ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರದ ಹಿತಾಸಕ್ತಿ, ಭದ್ರತೆಯಲ್ಲಿ ರಾಜೀ ಇಲ್ಲ: ಪುಟಿನ್‌ ಸ್ಪಷ್ಟ ಸಂದೇಶ

Last Updated 23 ಫೆಬ್ರುವರಿ 2022, 20:06 IST
ಅಕ್ಷರ ಗಾತ್ರ

ಮಾಸ್ಕೊ, ಉಕ್ರೇನ್‌, ಲಂಡನ್‌, ವಾಷಿಂಗ್ಟನ್‌: ‘ರಾಷ್ಟ್ರದ ಹಿತಾಸಕ್ತಿ ಮತ್ತು ನಮ್ಮ ನಾಗರಿಕರ ಭದ್ರತೆಯಲ್ಲಿ ರಾಜಿಮಾಡಿಕೊಂಡು ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಬುಧವಾರ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸೋವಿಯತ್ ರಷ್ಯಾ ಪತನದ ವೇಳೆ ವಿಭಜನೆಗೊಂಡ ಐತಿಹಾಸಿಕ ಭೂಮಿಯನ್ನು ರಷ್ಯಾವನ್ನು ‘ದೋಚಿರುವ’ ಅಮೆರಿಕದ ‘ಕೈಗೊಂಬೆ’. ಕೃತಕವಾಗಿ ರಚನೆಯಾದ ರಾಷ್ಟ್ರ ಉಕ್ರೇನ್ ಎಂದಿರುವ ಪುಟಿನ್ ತಮ್ಮ ಒಂದು ತಾಸಿನ ಭಾಷಣದಲ್ಲಿ ಅವರ ಉದ್ದೇಶವನ್ನು ಸೂಚ್ಯವಾಗಿ ಹೇಳಿದ್ದಾರೆ.

‘ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ರಾಜತಾಂತ್ರಿಕ ಪರಿಹಾರಗಳ ಹುಡುಕಾಟದಲ್ಲಿನಮ್ಮ ದೇಶವು ಯಾವಾಗಲೂ ನೇರ ಮತ್ತು ಪ್ರಾಮಾಣಿಕ ಸಂವಾದಕ್ಕೆ ಮುಕ್ತವಾಗಿರುತ್ತದೆ’ ಎಂದು ಹೇಳುವ ಮೂಲಕ ರಷ್ಯಾದ ಬೇಡಿಕೆಗಳಿಗೆ ಪಶ್ಚಿಮದ ರಾಷ್ಟ್ರಗಳು ಸಮ್ಮತಿಸಿದರೆ ಬಿಕ್ಕಟ್ಟು ಬಗೆಹರಿಸಲು ರಾಜತಾಂತ್ರಿಕತೆಗೆ ಬಾಗಿಲು ಸದಾ ತೆರೆದಿರುತ್ತದೆ ಎನ್ನುವ ಸುಳಿವನ್ನೂ ಅವರು ನೀಡಿದ್ದಾರೆ.

ದೇಶದಲ್ಲಿ ಸಾರ್ವಜನಿಕ ರಜಾ ದಿನವಾದ ‘ಫಾದರ್‌ಲ್ಯಾಂಡ್’ ದಿನ ರಾಷ್ಟ ರಕ್ಷಕನನ್ನು ಗೌರವಿಸಲು ಮಾಡಿದ ವಿಡಿಯೊ ಭಾಷಣದಲ್ಲಿ ಅವರು ರಷ್ಯಾದ ಮಿಲಿಟರಿಯನ್ನು ಅಭಿನಂದಿಸಿದರು. ಉಕ್ರೇನ್‌ಗೆ ಮಿಲಿಟರಿ ಪಡೆಗಳನ್ನು ಕಳುಹಿಸುವ ಯೋಜನೆ ಪ್ರಕಟಿಸಿದ ನಂತರ ಸೇನೆಯು ಮಾಡಿಕೊಂಡಿರುವ ಯುದ್ಧ ಸನ್ನದ್ಧತೆಯನ್ನು ಅವರು ಶ್ಲಾಘಿಸಿದರು.

ಉಕ್ರೇನ್‌ನಲ್ಲಿರುವ ರಷ್ಯಾದ ರಾಜತಾಂತ್ರಿಕ ಸಿಬ್ಬಂದಿಗೆ ಬೆದರಿಕೆ ಬಂದಿರುವುದರಿಂದ ಅವರನ್ನು ತಕ್ಷಣ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದುರಷ್ಯಾದ ವಿದೇಶಾಂಗ ಸಚಿವಾಲಯವು ಹೇಳಿದೆ.

ರಷ್ಯಾ ಬ್ಯಾಂಕುಗಳ ವಿರುದ್ಧ ನಿರ್ಬಂಧ:

ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೂಲಕ ರಷ್ಯಾ ಅಂತರರಾಷ್ಟ್ರೀಯ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಹಾಗಾಗಿ ರಷ್ಯಾದ ಬ್ಯಾಂಕುಗಳ ಮತ್ತು ಅದರೊಂದಿಗಿನ ಸಹಭಾಗಿತ್ವದ ವ್ಯವಹಾರಗಳ ವಿರುದ್ಧ ಅಮೆರಿಕ ಭಾರೀ ಆರ್ಥಿಕ ನಿರ್ಬಂಧಗಳನ್ನು ವಿಧಿಸಿಸುತ್ತಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಮಂಗಳವಾರ ಘೋಷಿಸಿದರು.

ಉಕ್ರೇನ್ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೇಳಿಕೆಗಳಿಂದ ‘ನಮ್ಮಲ್ಲಿ ಯಾರೂ ಮೂರ್ಖರಾಗುವುದಿಲ್ಲ’ ಎಂದಿರುವ ಬೈಡೆನ್‌, ಪುಟಿನ್ ಮತ್ತಷ್ಟು ಮುಂದುವರಿದರೆ ಇನ್ನಷ್ಟು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಮೆರಿಕದ ಹೆಚ್ಚುವರಿ ಸೇನಾ ಪಡೆಗಳನ್ನು ರಷ್ಯಾದ ಗಡಿಯಲ್ಲಿರುವ ಬಾಲ್ಟಿಕ್‌ನಲ್ಲಿ ನಿಯೋಜಿಸಲಾಗುತ್ತಿದೆಎಂದು ಹೇಳಿದರು.

ಬ್ರಿಟನ್‌ ಎಚ್ಚರಿಕೆ:

ಪುಟಿನ್ ಪೂರ್ವ ಉಕ್ರೇನ್‌ನಿಂದ ಸೇನಾ ಪಡೆ ಹಿಂತೆಗೆದುಕೊಳ್ಳಲು ನಿರಾಕರಿಸಿರುವುದರಿಂದರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಲು ಸಿದ್ಧವಿರುವುದಾಗಿಬ್ರಿಟನ್‌ ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ.

ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಮಂಗಳವಾರ ಸಂಸತ್ತಿನಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಷ್ಯಾದ 5 ಬ್ಯಾಂಕುಗಳು ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ನಂಟಿರುವ ಮೂವರು ರಷ್ಯಾದ ಕುಬೇರರ ವಿರುದ್ಧ ಘೋಷಿಸಿದ ನಿರ್ಬಂಧಗಳು ತೀವ್ರವಾಗಿವೆ. ಆದರೆ ಮುಂದೆ ಕೈಗೊಳ್ಳುವ ಇನ್ನಷ್ಟು ಕಠಿಣ ನಿರ್ಬಂಧಗಳು ನಮ್ಮ ತಿಜೋರಿಯಲ್ಲಿ ಸಿದ್ಧವಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯುರೋಪ್ ಒಕ್ಕೂಟ ಅನುಮೋದನೆ (ಬ್ರಸೆಲ್ಸ್ ವರದಿ): ಉಕ್ರೇನ್‌ನಲ್ಲಿ ರಷ್ಯಾದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಆರಂಭಿಕ ಹೆಜ್ಜೆಯಾಗಿ ವಿಧಿಸಿರುವ ನಿರ್ಬಂಧಗಳನ್ನು ಯುರೋಪ್‌ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿವೆ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವಾಲಯ ಹೇಳಿದೆ.

‘ಮಂಗಳವಾರ ಅನುಮೋದಿಸಿರುವ ನಿರ್ಬಂಧಗಳು ರಷ್ಯಾಕ್ಕೆ ಖಂಡಿತ ತೊಂದರೆ ಉಂಟು ಮಾಡಲಿವೆ. ಈ ಕಥೆ ಇಲ್ಲಿಗೆ ಮುಗಿದಿಲ್ಲ. ಇನ್ನು ಮುಂದೆಯೂ ರಷ್ಯಾವನ್ನು ಈ ನಿರ್ಬಂಧಗಳು ಮತ್ತಷ್ಟು ಬಾಧಿಸಲಿವೆ’ ಎಂದು ಯುರೋಪ್‌ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಪ್ ಬೊರೆಲ್ಹೇಳಿದರು.

ಜಿನೆವಾ ಸಭೆ ರದ್ದು: ರಷ್ಯಾ ನಡೆ ಖಂಡಿಸಿ ಈ ವಾರದ ಕೊನೆಯಲ್ಲಿ ಜಿನೆವಾದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗಿನ ಸಭೆಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಹೇಳಿದ್ದಾರೆ.

* ಜಗತ್ತು ಅತಿ ದೊಡ್ಡ ‘ಜಾಗತಿಕ ಶಾಂತಿ ಮತ್ತು ಭದ್ರತಾ ಬಿಕ್ಕಟ್ಟು’ ಎದುರಿಸುತ್ತಿದೆ. ರಷ್ಯಾದ ನಡೆ ಉಕ್ರೇನ್‌ನ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಭದ್ರತಾ ಮಂಡಳಿ ಘೋಷಿಸಿದ ಮಿನ್ಸ್ಕ್ ಒಪ್ಪಂದಗಳಿಗೆ ಮಾರಕ.

-ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆ

* ರಷ್ಯಾ-ಉಕ್ರೇನ್ ಬಿಕ್ಕಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ತಮ್ಮ ಆತ್ಮಸಾಕ್ಷಿಯನ್ನು ದೇವರ ಮುಂದೆ ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ಯುದ್ಧದ ಬೆದರಿಕೆಯಿಂದ ಎಲ್ಲ ರಾಷ್ಟ್ರಗಳು ಹಿಂದೆ ಸರಿಯಬೇಕು.

-ಪೋಪ್ ಫ್ರಾನ್ಸಿಸ್,ವ್ಯಾಟಿಕನ್ ಸಿಟಿ

* ಉಕ್ರೇನ್‌ ಬಿಕ್ಕಟ್ಟಿನಲ್ಲಿ ಅಮೆರಿಕ ‘ಭಯ ಮತ್ತು ಆತಂಕ’ವನ್ನು ಸೃಷ್ಟಿಸುತ್ತಿದೆ. ರಷ್ಯಾದ ಮೇಲೆ ವಿಧಿಸಿರುವ ಹೊಸ ನಿರ್ಬಂಧಗಳನ್ನು ಚೀನಾ ವಿರೋಧಿಸುತ್ತದೆ

-ಹುವಾ ಚುನ್ಯಿಂಗ್,ವಿದೇಶಾಂಗ ಸಚಿವಾಲಯದ ವಕ್ತಾರೆ

ಭಾರತದ ‘ಸ್ವತಂತ್ರ ನಿಲುವು’ ಸ್ವಾಗತಿಸಿದ ರಷ್ಯಾ

ನವದೆಹಲಿ (ಪಿಟಿಐ):ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ‘ಸ್ವತಂತ್ರ ನಿಲುವು’ವನ್ನು ರಷ್ಯಾ ಬುಧವಾರ ಸ್ವಾಗತಿಸಿದೆ.‘ರಷ್ಯಾ ಮತ್ತು ಭಾರತದ ಸಹಭಾಗಿತ್ವ ಬಲವಾದ ಮತ್ತು ಗಟ್ಟಿಯಾದ ಅಡಿಪಾಯದ ಮೇಲೆ ನಿಂತಿದೆ. ಇದು ಪರಸ್ಪರ ನಂಬಿಕೆಯನ್ನು ಆಧರಿಸಿದೆ’ ಎಂದು ಅದು ಹೇಳಿದೆ.

ಅಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯದ ಬಗ್ಗೆ ಭಾರತ ಎರಡು ಬಾರಿಯೂ ವ್ಯಕ್ತಪಡಿಸಿರುವ ತನ್ನ ಅಭಿಪ್ರಾಯಗಳು ಉಭಯ ದೇಶಗಳ ನಡುವಿನ ವಿಶೇಷವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ರಷ್ಯಾದ ಡೆಪ್ಯುಟಿ ಚೀಫ್ ಆಫ್ ಮಿಷನ್ ರೋಮನ್ ಬಾಬುಶ್ಕಿನ್ ಆನ್‌ಲೈನ್ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಭಾರತವು ಜಾಗತಿಕ ವ್ಯವಹಾರಗಳಲ್ಲಿ ‘ಸ್ವತಂತ್ರ ಮತ್ತು ಸಮತೋಲಿತ’ ನಿರ್ಧಾರ ತೆಗೆದುಕೊಂಡು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಭದ್ರತಾಮಂಡಳಿಯಲ್ಲಿ ಭಾರತ ನಡೆದುಕೊಂಡ ಬಗೆ ನಮ್ಮ ನಡುವೆ ಇರುವ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಅದು ಬಿಂಬಿಸುತ್ತದೆ ಎಂದು ಹೇಳಿದರು.

‘ನಮ್ಮ ಸಹಕಾರವು ಯಾರಿಗೂ ಯಾವುದೇ ರೀತಿಯ ಬೆದರಿಕೆಯನ್ನು ಒಡ್ಡುವುದಿಲ್ಲ. ನಾವು ನ್ಯಾಯಯುತ ಮತ್ತು ಸಮಾನವಾದ ಬಹುಧ್ರುವೀಯ ಜಗತ್ತನ್ನು ಸ್ಥಾಪಿಸಲು ಭುಜಕ್ಕೆ ಭುಜಕೊಟ್ಟು ನಡೆಯುತ್ತಿದ್ದೇವೆ. ಎರಡು ರಾಷ್ಟ್ರಗಳ ನಡುವಿನ ಗಾಢಸಂಬಂಧ ಇದೇ ರೀತಿ ಮುಂದುವರಿಯುತ್ತದೆ’ ಎಂದು ಅವರು ಆಶಿಸಿದರು.

ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ಜಾಗತಿಕ ಆರ್ಥಿಕತೆಯ ಅಸ್ಥಿರತೆಗೆ ಕಾರಣವಾಗುತ್ತವೆ. ಇದು ಅಪನಂಬಿಕೆ ಮತ್ತು ಭಯದ ವಾತಾವರಣಕ್ಕೂ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಭಾರತವು ಎಲ್ಲ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳಬೇಕು. ಎಲ್ಲ ದೇಶಗಳ ಭದ್ರತಾ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ಉದ್ವಿಗ್ನತೆ ಉಲ್ಬಣಿಸುವುದನ್ನು ತಗ್ಗಿಸುವುದು ತಕ್ಷಣದ ಆದ್ಯತೆಯಾಗಬೇಕು. ತನ್ನ ಪ್ರದೇಶ ಮತ್ತು ಅದರಾಚೆಗೆ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಯನ್ನು ಬಯಸುವುದಾಗಿ ಭಾರತ ಒತ್ತಿಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT