ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಹಜ ಕೃಷಿಯಲ್ಲಿ ಹನುಮಂತಪ್ಪರ ನೆಮ್ಮದಿಯ ಜೀವನ

Last Updated 5 ಡಿಸೆಂಬರ್ 2018, 10:48 IST
ಅಕ್ಷರ ಗಾತ್ರ

ದಾವಣಗೆರೆ: ಇಂಗ್ಲಿಷ್‌ನಲ್ಲಿ ಎಂಎ ಮಾಡಿದ್ದರೂ ಫುಕುವೋಕನ ಪ್ರಭಾವಕ್ಕೆ ಒಳಗಾಗಿ ಕೆಲಸ ಹುಡುಕದೇ ಕೃಷಿಗೆ ಮರಳಿದ ಯರೆಹಳ್ಳಿ ಹನುಮಂತಪ್ಪ ಅವರು ಸಹಜ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

ಯಾವುದೇ ರಸಗೊಬ್ಬರ, ಕ್ರಿಮಿನಾಶಕವನ್ನು ಬಳಸದೇ ಕಡಿಮೆ ಖರ್ಚಿನಲ್ಲಿ ಅಡಿಕೆ ಬೆಳೆದಿರುವ, ಭತ್ತ ಮಾಡುತ್ತಿರುವ ಅವರು ಸುತ್ತಮುತ್ತಲಿನವರಿಗಿಂತ ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ. ಮೂರು ಎಕರೆ ಅಡಿಕೆ ತೋಟದಲ್ಲಿ 220 ಕ್ವಿಂಟಲ್‌ ಅಡಿಕೆ ಇಳುವರಿ ಪಡೆದಿದ್ದಾರೆ. ಮೂರು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು, ಎಕರೆಗೆ ಸರಾಸರಿ 26 ಚೀಲ ಗಳಿಸುತ್ತಿದ್ದಾರೆ. ಒಟ್ಟು 28 ಎಕರೆ ಭೂಮಿ ಹೊಂದಿದ್ದರೂ 18 ಎಕರೆ ಭೂಮಿಯನ್ನು ಬೇರೆಯವರಿಗೆ ಲೀಸ್‌ ನೀಡಿದ್ದಾರೆ. 10 ಎಕರೆಯಲ್ಲಿ ಸಹಜ ಕೃಷಿ ಮಾಡಿಕೊಂಡು ಯಾವುದೇ ತಲೆನೋವುಗಳಿಲ್ಲದೆ ಬದುಕುತ್ತಿದ್ದಾರೆ.

ಆರಂಭದಲ್ಲಿ ಸಾಂಪ್ರದಾಯಿಕ ಕೃಷಿ: ‘ಮೈಸೂರಿನಲ್ಲಿ ಎಂಎ ಮಾಡುತ್ತಿದ್ದಾಗ ಪೈಲೂರು ಶಿವರಾಂ ಎಂಬ ಸಹಪಾಠಿ ಗೆಳೆಯನಿದ್ದ. ಆತನ ಸಂಬಂಧಿ ಎ.ಪಿ. ಚಂದ್ರಶೇಖರ್‌ ಎಂಬವರು ಮೈಸೂರಿನಲ್ಲಿ ಕೃಷಿ ಮಾಡುತ್ತಿದ್ದರು. ಅಲ್ಲಿಗೆ ಶಿವರಾಂ ಜತೆಗೆ ಆಗಾಗ ಹೋಗಿ ಕೃಷಿ ನೋಡಿಕೊಂಡು ಅಡ್ಡಾಡಿಕೊಂಡು ಬರುತ್ತಿದ್ದೆ. ಅಲ್ಲೇ ಫುಕುವೋಕನ ಸಹಜ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿತು. ಅದಕ್ಕೆ ಸರಿಯಾಗಿ ಪೂರ್ಣಚಂದ್ರ ತೇಜಸ್ವಿ ಅವರೂ ಆಗಾಗ ಮೈಸೂರಿಗೆ ಬಂದು ಸಹಜ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದರಿಂದಾಗಿ ನಾನೂ ಕೃಷಿಕನಾಗಬೇಕು ಎಂದು ನಿರ್ಧರಿಸಿ ಊರಿಗೆ ಬಂದೆ’ ಎಂದು ಆರಂಭದ ಎರಡೂವರೆ ದಶಕದ ಹಿಂದಿನ ತನ್ನ ತೀರ್ಮಾನವನ್ನು ವಿವರಿಸಿದರು.

‘ಊರಲ್ಲಿ ಸಹಜ ಕೃಷಿ ಮಾಡಲು ತೊಡಗಿದಾಗ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ತಂದೆ ತಾಯಿಯಿಂದ ಪ್ರತಿರೋಧ ಬಂತು. ಓದಿ ಕೃಷಿ ಎಲ್ಲ ಹಾಳು ಮಾಡುತ್ತಿದ್ದಾನೆ ಎಂದು ಅವರು ತಿಳಿದುಕೊಂಡಿದ್ದರು. ಆದರೂ ಸಹಜಕೃಷಿ ಮಾದರಿಯಲ್ಲಿ ಭತ್ತ ಬೆಳೆದೆ. ಅದಕ್ಕೆ ರೋಗ ಬಂದು ಎಲ್ಲ ಹಾಳಾಗಿ ಹೋಯಿತು. ಆನಂತರ ತಂದೆ ತಾಯಿ ಜತೆಗೆ ಅವರ ಸಾಂಪ್ರದಾಯಿಕ ಕೃಷಿಯನ್ನೇ ಸ್ವಲ್ಪ ಸಮಯ ಮುಂದುವರಿಸಿದೆ’ ಎಂದು ತಿಳಿಸಿದರು.

‘1996ರಲ್ಲಿ ಮೊದಲ ಬಾರಿಗೆ ಸಹಜ ಕೃಷಿ ಮಾದರಿಯಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಡಿಕೆ ಹಾಕಿದೆ. ತೋಟದ ನಡುವೆ ಕ್ರಂಚ್‌ ಮಾಡಿ ಬೇಸಿಗೆಯಲ್ಲಿ ಅದರಲ್ಲಿ ತಿಂಗಳಿಗೊಮ್ಮೆ ನೀರು ಹರಿಸುವ ವ್ಯವಸ್ಥೆ ಮಾಡಿದೆ. ತೋಟ ಸ್ವಚ್ಛವಾಗಿರಬೇಕು ಎಂಬ ಕಲ್ಪನೆಯೇ ತಪ್ಪು. ಮಣ್ಣು ಹಸಿರು ಹೊದಿಕೆ ಹೊಂದಿದ್ದರೆ ಯಾವಾಗಲೂ ತೇವಾಂಶದಿಂದ ಕೂಡಿರುತ್ತದೆ. ಜತೆಗೆ ಫಲವತ್ತತೆಯನ್ನೂ ಹೊಂದಿರುತ್ತದೆ. ನಾನು ಸಿಹಿಗೆಣಸಿನ ಬಳ್ಳಿ, ವೆಲ್ವೆಟ್‌ ಬೀನ್ಸ್‌, ಸೆಣಬು ಮುಂತಾದವುಗಳನ್ನು ಹೊದಿಕೆಯಾಗಿ ಬೆಳೆಸಿದೆ. ಮೂರ್ನಾಲ್ಕು ವರ್ಷ ಬರಗಾಲ ಬಂದಾಗ ಸ್ವಲ್ಪ ಇಳುವರಿ ಕಡಿಮೆಯಾಯಿತೇ ವಿನಾ ಬೇರೇನು ಸಮಸ್ಯೆಗಳು ಕಾಡಲಿಲ್ಲ’ ಎಂದು ವಿವರಿಸಿದರು.

‘ಅಡಿಕೆ ಯಶಸ್ವಿಯಾದ ಬಳಿಕ ಭತ್ತವನ್ನು ಕೂಡ ಇದೇ ರೀತಿ ಬೆಳೆಯಬೇಕು ಎಂದು ನಿರ್ಧರಿಸಿದೆ. ಮೂರು ಎಕರೆಯಲ್ಲಿ ಭತ್ತ ಮಾಡಲಾರಂಭಿಸಿದೆ. ಒಂದು ಬಾರಿಯೂ ಔಷಧ ಸಿಂಪಡಿಸದೇ ರಸಗೊಬ್ಬರ ಹಾಕದೇ ಬೆಳೆಯತೊಡಗಿದೆ. ಆರಂಭದಲ್ಲಿ ಸ್ವಲ್ಪ ತೊಂದರೆಯಾದರೂ ವರ್ಷಗಳು ಕಳೆದಂತೆ ಸಮಸ್ಯೆಗಳು ಕಡಿಮೆಯಾದವು. ಸುತ್ತಮುತ್ತಲಲ್ಲಿ ಹುಳದ ಹಾವಳಿ, ಬೆಂಕಿರೋಗ ಮತ್ತಿತರ ಕಾರಣಗಳಿಂದ ಭತ್ತ ನಾಶವಾದಾಗಲೂ ನನ್ನ ಗದ್ದೆಗಳಿಗೆ ಸಮಸ್ಯೆ ಕಾಡಿಲ್ಲ. ಭತ್ತದ ಬೀಜ ಕೂಡ ಸರ್ಕಾರ ನೀಡುವ ಹೈಬ್ರೀಡ್‌ ತಳಿಯನ್ನು ಬಳಸಬಾರದು. ಜವಾರಿ ತಳಿಯನ್ನೇ ಬಳಸಬೇಕು. ನಮಗೆ ಬೇಕಾದ ಬೀಜವನ್ನು ನಾವೇ ತಯಾರಿಸುತ್ತೇವೆ. ಇಲ್ಲದಿದ್ದರೆ ಸಹಜ ಕೃಷಿ ಮಾಡುವ ಗೆಳೆಯರಿಂದ ಪಡೆದುಕೊಳ್ಳುತ್ತೇವೆ’ ಎಂದು ಹೆಮ್ಮೆಯಿಂದ ವಿವರಿಸಿದರು.

ಏನೇನಿದೆ?
ಅಡಿಕೆ ಮತ್ತು ಭತ್ತ ಮುಖ್ಯ ಬೆಳೆಯಾಗಿ ಮಾಡಿಕೊಂಡಿದ್ದಾರೆ. ಇದಲ್ಲದೇ ಮನೆಗೆ ಬೇಕಾದ ಬಹುತೇಕ ಹಣ್ಣುಹಂಪಲು, ತರ್ಕಾರಿಗಳನ್ನು ಬೆಳೆದಿದ್ದಾರೆ. ಹಕ್ಕಿಗಳು ತಂದು ಹಾಕಿದ ಬೀಜದಲ್ಲಿಯೇ ಪೇರಳೆಯ ಹಲವು ಮರಗಳಾಗಿವೆ. ತಿಂದು ಮಿಕ್ಕಿ ಮಾರಾಟ ಮಾಡುವಷ್ಟು ಪೇರಳೆ ಆಗುತ್ತದೆಯಾದರೂ ಅಡಿಕೆ ಮತ್ತು ಭತ್ತ ಹೊರತುಪಡಿಸಿ ಮತ್ಯಾವುದನ್ನೂ ಮಾರಾಟ ಮಾಡುವುದಿಲ್ಲ. ಮನೆಗೆ ಬರುವ ಗೆಳೆಯರಿಗೆ ಉಚಿತವಾಗಿ ನೀಡುತ್ತಾರೆ.

ಬಾಳೆ, ಚಿಕ್ಕು, ಫ್ಯಾಷನ್‌ ಫ್ರೂಟ್‌, ಥೈವಾನ್‌ ಹಲಸು ಒಳಗೊಂಡಂತೆ ಹಲಸಿನ ವಿವಿಧ ತಳಿಗಳು, ಮಾವಿನ ವಿವಿಧ ತಳಿಗಳು, ಈರುಳ್ಳಿ, ಅಲಸಂದೆ, ಬದನೆ, ಉಸುಕು ಬದನೆ, ಕೆಂಪು ಬೆಂಡೆ, ಎಲಿಫೆಂಟ್‌ ಬೆಂಡೆ, ಬೆಂಡೆ, ಆವರೆ ಒಳಗೊಂಡಂತೆ ವಿವಿಧ ತರಕಾರಿಗಳು, ಅರಿವೆ, ಸಬ್ಬಸಿಗೆ, ಪಾಲಕ, ಕೊತ್ತಂಬರಿ ಇನ್ನಿತರ ಸೊಪ್ಪುಗಳನ್ನು ಬೆಳೆದಿದ್ದಾರೆ. ಇದಲ್ಲದೇ ತೊಗರಿ, ಅರಿಶಿಣ, ಕಬ್ಬು ಕೂಡ ಇದೆ. ರಾಗಿಯನ್ನೂ ಹೊರಗಿನಿಂದ ತರುವುದಿಲ್ಲ. ಮನೆಗೆ ಅಗತ್ಯ ಇರುವಷ್ಟು ಬೆಳೆಯುತ್ತಾರೆ.

ಈ ಎಲ್ಲ ಬೆಳೆಗಳ ಹಿಂದೆ ಹನುಮಂತಪ್ಪ ಅವರ ಪತ್ನಿ ಪರಿಮಳ ಅವರ ಶ್ರಮ ಇದೆ. ಅವರು ಇವುಗಳ ಜತೆಗೆ ಮನೆಯ ಸುತ್ತ ವಿವಿಧ ಹೂವಿನ ಗಿಡಗಳನ್ನೂ ಬೆಳೆಸಿದ್ದಾರೆ. ತೇಜಸ್‌ ಮತ್ತು ತನ್ಮಯಿ ಎಂಬ ಇಬ್ಬರು ಮಕ್ಕಳಿದ್ದು, ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ.

ಶ್ರಮ ಕಡಿಮೆ ಮಾಡಿ
ರೈತರು ಯಂತ್ರಗಳನ್ನು ಮತ್ತು ಶ್ರಮವನ್ನು ಕಡಿಮೆ ಮಾಡುವ ಬಗ್ಗೆ ಮೊದಲು ಚಿಂತಿಸಬೇಕು. ಇದರೊಟ್ಟಿಗೆ ಕೃಷಿ ಮಾಡುವ ಖರ್ಚನ್ನೂ ಕಡಿಮೆ ಮಾಡಬೇಕು. ಮಣ್ಣು, ನೀರಿನಲ್ಲಿ ಸಹಜವಾಗಿ ಎಲ್ಲವೂ ಬೆಳೆಯುತ್ತವೆ. ಇದೇ ಮಾದರಿಯನ್ನು ಅನುಸರಿಸಬೇಕು. ಮಣ್ಣಿನಲ್ಲಿ ಎರೆಹುಳಗಳು ಇರಬೇಕು. ಹಾಗಂತ ಹೊರಗಿನಿಂದ ಎರೆಹುಳು ತಂದು ಬಿಡುವುದಲ್ಲ. ತಮ್ಮ ಭೂಮಿಯಲ್ಲಿಯೇ ಎರೆಹುಳು ಹೆಚ್ಚಾಗುವಂತೆ ಮಾಡಬೇಕು. ಹೊದಿಕೆ, ತೇವಾಂಶ ಇರುವಂತೆ ಮಾಡಿದರೆ ಇದೆಲ್ಲ ಸಾಧ್ಯ ಎಂದು ಹನುಮಂತಪ್ಪ ರೈತರಿಗೆ ಸಲಹೆ ನೀಡಿದರು.

ರೈತರು ಮಾಡಬೇಕಾದ ಇನ್ನೊಂದು ಕೆಲಸವೆಂದರೆ ಮುಖ್ಯಬೆಳೆಯಾಗಿ ಏನೇ ಬೆಳೆದರೂ, ಮನೆಗೆ ಅಗತ್ಯ ಇರುವ ಹಣ್ಣು, ತರ್ಕಾರಿಗಳನ್ನೂ ಒಟ್ಟಿಗೆ ಬೆಳೆಯಬೇಕು. ಅವುಗಳನ್ನು ಹೊರಗಿನಿಂದ ತರುವುದಾದರೆ ಖರ್ಚು ಹೆಚ್ಚಾಗುತ್ತದೆ ಎಂಬುದು ಅವರ ಅನುಭವ.

ಆಸಕ್ತರು ಹನುಮಂತಪ್ಪರನ್ನು (9964333416)ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT