ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Last Updated 20 ಜನವರಿ 2021, 9:06 IST
ಅಕ್ಷರ ಗಾತ್ರ

ಜಿನೆವಾ: ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಗೊಂಡ ಕೊರೊನಾ ವೈರಸ್‌ ಈಗ ಜಗತ್ತಿನ ಕನಿಷ್ಠ 60 ರಾಷ್ಟ್ರಗಳಲ್ಲಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಬುಧವಾರ ಹೇಳಿದೆ. ಕಳೆದ ಒಂದು ವಾರದಲ್ಲಿರೂಪಾಂತರಿ ವೈರಸ್‌ ಪತ್ತೆಯಾಗಿರುವ ರಾಷ್ಟ್ರಗಳ ಪಟ್ಟಿಗೆ 10 ದೇಶಗಳು ಸೇರ್ಪಡೆಯಾಗಿವೆ.

ಜಗತ್ತಿನಾದ್ಯಂತ ಕೋವಿಡ್‌ನಿಂದಾಗಿ 20 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾಕಷ್ಟು ಲಸಿಕೆ ಲಭ್ಯವಾಗುವವರೆಗೂ ಹೊಸ ಸ್ವರೂಪದ ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವುದು ಹೇಗೆ ಎಂದು ವಿಶ್ವದಾದ್ಯಂತ ತಲ್ಲಣ ಸೃಷ್ಟಿಯಾಗಿದೆ. ಬ್ರಿಟನ್‌ ರೀತಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ವೈರಸ್‌, ಅತಿ ವೇಗವಾಗಿ ಹರಡಬಲ್ಲದಾಗಿದೆ. ಆ ವೈರಸ್‌ 23 ರಾಷ್ಟ್ರಗಳಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಹೊಸ ಸ್ವರೂಪದ ಕೊರೊನಾ ವೈರಸ್‌ನಿಂದಾಗಿ ಕಳೆದ ಏಳು ದಿನಗಳಲ್ಲಿ ಜಗತ್ತಿನಾದ್ಯಂತ ಸುಮಾರು 93,000 ಮಂದಿ ಸಾವಿಗೀಡಾಗಿದ್ದರೆ, ಇದೇ ಅವಧಿಯಲ್ಲಿ 47 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. 2020ರ ಡಿಸೆಂಬರ್‌ ಮಧ್ಯ ಭಾಗದಲ್ಲಿ ಬ್ರಿಟನ್‌ನಲ್ಲಿ ರೂಪಾಂತರಗೊಂಡ ವೈರಸ್‌ ಪತ್ತೆಯಾಗಿತ್ತು, ಅದು ಮೂಲ ಕೊರೊನಾ ವೈರಸ್‌ಗಿಂತ ಶೇ 50ರಿಂದ ಶೇ 70ರಷ್ಟು ಹೆಚ್ಚು ಪರಿಣಾಮಕಾರಿ ಎಂದು ಡಬ್ಲ್ಯುಎಚ್‌ಒ ಅಭಿಪ್ರಾಯ ಪಟ್ಟಿದೆ.

ಎರಡೂ ರೀತಿಯ ರೂಪಾಂತರಗೊಂಡ ವೈರಸ್‌ ವೇಗವಾಗಿ ಹರಡಬಹುದಾಗಿದ್ದರೂ, ಪ್ರಾಣಕ್ಕೆ ಹೆಚ್ಚು ಅಪಾಯಕಾರಿ ಆಗಬಹುದೆಂದು ಪರಿಗಣಿಸಲಾಗಿಲ್ಲ. ಅಭಿವೃದ್ಧಿ ಪಡಿಸಿರುವ ಲಸಿಕೆಯು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಬಿ117 ವೈರಸ್‌ ತಡೆಯುವುದರಲ್ಲಿಯೂ ಪರಿಣಾಮಕಾರಿಯಾಗಿದೆ ಫೈಝರ್‌ ಮತ್ತು ಜರ್ಮನಿಯ ಬಯೊಎನ್‌ಟೆಕ್‌ ಹೇಳಿವೆ.

ಈ ವರ್ಷ ಆಗಸ್ಟ್ ಅಂತ್ಯದೊಳಗೆ ಶೇ 70ರಷ್ಟು ವಯಸ್ಕರಿಗೆ ಲಸಿಕೆ ನೀಡುವ ಗುರಿ ಇರುವುದಾಗಿ ಯುರೋಪಿಯನ್‌ ಒಕ್ಕೂಟ ಹೇಳಿದೆ. ಭಾರತ, ರಷ್ಯಾ ಹಾಗೂ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಈಗಷ್ಟೇ ಲಸಿಕೆ ಅಭಿಯಾನ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT