ಶನಿವಾರ, ಜೂನ್ 6, 2020
27 °C
ಏನಿದು ನೇರ ಬೀಜ ನಾಟಿ ಪದ್ಧತಿ?

Explainer | ಕೊರೊನಾ ಪರಿಣಾಮ: ‘ಪುಣಜಿ’ಯತ್ತ ಭತ್ತದ ಕೃಷಿಕರು

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಕಡಿಮೆ ನೀರಿನಲ್ಲಿ ಭತ್ತದ ಕೃಷಿ ಮಾಡುವವರು, ಮಳೆಗಾಲದಲ್ಲಿ ಭತ್ತ ಬೆಳೆಯುವವರು, ನೀರಿನ ಅನಿಶ್ಚಿತತೆಯನ್ನು ಅಂದಾಜು ಮಾಡಿ ಭತ್ತ ಬೆಳೆಯುತ್ತಿದ್ದವರು ಅನುಸರಿಸುತ್ತಿದ್ದ ವಿಧಾನದ ಹೆಸರು ‘ಪುಣಜಿ’ ಪದ್ಧತಿ. ಪುಣಜಿ ಪದ್ಧತಿ ಎಂದರೆ ಭತ್ತದ ಬೀಜಗಳನ್ನು ಕೂರಿಗೆ ಮೂಲಕ ನೇರವಾಗಿ ಸಾಲು ಬಿತ್ತನೆ ಮಾಡುವುದು. ಇದಕ್ಕೆ ‘ನೇರ ಬೀಜ ಬಿತ್ತನೆ’ ಅಥವಾ Direct Seeding of Rice (DSR) ಎಂದು ಕರೆಯುತ್ತಾರೆ.

ಸದ್ಯ ದೇಶದಾದ್ಯಂತ ಭತ್ತದ ಬೀಜಗಳನ್ನು ಸಸಿ ಮಾಡಿ, ಕೆಸರುಗದ್ದೆಯಲ್ಲಿ ನಾಟಿ ಮಾಡುವ ವಿಧಾನ ಚಾಲ್ತಿಯಲ್ಲಿದೆ. ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲೆಲ್ಲ ಇದೇ  ಸಸಿ ನಾಟಿ ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚು ನೀರು ಬೇಕು. ಸಸಿ ನಾಟಿಗೆ ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ಇದನ್ನು ಮನಗಂಡಿರುವ ಪಂಜಾಬ್‌ ಮತ್ತು ಹರಿಯಾಣ ರಾಜ್ಯದ ಕೃಷಿ ತಜ್ಞರು, ವಿಜ್ಞಾನಿಗಳು ಇಲ್ಲಿನ ರೈತರಿಗೆ ನೇರ ಬೀಜ ನಾಟಿ ಪದ್ಧತಿಯನ್ನು (ಪುಣಜಿ) ಅನುಸರಿಸಲು ಶಿಫಾರಸು ಮಾಡುತ್ತಿದ್ದಾರೆ.

ಮುಂಗಾರಿನಲ್ಲಿ ಭತ್ತದ ಸಸಿ ನಾಟಿ ಮಾಡುವ ವೇಳೆಗೆ ಕಾರ್ಮಿಕರ ಕೊರತೆ ಕಾಣಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕಾರ್ಮಿಕರ ಅವಲಂಬನೆ ಕಡಿಮೆ ಮಾಡುವಂತಹ ಈ ಪದ್ಧತಿಯನ್ನು ಅನುಸರಿಸಲು ತಜ್ಞರು ಶಿಫಾರಸು ಮಾಡುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಭತ್ತದ ಸಸಿ ನಾಟಿ ಕಾರ್ಯಕ್ಕಾಗಿ ಉತ್ತರ ಪ್ರದೇಶ, ಬಿಹಾರ ರಾಜ್ಯದ 10 ಲಕ್ಷದಷ್ಟು ಕಾರ್ಮಿಕರು ಪ್ರತಿ ವರ್ಷ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಹಳ್ಳಿಗಳಿಗೆ ವಲಸೆ ಹೋಗುತ್ತಾರಂತೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ಲಕ್ಷಾಂತರ ಕಾರ್ಮಿಕರು ರೈಲು ಏರಿ ಪಂಜಾಬ್‌–ಹರಿಯಾಣದ ಭತ್ತ ಬೆಳೆಯುವ ಹಳ್ಳಿಗಳಿಗೆ ತಲುಪುತ್ತಾರೆ. ಆದರೆ, ಈ ಬಾರಿ ಕೊರೊನಾ ಲಾಕ್‌ಡೌನ್‌ ಕಾರಣದಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಈಗ ಅದು ಪುನರರಾರಂಭವಾಗುವ ಸಾಧ್ಯತೆಯೂ ಕಾಣಿಸುತ್ತಿಲ್ಲವಾದ್ದರಿಂದ ತಜ್ಞರು ಈ ವಿಧಾನ ಅನುಸರಿಸುವಂತೆ ರೈತರಿಗೆ ಸಲಹೆ ನೀಡಿದ್ದಾರೆ.

ಪುಣಜಿ ಪದ್ಧತಿ ಅನುಸರಿಸುವುದರಿಂದ ಕಾರ್ಮಿಕರ ಕೊರತೆಗೆ ಪರಿಹಾರ ಸಿಕ್ಕಂತಾಗುತ್ತದೆ, ಜತೆಗೆ ನೀರಿನ ಬಳಕೆ ಮೇಲೂ ಕಡಿವಾಣ ಹಾಕಬಹುದಾಗಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಕಾರ್ಮಿಕರ ಅನಿಶ್ಚತತೆ– ಭತ್ತದಿಂದ ಹತ್ತಿ, ಮೆಕ್ಕೆಜೋಳದತ್ತ ರೈತರು


ನಾಟಿಗೆಂದು ಭತ್ತದ ಸಸಿಗಳನ್ನು ಹೊತ್ತೊಯ್ಯುತ್ತಿರುವ ಯುವಕ

ಸಸಿ ನಾಟಿ – ಬೀಜ ಬಿತ್ತನೆ ವ್ಯತ್ಯಾಸವೇನು?

ಸಸಿ ನಾಟಿ ಪದ್ಧತಿಯಲ್ಲಿ ರೈತರು ಗದ್ದೆಯ ಒಂದು ಭಾಗದಲ್ಲಿ ಭತ್ತದ ಬೀಜಗಳನ್ನು ಸಸಿ ಮಡಿಯಲ್ಲಿ (ನರ್ಸರಿ) ಸಸಿಗಳನ್ನು ಬೆಳೆಸಬೇಕು. ಇದಕ್ಕೆ 25 ರಿಂದ 35 ದಿನಗಳು ಕಾಯಬೇಕು. ಸಸಿಗಳು ಬೆಳೆದ ನಂತರ ಕೆಸರುಗದ್ದೆಯಲ್ಲಿ ನಾಟಿ ಮಾಡಬೇಕು. ಇದಕ್ಕೆ ಹೆಚ್ಚು ಬೀಜ ಬೇಕಾಗುತ್ತದೆ. ಹೆಚ್ಚು ನೀರು ಖರ್ಚಾಗುತ್ತದೆ. ಕಾರ್ಮಿಕರು ಹೆಚ್ಚಾಗಿ ಬೇಕಾಗುತ್ತದೆ.

ಆದರೆ, ನೇರ ಬೀಜ ನಾಟಿ ಪದ್ಧತಿಯಲ್ಲಿ ಈ ಸಸಿ ಬೆಳೆಸುವ ಶ್ರಮವಿರುವುದಿಲ್ಲ. ಸಸಿ ಬದಲಿಗೆ ಕೂರಿಗೆಯಲ್ಲಿ ನೇರವಾಗಿ ಬೀಜಗಳನ್ನು ಸಾಲು ಬಿತ್ತನೆ ಮಾಡಬೇಕು. ಸದ್ಯ ಪಂಜಾಬ್‌–ಹರಿಯಾಣದಲ್ಲಿ ಈ ವಿಧಾನ ಅನುಸರಿಸಲು ಲೂಧಿಯಾನದಲ್ಲಿರುವ ಪಂಜಾಬ್‌ ಕೃಷಿ ವಿಶ್ವವಿದ್ಯಾಲಯು ‘ಲಕ್ಕಿ ಸೀಡ್ ಡ್ರಿಲ್‌’ ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಿದೆ.

ಇದು ಬೀಜವನ್ನು ನಾಟಿ ಮಾಡುವುದರ ಜತೆ ಜತೆಗೆ ಕಳೆನಾಶಕವನ್ನು ಮಣ್ಣಿಗೆ ಸೇರಿಸುತ್ತದೆ. ಇದರಿಂದ ಬೀಜ ನಾಟಿಯಾದಂತಾಗುತ್ತದೆ. ಬೀಜ ಮೊಳೆಯುವ ಪೂರ್ವದಲ್ಲೇ ಕಳೆ ಕೂಡ ನಿಯಂತ್ರಣವಾಗುತ್ತದೆ ಎಂಬುದು ವಿವಿಯ ತಜ್ಞರ ಅಭಿಪ್ರಾಯ. ಇದು ಈ ಮೊದಲು ವಿವಿ ಆವಿಷ್ಕರಿಸಿದ್ದ ‘ಹ್ಯಾಪಿ ಸೀಡರ್’ ಯಂತ್ರಕ್ಕಿಂತ ವಿಭಿನ್ನವಾಗಿದೆ. ಹ್ಯಾಪಿ ಸೀಡರ್ ಯಂತ್ರವನ್ನು ಭತ್ತದ ಗದ್ದೆಯಲ್ಲಿ ಭತ್ತವನ್ನು ಕೊಯ್ಲು ಮಾಡಿದ ನಂತರ ಗೋಧಿ ನಾಟಿ ಮಾಡಲು ಬಳಸುತ್ತಿದ್ದರು. ಈ ಯಂತ್ರ, ಕೊಯ್ಲಾಗಿ ನೆಲದಲ್ಲಿ ಉಳಿದಿದ್ದ ಭತ್ತದ ಕೂಳೆಯನ್ನು ತೆಗೆಯುವ ಜತೆಗೆ, ಗೋಧಿಯ ಬೀಜವನ್ನು ಭೂಮಿಗೆ ನಾಟಿ ಮಾಡುತ್ತಿತ್ತು.

ನೀರಿನ ಲೆಕ್ಕಾಚಾರ

ಸಸಿ ನಾಟಿ ಪದ್ಧತಿಯಲ್ಲಿ ರೈತರು ಕೆಸರು ಗದ್ದೆಯಲ್ಲಿ, ನಿಂತ ನೀರಿನಲ್ಲಿ ಭತ್ತದ ಸಸಿಗಳನ್ನು ಟ್ರ್ಯಾಕ್ಟರ್‌ನಿಂದ ನಾಟಿ ಮಾಡುತ್ತಾರೆ. ನಾಟಿ ಮಾಡಿದ ಮೊದಲ ಮೂರುವಾರಗಳವರೆಗೂ ಪ್ರತಿ ದಿನ ಗದ್ದೆಗೆ ನೀರು ಹಾಯಿಸುತ್ತಾರೆ (ಮಳೆ ಬಾರದಿದ್ದರೆ). ಇದರಿಂದ ಮಣ್ಣಿನಲ್ಲಿ ನಾಲ್ಕರಿಂದ ಐದು ಸೆಂ.ಮೀ ಆಳದವರೆಗೆ ತೇವಾಂಶ ಉಳಿದುಕೊಳ್ಳುತ್ತದೆ. ಮುಂದೆ ಪ್ರತಿ ಎರಡು ಮೂರು ದಿನಗಳವರೆಗೆ ಗದ್ದೆಗೆ ನೀರು ಹಾಯಿಸುತ್ತಿರುತ್ತಾರೆ. ಇದು ಸಸಿ ಬೆಳೆದು ದೊಡ್ಡದಾಗುವವರೆಗೂ ನಾಲ್ಕೈದು ವಾರಗಳ ಕಾಲ ಈ ನೀರು ಹಾಯಿಸುವುದು ಮುಂದುವರಿದಿರುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗದ್ದೆಯಲ್ಲಿ ನೀರು ನಿಲ್ಲಿಸುವುದರಿಂದ, ಕಳೆ ಬೆಳೆಯುವುದಿಲ್ಲ (ನೀರು ನಿಲ್ಲುವುದರಿಂದ ಆಮ್ಲಜನಕ, ಬಿಸಿಲು ಸಿಗದ ಕಾರಣ ಕಳೆಗಳು ಬೆಳೆಯುವುದಿಲ್ಲ). ಈ ವಿಧಾನದಲ್ಲಿ ನೀರು ನಿಲ್ಲಿಸುವ ಪ್ರಕ್ರಿಯೆಯೇ ‘ಕಳೆನಾಶಕ’ದ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರಿಂದ ಭತ್ತದ ಬೆಳವಣಿಗೆಗೆ ಕಳೆಯ ಕಿರಿಕಿರಿ ಇರುವುದಿಲ್ಲ.

ಡಿಎಸ್‌ಆರ್ (ನೇರ ಬೀಜ ನಾಟಿ ಪದ್ಧತಿ) ಪದ್ಧತಿಯಲ್ಲಿ ನೀರು ನಿಲ್ಲಿಸುವ ಬದಲಿಗೆ ಕಳೆನಾಶಕಗಳನ್ನು ಸಿಂಪಡಿಸಲಾಗುತ್ತದೆ. ಬೀಜ ಬಿತ್ತನೆಗೆ ಮುನ್ನ ರೈತರು ಭೂಮಿ ಉಳುಮೆ ಮಾಡಿ, ನೀರು ಹಾಯಿಸಿ ಮಣ್ಣನ್ನು ಹದ ಮಾಡುತ್ತಾರೆ. ಒಮ್ಮೆ ಮಣ್ಣಿನಲ್ಲಿ ತೇವಾಂಶ ಉತ್ತಮವಾಗಿದ್ದರೆ, ಕೂರಿಗೆಯಲ್ಲಿ ಬೀಜ ನಾಟಿ ಮಾಡುತ್ತಲೇ, ಮಣ್ಣಿಗೆ ಕಳೆನಾಶಕವನ್ನು ಪೂರೈಸುತ್ತಾರೆ. ಈ ಕಳೆನಾಶಕದಲ್ಲಿ ಸಸಿ ಬೆಳೆಯುವ ಪೂರ್ವದಲ್ಲೇ ಮಣ್ಣಿಗೆ ಕೊಡುವಂತಹವು ಇವೆ. ಸಸಿ ಬೆಳೆದ ಮೇಲೆಯೂ ಸಿಂಪಡಿಸುವಂತಹವೂ ಇವೆ. ಎರಡೂ ವಿಧಾನ ಚಾಲ್ತಿಯಲ್ಲಿದೆ.

ಇದನ್ನೂ ಓದಿ: Explainer | ರೈತರ ಪಾಲಿಗೆ ‘ನೆರವಿನ ವೆಂಟಿಲೇಟರ್‌’ ಆಯ್ತು ಹರಿಯಾಣ ಮಾದರಿ


ಭತ್ತದ ಸಸಿಗಳ ನಾಟಿ

ನೇರ ಬೀಜ ನಾಟಿ ಪದ್ಧತಿಯ (ಡಿಎಸ್‌ಆರ್) ಉಪಯೋಗವೇನು?

ಮೊದಲೇ ಹೇಳಿದಂತೆ ಹೆಚ್ಚು ನೀರು ಬೇಡದ ಪದ್ಧತಿ ಇದು. ಇದರಿಂದ ನೀರು ಉಳಿತಾಯವಾಗುತ್ತದೆ. ಪಂಜಾಬ್‌ ಕೃಷಿ ವಿವಿ ಪ್ರಕಾರ, ‘ಬಿತ್ತನೆಗೆ ಮುನ್ನ ಒಮ್ಮೆ ಭೂಮಿ ಉಳುಮೆ ಮಾಡಿ ನೀರು ಹಾಯಿಸಿ, ತೇವ ಮಾಡಿ ಬೀಜ ನಾಟಿ ಮಾಡಿದ ಮೇಲೆ, 21 ದಿನಗಳವರೆಗೂ ನೀರು ಕೊಡುವ ಅಗತ್ಯವಿರುವುದಿಲ್ಲ. ಅದರಲ್ಲೂ ಸಕಾಲಕ್ಕೆ ಮಳೆ ಸುರಿದರೆ ನೀರು ಪೂರೈಸುವ ಅಗತ್ಯವೇ ಬೀಳುವುದಿಲ್ಲ. ಆದರೆ, ಸಸಿ ನಾಟಿ ಪದ್ಧತಿಯಲ್ಲಿ ಇದು ಸಾಧ್ಯವಿಲ್ಲ.

ಇನ್ನು ಕಾರ್ಮಿಕರ ಲೆಕ್ಕಾಚಾರ; ಒಂದು ಎಕರೆಯಲ್ಲಿ ಭತ್ತ ನಾಟಿ ಮಾಡಲು ಒಂದು ದಿನಕ್ಕೆ ಮೂವರು ಕಾರ್ಮಿಕರ ಅಗತ್ಯವಿದೆ. ಅಲ್ಲಿನ ರೈತರೊಬ್ಬರು ಹೇಳುವಂತೆ, ‘ಕಳೆದ ವರ್ಷ ಒಂದು ಎಕರೆ ಭತ್ತ ನಾಟಿಗೆ ಕೂಲಿವೆಚ್ಚ ₹2500 ಖರ್ಚು ಮಾಡಿದ್ದರಂತೆ. ಈ ಬಾರಿ ಇದು ಡಬಲ್ ಆಗಬಹುದು. ಹಾಗೆ ಲೇಬರ್ ಸಿಗುವುದು ಕಷ್ಟ’ ಎನ್ನುತ್ತಾರೆ. ಇದಕ್ಕೆ ಹೋಲಿಸಿದರೆ, ನೇರ ಬೀಜ ನಾಟಿ ಪದ್ಧತಿಯಲ್ಲಿ ಕೂಲಿವೆಚ್ಚ ದಿನಕ್ಕೆ ₹2 ಸಾವಿರಕ್ಕಿಂತ ಹೆಚ್ಚಾಗುವುದಿಲ್ಲ’ ಎನ್ನುತ್ತಾರೆ.

ನೇರ ಬೀಜ ನಾಟಿ ಪದ್ಧತಿಯಿಂದ ತೊಂದರೆಗಳಿವೆಯೇ?

ಸಸಿ ನಾಟಿ ಪದ್ಧತಿಗೆ ಹೋಲಿಸಿದರೆ  ನೇರ ಬೀಜ ನಾಟಿ ಪದ್ಧತಿಯ ಪದ್ಧತಿಯಲ್ಲಿ ಹೆಚ್ಚು ಕಳೆನಾಶಕ ಮತ್ತು ಬಿತ್ತನೆ ಬೀಜಗಳು ಬೇಕಾಗುತ್ತವೆ. ಸಸಿ ನಾಟಿ ಪದ್ಧತಿಯಲ್ಲಿ ಒಂದು ಎಕರೆಗೆ 4 ರಿಂದ 5 ಕೆ.ಜಿ ಬೀಜ ಸಾಕು. ನೀರು ನಿಲ್ಲಿಸಿ ಸಸಿ ಬೆಳೆಸುವುದರಿಂದ ಕಳೆನಾಶಕ ಬಳಕೆ ಕಡಿಮೆ. ಆದರೆ ಡಿಎಸ್‌ಆರ್ ಪದ್ಧತಿಯಲ್ಲಿ ಬಿತ್ತನೆಗೆ 8 ರಿಂದ 10 ಕೆ.ಜಿ ಬೇಕು. ನೀರಿನ ಬದಲಿಗೆ ಕಳೆನಾಶಕವನ್ನು ಹೆಚ್ಚಿಗೆ ಬಳಸಬೇಕಾಗುತ್ತದೆ. ಹೀಗಾಗಿ ಏಕಕಾಲಕ್ಕೆ ಎಲ್ಲರೂ ಡಿಎಸ್‌ಆರ್ ಪದ್ಧತಿ ಅನುಸರಿಸಲು ಮುಂದಾದರೆ, ಕಳೆನಾಶಕ ಮತ್ತು ಬಿತ್ತನೆ ಬೀಜದ ಕೊರತೆ ಎದುರಾಗಬಹುದು. ಇದನ್ನೂ ಪೂರೈಸಲು ಸಾಧ್ಯವೇ ಎಂಬುದು ಆ ರಾಜ್ಯ ಸರ್ಕಾರದ ಎದುರಿಗಿರುವ ಪ್ರಶ್ನೆ.

ಇಷ್ಟಾದರೂ ಪಂಜಾಬ್‌ನ ಕೆಲವು ರೈತರು ಕಾರ್ಮಿಕರ ಕೊರತೆಯನ್ನು ಎದುರಿಸುವುದಕ್ಕಾಗಿಯೇ ನೇರ ಬೀಜ ನಾಟಿ ಪದ್ಧತಿಯ‌ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ. ಸಕಾಲಕ್ಕೆ ಕಾರ್ಮಿಕರು ಸಿಗದಿದ್ದರೆ ಸಸಿ ನಾಟಿಗೆ ಕಷ್ಟವಾಗುತ್ತದೆ. ಆಗ ವರ್ಷದ ಬೆಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಈಗ ಕಾರ್ಮಿಕರ ಸಮಸ್ಯೆ ಎದುರಾಗಿರುವುದರಿಂದ ಈ ವರ್ಷ 2 ಲಕ್ಷ ದಿಂದ 2.5 ಲಕ್ಷ ಹೆಕ್ಟೇರ್‌ನಷ್ಟು (ಪಂಜಾಬ್‌ನ ಒಟ್ಟು ಕೃಷಿ ವಿಸ್ತೀರ್ಣದ ಶೇ 10ರಷ್ಟು) ವಿಸ್ತೀರ್ಣದಲ್ಲಿ ನೇರ ಬೀಜ ನಾಟಿ ಪದ್ಧತಿಯ ಪದ್ಧತಿಯಲ್ಲಿ ಕೃಷಿಕರು ಭತ್ತ ಬೆಳೆಯಬಹುದು ಎಂದು ಪಂಜಾಬ್‌ ಕೃಷಿ ಇಲಾಖೆ ನಿರೀಕ್ಷಿಸಿದೆ. ಒಟ್ಟಾರೆ ಕೊರೊನಾ ಲಾಕ್‌ಡೌನ್‌ ಸಮಸ್ಯೆ, ಅನೇಕ ಕೃಷಿ ಪದ್ಧತಿಗಳನ್ನು ಮರಳಿ ಅನುಸರಿಸುವಂತಹ ಅನಿವಾರ್ಯಗಳನ್ನು ಸೃಷ್ಟಿಸುತ್ತಿದೆ.

ಇದನ್ನೂ ಓದಿ: ಲಾಕ್‌ಡೌನ್‌ಗೆ ನಲುಗಿದ ಗ್ರಾಮೀಣ ಭಾರತ


ಭತ್ತದ ಗದ್ದೆ ಉಳುಮೆ

ಕರ್ನಾಟಕದಲ್ಲಿ ನೇರ ಬೀಜ ನಾಟಿ ಪದ್ಧತಿಯ‌ ಬಳಕೆ ಇದೆಯೇ?

ಕರ್ನಾಟಕದಲ್ಲಿ ಬಹಳ ಹಿಂದೆ ಕೂರಿಗೆ ಭತ್ತದ ಬಿತ್ತನೆಯೇ ಹೆಚ್ಚು ಪ್ರಧಾನವಾಗಿತ್ತು. ಈಗಲೂ ಮಳೆ ಆಧಾರಿತವಾಗಿ ಭತ್ತ ಬೆಳೆಯುವವರು ಕೂರಿಗೆಯಲ್ಲಿ ನೇರ ಬಿತ್ತನೆ ಮಾಡಿ ಬೆಳೆಯುತ್ತಾರೆ.

‘ನೀರು ಕಡಿಮೆ, ಮಳೆಯ ಅನಿಶ್ಚಿತತೆ ಇರುವವರು ಸಾಮಾನ್ಯವಾಗಿ ಈ ಕೂರಿಗೆ ಬಿತ್ತನೆ ವಿಧಾನದಲ್ಲಿ ಭತ್ತ ಬೆಳೆಯುತ್ತಾರೆ. ಬಳ್ಳಾರಿಯ ಕೂಡ್ಲಿಗಿ, ಸಂಡೂರು ಭಾಗದಲ್ಲಿ ಈ ಕೂರಿಗೆ ಭತ್ತ ಬಿತ್ತನೆ ಪದ್ಧತಿ ಚಾಲ್ತಿಯಲ್ಲಿದೆ. ಕಳೆದ ವರ್ಷ ಈ ವಿಧಾನ ಅನುಸರಿಸಿದ್ದನ್ನು ನೋಡಿದ್ದೇನೆ. ಮಳೆ ಕೈ ಕೊಡ್ತು ಎಂಬ ಸಂದರ್ಭದಲ್ಲಿ ತುರ್ತು ನೀರಾವರಿ (ಕ್ರಿಟಿಕಲ್ ಇರಿಗೇಷನ್) ವ್ಯವಸ್ಥೆ ಮಾಡುತ್ತಾರೆ’ ಎನ್ನುತ್ತಾರೆ ಕೃಷಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ.

ಈ ವಿಧಾನದಲ್ಲಿ ಭತ್ತ ಬಿತ್ತನೆ ಮಾಡುವವರು ಸಾಲು ಬಿತ್ತನೆ ಮಾಡುತ್ತಿದ್ದರು. ಇಲ್ಲಿ, ಕುಂಟೆ ಹೊಡೆದು ಕಳೆ ತೆಗೆಯುತ್ತಾರೆ. ಕೈಯಿಂದಲೂ ಕಳೆ ಕೀಳುತ್ತಾರೆ. ನಮ್ಮ ರಾಜ್ಯದಲ್ಲಿ ಕೂರಿಗೆ ಬಿತ್ತನೆಯಲ್ಲಿ ಭತ್ತ ಬೆಳೆಯುವವರಲ್ಲಿ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರುತ್ತಾರೆ.

ಹಾವೇರಿ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ನೇರ ಬೀಜ ನಾಟಿ ಪದ್ಧತಿಯ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರು, ಅದೇ ತಾಕಿನಲ್ಲಿ ಮಿಶ್ರಬೆಳೆಯಾಗಿ ಮುಸುಕಿನ ಜೋಳ, ಕೆಲವು ತರಕಾರಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದರು. ಇದರಿಂದ ಕೀಟ, ರೋಗ ನಿಯಂತ್ರಣವಾಗುತ್ತಿತ್ತು. ಕಳೆ ನಿಯಂತ್ರಣವಾಗುತ್ತಿತ್ತು. ಇದರಿಂದ ಭತ್ತದ ಇಳುವರಿ ಮೇಲೆ ಅಂಥ ಪರಿಣಾಮವಾಗುತ್ತಿರಲಿಲ್ಲ. ಬದಲಿಗೆ, ಭತ್ತದ ಜತೆಗೆ, ಹೆಚ್ಚುವರಿ ಬೆಳೆ/ಕೃಷಿ ಉತ್ಪನ್ನಗಳು ಸಿಗುತ್ತಿದ್ದವು. ‘ಹಣಕಾಸಿನ ವಿಚಾರದಲ್ಲಿ ಲೆಕ್ಕ ಹಾಕಿದರೆ, ಈ ಪದ್ಧತಿಯಿಂದ ಆದಾಯ ಕಡಿಮೆ ಎನಿಸಿದರೂ, ಒಟ್ಟಾರೆ ಆಹಾರ ಉತ್ಪಾದನೆಯ ಲೆಕ್ಕಾಚಾರದಲ್ಲಿ ನಷ್ಟವಾಗುತ್ತಲೇ ಇರಲಿಲ್ಲ‘ ಎನ್ನುವುದು ಮಲ್ಲಿಕಾರ್ಜುನ ಅಭಿಪ್ರಾಯ.

ನೇರ ಬೀಜ ನಾಟಿ ಪದ್ಧತಿ‌– ಶ್ರೀಪದ್ಧತಿ ವ್ಯತ್ಯಾಸವೇನು?

ಕೂರಿಗೆ ಭತ್ತ ಬಿತ್ತನೆ ಪದ್ಧತಿ ಮತ್ತು ‘ಶ್ರೀ‘ ಪದ್ಧತಿ (SRI - System of Rice Intensification)ಯಲ್ಲಿ ವ್ಯತ್ಯಾಸಗಳಿವೆ. ‘‍ಶ್ರೀ‘ ಪದ್ಧತಿಯಲ್ಲಿ ಬಿತ್ತನೆ ಬೀಜಗಳ ಬಳಕೆಯೂ ಕಡಿಮೆ. ಸಸಿಗಳ ನಡುವೆ ಅಂತರ ಹೆಚ್ಚಿರುತ್ತದೆ. ಜತೆಗೆ, ನೀರು ಹಾಯಿಸುವುದು ಕಡಿಮೆ. ಆದರೆ ನೇರ ಬೀಜ ನಾಟಿ ಪದ್ಧತಿಯಲ್ಲಿ ಬಿತ್ತನೆ ಬೀಜ ಹೆಚ್ಚಿಗೆ ಬೇಕಾಗುತ್ತದೆ. ಇಲ್ಲಿ ಸಸಿಗಳ ನಡುವಿನ ಅಂತರ ಹತ್ತಿರವಾಗಿರುತ್ತದೆ. ಕೆಲವೊಮ್ಮೆ ಬಿತ್ತನೆ ಮಾಡಿದಾಗ, ಬೀಜಗಳು ಮೊಳೆಯದಿರುವ ಸಾಧ್ಯತೆಯೂ ಇರುತ್ತದೆ.

(ಮಾಹಿತಿ: ವಿವಿಧ ಮೂಲಗಳಿಂದ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು