ಶುಕ್ರವಾರ, ಮೇ 20, 2022
19 °C
ಅಪೌಷ್ಟಿಕತೆ, ವೈದ್ಯಕೀಯ ಸೇವೆಯ ಕೊರತೆ

ಟಿಗ್ರೆ: ಹಸಿವಿನಿಂದ ಸುಮಾರು 200 ಮಕ್ಕಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

AFP

ಆಡಿಸ್‌ ಅಬಾಬ: ವರ್ಷದ ಹಿಂದೆ ಆರಂಭವಾದ ಆಂತರ್ಯುದ್ಧದಿಂದ ಜರ್ಜರಿತಗೊಂಡಿರುವ ಇಥಿಯೋಪಿಯಾದ ಟಿಗ್ರೆ ಪ್ರಾಂತ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಮಂದಿ ಮಕ್ಕಳು ಹಸಿವಿನಿಂದ ಸತ್ತಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಅಪೌಷ್ಟಿಕತೆಯಿಂದ ಈ ಭಾಗದ ಮಕ್ಕಳು ಬಳಲುತ್ತಿದ್ದಾರೆ. ಆಹಾರ ಪದಾರ್ಥಗಳ ಕೊರತೆಯೂ ತೀವ್ರವಾಗಿ ಕಾಡುತ್ತಿದೆ.

ಟಿಗ್ರೆ ಭಾಗದ 14 ಆಸ್ಪತ್ರೆಗಳಿಂದ ಸಂಗ್ರಹಿಸಲಾದ ಮಾಹಿತಿಯು ಅಲ್ಲಿನ ದಾರುಣ ಚಿತ್ರಣವನ್ನು ಬಿಡಿಸಿಟ್ಟಿದೆ. ಈ ಭಾಗಕ್ಕೆ ಬಾಹ್ಯ ಸಂಪರ್ಕ ವ್ಯವಸ್ಥೆ ಕಡಿತಗೊಳಿಸಲಾಗಿದೆ. ಸಂತ್ರಸ್ತರಿಗೆ ನೆರವು ತಲುಪಿಸುವುದಕ್ಕೂ ತಡೆಯೊಡ್ಡಲಾಗಿದೆ. ಹೀಗಾಗಿ ಅಗತ್ಯ ಔಷಧಗಳು ಜನರಿಗೆ ದೊರಕುತ್ತಿಲ್ಲ.

ಹೆಚ್ಚಿನ ಆರೋಗ್ಯ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ. ಟಿಗ್ರೆಯ ಆರೋಗ್ಯ ಕಾರ್ಯಕರ್ತರು ಪ್ರಾಂತ್ಯದ ಅರ್ಧದಷ್ಟು ಜಿಲ್ಲೆಗಳಿಗೆ ಮಾತ್ರ ಭೇಟಿ ನೀಡಲು ಸಾಧ್ಯವಾಗಿರುವುದನ್ನು ಗಮನಿಸಿದರೆ ಮರಣಿಸಿದವರ ಪ್ರಮಾಣ ಸಮಗ್ರವಾಗಿ ಸಿಕ್ಕಿಲ್ಲ ಎಂದು ಡಾ.ಹಾಗೊಸ್‌ ಗಾಡ್‌ಫ್ರೆ ಹೇಳಿದ್ದಾರೆ. ಗಾಡ್‌ಫ್ರೆ ಅವರು ಯುದ್ಧಪೂರ್ವ ಟಿಗ್ರೆಯಲ್ಲಿ ಆರೋಗ್ಯ ಬ್ಯೂರೊದ ಮುಖ್ಯಸ್ಥರಾಗಿದ್ದರು.

ಈ ಸಮೀಕ್ಷೆ ಇನ್ನೂ ಪ್ರಕಟವಾಗಿಲ್ಲ.

ಟಿಗ್ರೆ ಭಾಗದ ಶೇ 29ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ಪ್ರಮಾಣ ಯುದ್ಧಪೂರ್ವ ಅವಧಿಗೆ ಹೋಲಿಸಿದರೆ ಶೇ 9ರಷ್ಟು ಹೆಚ್ಚು.

ಟಿಗ್ರೆ ಪ್ರಾಂತ್ಯದಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷ ಟಿಪಿಎಲ್‌ಎಫ್‌ (ಟಿಗ್ರೆ ಪೀಪಲ್ಸ್‌ ಲಿಬರೇಷನ್‌ ಫ್ರಂಟ್‌) ನೇತೃತ್ವದ  ಸರ್ಕಾರವನ್ನು ಕೆಡವಲು ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್‌ ಅವರು ಕಳೆದ ವರ್ಷದ ನವೆಂಬರ್‌ನಲ್ಲಿ ಸೇನಾಪಡೆಗಳನ್ನು ಕಳುಹಿಸಿದ್ದರು. ಸೇನಾ ಶಿಬಿರಗಳ ಮೇಲೆ ಟಿಪಿಎಲ್‌ಎಫ್‌ ದಾಳಿಯಿಂದ ಅಬಿ ಆಕ್ರೋಶಗೊಂಡು ಈ ಕ್ರಮ ಕೈಗೊಂಡಿದ್ದರು.

2019ರ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿರುವ ಅಬಿ, ತ್ವರಿತ ಗೆಲುವಿನ ಭರವಸೆ ನೀಡಿದ್ದರು. ಆದರೆ ಜೂನ್‌ ಕೊನೆಯ ಹೊತ್ತಿಗೆ ಟಿಪಿಎಲ್‌ಎಫ್‌, ಮೆಕೆಲೆ ನಗರ ಸೇರಿ ತಾನು ಕಳೆದುಕೊಂಡಿದ್ದ ಪ್ರದೇಶಗಳನ್ನು ಮರುವಶ ಮಾಡಿಕೊಂಡಿದೆ. ದಕ್ಷಿಣ ಭಾಗದತ್ತ ಮುನ್ನಡೆದಿದೆ.

ಜುಲೈ ನಂತರದ ಅವಧಿಯಲ್ಲಿ ಅಗತ್ಯಕ್ಕಿಂತ ಶೇ 15ರಷ್ಟು ಕಡಿಮೆ ನೆರವು ಟಿಗ್ರೆಯನ್ನು ತಲುಪುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದ್ದು, ಈ ಭಾಗದಲ್ಲಿ ಬರಗಾಲದ ಭೀಕರ ಛಾಯೆ ಕಾಣಿಸತೊಡಗಿದೆ. 1980ರ ದಶಕದಲ್ಲೂ ಆಫ್ರಿಕಾ ಖಂಡದ ಈ ದೇಶದಲ್ಲಿ ಭೀಕರ ಕ್ಷಾಮ ಕಾಣಿಸಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು