ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಾಗಿ ಬೀದಿಗಿಳಿದ ಅಫ್ಗನ್ ಮಹಿಳೆ: ಸಂಪುಟದಲ್ಲಿ ಸ್ತ್ರೀ ಪ್ರಾತಿನಿಧ್ಯ ಅನುಮಾನ

* ಹೆರಾತ್‌ ನಗರದಲ್ಲಿ ಪ್ರತಿಭಟನೆ * ಇನ್ನೂ ನಿಂತಿಲ್ಲ ದೇಶ ತೊರೆಯುವ ಧಾವಂತ
Last Updated 2 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕಾಬೂಲ್‌: ಹೊಸ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನ ನೀಡುವ ವಿಚಾರದಲ್ಲಿ ತಾಲಿಬಾನ್‌ಗೆ ಸ್ಪಷ್ಟತೆ ಇಲ್ಲ.

ಮಹಿಳೆಯರಿಗೆ ಹೊಸ ಸರ್ಕಾರದಲ್ಲಿ ಸ್ಥಾನ ಇರಲಿದೆ. ಹಾಗೆಯೇ, ಅಫ್ಗಾನಿಸ್ತಾನದ ಎಲ್ಲ ಬುಡಕಟ್ಟುಗಳಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ತಾಲಿಬಾನ್‌ನ ಉಪನಾಯಕ ಶೇರ್‌ ಮೊಹಮ್ಮದ್‌ ಅಬ್ಬಾಸ್‌ ಸ್ಟಾನಿಕ್‌ಜೈ ವಿದೇಶಿ ಮಾಧ್ಯಮಗಳ ಜತೆಗೆ ಮಾತನಾಡುತ್ತಾ ದೋಹಾದಲ್ಲಿ ಹೇಳಿದ್ದರು. ಬಿಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆಯನ್ನು ಅವರು ಅಲ್ಲಗಳೆದಿದ್ದಾರೆ.

ಮಹಿಳೆಯರು ಕೆಲಸ ಮುಂದುವರಿಸಲು ಅವಕಾಶ ದೊರೆಯಲಿದೆ. ಆದರೆ, ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ದೊರೆಯದು. ಈಗ ಮಾತ್ರವಲ್ಲ, ಮುಂದೆಯೂ ಸರ್ಕಾರದ ಯಾವುದೇ ಉನ್ನತ ಹುದ್ದೆಗೆ ಏರಲು ಮಹಿಳೆಯರಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದ್ಧಾರೆ.

ಅಫ್ಗಾನಿಸ್ತಾನದಲ್ಲಿ ಕಳೆದ 20 ವರ್ಷಗಳಲ್ಲಿ ಇದ್ದ ಸರ್ಕಾರಗಳ ಭಾಗವಾಗಿದ್ದ ಯಾರನ್ನೂ ಹೊಸ ಸರ್ಕಾರಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಲಿಬಾನ್‌ ನೀತಿಗಳ ವಿರುದ್ಧ ಮಹಿಳೆಯರೇ ಬೀದಿಗಿಳಿದು ಪ್ರತಿಭಟನೆ ನಡೆಸಿದ ಅಚ್ಚರಿಯ ವಿದ್ಯಮಾನಕ್ಕೂ ಅಫ್ಗಾನಿಸ್ತಾನ ಸಾಕ್ಷಿಯಾಗಿದೆ. ದೇಶದ ಪಶ್ಚಿಮ ಭಾಗದಲ್ಲಿರುವ ನಗರ ಹೆರಾತ್‌ನಲ್ಲಿ ಸುಮಾರು 50 ಮಹಿಳೆಯರು ಬೀದಿಗಿಳಿದು ಕೆಲಸ ಮಾಡುವ ಹಕ್ಕು ಕಸಿದುಕೊಳ್ಳಬಾರದು ಎಂದು ಪ್ರತಿಭಟನೆ ನಡೆಸಿದರು. ಸರ್ಕಾರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂಬ ಬೇಡಿಕೆಯನ್ನೂ ಅವರು ಮುಂದಿರಿಸಿದ್ಧಾರೆ.

‘ಶಿಕ್ಷಣ ಪಡೆಯುವುದು, ಕೆಲಸ ಮಾಡುವುದು ನಮ್ಮ ಹಕ್ಕು. ನಮಗೂ ಬೇಕು ಭದ್ರತೆ’ ಎಂಬ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದ್ಧಾರೆ. ‘ನಾವು ಒಗ್ಗಟ್ಟಾಗಿದ್ದೇವೆ, ನಮಗೆ ಭಯ ಇಲ್ಲ’ ಎಂದೂ ಅವರು ಹೇಳಿದ್ದಾರೆ.

ಹೆರಾತ್‌, ಇತರ ನಗರಗಳಿಗೆ ಹೋಲಿಸಿದರೆ ಹೆಚ್ಚು ಮುಂದುವರಿದ ಪ್ರದೇಶ. ಇದು ಇರಾನ್‌ ಗಡಿ ಸಮೀಪದಲ್ಲಿ ‍ಪ್ರಾಚೀನ ರೇಷ್ಮೆ ಮಾರ್ಗದಲ್ಲಿರುವ ನಗರವಾಗಿದೆ. ಇಲ್ಲಿ, ಹೆಣ್ಣು ಮಕ್ಕಳು ಆಗಲೇ ಶಾಲೆಗಳಿಗೆ ಮರಳಿದ್ದಾರೆ.

ತಾಲಿಬಾನ್‌ ಆಡಳಿತದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಭಾರಿ ಕಳವಳ ವ್ಯಕ್ತವಾಗಿದೆ.

*
ತಾಲಿಬಾನ್‌ ಸಭೆ, ಸಮಾವೇಶಗಳಲ್ಲಿ ಮಹಿಳೆಯರೇ ಕಾಣಿಸುತ್ತಿಲ್ಲ. ತಾಲಿಬಾನ್‌ನವರು ನಮ್ಮ ಜತೆ ಸಮಾಲೋಚನೆ ನಡೆಸಬೇಕು.
–ಬಶೀರಾ ತಹೇರಿ, ಪ್ರತಿಭಟನಕಾರ್ತಿ

*
ಮಹಿಳೆಯರ ಪರಿಸ್ಥಿತಿ ಕೆಟ್ಟದಾಗಿದೆ. ಮಹಿಳೆಯರಿಗಾಗಿ ಏನನ್ನಾದರೂ ಮಾಡಿ ಎಂಬುದು ಜಾಗತಿಕ ಸಮುದಾಯಕ್ಕೆ ನನ್ನ ಮೊರೆ.
–ಬೆಹೆಷ್ತಾ ಅರ್ಘಂಡ್‌, ತಾಲಿಬಾನ್‌ ಅಧಿಕಾರಿಯ ಸಂದರ್ಶನ ಮಾಡಿದ ಅಫ್ತಾನಿಸ್ತಾನದ ಮೊದಲ ಪತ್ರಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT