ಬುಧವಾರ, ನವೆಂಬರ್ 25, 2020
18 °C

ಟ್ರಂಪ್‌ ವಿರುದ್ಧದ ಅತ್ಯಾಚಾರ, ಮಾನನಷ್ಟ ಪ್ರಕರಣ: ಸರ್ಕಾರದ ವಕಾಲತಿಗೆ ಅಸಮ್ಮತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿರುವ ಖ್ಯಾತ ಅಂಕಣಗಾರ್ತಿ ಟ್ರಂಪ್‌ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದಲ್ಲಿ ಟ್ರಂಪ್‌ ಅವರ ರಕ್ಷಣೆಗೆ ಬರುವ ಅಮೆರಿಕ ನ್ಯಾಯಾಂಗ ಇಲಾಖೆಯ ಪ್ರಯತ್ನವನ್ನು ನ್ಯೂಯಾರ್ಕ್ ನ್ಯಾಯಾಧೀಶರು ಮಂಗಳವಾರ ತಿರಸ್ಕರಿಸಿದ್ದಾರೆ.

'1990ರ ದಶಕದ ಮಧ್ಯಭಾಗದಲ್ಲಿ ನ್ಯೂಯಾರ್ಕ್‌ನ 'ಫಿಫ್ತ್ ಅವೆನ್ಯೂ'ನಲ್ಲಿರುವ 'ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್‌ಮೆಂಟ್‌ ಸ್ಟೋರ್‌'ನಲ್ಲಿ ಬಟ್ಟೆ ಬದಲಿಸುವ ಕೊಠಡಿಯಲ್ಲಿ ಟ್ರಂಪ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು,' ಎಂದು 76 ವರ್ಷದ ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಆರೋಪಿಸಿದ್ದಾರೆ.

ಜೀನ್‌ ಕ್ಯಾರೊಲ್‌ ನವೆಂಬರ್ 2019 ರಲ್ಲಿ ಟ್ರಂಪ್‌ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಟ್ರಂಪ್ ಅವರು ದೌರ್ಜನ್ಯವನ್ನು 'ಸಂಪೂರ್ಣ ಸುಳ್ಳು' ಎಂದು ಹೇಳಿದ್ದಕ್ಕಾಗಿ ಕ್ಯಾರೊಲ್‌ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರ ಆರೋಪದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್‌ 'ಕ್ಯಾರೊಲ್‌ ಅವರನ್ನು ನಾನು ಎಂದಿಗೂ ಭೇಟಿಯೇ ಆಗಿಲ್ಲ. ಅಲ್ಲದೆ, ಆಕೆ ನನ್ನ ಪ್ರಕಾರದವರಲ್ಲ!' ಎಂದು ಹೇಳಿದ್ದರು.

'ಮೊಕದ್ದಮೆಯಲ್ಲಿ ಟ್ರಂಪ್‌ ಅವರ ಪರ ಖಾಸಗಿ ವಕೀಲ ಮಾರ್ಕ್‌ ಕ್ಯಾಸೊವಿಟ್ಸ್‌ ಬದಲಿಗೆ ನಾವು ವಕಾಲತ್ತು ವಹಿಸಬಹುದೇ,' ಎಂದು ಕೇಂದ್ರ ನ್ಯಾಯಾಂಗ ಇಲಾಖೆ ಕಳೆದ ಸೆಪ್ಟಂಬರ್‌ನಲ್ಲಿ ರಾಜ್ಯ ನ್ಯಾಯಾಲಯವನ್ನು ಕೇಳಿತ್ತು. ಈ ಪ್ರಕರಣವನ್ನು ರದ್ದು ಮಾಡಿಸುವಲ್ಲಿ ಟ್ರಂಪ್‌ ಪರ ವಕೀಲ ಕ್ಯಾಸೊವಿಟ್ಸ್‌ ವಿಫಲರಾಗಿದ್ದರು.

'ಟ್ರಂಪ್ ಅವರು ಮಾನಹಾನಿಕರ ಹೇಳಿಕೆ ನೀಡಿದಾಗ ಅವರು ತಮ್ಮ ಕಚೇರಿ ಅಥವಾ ಉದ್ಯೋಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು,' ಎಂಬ ಸಮರ್ಥನೆ ನೀಡಿದ್ದ ನ್ಯಾಯಾಂಗ ಇಲಾಖೆಯು ಕೋರ್ಟ್‌ನಲ್ಲಿ ವಾದಿಸಲು ಮುಂದಾಗಿತ್ತು. ಅಲ್ಲದೆ, ಈ ಪ್ರಕರಣವನ್ನು ಸರ್ಕಾರಿ ವಕೀಲರು ಸಮರ್ಥಿಸಿಕೊಳ್ಳಬಹುದು ಎಂದು ವಾದ ಮಂಡಿಸಿತ್ತು.

ಆದರೆ, ಅಮೆರಿಕ ನ್ಯಾಯಾಂಗ ಇಲಾಖೆಯ ವಾದಗಳನ್ನು ರಾಜ್ಯ ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.

'ಟ್ರಂಪ್ ಹೇಳಿಕೆಗಳು ಅವರು ಅಧಿಕಾರ ವಹಿಸಿಕೊಳ್ಳುವ ಹಲವು ದಶಕಗಳ ಮೊದಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದವು. ಅಮೆರಿಕ ಸರ್ಕಾರದ ಅಧಿಕೃತ ವ್ಯವಹಾರಗಳಿಗೂ, ಆರೋಪಗಳಿಗೂ ಯಾವುದೇ ಸಂಬಂಧವೂ ಇಲ್ಲ,' ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು