವಿ ಲಸಿಕೆ ಪ್ರಯೋಗ ನಡೆಸುತ್ತಿರುವುದು

ನವದೆಹಲಿ: ರಷ್ಯಾದ ಕೋವಿಡ್‌–19 ಪ್ರಾಯೋಗಿಕ ಲಸಿಕೆ 'ಸ್ಪುಟ್ನಿಕ್‌ ವಿ' ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿರುವುದಾಗಿ ರಷ್ಯಾದ ಆರೋಗ್ಯ ಸಚಿವ ಹೇಳಿದ್ದಾರೆ.

ಲಸಿಕೆ ಪ್ರಯೋಗಿಸಲು ಉದ್ದೇಶಿಸಲಾಗಿರುವ 40,000 ಜನರ ಪೈಕಿ ಈವರೆಗೂ 300 ಮಂದಿಗೆ ಸ್ಪುಟ್ನಿಕ್‌ ವಿ ಲಸಿಕೆ ನೀಡಿರುವುದಾಗಿ ಆರೋಗ್ಯ ಸಚಿವ ಮಿಖೈಲ್‌ ಮುರಷ್ಕೊ ಹೇಳಿದ್ದಾಗಿ ಟಿಎಎಸ್‌ಎಸ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

ಅಂದಾಜು ಶೇ 14ರಷ್ಟು ಜನರಲ್ಲಿ ಸುಸ್ತು, 24 ಗಂಟೆಗಳ ವರೆಗೂ ಮಾಂಸಖಂಡಗಳಲ್ಲಿ ನೋವು ಹಾಗೂ ಕೆಲವು ಬಾರಿ ದೇಹದ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿರುವುದಾಗಿ ಮಾಸ್ಕೊ ಟೈಮ್ಸ್‌ ಉಲ್ಲೇಖಿಸಿದೆ.

ಈಗಾಗಲೇ ಒಂದು ಬಾರಿ ಲಸಿಕೆ ಪಡೆದಿರುವವರಿಗೆ 21 ದಿನಗಳ ಒಳಗಾಗಿ ಮತ್ತೊಂದು ಡೋಸ್ ಸ್ಪುಟ್ನಿಕ್‌ ವಿ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ. ಆದರೆ, ರಷ್ಯಾ ಸರ್ಕಾರ ಕಳೆದ ತಿಂಗಳೇ ಲಸಿಕೆ ಅನುಮೋದನೆ ನೀಡಿದೆ. ಆ ಮೂಲಕ ಮನುಷ್ಯರ ಬಳಕೆಗಾಗಿ ಅನುಮೋದನೆ ಪಡೆದ ಜಗತ್ತಿನ ಮೊದಲ ಕೋವಿಡ್‌–19 ಲಸಿಕೆಯಾಗಿ ಹೆಸರಾಗಿದೆ.

ಸೆಪ್ಟೆಂಬರ್‌ನಿಂದ ಮಾಸ್ಕೊದಲ್ಲಿ ಲಸಿಕೆಯ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‌ ಆರಂಭವಾಗಿದೆ. ಇನ್ನೂ ಸಂಪೂರ್ಣ ಸುರಕ್ಷತೆ ಹಾಗೂ ಸಾಮರ್ಥ್ಯದ ಪರೀಕ್ಷೆಗಳನ್ನು ಪೂರ್ಣಗೊಳಿಸದ ಸ್ಪುಟ್ನಿಕ್‌ ಲಸಿಕೆ ತೆಗೆದುಕೊಳ್ಳದಂತೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಹಾಗೂ ಸ್ಪುಟ್ನಿಕ್‌ ವಿ ಲಸಿಕೆ ವಿತರಣೆಗಾಗಿ ರಷ್ಯಾದ ಸಾವೆರಿನ್‌ ವೆಲ್ತ್‌ ಫಂಡ್‌ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತದ ಡಿಸಿಜಿಐನಿಂದ ಆ ಪ್ರಕ್ರಿಯೆಗೆ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. ಡಿಸಿಜಿಐ ಅನುಮೋದನೆಯ ಬಳಿಕ 10 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಡಾ.ರೆಡ್ಡೀಸ್‌ ಲ್ಯಾಬೊರೇಟರಿಗೆ ಪೂರೈಕೆ ಮಾಡುವುದಾಗಿ ರಷ್ಯನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಹೇಳಿದೆ.

ಲ್ಯಾನ್‌ಸೆಟ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿರುವ ಟ್ರಯಲ್‌ 1 ಮತ್ತು 2ರ ಮಾಹಿತಿಯ ಪ್ರಕಾರ, ಸ್ಪುಟ್ನಿಕ್‌ ವಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಹಾಗೂ ಪ್ರಯೋಗಕ್ಕೆ ಒಳಗಾದ 76 ಜನರಲ್ಲಿ ಅಗತ್ಯವಿರುವ ರೋಗ ನಿರೋಧಕ ಪ್ರಕ್ರಿಯೆ ಕಂಡು ಬಂದಿದೆ. ಆದರೆ, ಕೆಲವು ವಿಜ್ಞಾನಿಗಳು ಅದಕ್ಕೆ ತಕರಾರು ತೆಗೆದಿದ್ದು, ಮಾಹಿತಿಯ ಪರಿಶೀಲನೆಗೆ ಕೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು