ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿಗೆ ಕೊಳೆ ರೋಗ ಇಲ್ಲಿದೆ ಮದ್ದು

Last Updated 1 ಜುಲೈ 2019, 19:30 IST
ಅಕ್ಷರ ಗಾತ್ರ

ಪಾಲಹಳ್ಳಿಯ ಅನಿಲ್ ಮೊನ್ನೆ ವಾಟ್ಸಪ್‍ಗೆ ಕಳುಹಿಸಿದ ಫೋಟೊಗಳನ್ನು ನೋಡಿ ನನಗೆ ತುಸು ಆತಂಕವಾಯಿತು. ಹದಿನೈದು ದಿನಗಳ ಹಿಂದೆ ನಳನಳಿಸುತ್ತಿದ್ದ ಶುಂಠಿ, ಅಲ್ಲಲ್ಲೇ ರೋಗಕ್ಕೆ ತುತ್ತಾಗಿದ್ದು ಕಂಡುಬಂತು. ಚಟ್ಟಳ್ಳಿ ರೈತ ಮಂಜು ಅವರ ಜಮೀನಿನ ಶುಂಠಿಯೂ ಕೊಳೆ ರೋಗ (ಬಾಡ್ಗೊಳೆ)ದಿಂದ ಬಾಧಿಸಿತ್ತು. ಫೇಸ್‌ಬುಕ್‌ನ ಶುಂಠಿ ಬೆಳೆಗಾರರ ಗುಂಪಿನ ಮೊಹಮದ್ ಅಯಾಝ್ ಕೂಡ ಇಂಥದ್ದೇ ರೋಗಗ್ರಸ್ಥ ಶುಂಠಿ ಬೆಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿ, ಪರಿಹಾರ ಕೇಳಿದ್ದರು. ಅದು ದುಂಡಾಣು ಕೊಳೆರೋಗದ ಲಕ್ಷಣವಾಗಿತ್ತು (ಹಸುರ್ಗೊಳೆ). ಇನ್ನೂ ಕೆಲವು ರೈತರು ಕಳುಹಿಸಿದ ಹಾಗೂ ನಾನು ಭೇಟಿ ನೀಡಿದ ತಾಕುಗಳ ಶುಂಠಿ ಎಲೆಗಳ ಮೇಲೆಲ್ಲ ಬಿಳಿ ಚುಕ್ಕಿ ಇತ್ತು. ಅದು ಎಲೆಚುಕ್ಕೆ.

ಒಂದೊಂದು ರೋಗ ಒಂದೊಂದು ಶಿಲೀಂಧ್ರ, ಬ್ಯಾಕ್ಟೀರಿಯಾದಿಂದ ಬರುತ್ತದೆ. ಪಿಥಿಯಂ ಶಿಲೀಂಧ್ರದಿಂದ ಬರುವ ಕೊಳೆ ರೋಗ (ಬಾಡ್ಗೊಳೆ); ದುಂಡಾಣು ಅಥವಾ ಬ್ಯಾಕ್ಟೀರಿಯಾದಿಂದ ಬರುವ ಮೃದುಕೊಳೆ (ಹಸುರ್ಗೊಳೆ); ಮತ್ತೊಂದು ಶಿಲೀಂಧ್ರದಿಂದ ಬರುವ ಬಿಳಿ ಎಲೆ ಚುಕ್ಕೆ ರೋಗ; ಇವು ಶುಂಠಿಯನ್ನು ಹಾಗೂ ಬೆಳೆದ ರೈತರನ್ನು ಕಾಡುವ ಪ್ರಮುಖ ರೋಗಗಳು.

ರೋಗಗಳ ಪತ್ತೆ ಹೇಗೆ?

ಬಾಡ್ಗೊಳೆ (ಫಿಥಿಯಂ ಗಡ್ಡೆ ಕೊಳೆ): ಮೊದಲಿಗೆ ಗಿಡದ ಕೆಳಭಾಗದ ಎಲೆಗಳು ತುದಿಯಿಂದ ಹಿಮ್ಮುಖವಾಗಿ ಹಳದಿ ಬಣ್ಣಕ್ಕೆ ತಿರುಗಿ, ಕ್ರಮೇಣ ಎಲ್ಲ ಎಲೆಗಳೂ ಹಳದಿ ಬಣ್ಣಕ್ಕೆ ತಿರುಗಿ, ಭೂಮಿಯ ಒಳಗಿರುವ ಗೆಡ್ಡೆ ಕೊಳೆಯಲು ಶುರುವಾಗುತ್ತದೆ. ಇಂತಹ ಗಿಡವನ್ನು ಸೂಕ್ಷ್ಮವಾಗಿ ನೋಡಿದಾಗ, ಅದರ ಗೆಡ್ಡೆ ಮತ್ತು ಬುಡದ ಕಾಂಡದಲ್ಲಿ ಕೊಳೆತಿರುವುದು ಗೊತ್ತಾಗುವುದು. ತೀವ್ರವಾಗಿದ್ದಲ್ಲಿ ದುರ್ವಾಸನೆ ಬರುತ್ತದೆ.

ಹಸುರ್ಗೊಳೆ (ದುಂಡಾಣು/ಬ್ಯಾಕ್ಟೀರಿಯಾ ಗಡ್ಡೆಕೊಳೆ): ಮೊದಲಿಗೆ ಗಿಡಗಳು ಸೊರಗಿದ್ದೂ/ಬಾಡಿದ್ದೂ ಹಸಿರಾಗಿಯೇ ಕಾಣುತ್ತವೆ. ಎಲೆಗಳು ಹಳದಿಯಾಗುವ ಮೊದಲೇ ಸೊರಗಿರುವುದನ್ನು ಕಾಣಬಹುದು. ಅಂತಹ ಎಲೆಗಳ ಅಂಚು ಒಳಮುಖವಾಗಿ ಮುದುಡಿರುತ್ತದೆ. ಇಂತಹ ಗಿಡಗಳ ಗಡ್ಡೆ ಕಿತ್ತು ಪರೀಕ್ಷಿಸಿದಾಗ ಅಂಟು ಸಹಿತ ಕೊಳೆ ಇರುತ್ತದೆ. ಗಡ್ಡೆಯನ್ನು ಅದುಮಿ/ಹಿಸುಕಿದಾಗ ಬೆಳ್ಳಗಿನ ಅಂಟಂಟಾದ ನೊರೆಯೂ ಕೂಡ ಬರುತ್ತದೆ. ತೀವ್ರತೆ ಹೆಚ್ಚಾದಾಗ ದುರ್ವಾಸನೆಯೂ ಬರುತ್ತದೆ.

ಬಿಳಿ ಎಲೆಚುಕ್ಕೆ ರೋಗ: ಎಲೆಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಮೊದಲಿಗೆ ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಕಂದು ಬಣ್ಣದ ಮಚ್ಚೆಗಳಾಗಿ ಕ್ರಮೇಣ ಎಲೆಗಳು ಒಣಗುತ್ತವೆ.

ಈ ರೋಗಗಳು ಹರಡುವುದು ಹೀಗೆ

ಬಾಡ್ಗೊಳೆ ಹಾಗೂ ದುಂಡಾಣುಕೊಳೆ ಎರಡೂ ರೋಗ ಪೀಡಿತ ಗೆಡ್ಡೆಗಳ ಮುಖಾಂತರ ಪ್ರಮುಖವಾಗಿ ಹರಡುತ್ತವೆ. ಅಲ್ಲದೇ, ಈ ರೋಗಾಣುಗಳು ಮಣ್ಣಿನಲ್ಲಿ ಉಳಿದುಕೊಂಡು, ಬೆಳೆ ಹಾಕಿದ ನಂತರ ರೋಗವನ್ನು ಹರಡಬಲ್ಲವು. ನೀರು ಸರಿಯಾಗಿ ಬಸಿಯದ ಜಮೀನುಗಳಲ್ಲಿ ಅಥವಾ ಜೌಗು ಪ್ರದೇಶವಾಗಿದ್ದಲ್ಲಿ ರೋಗದ ತೀವ್ರತೆ ಹೆಚ್ಚು. ಶುಂಠಿ ಬೆಳೆಯುವ ಮೊದಲು ಆ ಜಮೀನುಗಳಲ್ಲಿ ಒಂದು ವೇಳೆ ಟೊಮೆಟೊ, ಬದನೆ, ಮೆಣಸಿನಕಾಯಿ, ಶೇಂಗಾ ಅಥವಾ ಆಲೂಗಡ್ಡೆ ಬೆಳೆದಿದ್ದಲ್ಲಿ, ಈ ರೋಗದ ತೀವ್ರತೆ ಮತ್ತು ಹರಡುವಿಕೆ ಹೆಚ್ಚಾಗುತ್ತದೆ. ಬಿಳಿ ಎಲೆಚುಕ್ಕೆ ರೋಗಾಣು ಗಾಳಿಯಲ್ಲಿ ಮಳೆಯೊಟ್ಟಿಗೆ ಸೇರಿಕೊಂಡು ಹರಡುತ್ತಾ ಹೋಗುತ್ತದೆ.

ರೋಗ ನಿರ್ವಹಣೆ ಹೇಗೆ?

ಬಾಡ್ಗೊಳೆ ರೋಗ ತಗುಲಿದ್ದರೆ, ನಾಟಿ ಮಾಡಿದ ಒಂದು ಹಾಗೂ ಎರಡು ತಿಂಗಳ ನಂತರ ಪ್ರತಿ ಲೀಟರ್ ನೀರಿಗೆ 3 ಗ್ರಾಂ ಪ್ರಮಾಣದಲ್ಲಿ ಮೆಟಲಾಕ್ಸಿಲ್ ಮ್ಯಾಂಕೋಝೆಬ್ ಅಥವಾ 3 ಗ್ರಾಂ ಪೋಸೆಟೈಲ್ ಅಲ್ಯುಮಿನಿಯಂ ಬೆರೆಸಿ ಸಿಂಪಡಣೆ ಮಾಡುವುದರ ಜೊತೆಗೆ ಮಡಿಗಳನ್ನೂ ತೋಯಿಸಬೇಕು. ಇದರ ಜೊತೆಗೆ ರೋಗ ಬಂದ ಗಿಡಗಳಿಗೆ ಸುಣ್ಣದ ನೀರನ್ನು ಹಾಕುವುದರಿಂದ ರೋಗ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ಹಸಿರ್ಗೊಳೆ ಅಥವಾ ದುಂಡಾಣುವಿನಿಂದ ಬಂದಿರುವ ಕೊಳೆ ರೋಗ ನಿರ್ವಹಣೆ ಮಾಡಲು ನಾಟಿ ಮಾಡಿದ ಒಂದು ಹಾಗೂ ಎರಡು ತಿಂಗಳ ನಂತರ ಪ್ರತಿ ಲೀಟರ್ ನೀರಿಗೆ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಜೊತೆಗೆ 0.5 ಗ್ರಾಂ ದುಂಡಾಣು ನಾಶಕ್ ಅಥವಾ ಸ್ಟ್ರೆಪ್ಟೋಸೈಕ್ಲಿನ್ ಬೆರೆಸಿ ಸಿಂಪಡಣೆ ಹಾಗೂ ಮಡಿ ತೋಯಿಸುವಂತೆ ಉಪಚರಿಸ ಬೇಕು. ತಾಮ್ರದ ಆಕ್ಸಿ ಕ್ಲೋರೈಡ್‍ಗೆ ಪರ್ಯಾಯವಾಗಿ ತಾಮ್ರದ ಹೈಡ್ರಾಕ್ಸೈಡ್‍ನ್ನು ಲೀಟರ್ ನೀರಿಗೆ 2-3 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಬಳಸಬಹುದಾಗಿದೆ. ಅಲ್ಲದೆ ಈ ರೋಗ ನಿರ್ವಹಣೆಗೆ ಎಕರೆಗೆ ಬಿಳಿ ಎಲೆ ಚುಕ್ಕೆ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಜೈನೆಬ್ ಅಥವಾ ಮ್ಯಾಂಕೊಝೆಬ್ ಬೆರೆಸಿ ಸಿಂಪಡಿಸಿದರೆ ಸಾಕು. ಪರ್ಯಾಯವಾಗಿ ಶೇ 1 ರ ಬೋರ್ಡೋ ದ್ರಾವಣ ಸಿಂಪಡಿಸಬಹುದು.

ಸಾವಯವ ಪದ್ಧತಿಯಲ್ಲಿ ರೋಗ ನಿರ್ವಹಣೆ ಮಾಡಲು ಶೇ 1 ರ ಬೋರ್ಡೊ ದ್ರಾವಣವನ್ನು ಸಿಂಪಡಣೆ ಹಾಗೂ ಮಡಿ ತೋಯಿಸಲು ಬಳಸಬಹುದು (ಸೂಕ್ತ ರೀತಿ ಬೋರ್ಡೊ ದ್ರಾವಣ ತಯಾರಿಸಲು ಅನುಭವಿ ಕೃಷಿಕರ ಅಥವಾ ತಜ್ಞರ ನೆರವು ಅತ್ಯಗತ್ಯ).

ರೋಗ ನಿರ್ವಹಣೆಯಲ್ಲಿ ರೋಗ ಯಾವುದೆಂದು ಸರಿಯಾಗಿ ಪತ್ತೆ ಹಚ್ಚುವುದು ಪ್ರಮುಖ ವಿಚಾರ; ಅವಶ್ಯವಾದಲ್ಲಿ ಇದಕ್ಕಾಗಿ ಅನುಭವಿ ಕೃಷಿಕರ ಅಥವಾ ತಜ್ಞರ ನೆರವು ಪಡೆಯಿರಿ. ಲಕ್ಷಗಳ ಮೇಲೆ ಲಕ್ಷ್ಯ ಇಡುವ ಮೊದಲು, ಬೆಳೆಯ ಮೇಲೆ ಲಕ್ಷ್ಯ ಇಟ್ಟು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ನಿರ್ವಹಣೆ ಮಾಡಿದಲ್ಲಿ ಖಂಡಿತ ಯಶಸ್ವಿಯಾಗಿ ಶುಂಠಿ ಬೆಳೆದು ಉತ್ತಮ ಇಳುವರಿ ಹಾಗೂ ಆದಾಯ ಗಳಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸುದರ್ಶನ್ ಜಿ. ಕೆ. (99458 32499) ಅಥವಾ ಹರೀಶ್, ಬಿ. ಎಸ್ (94805 57634) ರವರನ್ನು ಸಂಪರ್ಕಿಸಿ.

ನಾಟಿ ಕ್ರಮ ಹೀಗಿದ್ದರೆ ರೋಗದಿಂದ ದೂರ

ಕೆಂಪು ಮಿಶ್ರಿತ ಮರಳು/ಗೋಡು ಮಣ್ಣಾದರೆ ಶುಂಠಿ ಬೆಳೆಯಲು ಹೆಚ್ಚು ಸೂಕ್ತ. ಕಪ್ಪು ಮಣ್ಣಿನಲ್ಲಿ ರೋಗದ ತೀವ್ರತೆ ಹೆಚ್ಚು, ನಿರ್ವಹಣೆ ಕಷ್ಟಕರ. ಮಳೆ ನೀರು ಅಥವಾ ಹೆಚ್ಚಾಗಿ ಕೊಡುವ ನೀರು ಚೆನ್ನಾಗಿ ಬಸಿಯುವಂತೆ ಮಾಡುವ ಸಲುವಾಗಿ ಶುಂಠಿ ತಾಕಿನ ಸುತ್ತಲೂ ಬಸಿಗಾಲುವೆಗಳು ಅತ್ಯಗತ್ಯ. ಕಡ್ಡಾಯವಾಗಿ ಏರುಮಡಿ ಪದ್ಧತಿಯಲ್ಲಿಯೇ ನಾಟಿ ಮಾಡಬೇಕು. ನಾಟಿಗೆ 30-40 ದಿನಗಳ ಮೊದಲು ಪಾರದರ್ಶಕ ಪಾಲಿಥೀನ್ ಹಾಳೆಗಳಿಂದ (75-100 ಮೈಕ್ರಾನ್ ಗಾತ್ರ) ಏರುಮಡಿಗಳನ್ನು ಮುಚ್ಚಿ ಗಾಳಿಯಾಡದಂತೆ ಮಾಡುವುದರಿಂದಲೂ, ಮಣ್ಣಿನ ಉಷ್ಣಾಂಶ ಹೆಚ್ಚಿ ಅದರಲ್ಲಿನ ರೋಗಾಣುಗಳು ಕಡಿಮೆಯಾಗುವಂತೆ ಮಾಡಬಹುದು.

ನಾಟಿಗೆ ಬಳಸುವ ಗಡ್ಡೆ ರೋಗಮುಕ್ತವಾಗಿರಬೇಕು (ಪರೀಕ್ಷಿಸಲು ಅಗತ್ಯವಿದ್ದರೆ ತಜ್ಞರ ನೆರವು ಪಡೆಯುವುದು ಒಳಿತು). ಶುಂಠಿ ಬೆಳೆಕಾಯಿ, ಬಾಳೆ, ಆಲೂಗಡ್ಡೆ, ಶೇಂಗಾ (ನೆಲಗಡಲೆ) ಅಥವಾ ಶುಂಠಿಯನ್ನೂ ಬೆಳೆದಿರಬಾರದು.

ಬಿತ್ತನೆ ಗಡ್ಡೆಯ ಮುಖಾಂತರ ರೋಗ ಹರಡುವಿಕೆ ತಪ್ಪಿಸಲು, ಗಡ್ಡೆ ಸಂಗ್ರಹಿಸುವ ಮೊದಲು ಹಾಗೂ ಬಿತ್ತನೆಗೆ ಮುನ್ನ ಬೀಜೋಪಚಾರ ಕಡ್ಡಾಯ ಮಾಡಿ (ನೂರು ಲೀಟರ್ ನೀರಿಗೆ 300 ಗ್ರಾಂ ಮ್ಯಾಂಕೋಝೆಬ್ ಅಥವಾ ಮೆಟಲಾಕ್ಸಿಲ್ ಮ್ಯಾಂಕೋಝೆಬ್ ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ + ದುಂಡಾಣು ನಾಶಕ್ ಅಥವಾ ಸ್ಟ್ರೆಪ್ಟೋಸೈಕ್ಲಿನ್ 150 ಗ್ರಾಂ ಬೆರೆಸಿ ಬಿತ್ತನೆ ಗಡ್ಡೆಗಳನ್ನು ಕನಿಷ್ಠ ಒಂದು ಗಂಟೆ ನೆನಸಿ, ನಂತರ ನೀರು ಬಸಿದು, ನೆರಳಿನಲ್ಲಿ ಆರಿಸಿ, ಮರುದಿನ ನಾಟಿಗೆ ಬಳಸಬೇಕು).

ಪ್ರತಿ ಎಕರೆಗೆ ಅರ್ಧ ಅಥವಾ ಒಂದು ಟನ್‌ವರೆಗೂ ಬೇವಿನ ಹಿಂಡಿಯನ್ನು ತಪ್ಪದೇ ಬಳಸಬೇಕು. ಈ ಹಿಂಡಿ ಅಥವಾ ಕೊಟ್ಟಿಗೆ ಗೊಬ್ಬರದ ಜೊತೆ ತಲಾ 2 ಕೆ.ಜಿ. ಟ್ರೈಕೋಡರ್ಮ, ಸುಡೋಮೋನಾಸ್ ಹಾಗೂ ಬ್ಯಾಸಿಲಸ್ ಸಬ್ಟಿಲಿಸ್ ಜೀವಾಣುಗಳನ್ನು 15-20 ದಿನ ಮೊದಲೇ ಸೇರಿಸಿ ನಂತರ ನಾಟಿಗೆ ಬಳಸಬೇಕು. ಶುಂಠಿ ಬೆಳೆಯ ನಂತರ ರೋಗದ ತೀವ್ರತೆ/ಬಾಧೆ ತಗ್ಗಿಸಲು ಜೋಳ, ರಾಗಿ, ಮರಗೆಣಸು, ಮೆಕ್ಕೆಜೊಳ, ಭತ್ತ ಅಥವಾ ಸಜ್ಜೆ ಬೆಳೆಯಬಹುದು.

ಬೆಳ್ಳಗಾದ ಶುಂಠಿ, ಹಸಿರಾದಾಗ….

ಜೂನ್ 11 ರ ‘ಕೃಷಿ ಕಣಜ’ ಪುರವಣಿಯಲ್ಲಿ ‘ಶುಂಠಿ ಬೆಳ್ಳಗಾಗ್ತಿದೆ, ಏನ್ಮಾಡೋದು?’ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿತ್ತು. ಅದನ್ನು ಓದಿದ ಅನೇಕ ಶುಂಠಿ ಬೆಳೆಗಾರರು, ಸೂಕ್ತ ಕ್ರಮ ತೆಗೆದುಕೊಂಡು, ‘ನೀವ್ ಹೇಳಿದ್ದು ಸರಿಯಾಗೈತೆ. ನಿಮ್ಗೂ ಥ್ಯಾಂಕ್ಸ್. ಪ್ರಜಾವಾಣಿಗೂ ಥ್ಯಾಂಕ್ಸು. ಬೆಳ್ಳಗಾಗಿದ್ದ ಶುಂಠಿ ಈಗ ಮತ್ತೆ ಹಸಿರಾಗ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹೊಸವಾರಂಚಿಯ ರೈತ ದೇವೇಂದ್ರ ಕರೆ ಮಾಡಿ ‘ಔಷಧ ಮಾಡಿ ಆರು ದಿನಕ್ಕೆ ರಿಸಲ್ಟ್ ಗೊತ್ತಾಗ್ತಾ ಹೋಯ್ತು ಸರ್’ ಎಂದರು. ಹದಿನೈದು ದಿನಗಳ ಹಿಂದೆ ಶುಂಠಿ ಬೆಳ್ಳಗಾಗ್ತಿದೆ ಪರಿಹಾರ ಹೇಳಿ ಎಂದು ಆತಂಕದಿಂದ ಕರೆ ಮಾಡಿದ್ದ ಗೌರಿಪುರದ ನಿಶಾಂತ, ಈ ಬಾರಿ ಖುಷಿ, ಸಮಾಧಾನದಿಂದ ಮಾತಾಡಿ, ‘ಸರ್, ಬೆಳ್ಳಗಾಗಿದ್ದ ಶುಂಠಿ ಈಗ ಬಹುತೇಕ ಹಸಿರಾಗಿದೆ, ಧನ್ಯವಾದ’ ಎಂದರು. ಶುಂಠಿ ಬೆಳೆಯುವ ಅನೇಕ ಕೃಷಿಕರಿಗೆ ಪ್ರಜಾವಾಣಿಯ ಲೇಖನ ನೆರವಾಗಿರುವುದು ಕೇಳಿ ಖುಷಿಯಾಯಿತು.

(ಲೇಖಕರು , ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT