ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾವೈರಸ್ ಪತ್ತೆ

ವಿಮಾನ ಸಂಚಾರ ರದ್ದುಗೊಳಿಸಿದ ನೆರೆ ರಾಷ್ಟ್ರಗಳು
Last Updated 20 ಡಿಸೆಂಬರ್ 2020, 20:11 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾವೈರಸ್‌ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ಯೂರೋಪ್‌ನ ಹಲವು ರಾಷ್ಟ್ರಗಳು ರದ್ದುಪಡಿಸಿವೆ. ಹೊಸ ಸ್ವರೂಪದ ವೈರಸ್‌ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ.

ಬ್ರಿಟನ್‌ನ ಕೆಲವು ಭಾಗದಲ್ಲಷ್ಟೇ ಹೊಸ ಕೊರೊನಾವೈರಸ್ ಪತ್ತೆಯಾಗಿದೆ.ಹೀಗಾಗಿ ಬ್ರಿಟನ್‌ನ ನಗರ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್‌ ಹೇರಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದಲೇ ಲಾಕ್‌ಡೌನ್ ಜಾರಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 26ರಿಂದ ಜಾರಿಯಾಗಲಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಗಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.

ಈ ವಿಷಯವನ್ನು ಬ್ರಿಟನ್ ಸರ್ಕಾರ ಘೋಷಿಸಿದ ಬೆನ್ನಲ್ಲೇ ನೆರೆಯ ರಾಷ್ಟ್ರಗಳು, ಬ್ರಿಟನ್‌ಗೆ ವಿಮಾನ ಸಂಪರ್ಕವನ್ನು ರದ್ದುಪಡಿಸಿವೆ. ಬ್ರಿಟನ್‌ನಲ್ಲಿ ಪತ್ತೆಯಾದಂತಹ ವೈರಸ್‌ನ ಪ್ರಕರಣಗಳು ಡೆನ್ಮಾರ್ಕ್‌ನಲ್ಲಿ, ನೆದರ್‌ಲೆಂಡ್ಸ್‌ನಲ್ಲಿ ಪತ್ತೆಯಾಗಿವೆ. ಯೂರೋಪ್‌ನ ಎಲ್ಲಾ ರಾಷ್ಟ್ರಗಳಿಗೆ ಈ ವೈರಸ್ ಹರಡಿರುವ ಅಪಾಯವಿದೆ. ಹೀಗಾಗಿಯೇ ಬ್ರಿಟನ್‌ ಜತೆಗೆ ವಿಮಾನ ಸಂಪರ್ಕವನ್ನು ಇತರ ರಾಷ್ಟ್ರಗಳು ರದ್ದುಪಡಿಸಿವೆ.

ಬೆಲ್ಜಿಯಂ, ಆಸ್ಟ್ರಿಯಾ, ನೆದರ್‌ಲೆಂಡ್ಸ್‌, ಡೆನ್ಮಾರ್ಕ್, ಸ್ಪೇನ್‌ ಈಗಾಗಲೇ ಬ್ರಿಟನ್‌ನಿಂದ ವಿಮಾನ ಸಂಚಾರವನ್ನು ರದ್ದುಪಡಿಸಿವೆ. ಜರ್ಮನಿಯೂ ಈ ಕ್ರಮವನ್ನು ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ.

ಸ್ವರೂಪ ಬದಲಿಸಿಕೊಂಡ ವೈರಸ್:ಕೋವಿಡ್‌ ಉಂಟುಮಾಡುವ ಕೊರೊನಾವೈರಸ್‌ನಿಂದಲೇ ಈ ಹೊಸ ಸ್ವರೂಪದ ವೈರಸ್‌ ಬೆಳವಣಿಗೆಯಾಗಿದೆ. ಮೂಲ ವೈರಸ್‌ಗೆ ಹೋಲಿಸಿದರೆ, ಇದರಲ್ಲಿ 23 ಬದಲಾವಣೆಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಮೂಲ ವೈರಸ್‌ಗಿಂತ ಇದು ಶೇ 70ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಹೆಚ್ಚು ವೇಗವಾಗಿ ಮಾನವನ ದೇಹವನ್ನು ಹೊಕ್ಕುತ್ತದೆ. ಹೀಗಾಗಿಯೇ ಈ ವೈರಸ್‌ ಅನ್ನು ನಿಯಂತ್ರಿಸುವುದು ಅತ್ಯಗತ್ಯ. ಇಲ್ಲದಿದ್ದಲ್ಲಿ ವಿಶ್ವದಾದ್ಯಂತ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯವಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ದೇಹದಲ್ಲಿ ಕೋವಿಡ್‌ ಅನ್ನು ಉಂಟು ಮಾಡುವ ರೀತಿಯಲ್ಲಿಯೂ ಬದಲಾವಣೆ ಆಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ತುರ್ತು ಸಭೆ ಇಂದು:ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್‌ ಬಗ್ಗೆ ಚರ್ಚಿಸಲು ಕೇಂದ್ರದ ಆರೋಗ್ಯ ಸಚಿವಾಲಯವು ಸೋಮವಾರ ಜಂಟಿ ಮೇಲ್ವಿಚಾರಣಾ ಸಮಿತಿಯ ತುರ್ತು ಸಭೆಯನ್ನು ಕರೆದಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಂಟಿ ಮೇಲ್ವಿಚಾರಣಾ ಸಮಿತಿಯು ಸೋಮವಾರ ಸಭೆ ಸೇರಿ ಹೊಸ ವೈರಸ್‌ ಬಗ್ಗೆ ಚರ್ಚೆ ನಡೆಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಡಾ. ರಾಡ್ರಿಕೊ ಎಚ್‌. ಆಫ್ರಿನ್‌ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT