ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ| ಕೋವಿಡ್ ನಿಯಂತ್ರಣಾ ಕ್ರಮಗಳಿಗೆ ಹೆದರಿ ಐಫೋನ್ ‌ಘಟಕದಿಂದ ಓಡಿದ ಉದ್ಯೋಗಿಗಳು

Last Updated 31 ಅಕ್ಟೋಬರ್ 2022, 10:56 IST
ಅಕ್ಷರ ಗಾತ್ರ

ಝೆಂಗ್‌ಝೌ: ಮಧ್ಯ ಚೀನಾ ನಗರವಾದ ಝೆಂಗ್‌ಝೌನ ಐಫೋನ್‌ ತಯಾರಕ ಘಟಕದ ಕಾರ್ಮಿಕರು ಕೋವಿಡ್‌–19 ನಿರ್ಬಂಧಗಳಿಗೆ ಹೆದರಿ, ತರಾತುರಿಯಲ್ಲಿ ಘಟಕದಿಂದ ಹೊರ ಓಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ‘ಸ್ಫೋಟ’ದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯ ಉದ್ಯೋಗಿಗಳನ್ನು ಕಾರ್ಖಾನೆಯಲ್ಲೇ ಕ್ವಾರಂಟೈನ್‌ ಮಾಡಿರುವ ಹಿನ್ನೆಲೆಯಲ್ಲಿ ಭಯಭೀತಗೊಂಡಿರುವ ಉದ್ಯೋಗಿಗಳು ಅಲ್ಲಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ.

ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್ ಘಟಕವು ಚೀನಾದ ಅತಿದೊಡ್ಡ ಕಾರ್ಖಾನೆಗಳಲ್ಲಿ ಒಂದು. ಇಲ್ಲಿ, ‘ಆ್ಯಪಲ್‌’ನ iPhone–14 ಅನ್ನೂ ಒಳಗೊಂಡಂತೆ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಫಾಕ್ಸ್‌ಕಾನ್ ಐಫೋನ್‌ ತಯಾರಕ ಘಟಕದಿಂದ ಕಾರ್ಮಿಕರು ಗಂಟು ಮೂಟೆ ಹೊತ್ತು, ಬೇಲಿ ಹಾರಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೊರೊನಾ ವೈರಸ್‌ ಪ್ರಕರಣಗಳ ‘ಸ್ಫೋಟ’ದ ಹಿನ್ನೆಲೆಯಲ್ಲಿ ಈ ಘಟಕದ ಹಲವಾರು ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

ವಿಡಿಯೊದಲ್ಲಿರುವಂತೆ ಕಾರ್ಮಿಕರು ಉತ್ಪಾದನಾ ಘಟಕದಿಂದ ತಪ್ಪಿಸಿಕೊಂಡು ಓಡುತ್ತಿದ್ದಾರೋ? ಅಥವಾ ಅವರು ಘಟಕ ತೊರೆಯಲು ಅನುಮತಿ ನೀಡಲಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಉದ್ಯೋಗಿಗಳನ್ನು ನಾವು ತಡೆದಿಲ್ಲ ಎಂದು ಫಾಕ್ಸ್‌ಕಾನ್‌ ಹೇಳಿದೆ.

ಝೆಂಗ್‌ಝೌನ ಫಾಕ್ಸ್‌ಕಾನ್‌ ಘಟಕದಲ್ಲಿ ಸುಮಾರು 2,00,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಘಟಕದಲ್ಲಿ ಸೋಂಕಿಗೆ ಒಳಗಾಗದವರು ಎಷ್ಟು? ಘಟಕವನ್ನು ತೊರೆದವರ ಸಂಖ್ಯೆ ಎಷ್ಟು ಎಂಬುದನ್ನು ಫಾಕ್ಸ್‌ಕಾನ್‌ ಬಹಿರಂಗಪಡಿಸಿಲ್ಲ.

ಹೆನಾನ್ ಪ್ರಾಂತ್ಯದ ರಾಜಧಾನಿಯಾದ ಝೆಂಗ್‌ಝೌನಲ್ಲಿ ಅಕ್ಟೋಬರ್‌ 29ರ ವರೆಗಿನ ಏಳು ದಿನಗಳಲ್ಲಿ 167 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಹಿಂದಿನ ಏಳು ದಿನಗಳ ಅವಧಿಯಲ್ಲಿ 97 ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು.

ಫಾಕ್ಸ್‌ಕಾನ್‌ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗುವ ಮೊದಲು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೋಗಬೇಕು ಎಂದು ಯುಝೌ, ಚಾಂಗ್ಗೆ ಮತ್ತು ಕಿನ್ಯಾಂಗ್ ಸೇರಿದಂತೆ ಸುತ್ತಲ ನಗರಗಳ ಸ್ಥಳೀಯಾಡಳಿತಗಳು ಶನಿವಾರ ಹೇಳಿವೆ.

ಘಟಕದಿಂದ ಹೊರ ಬರುವ ಕಾರ್ಮಿಕರು ವ್ಯವಸ್ಥೆ ಮಾಡಲಾದ ವಾಹನದಲ್ಲೇ ಪ್ರಯಾಣಿಸಬೇಕು, ತಮ್ಮ ಮನೆಗಳಿಗೆ ತೆರಳಿದ ನಂತರ ಕ್ವಾರಂಟೈನ್‌ ಆಗಬೇಕು ಎಂದು ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚೀನಾ ‘ಶೂನ್ಯ ಸೋಂಕು’ ನೀತಿಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಸೋಂಕು ತಡೆಯಲು ಅಲ್ಲಿ ಕಠಿಣ ಕ್ರಮಗಳನ್ನು ಪಾಲಿಸಲಾಗುತ್ತದೆ. ಪೂರ್ಣ-ಪ್ರಮಾಣದ ಲಾಕ್‌ಡೌನ್‌ಗಳು, ಕ್ವಾರಂಟೈನ್‌ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.

ಕೋವಿಡ್‌ ಕಾರಣದಿಂದಾಗಿ ಅಕ್ಟೋಬರ್ 19 ರಂದು, ಫಾಕ್ಸ್‌ಕಾನ್ ಕ್ಯಾಂಟೀನ್‌ಗಳಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆಯನ್ನು ನಿಷೇಧಿಸಲಾಗಿತ್ತು.

ಫಾಕ್ಸ್‌ಕಾನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಆ್ಯಪಲ್‌ನ ಅಧಿಕಾರಿಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT