ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಅಮೆರಿಕದ ಚಿತ್ರ ನಿರ್ದೇಶಕ ಸಾವು

Last Updated 13 ಮಾರ್ಚ್ 2022, 14:16 IST
ಅಕ್ಷರ ಗಾತ್ರ

ಇರ್ಪಿನ್‌: ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ದಾಳಿ ಮುಂದುವರಿಸಿದ್ದು, ಅಮೆರಿಕದ ಸಿನಿಮಾ ನಿರ್ದೇಶಕ ಬ್ರೆಂಟ್‌ ರೆನೌಡ್‌ (51) ಅವರು ಕೀವ್‌ ಉಪನಗರ ಪ್ರದೇಶದಲ್ಲಿ ಭಾನುವಾರ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿರುವುದಾಗಿ ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಂಟ್‌ ಅವರು ಈ ಹಿಂದೆ 'ದಿ ನ್ಯೂ ಯಾರ್ಕ್‌ ಟೈಮ್ಸ್‌' ಪತ್ರಿಕೆಗಾಗಿ ಕಾರ್ಯನಿರ್ವಹಿಸಿದ್ದರು. ಈ ಕುರಿತು ದಿ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆಯ ವಕ್ತಾರರು ಹೇಳಿಕೆ ಪ್ರಕಟಿಸಿದ್ದು, 'ಕ್ರಿಯಾಶೀಲ ಚಿತ್ರ ನಿರ್ದೇಶಕರಾಗಿದ್ದ ಬ್ರೆಂಟ್‌ ಅವರು ದಿ ನ್ಯೂ ಯಾರ್ಕ್‌ ಟೈಮ್ಸ್‌ಗೆ ಕೆಲವು ವರ್ಷ ಕಾರ್ಯನಿರ್ವಹಿಸಿದ್ದಾರೆ. ಅವರು 2015ರಲ್ಲಿ ಪತ್ರಿಕೆಗಾಗಿ ಕೊಡುಗೆ ನೀಡಿದ್ದರು. ಆದರೆ, ಪತ್ರಿಕೆಯ ಪರವಾಗಿ ಉಕ್ರೇನ್‌ನಲ್ಲಿ ಅವರು ಕಾರ್ಯನಿರ್ವಹಣೆಗೆ ನಿಯೋಜಿತರಾಗಿರಲಿಲ್ಲ....' ಎಂದು ತಿಳಿಸಲಾಗಿದೆ.

'ದಿ ನ್ಯೂ ಯಾರ್ಕ್‌ ಟೈಮ್ಸ್‌'ನ ವಿಡಿಯೊ ಜರ್ನಲಿಸ್ಟ್‌ ಒಬ್ಬರು ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಬೆನ್ನಲ್ಲೇ ಈ ಸ್ಪಷ್ಟನೆ ಪ್ರಕಟಗೊಂಡಿದೆ.

ಬ್ರೆಂಟ್‌ ಅವರ ಬಳಿ ದಿ ನ್ಯೂ ಯಾರ್ಕ್‌ ಟೈಮ್ಸ್‌ನ ಹಳೆಯ ಗುರುತಿನ ಚೀಟಿ ದೊರೆತಿದೆ. ಅವರು ಯುದ್ಧಗಳಿಗೆ ಸಂಬಂಧಿಸಿದ ಹಲವು ಸಾಕ್ಷ್ಯ ಚಿತ್ರಗಳು, ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ.

ಉಕ್ರೇನ್‌ ಪಶ್ಚಿಮ ಭಾಗದ ಲಿವಿವ್‌ನಿಂದ 30 ಕಿ.ಮೀ. ದೂರದಲ್ಲಿರುವ ಯವೊರಿವ್‌ ಸೇನಾ ನೆಲೆಯ ಮೇಲೆ ರಷ್ಯಾ ಪಡೆಗಳು ರಾಕೆಟ್‌ಗಳನ್ನು ಸಿಡಿಸಿವೆ. ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮಾರಾಭ್ಯಾಸ ನಡೆಸುವ ಸೇನಾ ನೆಲೆಯ ಮೇಲೆ ನಡೆದಿರುವ ದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪೋಲೆಂಡ್‌ ಗಡಿಗೆ ಸಮೀಪದಲ್ಲೇ ರಷ್ಯಾ ದಾಳಿ ನಡೆಸಿದೆ.

ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ತೀವ್ರತೆ ಹೆಚ್ಚಿರುವ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಪ್ರಕಟಿಸಿದೆ.

ನಿಪ್ರೊರುದ್ನೆ ನಗರದ ಮೇಯರ್‌ ಯುಗ್ಗಿನ್‌ ಮತ್‌ವೀವ್‌ ಎಂಬುವವರನ್ನು ಝಪೊರಿಝಿಯಾದಿಂದ ರಷ್ಯಾ ಆಕ್ರಮಣಕಾರರು ಅಪಹರಿಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಟ್ವೀಟ್‌ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾ ಹೊಸ ಹುಸಿ-ಗಣರಾಜ್ಯವನ್ನು ಸ್ಥಾಪಿಸುವ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಉಕ್ರೇನ್‌ ರಾಷ್ಟ್ರವನ್ನು ಒಡೆಯಲು ಹುನ್ನಾರ ನಡೆಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಶನಿವಾರ ಆರೋಪಿಸಿದ್ದಾರೆ.

ಕೀವ್‌ ಸಮೀಪದ ಪೆರೆಮೊಹಾ ಗ್ರಾಮದಿಂದ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸುತ್ತಿದ್ದ ಯೋಧರ ಮೇಲೆ ರಷ್ಯಾ ಪಡೆಗಳು ಗುಂಡು ಹಾರಿಸಿವೆ. ಈ ಘಟನೆಯಲ್ಲಿ ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಗುಪ್ತಚರ ಇಲಾಖೆ ಶನಿವಾರ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT