ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿನ ಹೊಸ ಸೂರ್ಯನಿಗೆ ಸುಸ್ವಾಗತ!

Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸೂರ್ಯನನ್ನು ಅನಾದಿ ಕಾಲದಿಂದ ಪ್ರಾರ್ಥಿಸುತ್ತ ಬಂದ ನಮ್ಮ ಹೆಮ್ಮೆಯ ಸಂಸ್ಕೃತಿ ಇದೀಗ ವಿಶ್ವವ್ಯಾಪಿ ಆಗುತ್ತಿದೆ. ಗಾಯತ್ರಿ ಮಂತ್ರ, ಸೂರ್ಯಸ್ತೋತ್ರ, ಸೂರ್ಯನಮಸ್ಕಾರ ಎಲ್ಲವೂ ಜಾಗತಿಕ ಮಾನ್ಯತೆಯನ್ನು ಪಡೆಯುತ್ತಿವೆ. ಸೌರಶಕ್ತಿಯನ್ನು ವಿದ್ಯುತ್ ತರಂಗಗಳಾಗಿ ಪರಿವರ್ತಿಸುವ ಪೈಪೋಟಿ ಎಲ್ಲೆಲ್ಲೂ ನಡೆಯತೊಡಗಿದೆ. ಸೂರ್ಯನನ್ನು ಕಡೆಗಣಿಸಿದ್ದರಿಂದ ನಾನಾ ಕಾಯಿಲೆ ಕಸಾಲೆಗಳಿಗೆ ಸಿಲುಕಿದ ಪೃಥ್ವಿಯನ್ನು ಮತ್ತೆ ಸೂರ್ಯನ ಮೂಲಕವೇ ಸುಸ್ಥಿತಿಗೆ ತರಲೆಂದು ನಾನಾ ದೇಶಗಳ ತಂತ್ರಬ್ರಹ್ಮರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ.

ಪ್ರತಿದಿನ ಸೂರ್ಯೋದಯ ಸೂರ್ಯಾಸ್ತದಲ್ಲಿ ಆ ದಿವಾಕರನಿಗೆ ಕರಜೋಡಿಸಿ ನಮಿಸುವ ನಮ್ಮ ಬದುಕಿನ ವ್ಯಂಗ್ಯ ಏನು ಗೊತ್ತೆ? ಬೆಳಿಗ್ಗೆ ಎದ್ದು ಕಣ್ಣುಜ್ಜಿ ಸ್ವಿಚ್ ಹಾಕಿದ ತಕ್ಷಣ ನಾವು ಸೂರ್ಯ ಹಾಗೂ ಪೃಥ್ವಿ ಎರಡಕ್ಕೂ ಅನ್ಯಾಯ ಮಾಡುತ್ತೇವೆ.

ಹೇಗೆಂದರೆ, ನಸುಗತ್ತಲಲ್ಲಿ ನಮ್ಮ ಕೋಣೆಯೊಳಗೆ ಸೂಸಿದ ಆ ಕೃತಕ ಬೆಳಕು ರಾಯಚೂರಿನ ಆರ್‌ಟಿಪಿಎಸ್‌ನಿಂದ ಬಂದಿರಬಹುದು. ಅಥವಾ ಉಡುಪಿಯ ಬಳಿಯ ಯೆಲ್ಲೂರಿನಲ್ಲಿರುವ ಯುಪಿಸಿಎಲ್ ಎಂಬ ಶಾಖ ವಿದ್ಯುತ್ ಸ್ಥಾವರದಿಂದ ಬಂದಿದ್ದೀತು. ಯೆಲ್ಲೂರಿನಲ್ಲಿ ಉರಿಸಿದ ಕಲ್ಲಿದ್ದಲು 5000 ಕಿ.ಮೀ. ಆಚಿನ ಇಂಡೊನೇಷ್ಯದ ಸುಮಾತ್ರಾ ದ್ವೀಪದಿಂದ ಬಂದಿದೆ. ಅಪಾಯದ ವಸ್ತುವೆಂದು ಅಲ್ಲಿ ಭೂಮಿಯೇ ಅದನ್ನು ಅದುಮಿ ಹೂತಿಟ್ಟು ಸೂರ್ಯನ ನೆರವಿನಿಂದಲೇ ಅದರ ಮೇಲೆ ದಟ್ಟ ಗಿಡಮರಗಳನ್ನು ಬೆಳೆಸಿತ್ತು. ಈಗ ಆ ಪಳೆಯುಳಿಕೆ ಇಂಧನವನ್ನು ಅಲ್ಲಿನದೇ ‘ಬೂಮಿ ರಿಸೋರ್ಸಿಸ್’ ಹೆಸರಿನ ಕಂಪನಿಯವರು ಅಗೆದು ತೆಗೆಯುತ್ತಿದ್ದಾರೆ. ದಟ್ಟ ಕಾಡಿನಲ್ಲಿ ಡೈನಮೈಟ್ ಇಟ್ಟು ಲೆಕ್ಕವಿಲ್ಲದಷ್ಟು ಜೀವಿಗಳನ್ನು ದಮನಿಸಿ, ಮೂಲನಿವಾಸಿಗಳ ನೆಲೆ ತಪ್ಪಿಸಿ ಅಟ್ಟಾಡಿಸುವ ಆ ಕೃತ್ಯದಿಂದ ಸಿಕ್ಕ ಕಲ್ಲಿದ್ದಲು ನಮ್ಮ ಅದಾನಿ ಕಂಪನಿಯ ಹಡಗುಗಳ ಮೂಲಕ ಇಷ್ಟು ದೂರ ಸಾಗಿ ಬಂದು ಉಡುಪಿಯಲ್ಲಿ ಉರಿದು ಬೂದಿಯಾಗಿ ಮನೆಯ ಸ್ವಿಚ್ ಬೋರ್ಡ್‌ಗೆ ವಿದ್ಯುತ್ ಸಂಪರ್ಕ ಕೊಟ್ಟಿದೆ. ಈ ಧ್ವಂಸಮಾರ್ಗದಲ್ಲಿ ಕಲ್ಲಿದ್ದಲು ತನ್ನ ಒಟ್ಟೂ ಶಕ್ತಿಯ ಶೇ 80ರಷ್ಟು ಪಾಲನ್ನು ವಾಯುಮಂಡಲಕ್ಕೆ ಎರಚಿದೆ. ಗಾಳಿಯನ್ನು, ನೀರನ್ನು ಮಲಿನ ಮಾಡಿದೆ. ಭೂಮಿಯ ಶಾಖವನ್ನು ಹೆಚ್ಚಿಸುವ ಪಾಪಕೃತ್ಯದಲ್ಲಿ ಭಾಗಿಯಾಗಿದೆ. ಪೃಥ್ವಿಗೆ ಈಗ ಬಂದಿರುವ ಸಕಲ ಸಂಕಟಗಳಿಗೆ ಯುಪಿಸಿಎಲ್ ಕೊಡುಗೆಯೂ ಇದೆ. ಉಡುಪಿ-ಮಂಗಳೂರಿನ ಬಹುಪಾಲು ಜನರು ಸೂರ್ಯೋದಯದೊಂದಿಗೆ ಹೊಮ್ಮಿಸುವ ಕೃತಕ ಬೆಳಕಿನಲ್ಲಿ ಆ ಪಾಪದ ಲೇಪವಿದೆ.

ಎಲ್ಲರ ಮನೆಯಲ್ಲಲ್ಲ. ಮಂಗಳೂರಿನ ಕೊಂಚಾಡಿ ಬಳಿಯ ಪ್ರಕಾಶ್ ನಡಳ್ಳಿ ಎಂಬವರ ಮನೆಯಲ್ಲಿ ಸೂಸುವ ವಿದ್ಯುತ್ ಪ್ರಕಾಶಕ್ಕೆ ಯುಪಿಸಿಎಲ್‌ನ ಪಾಪದ ಸೋಂಕಿಲ್ಲ. ಅವರ ಮನೆಯ ಛಾವಣಿಗೆ ಹೊದೆಸಿದ ಐದು ಕಿಲೊವಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಮೂಲಕ ಸೂರ್ಯನೇ ನೇರವಾಗಿ ವಿದ್ಯುತ್ ಉತ್ಪಾದಿಸುತ್ತಿದ್ದಾನೆ.

ಬೆಂಗಳೂರಿನ ನಾವೆಲ್ಲ ಬಹುಪಾಲು ವಿದ್ಯುತ್ತಿಗಾಗಿ ರಾಯಚೂರಿನ ಆರ್‌ಟಿಪಿಎಸ್ ಸ್ಥಾವರವನ್ನು ಅವಲಂಬಿಸಿದ್ದೇವೆ. ಅದರ ಕರಾಳ ಕತೆ ಹೀಗಿದೆ: ದೂರದ ಜಾರ್ಖಂಡ್- ಛತ್ತೀಸ್‌ಗಡದ ದಟ್ಟಾರಣ್ಯಗಳನ್ನು ಧ್ವಂಸಮಾಡಿ, ಅಲ್ಲಿನ ಸಂತಾಲ್ ಬುಡಕಟ್ಟು ಜನರನ್ನೂ ಲೆಕ್ಕವಿಲ್ಲದಷ್ಟು ಬಗೆಯ ವನ್ಯಜೀವಿಗಳನ್ನೂ ಅಟ್ಟಾಡಿಸಿ ಕಿತ್ತೆತ್ತಿ, ರೈಲಿನಲ್ಲಿ ಸಾಗಿಸಿ ತಂದ ಕಲ್ಲಿದ್ದಲನ್ನು ಉರಿಸಿ, ವಾಯುಮಂಡಲಕ್ಕೆ ದೂಳು-ಹೊಗೆ ಹಾಯಿಸಿ, ರಾಯಚೂರಿನ ಸುತ್ತ ನೂರಾರು ಚದರ ಕಿ.ಮೀ ಭೂಮಿಗೆ ಬೂದಿಯ ದಪ್ಪ ಚಾದರವನ್ನು ಹೊದೆಸಿ ಬೆಂಗಳೂರಿಗೆ ಕರೆಂಟ್ ಬಂದಿದೆ. ಈ ದುರಂತ ಸರಣಿಯಲ್ಲೂ ಶೇ 80ಕ್ಕೂ ಹೆಚ್ಚು ಶಾಖಶಕ್ತಿ ವಾತಾವರಣಕ್ಕೆ ಸೇರಿ ಅಷ್ಟಿಷ್ಟು ಕರಿಕಂಬಳಿಯನ್ನು ಹೊದೆಸಿದೆ. ಭೂಮಿಯ ಇಂದಿನ ಸಂಕಟಕ್ಕೆ ತನ್ನ ಪಾಲನ್ನು ಕೊಟ್ಟಿದೆ.

ಈ ಪಾಪಕೃತ್ಯದಲ್ಲಿ ಎಲ್ಲರ ಪಾಲೂ ಇದೆಯೆಂದಲ್ಲ. ಇದೇ ಬೆಂಗಳೂರಿನ ಹೊರವಲಯದ ಗುಂಜೂರಿನಲ್ಲಿ ‘ಅಸೆಟ್ ಔರಾ’ ಹೆಸರಿನ ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ವೆಂಕಟೇಶ ಮುತ್ತಿಗಿ ಅವರು ಈ ಪಾಪದಿಂದ ಮುಕ್ತಿ ಪಡೆದಿದ್ದಾರೆ. ಅವರ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯಲ್ಲಿ ಸೂರ್ಯನಿಂದಲೇ 40 ಕಿಲೊವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ತಿಂಗಳಿಗೆ 32 ಸಾವಿರ ರೂಪಾಯಿಗಳಷ್ಟು ವಿದ್ಯುತ್ ಶಕ್ತಿ ಬೆಸ್ಕಾಂಗೆ ಹಿಮ್ಮುಳುಮೆಯಾಗುತ್ತಿದೆ. ಮುತ್ತಿಗಿಯವರು ಓಡಾಟಕ್ಕೆ ಬಳಸುವ ಎಲೆಕ್ಟ್ರಿಕ್ ಕಾರಿಗೂ ಸೂರ್ಯನೇ ಚೈತನ್ಯ ನೀಡುತ್ತಾನೆ.

ಕಲ್ಲಿದ್ದಲು, ಕಚ್ಚಾತೈಲದಂಥ ಪಳೆಯುಳಿಕೆ ಇಂಧನಗಳು ತಂದಿಟ್ಟ ಸಂಕಟ ಸಂಕಥನ ಹೇಳತೀರದ್ದಲ್ಲ. ಈ ಶಕ್ತಿಮೂಲಗಳು ಆಧುನಿಕ ಮನುಷ್ಯನ ಕೈಗೆಟುಕಿದ್ದೇ ತಡ, ಸೂರ್ಯನ ಶಾಖವೇ ಭೂಮಿಗೆ ಶಾಪವಾಯಿತು. ನಾವೆಲ್ಲ ಸೇರಿ ಭೂಮಿಯನ್ನೇ ಇಂಗಾಲದ ಕಂಬಳಿಯಿಂದ ಮುಚ್ಚಿ ಹಾಕಿದೆವು. ಈ ಇಂಧನಗಳ ಬೂದಿಯೇ ಭಸ್ಮಾಸುರನಾಗಿ ಸೂರ್ಯನ ಶಾಖವನ್ನು ಹೀರಿಕೊಂಡು ಭೂಮಿಯ ಉರಿಯನ್ನು ಹೆಚ್ಚಿಸಿತು. ಎಲ್ಲೆಲ್ಲೂ ಉತ್ಪಾತಗಳು. ಕಾಡಿಗೆ ಬೆಂಕಿ, ಸುಂಟರಗಾಳಿ, ಮೇಘಸ್ಫೋಟ, ಭೂಕುಸಿತ, ಬರಗಾಲ, ದೂಳುಮಾರುತ, ಹಿಮಕುಸಿತ ಒಂದರಮೇಲೆ ಒಂದು ಬರತೊಡಗಿದವು. ಸಮುದ್ರರೂಪಿ ಕೆರೆಗಳೂ ಒಣಗಿದವು. ಪಶ್ಚಿಮದಿಂದ ಬಂದ ಈ ವಿಕೃತ ತಂತ್ರಜ್ಞಾನದ ದಾಸರಾಗಿ ನಾವೂ ಶಕ್ತಿಗಾಗಿ ಶೇ 70ರಷ್ಟು ಕಲ್ಲಿದ್ದಲನ್ನೇ ಅವಲಂಬಿಸಿದೆವು. ಆಕಾಶಕ್ಕೆ ಕತ್ತಲನ್ನು ಸುರಿಯುತ್ತ ಬಂದೆವು.

ಆ ಕತ್ತಲನ್ನು ದಾಟಿ ಭೂಮಿ ಮತ್ತೆ ಸೂರ್ಯನತ್ತ ವಾಲುತ್ತಿದೆ. ಅದು ತನ್ನಷ್ಟಕ್ಕೆ ಸುತ್ತುತ್ತ ಸೂರ್ಯನ ಸುತ್ತ ಒಂದೊಂದು ರೌಂಡ್ ಹಾಕಿದಾಗಲೂ ಸೌರ ವಿದ್ಯುತ್ ಉತ್ಪಾದನೆ ನೂರಾರು ಗಿಗಾವಾಟ್‌ಗಳಷ್ಟು ಹೆಚ್ಚುತ್ತಿದೆ. ಸೋಲಾರ್ ಪ್ಯಾನೆಲ್‌ಗಳ ದಕ್ಷತೆ ದಿನದಿನಕ್ಕೆ ಹೆಚ್ಚುತ್ತಿದೆ. ಕ್ವಾಂಟಮ್ ಫಿಸಿಕ್ಸ್, ನ್ಯಾನೊ ಟೆಕ್ನಾಲಜಿ, ಕ್ರಿಸ್ಟಲ್ ಕೆಮಿಸ್ಟ್ರಿ -ಹೀಗೆ ವಿಜ್ಞಾನದ ಹೊಸ ಕಿಡಿಕಿರಣಗಳನ್ನೇ ಹರಿತಗೊಳಿಸುತ್ತ ಸೂರ್ಯನ ಕಣಕಣವನ್ನು ಚೈತನ್ಯವಾಗಿ ಪರಿವರ್ತಿಸಬಲ್ಲ ತಜ್ಞರ ಸಂಖ್ಯೆ ಹೆಚ್ಚುತ್ತಿದೆ. ಸೌರವಿದ್ಯುತ್ತು ದಿನದಿನಕ್ಕೆ ಅಗ್ಗವಾಗುತ್ತ ಕಲ್ಲಿದ್ದಲಿಗೆ, ಪೆಟ್ರೋಲಿಗೆ ಪೈಪೋಟಿ ಕೊಟ್ಟು ಗೆಲ್ಲುತ್ತಿದೆ. ಬಿಸಿಲನ್ನು ಹೀರಿ ಕರೆಂಟನ್ನು ಹಿಂಡಿ ತೆಗೆಯಬಲ್ಲ ಸೋಲಾರ್ ಪರದೆಗಳು, ನ್ಯಾನೊದಾರಗಳು, ಹಾಸುಚಾಪೆಗಳು, ಪೇಂಟ್‌ಗಳು ಪೇಟೆಂಟ್ ಪಡೆದು ಸೂರ್ಯನ ಆರಾಧನೆಗೆ ಸಜ್ಜಾಗುತ್ತಿವೆ. ಪೃಥ್ವಿಯನ್ನು ಆವರಿಸುತ್ತಿರುವ ಕಡುಕಷ್ಟದ ಸುರಂಗದ ತುದಿಯಲ್ಲೆಲ್ಲೊ ಸೂರ್ಯರಶ್ಮಿ ಸೂಸಲಾರಂಭಿಸಿದೆ.

ಸೂರ್ಯನ ಆವಾಹನೆಯಲ್ಲಿ ಭಾರತಕ್ಕೆ ಇದೀಗ ಹೊಸ ಶ್ರೇಯಸ್ಸು ಲಭಿಸಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಇನ್ನಿತರ ಸಾಧನೆಗಳು ಏನೇ ಇರಲಿ, ಸೌರ ವಿದ್ಯುತ್ತಿಗೆ ಪ್ರೋತ್ಸಾಹ ನೀಡುತ್ತಿರುವ ನಾಲ್ಕು ಪ್ರಮುಖ ದೇಶಗಳ ಸಾಲಿಗೆ ನಮ್ಮದೂ ಸೇರಿದೆ. ಪೃಥ್ವಿಯ ತಾಪ-ತ್ರಯಗಳನ್ನು ಹೇಗಾದರೂ ಕಡಿಮೆ ಮಾಡಲೆಂದು 2015ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕುತ್ತಲೇ ಭಾರತ ತಾನೇ ಮುಂದಾಗಿ ಸೂರ್ಯನ ಶಕ್ತಿಯ ಪರಿವರ್ತನೆಗೆಂದು ಅಂತರರಾಷ್ಟ್ರೀಯ ಮಿತ್ರಕೂಟವನ್ನು ರಚಿಸಿ ಅದರ ಅಧ್ಯಕ್ಷತೆಯನ್ನೂ ತಾನೇ ವಹಿಸಿಕೊಂಡಿತು. ನೋಡನೋಡುತ್ತಿದ್ದಂತೆಯೇ ಕರ್ನಾಟಕದ ಪಾವಗಡ, ರಾಜಸ್ಥಾನದ ಭಾದ್ಲಾ, ಆಂಧ್ರಪ್ರದೇಶದ ಓರ್ವಕಲ್, ಮಧ್ಯಪ್ರದೇಶದ ರೇವಾ, ತಮಿಳುನಾಡಿನ ಕಮುತಿ, ಹೀಗೆ ಎಲ್ಲೆಲ್ಲೂ ಸೌರ ಉದ್ಯಾನಗಳು ತಲೆಯೆತ್ತಿದವು. ಇದೇ ಉತ್ಸಾಹದಲ್ಲಿ ಇನ್ನೆರಡು ವರ್ಷಗಳಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು 130 ಗಿಗಾವಾಟ್‌ಗೆ ಏರಿಸುವುದಾಗಿ ಭಾರತ ಘೋಷಿಸಿದೆ.

ಅಂದಹಾಗೆ, ಒಂದು ಗಿಗಾವಾಟ್ ಎಂದರೆ ಎಷ್ಟು? ಉಡುಪಿಯಲ್ಲಿ ಅದಾನಿ ಕಂಪನಿ 1 ಗಿಗಾವಾಟ್ (ಸಾವಿರ ಮೆಗಾವಾಟ್) ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಕೈಗಾ ಪರಮಾಣು ಸ್ಥಾವರವೊ ದಶಕದ ಶ್ರಮ, ಅಪಾರ ವೆಚ್ಚ, ಅಗೋಚರ ಮಾಲಿನ್ಯ ಹರಿಸಿ ಮುಂದಿನ ಜನಾಂಗಕ್ಕೆ ಅದೆಷ್ಟೊಂದು ಹೊರೆ ಹೊರಿಸಿ ಹೆಚ್ಚೆಂದರೆ ಮುಕ್ಕಾಲು ಗಿಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಇವೆರಡಕ್ಕೆ ಹೋಲಿಸಿದರೆ ಪಾವಗಡದ ಬಂಜರು ನೆಲದ ಬಿಸಿಲಿನಿಂದಲೇ ಮೂರು ಗಿಗಾವಾಟ್ ವಿದ್ಯುತ್ ಹೊಮ್ಮುತ್ತಿದೆ. ಅಲ್ಲಿನ ಕಡುಬಿಸಿಲಲ್ಲಿ ಅಷ್ಟಿಷ್ಟು ರಾಗಿ ಬೆಳೆಯುತ್ತಿದ್ದ ರೈತರಿಗೆ ಈಗ ವಿದ್ಯುತ್ತೆಂಬ ಫಸಲೇ ಜೀವನಾಧಾರವಾಗಿದೆ. ರೈತರ ಜನ್ಮಜಾತ ಸಂಕಷ್ಟ ಸರಮಾಲೆಗಳಿಂದ ಅವರು ಮುಕ್ತರಾಗಿದ್ದಾರೆ. ಎರಡೇ ವರ್ಷಗಳಲ್ಲಿ ಈ ಪರಿವರ್ತನೆ ಸಾಧ್ಯವಾಗಿದೆ.

ಆದರೆ ಇವೆಲ್ಲವೂ ಕಾರ್ಪೊರೇಟ್ ಕಂಪನಿಗಳ ಸಾಧನೆಗಳು ಅನ್ನಿ. ಜನಸಾಮಾನ್ಯರನ್ನೂ ಈ ಸೌರಕ್ರಾಂತಿಯಲ್ಲಿ ತೊಡಗಿಸುವ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕಲ್ಲಿದ್ದಲ ಕೊಳೆಯನ್ನು ಕಕ್ಕುತ್ತಿರುವ ಚೀನಾ ಇನ್ನು 40 ವರ್ಷಗಳಲ್ಲಿ ಎಲ್ಲ ಬಗೆಯ ಫಾಸಿಲ್ ಇಂಧನಗಳಿಗೆ ವಿದಾಯ ಹೇಳುವುದಾಗಿ ಘೋಷಿಸಿದೆ. ಜಗತ್ತಿನಲ್ಲಿ ಅತಿ ಹೆಚ್ಚು (ಭಾರತಕ್ಕಿಂತ ಐದು ಪಟ್ಟು ಹೆಚ್ಚು) ಸೌರವಿದ್ಯುತ್ ಉತ್ಪಾದಿಸುತ್ತಿರುವ ಅದು ಜನಸಾಮಾನ್ಯರನ್ನೂ ಸೂರ್ಯಮುಖಿ ಮಾಡಲೆಂದು ಬೇಕಂತಲೆ ಅಲ್ಲಲ್ಲಿ ಬ್ಲಾಕೌಟ್ ಘೋಷಿಸತೊಡಗಿದೆ. ಯುರೋಪ್- ಅಮೆರಿಕಗಳಲ್ಲಿ ಜನರು ತಾವಾಗಿ ಸೌರವಿದ್ಯುತ್ತಿನ ಜನತಾ ಗ್ರಿಡ್ ರಚಿಸಿಕೊಳ್ಳುತ್ತಿದ್ದಾರೆ. ‘ನಮ್ಮಲ್ಲೂ ಸರ್ಕಾರದ ತುಸು ಪ್ರೇರಣೆ ಸಿಕ್ಕಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರೇ ಒಟ್ಟಾಗಿ ಕೈಗಾಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸಿ ತೋರಿಸಲು ಸಾಧ್ಯವಿತ್ತು’ ಎನ್ನುತ್ತಾರೆ, ಶಿರಸಿಯ ಶ್ರೀಕಾಂತ ಹೆಗಡೆ. (ಅವರು ನಾಲ್ಕು ಮನೆಗಳಿಗೆ ಸಾಲುವಷ್ಟು ವಿದ್ಯುತ್ತನ್ನು ತನ್ನ ಸೂರಿನ ಮೇಲೆಯೇ ಉತ್ಪಾದಿಸುತ್ತಿದ್ದಾರೆ). ಸರ್ಕಾರವೇನೋ ನಗರವಾಸಿಗಳಿಗೆ ‘ಸೌರಗೃಹ’ ಯೋಜನೆ ಹಾಗೂ ರೈತರ ಹೊಲದ ‘ಕುಸುಮ್’ ಯೋಜನೆಗೆ ಭಾರೀ ಸಬ್ಸಿಡಿಯನ್ನು ಘೋಷಿಸಿದೆ. ಆದರೆ ಅದಕ್ಕೆ ಸೂಕ್ತ ಪ್ರಚಾರವೇ ಇಲ್ಲ, ಡಿಸ್ಕಾಂಗಳೂ ಅಷ್ಟೇನೂ ಉತ್ಸಾಹ ತೋರುತ್ತಿಲ್ಲ. ‘ಮತ್ತೇನೂ ಬೇಡ, ಡಿಸ್ಕಾಂಗಳು ಮೀಟರ್ ಮೇಲಿನ ಬಾಡಿಗೆಯನ್ನು ತೆಗೆದು ಹಾಕಿದರೆ ಮತ್ತು ಸರ್ಕಾರ ಇನ್ವರ್ಟರ್‌ಗಳಿಗೆ ಸಬ್ಸಿಡಿ ಘೋಷಿಸಿದರೆ, ವಿದ್ಯುಚ್ಛಕ್ತಿಯ ವಿಷಯದಲ್ಲಿ ಆತ್ಮನಿರ್ಭರ ಘೋಷಣೆ ಮನೆಮನೆಯಲ್ಲೂ ಮೊಳಗಬಹುದಿತ್ತು’ ಎನ್ನುತ್ತಾರೆ, ಮಂಗಳೂರಿನ ನಡಹಳ್ಳಿ ಪ್ರಕಾಶ್. ಹಿಂದೆ, 80ರ ದಶಕದಲ್ಲಿ ಬಿಸಿಲಲ್ಲಿ ನೀರು ಕಾಯಿಸುವ ತಂತ್ರಜ್ಞಾನ ಲಭ್ಯವಾದ ಹೊಸದರಲ್ಲಿ, ಕರ್ನಾಟಕವೇ ಅತಿ ಹೆಚ್ಚು ಸೋಲಾರ್ ವಾಟರ್ ಹೀಟರ್‌ಗಳನ್ನು ಹಾಕಿಸಿಕೊಂಡ ರಾಜ್ಯವೆಂಬ ಖ್ಯಾತಿ ಪಡೆದಿತ್ತು.

ಈಗ ಮತ್ತೊಮ್ಮೆ ಅಂಥ ಸಮ್ಮಾನವನ್ನು ಗಳಿಸುವ ಸಾಧ್ಯತೆ ಇದೆ. ಅನುಕೂಲಸ್ಥ ಜನರು ಒಂದೆರಡು ಲಕ್ಷ ರೂಪಾಯಿಗಳನ್ನು ವ್ಯಯಿಸಿ ಸೋಲಾರ್ ಶೀಟ್‌ಗಳನ್ನು ಹಾಕಿಸಿಕೊಳ್ಳಬಹುದು. ಮನೆಯೂ ತಂಪಾಗಿರುತ್ತದೆ. ಮನವೂ.

ಗಾಯತ್ರಿ ಮಂತ್ರದ ತಾತ್ಪರ್ಯ ಗೊತ್ತಿರಬೇಕಲ್ಲ? ‘ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಹೇ ಸೂರ್ಯದೇವ, ನಮಗೆಲ್ಲ ಪ್ರೇರಣೆ ನೀಡು’ ಎಂಬ ಅರ್ಥ ಅದಕ್ಕಿದೆಯೆಂದು ಸಂಸ್ಕೃತ ತಜ್ಞರು ಹೇಳುತ್ತಾರೆ. ಸೂರ್ಯನನ್ನು ಹೊಸರೂಪದಲ್ಲಿ ಆವಾಹಿಸಿಕೊಳ್ಳುವ ಬಹುದೊಡ್ಡ ಉತ್ಕ್ರಾಂತಿಯಲ್ಲಿ ನಮ್ಮ ಕೊಡುಗೆಯೂ ತುಸು ಇರಲೆಂದು ಹೊಸ ವರ್ಷದ ಹೊಸ್ತಿಲಲ್ಲಿ ಹಾರೈಸೋಣವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT