ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಜೊತೆ ಅಧಿಕೃತವಾಗಿ ವಾಣಿಜ್ಯ ವ್ಯವಹಾರ ಕೊನೆಗಾಣಿಸಲು ಉಕ್ರೇನ್ ಅಧ್ಯಕ್ಷ ಆದೇಶ

Last Updated 7 ಏಪ್ರಿಲ್ 2022, 1:54 IST
ಅಕ್ಷರ ಗಾತ್ರ

ಕೀವ್‌: ರಷ್ಯಾದೊಂದಿಗೆ ವಾಣಿಜ್ಯ ವ್ಯವಹಾರವನ್ನು ಅಧಿಕೃತವಾಗಿ ಕೊನೆಗೊಳಿಸುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಉಕ್ರೇನ್‌ ಮತ್ತು ರಷ್ಯಾ ಸಂಘರ್ಷ ಆರಂಭವಾದ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವೆ ಆಮದು ಮತ್ತು ರಫ್ತು ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿರುವುದಾಗಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಕ್ರೇನ್‌ ಹಣಕಾಸು ಇಲಾಖೆಯ ಮಾಹಿತಿಯ ಪ್ರಕಾರ, ರಷ್ಯಾದೊಂದಿಗೆ 2021ರಲ್ಲಿ ಶೇಕಡ 38.7ರಷ್ಟು ವಾರ್ಷಿಕ ವಾಣಿಜ್ಯ ವಹಿವಾಟು ವೃದ್ಧಿ ದಾಖಲಾಗಿತ್ತು. ಅದರ ಮೌಲ್ಯ 10.09 ಬಿಲಿಯನ್‌ ಡಾಲರ್‌ಗಳು (ಸುಮಾರು ₹80,449 ಕೋಟಿ). ಉಕ್ರೇನ್‌ನಿಂದ ರಷ್ಯಾಗೆ ರಫ್ತು ಆಗುವ ಪ್ರಮಾಣ ಶೇಕಡ 26.5ರಷ್ಟು ಏರಿಕೆಯಾಗಿ 3.44 ಬಿಲಿಯನ್‌ ಡಾಲರ್‌ ತಲುಪಿತ್ತು ಹಾಗೂ ಆಮದು ಪ್ರಮಾಣವು ಶೇಕಡ 45.9ರಷ್ಟು ಹೆಚ್ಚಳವಾಗಿ 6.65 ಬಿಲಿಯನ್‌ ಡಾಲರ್‌ ಮುಟ್ಟಿತ್ತು.

ಉಕ್ರೇನ್‌ನ ಮರಿಯುಪೊಲ್‌ನಲ್ಲಿ ಉಭಯ ಸೇನಾ ಪಡೆಗಳ ನಡುವೆ ಭಾರಿ ಹೋರಾಟ ಮುಂದುವರಿದಿದೆ. ರಷ್ಯಾ ವಾಯುದಾಳಿಯನ್ನು ತೀವ್ರಗೊಳಿಸಿದ್ದು, ಉಕ್ರೇನ್‌ ಯೋಧರನ್ನು ಶರಣಾಗುವಂತೆ ಒತ್ತಡ ಹೆಚ್ಚಿಸುತ್ತಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯದ ಗುಪ್ತಚರ ವಿಭಾಗ ಹೇಳಿದೆ.

ವಿಮಾನ ಹೊಡೆದುರುಳಿಸುವ ಒಎಸ್‌ಎ–ಒಕೆಎಂ ಕ್ಷಿಪಣಿ ವ್ಯವಸ್ಥೆ ಮತ್ತು ಐದು ಶಸ್ತ್ರಾಸ್ತ್ರ ಉಗ್ರಾಣ ಹಾಗೂ 11 ಪ್ರಬಲ ನೆಲೆಗಳು ಸೇರಿ ಉಕ್ರೇನ್‌ನ 24 ಸೇನಾ ಸ್ವತ್ತುಗಳನ್ನು ವಾಯುಪಡೆಗಳು ನಾಶಪಡಿಸಿವೆ.

ಯುದ್ಧಾಪರಾಧಗಳನ್ನು ಮುಚ್ಚಿಹಾಕಲು ರಷ್ಯಾ ಪಡೆಗಳು 'ಸಂಚಾರಿ ಚಿತಾಗಾರ'ಗಳನ್ನು ಬಳಸುತ್ತಿವೆ ಎಂದು ಮರಿಯುಪೊಲ್ ಸಿಟಿ ಕೌನ್ಸಿಲ್ ಉಕ್ರೇನಿನ ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದಾರೆ.

15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ್ದ ವೊಲೊಡೊಮಿರ್‌ ಝೆಲೆನ್‌ಸ್ಕಿ, ಬುಕಾದಲ್ಲಿ ರಷ್ಯಾ ಸೇನೆ ನಡೆಸಿದ ನರಮೇಧವನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನಂತಹ ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿದ್ದರು. ಈ ಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಆದರೆ, ರಷ್ಯಾದ ಆಕ್ರಮಣಶೀಲತೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT