ಶುಕ್ರವಾರ, ಡಿಸೆಂಬರ್ 4, 2020
24 °C
ದಾಖಲೆಯ ಅಂಚೆ ಮತದಾನ

ಟ್ರಂಪ್, ಬೈಡನ್ ನೇರ ಹಣಾಹಣಿ; ಅಮೆರಿಕದ ಮತದಾರರ ಒಲವು ಯಾರಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ (ಎಎಫ್‌ಪಿ/ಪಿಟಿಐ): ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಸದ್ದು ಮಾಡುತ್ತಿದೆ. ಕೋವಿಡ್‌ನಿಂದ ಕಂಗೆಟ್ಟಿರುವ ಅಮೆರಿಕದ ಮತದಾರರು ಮಂಗಳವಾರ ಮತ ಚಲಾಯಿಸಲಿದ್ದಾರೆ.

ಈ ಬಾರಿಯ ವಿಶೇಷವೆಂದರೆ ಅಂಚೆ ಮತಗಳು. ಕೋವಿಡ್ ನಡುವೆಯೂ ಅಮೆರಿಕನ್ನರಲ್ಲಿ ಚುನಾವಣೆಯ ಉತ್ಸಾಹ ಕಡಿಮೆಯಾಗಿಲ್ಲ. 23.9 ಕೋಟಿ ಜನರು ಮತದಾನದ ಹಕ್ಕು ಪಡೆದಿದ್ದು, ಈಗಾಗಲೇ 9.3 ಕೋಟಿ ಮತದಾರರು ಆರಂಭಿಕ ಹಂತದಲ್ಲಿ ಅಂಚೆ ಮೂಲಕ  ಮತ ಚಲಾಯಿಸಿದ್ದಾರೆ. ಇವುಗಳ ಎಣಿಕೆ ಕೆಲವು ರಾಜ್ಯಗಳಲ್ಲಿ ತಡವಾಗಬಹುದು. ಅಂದರೆ ಚುನಾವಣೆ ನಡೆದ ಕೆಲವು ಗಂಟೆಗಳಲ್ಲೇ ವಿಜೇತರನ್ನು ಘೋಷಿಸುವುದು ಕಷ್ಟ.

ದಾಖಲೆಯ ಪ್ರಮಾಣದಲ್ಲಿ ಅಂಚೆ ಮತಗಳು (ಮೇಲ್ ಬ್ಯಾಲೆಟ್) ಚಲಾವಣೆಯಾಗಿರುವ ಕಾರಣ, ಎಷ್ಟು ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ ಎಂಬ ಕುತೂಹಲ ಈಗ ಉಳಿದಿದೆ. ಕೋವಿಡ್ ಸಾಂಕ್ರಾಮಿಕ ಮತದಾರರಲ್ಲಿ ಎಷ್ಟು ಭಯ ಹುಟ್ಟಿಸಿದೆ ಎಂಬುದಕ್ಕೆ ದಾಖಲೆ ಪ್ರಮಾಣದಲ್ಲಿ ಚಲಾವಣೆಯಾಗಿರುವ ಅಂಚೆ ಮತಗಳೇ ಸಾಕ್ಷಿ. ಕೋವಿಡ್ ಕಾರಣ, ಕೆಲವು ರಾಜ್ಯಗಳು ಚುನಾವಣೆಗೂ ಮುನ್ನ ಅಂಚೆ/ಇ–ಮೇಲ್ ಮೂಲಕ ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟಿದ್ದವು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಬೈಡನ್ ನಡುವೆ ನೇರ ಹಣಾಹಣಿ ಇದ್ದು, ಬೈಡನ್ ಪರವಾಗಿ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ಟ್ರಂಪ್ ಕೊನೆಯ ಹಂತದಲ್ಲಿ ಭರದ ಪ್ರಚಾರ ನಡೆಸಿದರು. ಕಳೆದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರ ಕಡೆ ಒಲವು ಇದ್ದರೂ, ಎಲೆಕ್ಟೋರಲ್ ಮತಗಳಲ್ಲಿ ಟ್ರಂಪ್ ಜಯ ಗಳಿಸಿ ಫಲಿತಾಂಶದ ದಿಕ್ಕನ್ನೇ ಬದಲಿಸಿದ್ದರು. ಹೀಗಾಗಿ ಈ ಬಾರಿ ಕುತೂಹಲ ಇದ್ದೇ ಇದೆ. 

ಬೈಡೆನ್‌ಗಿಂತ ಹಿಂದೆ ಇರುವ ಸುಳಿವು ನೀಡಿರುವ ಸಮೀಕ್ಷೆಗಳಿಂದ ಭೀತಿಗೊಂಡಿರುವ ಟ್ರಂಪ್, ಸೋಮವಾರ ಐದು ರಾಜ್ಯಗಳಲ್ಲಿ ರ‍್ಯಾಲಿ ನಡೆಸಿದರು. ಬೈಡನ್ ಅವರು ಪೆನ್ಸಿಲ್ವೇನಿಯಾದಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿದರು. ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್‌ನಲ್ಲಿ ಸೋಮವಾರ ಪ್ರಚಾರ ನಡೆಸಿದ ಟ್ರಂಪ್, 2016ರಲ್ಲಿ ಗೆದ್ದಿದ್ದ ಈ ಎರಡೂ ಕ್ಷೇತ್ರಗಳನ್ನು ಪುನಃ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಅಮೆರಿಕದ ಚುನಾವಣೆಯು ಸಾರ್ವತ್ರಿಕ ಮತಗಳಿಂದ ನಿರ್ಧಾರವಾಗುವುದಿಲ್ಲ. 538 ಸದಸ್ಯರ ಎಲೆಕ್ಟೋರಲ್ ಕಾಲೇಜ್ ಅಧ್ಯಕ್ಷರನ್ನು ನಿರ್ಣಯಿಸುತ್ತದೆ. ಗೆಲುವಿಗೆ 270 ಎಲೆಕ್ಟೋರಲ್ ಮತಗಳು ಅಗತ್ಯ.

ಭಾರತೀಯರೇ ನಿರ್ಣಾಯಕ:

ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕ ಎನಿಸಿರುವ ಭಾರತೀಯ ಅಮೆರಿಕನ್ನರ ಮತಗಳನ್ನು ಪಡೆಯಲು ಇಬ್ಬರೂ ಅಭ್ಯರ್ಥಿಗಳು ಮನವೊಲಿಕೆಯಲ್ಲಿ ತೊಡಗಿದ್ದಾರೆ. ಸುಮಾರು 25 ಲಕ್ಷ ಭಾರತೀಯ ಮತದಾರರ ಪೈಕಿ 13 ಲಕ್ಷ ಮತದಾರರು ನಿರ್ಣಾಯಕ ಕ್ಷೇತ್ರಗಳು ಎನಿಸಿರುವ ಟೆಕ್ಸಾಸ್, ಮಿಚಿಗನ್ ಫ್ಲಾರಿಡಾ, ಪೆನ್ಸಿಲ್ವೇನಿಯಾದಂತ ಮಹತ್ವದ ಕ್ಷೇತ್ರಗಳಲ್ಲಿ ಇದ್ದಾರೆ.

ಭಾರತೀಯ ಅಮೆರಿಕನ್ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದಿಂದ  ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು