ಎಲಿಜಬೆತ್ ರಾಣಿ ನನ್ನ ತಾಯಿಯನ್ನು ನೆನಪಿಸಿದರು: ಜೋ ಬೈಡನ್

ವಾಷಿಂಗ್ಟನ್: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರೊಂದಿಗಿನ ತಮ್ಮ ಭೇಟಿಯ ಅನುಭವಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಹಂಚಿಕೊಂಡಿದ್ದಾರೆ. ರಾಣಿ ಎಲಿಜಬೆತ್ ಅವರು ನನ್ನ ತಾಯಿಯನ್ನು ನೆನಪಿಸಿದರು ಎಂದೂ ಬೈಡನ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಕಾರ್ನ್‌ವಾಲ್‌ನಲ್ಲಿ ನಡೆದ ಜಿ7 ನಾಯಕರ ಶೃಂಗಸಭೆಯ ನಂತರ ಬೈಡನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿದ್ದರು. ಈ ಮೂಲಕ, ಇಂಗ್ಲೆಂಡ್ ರಾಣಿಯನ್ನು ಭೇಟಿಯಾದ ಅಮೆರಿಕದ 13ನೇ ಅಧ್ಯಕ್ಷ ಎನಿಸಿಕೊಂಡರು. ಬರ್ಕ್‌ಷೈರ್‌ನ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಅರಮನೆಗೆ ಬೈಡನ್ ತಮ್ಮ ಪತ್ನಿ ಜಿಲ್ ಅವರೊಂದಿಗೆ ಭೇಟಿ ನೀಡಿದ್ದರು.
‘ಅವರು ತುಂಬಾ ಕರುಣಾಮಯಿ. ಅವರು ನನ್ನ ತಾಯಿಯನ್ನು ನೆನಪಿಸಿದರು,’ ಎಂದು ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ವರದಿಗಾರರಿಗೆ ತಿಳಿಸಿದರು.
ಬೈಡನ್ ತಾಯಿ ಕ್ಯಾಥರೀನ್ ಅವರು ತಮ್ಮ 92ನೇ ವಯಸ್ಸಿನಲ್ಲಿ 2010ರಲ್ಲಿ ನಿಧನ ಹೊಂದಿದರು. ತಾಯಿ ಕ್ಯಾಥರೀನ್ ಅವರು ತಮ್ಮ ಮೇಲೆ ಆಳವಾದ ಪ್ರಭಾವ ಬೀರಿರುವುದಾಗಿ ಬೈಡನ್ ಹಿಂದೊಮ್ಮೆ ಹೇಳಿದ್ದರು. ಚಿಕ್ಕಂದಿನಿಂದ ತಮಗಿದ್ದ ತೊದಲು ಮಾತಿನ ಸಮಸ್ಯೆಯಿಂದ ಹೊರಬರಲು ಅವರು ನೆರವಾಗಿದ್ದನ್ನು ಬೈಡನ್ ಸ್ಮರಿಸಿದ್ದರು. ಅಲ್ಲದೆ, ತಾವು 29 ವಯಸ್ಸಿನಲ್ಲಿ (1972ರಲ್ಲಿ) ಮೊದಲ ಬಾರಿಗೆ ಅಮೆರಿಕದ ಸೆನೆಟ್‌ಗೆ ಸ್ಪರ್ಧಿಸಿದಾಗಿ ಹಣ ಸಂಗ್ರಹಿಸಲು ‘ಕಾಫಿ ಮಾರ್ನಿಂಗ್‘ ಸಂಘಟಿಸುತ್ತಿದ್ದದ್ದನ್ನು ಅವರು ನೆನಪಿಸಿಕೊಂಡಿದ್ದರು.
2008ರಲ್ಲಿ ಬೈಡನ್ ಅವರು ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಕ್ಯಾಥರೀನ್ ಅವರು ಪುತ್ರನ ಪರ ಪ್ರಚಾರ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.