ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಯಾಣ ಕೊನೆಗೊಂಡಿಲ್ಲ: ಡೊನಾಲ್ಡ್ ಟ್ರಂಪ್ ಘೋಷಣೆ

Last Updated 1 ಮಾರ್ಚ್ 2021, 2:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಶ್ವೇತಭವನ ಬಿಟ್ಟು ಹೋದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೂರನೇ ಬಾರಿಗೆ ಅಧ್ಯಕ್ಷಗಾದಿಗಿಳಿಯುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲ. ಅಲ್ಲದೆ ಹೊಸ ಪಕ್ಷವನ್ನು ರೂಪಿಸುವ ಯಾವುದೇ ಯೋಜನೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ ತಿಂಗಳು ಶ್ವೇತಭವನದಿಂದ ನಿರ್ಗಮಿಸಿದ ಬಳಿಕ ಮೊದಲ ಬಾರಿಗೆ ಭಾಷಣ ಮಾಡಿರುವ ಡೊನಾಲ್ಡ್ ಟ್ರಂಪ್, ನಾಲ್ಕು ವರ್ಷಗಳ ಹಿಂದೆ ನಾವು ಜೊತೆಯಾಗಿ ಆರಂಭಿಸಿದ ಅದ್ಭುತ ಪ್ರಯಾಣವು ಇನ್ನು ಕೊನೆಗೊಂಡಿಲ್ಲ ಎಂಬುದನ್ನು ಘೋಷಿಸಲು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

ಕನ್ಸರ್ವೇಟಿವ್ ಪಾಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪಿಎಸಿ) 2021 ಉದ್ದೇಶಿಸಿ ಮಾತನಾಡಿದ ಟ್ರಂಪ್, ಭವಿಷ್ಯದ ಬಗ್ಗೆ ಮಾತನಾಡಲು ನಾವಿಲ್ಲಿ ಒಗ್ಗೂಡಿದ್ದೇವೆ. ಭವಿಷ್ಯದ ಚಳವಳಿ, ನಮ್ಮ ಪಕ್ಷದ ಭವಿಷ್ಯ ಮತ್ತು ನಮ್ಮ ಪ್ರೀತಿಯ ದೇಶದ ಭವಿಷ್ಯ ಎಂದು ಹೇಳಿದರು.

ಹೊಸ ರಾಜಕೀಯ ಪಕ್ಷ ರಚಿಸುವುದಿಲ್ಲ: ಟ್ರಂಪ್
ನೀವು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಎಂಬ ಪ್ರಶ್ನೆಯೊಂದಿಗೆ ಭಾಷಣವನ್ನು ಪ್ರಾರಂಭಿಸಿದ ಟ್ರಂಪ್, ಹೊಸ ರಾಜಕೀಯ ಪಕ್ಷವನ್ನು ರಚಿಸುವುದಿಲ್ಲ ಎಂದು ಘೋಷಿಸಿದರು.

ಡೆಮಾಕ್ರಾಟ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಟ್ರಂಪ್, ಯಾರಿಗೆ ಗೊತ್ತು ಮೂರನೇ ಬಾರಿಗೆ ಅವರನ್ನು ಸೋಲಿಸಲು ನಾನು ನಿರ್ಧರಿಸಬಹುದು ಎಂದು ಹೇಳಿದರು.

ಜೋ ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ...
ಜೋ ಬೈಡನ್ ನೇತೃತ್ವದ ಹೊಸ ಆಡಳಿತವು ಉದ್ಯೋಗ ವಿರೋಧಿ, ಕುಟುಂಬ ವಿರೋಧಿ, ಮಹಿಳಾ ವಿರೋಧಿ ಮತ್ತು ವಿಜ್ಞಾನ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಆಧುನಿಕ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಮೊದಲ ತಿಂಗಳ ಆಡಳಿತವನ್ನು ಜೋ ಬೈಡನ್ ಹೊಂದಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ವಂಚನೆಯ ಆರೋಪಗಳನ್ನು ಪುನರಾವರ್ತಿಸಿರುವ ಟ್ರಂಪ್ ಮುಂದಿನ ನಾಲ್ಕು ವರ್ಷಗಳಲ್ಲಿ ಡೆಮಾಕ್ರಾಟ್‌ಗಳು ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಜೋ ಬೈಡನ್ ವಲಸೆ ನೀತಿಯನ್ನು ಟೀಕೆ ಮಾಡಿರುವ ಟ್ರಂಪ್, ಕೇವಲ ಒಂದು ತಿಂಗಳಲ್ಲಿ 'ಅಮೆರಿಕ ಮೊದಲು' (ಅಮೆರಿಕ ಫಸ್ಟ್) ರಿಂದ 'ಅಮೆರಿಕ ಕೊನೆ' (ಅಮೆರಿಕ ಲಾಸ್ಟ್)ಗೆ ಹೋಗಿದ್ದೇವೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT