ಬುಧವಾರ, ಮೇ 18, 2022
29 °C
ತೋಟಗಳಲ್ಲಿ ಸಂಚರಿಸಿ ಮಾಹಿತಿ ಪಡೆದ ರೈತರು

ಕೀಟಗಳ ತೊಲಗಿಸಲು ‘ಬೆಳಕು ಸೆಳೆತದ ಬಲೆ’ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆ‌ಳೆಗಳಿಗೆ ದಾಳಿ ಮಾಡುವ ಕೀಟಗಳನ್ನು ಬೆಳಕಿನ ಸಹಾಯದಿಂದ ಸೆಳೆಯುವ ‘ಲೈಟ್‌ ಕಮ್ ಸಕ್ಷನ್ ಟ್ರ್ಯಾಪ್’ (ಬೆಳಕು ಸೆಳೆತದ ಬಲೆ) ತಂತ್ರಜ್ಞಾನವನ್ನು ಐಐಎಚ್‌ಆರ್‌ನ ಬೆಳೆ ಸಂರಕ್ಷಣಾ ವಿಭಾಗ ಅಭಿವೃದ್ಧಿಪಡಿಸಿದೆ.

ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿರುವ ಈ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳು ರೈತರ ಗಮನ ಸೆಳೆಯುತ್ತಿವೆ.

ಟೊಮೆಟೊ ಸೇರಿದಂತೆ ಇತರ ಬೆಳೆಗಳಿಗೆ ಕೀಟಗಳ ಬಾಧೆ ಹೆಚ್ಚು.ಇವು ಯಾವ ಅವಧಿಯಲ್ಲಾದರೂ ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ದುಬಾರಿ ರಾಸಾಯನಿಕ ಸಿಂಪಡಿಸಿದರೂ ಅವುಗಳ ಕಾಟ ತಪ್ಪುತ್ತಿರಲಿಲ್ಲ. ಈಗ ಬೆಳಕು ಸೆಳೆತದ ಬಲೆಗಳನ್ನು ತೋಟದಲ್ಲಿ ಅಳವಡಿಸುವುದರಿಂದ ಕೀಟಗಳು ತಾನಾಗೇ ಬಂದು ಬಲೆಗೆ ಸಿಲುಕಿಕೊಳ್ಳುತ್ತವೆ.

‘ಉಷ್ಣಾಂಶ ಹೆಚ್ಚಾದಾಗ ಬೆಳೆಗಳಿಗೆ ಕೀಟಗಳ ದಾಳಿ ಹೆಚ್ಚು. ಟೊಮೆಟೊ ಬೆಳೆಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಬೆಳೆ ತಿನ್ನಲು ಬರುವ ಕೀಟಗಳು ಬೆಳಕಿಗೆ ಸೆಳೆತಗೊಂಡು, ಈ ಸಾಧನದ ಬಳಿ ಬಂದು ಇದರಲ್ಲಿ ಅಳವಡಿಸಿರುವ ಬಲೆಗೆ ಬೀಳುತ್ತವೆ. ಬೆಳೆಗಳನ್ನು ಕೀಟ ಬಾಧೆಯಿಂದ ರಕ್ಷಿಸಲು ಈ ಸಾಧನ ಸಹಕಾರಿ’ ಎಂದು ಐಐಎಚ್‌ಆರ್‌ನ ಬೆಳೆ ಸಂರಕ್ಷಣಾ ವಿಭಾಗದ ಪ್ರಧಾನ ವಿಜ್ಞಾನಿ ವಿ.ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಸಾಧನ ಅಳವಡಿಸುವ ಜೊತೆಗೆ ಬೆಳೆಯ ಸುತ್ತಲೂ ಜೋಳ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದರೆ, ಅವು ರಕ್ಷಾಕವಚದಂತಿರುತ್ತವೆ. ಇದರಿಂದ ಕೀಟಗಳು ನೇರವಾಗಿ ದಾಳಿ ಮಾಡುವುದಿಲ್ಲ.ಹಗಲಿಗಿಂತ ರಾತ್ರಿ ವೇಳೆ ಕೀಟಗಳ ಕಾಟ ಹೆಚ್ಚು. ಈ ಸಾಧನ ಸಂಜೆಯಿಂದಲೇ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವಿದ್ಯುತ್ ಚಾಲಿತ ಫ್ಯಾನ್‌ ಒಂದನ್ನು ಅಳವಡಿಸಲಾಗಿರುತ್ತದೆ. ಸಾಧನದ ಬಳಿ ಸಮೀಪಿಸುವ ಕೀಟಗಳನ್ನು ಇದು ಬಲೆಗೆ ಬೀಳಿಸುವ ಕೆಲಸ ಮಾಡುತ್ತದೆ’ ಎಂದು ವಿವರಿಸಿದರು.

‘ಒಂದು ದಿನಕ್ಕೆ ಗರಿಷ್ಠ 400 ಕೀಟಗಳನ್ನು ಇದು ಸೆರೆಹಿಡಿಯಬಲ್ಲದು. ಒಂದು ಎಕರೆಗೆ ಗರಿಷ್ಠ ನಾಲ್ಕು ಸಾಧನಗಳನ್ನು ಅಳವಡಿಸಬಹುದು. ನಿಗದಿತ ಸಮಯಕ್ಕೆ ಕಾರ್ಯನಿರ್ವಹಿಸುವಂತೆ ಟೈಮರ್‌ ಅಳವಡಿಸಲಾಗಿದೆ. ಸದ್ಯ ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಸಾಧನಕ್ಕೆ ಸೌರಶಕ್ತಿಯ ಬಳಕೆಯ ಪ್ರಯೋಗಗಳು ನಡೆಯುತ್ತಿವೆ. ಈ ಒಂದು ಸಾಧನಕ್ಕೆ ₹5 ಸಾವಿರ ವೆಚ್ಚ ಬೀಳಲಿದೆ. ಒಂದು ಬಾರಿ ಬಂಡವಾಳ ಹೂಡಿದರೆ, ದೀರ್ಘಕಾಲ ಬಾಳಿಕೆ ಬರುವ ಸಾಧನ ಇದಾಗಿದೆ’ ಎಂದು ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು