ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಷಿಪ್ತ ಪಾಪ್ ಕಲಾವಿದ ‘ಡ್ಯಾಡಿ ಕೂಲ್‌‘ ಬಾಬಿ ಫ್ಯಾರೆಲ್ ನೆನಪು

ಗತಕಾಲದ ಡ್ಯಾನ್ಸಿಂಗ್ ಸೆನ್ಸೇಶನ್
Last Updated 30 ಡಿಸೆಂಬರ್ 2020, 9:20 IST
ಅಕ್ಷರ ಗಾತ್ರ

80-90ರ ದಶಕದಲ್ಲಿ ಇಂಗ್ಲಿಷಿನ ಡಿಸ್ಕೊ-ಪಾಪ್ ಸಂಗೀತ ಕ್ಷೇತ್ರದಲ್ಲಿ ‘ಬೋನಿ-ಎಮ್’ ಮ್ಯೂಸಿಕಲ್ ಗ್ರೂಪ್ ಬಹು ಖ್ಯಾತಿ ಪಡೆದ ಸಂಗೀತ ತಂಡ. ಈ ಸಂಗೀತ ತಂಡವನ್ನು ಮುನ್ನಡೆಸಿದವರು ಖ್ಯಾತ ಡಾನ್ಸರ್ ಬಾಬಿ ಫ್ಯಾರೆಲ್. ವಿಶಿಷ್ಟ ಗಾಯನ, ವಿಚಿತ್ರ ನೃತ್ಯದ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದಿದ್ದ ಫ್ಯಾರೆಲ್ ನಿಧನರಾಗಿ ಇಂದಿಗೆ 10 ವರ್ಷ. ಈ ಬಗ್ಗೆ ಪರಿಚಯ ಲೇಖನಡಾ.ಗಣೇಶ ಹೆಗಡೆ ನೀಲೆಸರ ಅವರಿಂದ.

––

ಬೋನಿ-ಎಮ್, 1975ರಲ್ಲಿ ಜರ್ಮನಿಯ ಫ್ರಾಂಕ್ ಫಾರಿಯನ್ ಎಂಬ ಸಂಗೀತಗಾರ ಕಟ್ಟಿದ ಡಿಸ್ಕೊ ತಂಡದ ಹೆಸರು. ಈ ನೃತ್ಯ ತಂಡ 1976ರಲ್ಲಿ ಬಿಡುಗಡೆ ಮಾಡಿದ ‘ಡ್ಯಾಡಿ ಕೂಲ್’ ಹಾಡು ಬಹಳ ಹಿಟ್ ಆಯಿತು. ಮುಂದೆ ಹತ್ತು ವರ್ಷಗಳಲ್ಲಿ ಬೋನಿ ಎಮ್ ತಂಡ ಒಂದಾದನಂತರ ಒಂದು ಹಿಟ್ ಹಾಡುಗಳನ್ನು ನೀಡುತ್ತಾ ಬಂದಿತು. ಮುಂದೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಡಿಸ್ಕೊ ತಂಡಗಳಲ್ಲಿ ಇದೂ ಒಂದು ಎನ್ನುವಷ್ಟು ಖ್ಯಾತಿ ಪಡೆಯಿತು.

ಮಾಲಿಕ ಫ್ರಾಂಕ್ ಫಾರಿಯನ್ ಈ ಎಲ್ಲ ಹಾಡುಗಳ ಹಿಂದಿನ ಶಕ್ತಿಯಾಗಿದ್ದರೆ ಸ್ಟೇಜಿನ ಮುಂದೆ ಪಡೆದ ಯಶಸ್ಸಿಗೆ ಇನ್ನೂ ಒಂದು ಬಹುಮುಖ್ಯ ಕಾರಣಕರ್ತನಾಗಿದ್ದವರು ತನ್ನ ವಿಲಕ್ಷಣ ಗೆಟಪ್ ಮತ್ತು ನೃತ್ಯದಿಂದಾಗಿ ಹೆಸರಾದ ಬಾಬಿ ಫ್ಯಾರೆಲ್. ಇವರ ಪೂರ್ಣ ಹೆಸರು ರಾಬರ್ಟೊ ಆಲ್ಫಾನ್ಸೊ ಫ್ಯಾರೆಲ್. ಇವರಿಗೆ ಸಾಥ್ ನೀಡಿದವರು ಕಪ್ಪುವರ್ಣೀಯರಾದ ಮೂವರು ಮಹಿಳಾ ಕಲಾವಿದರು ಮತ್ತು ಒಬ್ಬ ನರ್ತಕ.

ಮನಮೋಹಕ ಮತ್ತು ಆತ್ಮೀಯವೆನ್ನಿಸುವ ಈ ತಂಡದ ಹಾಡುಗಾರರು, ಜೀವಂತಿಕೆಯುಳ್ಳ ಹಾಡುಗಳು, ಅದಕ್ಕೊಪ್ಪುವ ಇಂಪಾದ ಸಂಗೀತ, ಕೇಳುತ್ತಿದ್ದಂತೆಯೇ ನರ್ತಿಸಲು ಪ್ರೇರೇಪಿಸುವ ಬೀಟ್ಸ್‌ನಿಂದಾಗಿ ಇಂದಿಗೂ ಈ ಹಾಡುಗಳು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಈ ಸಂಗೀತ ರೆಗ್ಗೇ, ಫಂಕ್, ರಾಕ್, ಗಾಸ್ಪೆಲ್, ಪಾಪ್ ಮತ್ತು ಡಿಸ್ಕೊಗಳ ಒಟ್ಟಾರೆ ಮಿಶ್ರಣ. ಈ ಮಾದರಿಯ ಸಂಗೀತಪ್ರಿಯರಿಗೆ ರಸದೌತಣ.

ಆಗಿನ ಆಡಿಯೊ ಮತ್ತು ವಿಡಿಯೊ ಕ್ಯಾಸೆಟ್ ಯುಗದಲ್ಲಿ ಹದಿನೈದು ಕೋಟಿಗೂ ಮಿಕ್ಕಿ ’ಬೋನಿ-ಎಮ್’ ರೆಕಾರ್ಡಿಂಗ್‌ಗಳು ಮಾರಾಟವಾಗಿದ್ದವು. ಹಿಟ್ ಹಾಡುಗಳೆಂದರೆ ಡ್ಯಾಡಿ ಕೂಲ್, ರಾರಾ ರಾಸ್ಪುಟಿನ್, ರಿವರ್ಸ್ ಆಫ್‌ ಬ್ಯಾಬಿಲಾನ್, ಬ್ರೌನ್ ಗರ್ಲ್ ಇನ್ ದ ರಿಂಗ್, ಮಾ ಬೇಕರ್, ಸನ್ನಿ, ಹರ‍್ರೇ ಹರ‍್ರೇ ಇತ್ಯಾದಿ. ಈ ಜನಪ್ರಿಯತೆ ಮತ್ತು ಯಶಸ್ಸಿನ ಹಿಂದೆ ಬಾಬಿ ಫ್ಯಾರೆಲ್ ಪರಿಶ್ರಮವಿದೆ.

ಬಾಬಿ ಫ್ಯಾರೆಲ್‌ ತನ್ನ 27ನೇ ವಯಸ್ಸಿನಲ್ಲಿ ಅಂದರೆ 1976ರಲ್ಲಿ ನೃತ್ಯ ಬದುಕು ಆರಂಭಿಸಿದರು. 2010ನೇ ಇಸವಿಯಲ್ಲಿ ಸಾಯುವ ದಿನದವರೆಗೂ ಬೋನಿ-ಎಮ್ ತಂಡದ ಬಹುತೇಕ ಎಲ್ಲಾ ಡಿಸ್ಕೊ ಹಿಟ್ ಹಾಡುಗಳ ಅಫಿಷಿಯಲ್ ವಿಡಿಯೊ ಮತ್ತು ಲೈವ್ ಷೋಗಳಲ್ಲಿ ನೋಡುಗರಿಗೆ ಭರಪೂರ ಮನರಂಜನೆ ನೀಡಿದ್ದಾರೆ.

‌ಡಾನ್ಸಿಂಗ್ ಸೆನ್ಸೇಶನ್

ಬಾಬಿಯ ವಿಶಿಷ್ಟ ನರ್ತನಾ ಶೈಲಿ ಈ ಹಾಡುಗಳ ಜನಪ್ರಿಯತೆಗೆ ಬಹುದೊಡ್ಡ ಕೊಡುಗೆ ನೀಡಿದ್ದಂತೂ ಸುಳ್ಳಲ್ಲ. ಜಗಮಗಿಸುವ ಬಣ್ಣಬಣ್ಣದ ಬಟ್ಟೆ ಧರಿಸಿಕೊಂಡು ಅಥವಾ ಮೈಮೇಲಿನ ಶರ್ಟ್ ತೆಗೆದು ರೋಮಭರಿತ ನಗ್ನ ಎದೆ ತೋರಿಸುತ್ತ ಹಿನ್ನೆಲೆ ಗಾಯನಕ್ಕೆ ತುಟಿಚಲನೆ(ಲಿಪ್ ಸಿಂಕ್) ಮಾಡುತ್ತಲೋ ಅಥವಾ ತಾನೇ ಹಾಡುತ್ತಲೋ ಸ್ಟೇಜಿನ ಮೇಲೆ ಚಿತ್ರವಿಚಿತ್ರ ಶೈಲಿಯಲ್ಲಿ ಕೈಕಾಲು ಆಡಿಸುತ್ತ ಎಡೆಬಿಡದೇ ಮಾಡುತ್ತಿದ್ದ ನರ್ತನ ಫ್ಯಾರೆಲ್‌ನ ಟ್ರೇಡ್ ಮಾರ್ಕ್. ಮಧ್ಯಮ ಎತ್ತರ, ಬಡಕಲು ದೇಹ, ದೊಡ್ಡದಾಗಿ ಬೆಳೆಸಿದ ಗುಂಗುರು ಕೂದಲಿನ ಲುಕ್. ಸ್ಟೇಜ್ ಷೋಗಳಲ್ಲಿ ಇತರ ಮೂವರು ಹಾಡುಗಾರ್ತಿಯರು ಹಾಡುವುದೇ ಒಂದು ತೂಕವಾದರೆ ಕೈಯಲ್ಲಿ ಉದ್ದನೆಯ ವೈರ್ ಹೊಂದಿದ ಮೈಕ್ ಹಿಡಿದು (ಆಗ ವೈರ್‌ಲೆಸ್ ಮೈಕ್ ಇರಲಿಲ್ಲ) ಬೆವರು ಸುರಿಸುತ್ತ ಇಡೀ ಸ್ಟೇಜ್ ತುಂಬ ಡಾನ್ಸ್ ಮಾಡುವ ಬಾಬಿಯದ್ದೇ ಇನ್ನೊಂದು ತೂಕ. ಇದು ಹಲವರಿಗೆ ಹಾಸ್ಯಮಯವಾಗಿಯೂ ಇನ್ನು ಕೆಲವರಿಗೆ ಹಾಸ್ಯಾಸ್ಪದವಾಗಿಯೂ ತೋರುತ್ತಿತ್ತು. ಅದೇನಿದ್ದರೂ ನೋಡುಗರಿಗೆ ಭರಪೂರ ಮನರಂಜನೆ ದೊರೆಯುತ್ತಿದ್ದುದಂತೂ ನಿಜ.

ಪುಟ್ಟ ದ್ವೀಪದ ಹುಡುಗ

ಫ್ಯಾರೆಲ್‌ನ ಹುಟ್ಟೂರು ದಕ್ಷಿಣ ಅಮೆರಿಕಾದ ವೆನಿಜುವೆಲಾ ದೇಶದ ತೀರಕ್ಕೆ ಹತ್ತಿರದ ಪುಟ್ಟ ದ್ವೀಪ ಅರುಬಾ. ಇದು ನೆದರ್‌ಲ್ಯಾಂಡ್ ದೇಶದ ಅಧೀನದಲ್ಲಿದೆ. ಈತ ನಾವಿಕನಾಗಿ ಕೆಲಸ ಮಾಡಲು ತನ್ನ 15ನೇ ವಯಸ್ಸಿಗೆ ಹುಟ್ಟೂರು ತೊರೆದ. ನಂತರ ಡಿಸ್ಕೊ ಜಾಕಿಯಾಗಲು ನಾರ್ವೆಗೆ, ಆಮೇಲೆ ಜರ್ಮನಿಗೆ ಹೋದ. ಅಲ್ಲಿ ಸಂಗೀತಗಾರ ಫ್ರಾಂಕ್ ಫಾರಿಯನ್ ಹೊಸದಾಗಿ ಕಟ್ಟಿದ ಡಿಸ್ಕೊ ತಂಡದ ಸದಸ್ಯನಾಗಿ ಸೇರಿಕೊಂಡ. ಅಲ್ಲಿಂದ ಬಾಬಿಯ ಅದೃಷ್ಟ ಖುಲಾಯಿಸಿತು. ’ಬೋನಿ-ಎಮ್’ ಜಗತ್ತಿನಾದ್ಯಂತ ಟಾಪ್ ಚಾರ್ಟ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿತು.

ಚಿಕ್ಕವಯಸ್ಸಿನಲ್ಲಿಯೇ ಇಷ್ಟು ಜನಪ್ರಿಯನಾದರೂ ಬಾಬಿಯ ವೈಯಕ್ತಿಕ ಜೀವನ ತೀರಾ ಸುಖಕರವಾಗೇನೂ ಇರಲಿಲ್ಲ. ಫಾರಿಯನ್‌ನೊಂದಿಗಿನ ಹಣಕಾಸಿನ ತಗಾದೆಯಿಂದಾಗಿ 1982ರಲ್ಲಿ ತಂಡದಿಂದ ಹೊರನಡೆದರೂ ಎರಡೇ ವರ್ಷದಲ್ಲಿ ವಾಪಸಾದರು. ಆದರೆ ಇದು ಮುಂದುವರಿದಿದ್ದು ಎರಡೇ ವರ್ಷ. 1986ರಲ್ಲಿ ಬೋನಿ-ಎಮ್ ತಂಡವೇ ವಿಸರ್ಜನೆಗೊಂಡಿತು. ಅದಾಗಲೇ ಫಾರಿಯನ್ ಈತನ ರಾಯಲ್ಟಿ, ಹಕ್ಕುಗಳನ್ನೆಲ್ಲ ಉಪಾಯದಿಂದ ಬರೆಸಿಕೊಂಡುಬಿಟ್ಟಿದ್ದರು.

ಏರಿಳಿತದ ಪಯಣ

ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಜರ್ಮನಿಯಲ್ಲಿ 13 ಕೋಣೆಗಳ ಭವ್ಯಬಂಗಲೆಯಲ್ಲಿದ್ದ ಬಾಬಿ ನಂತರ ತೀವ್ರ ನಷ್ಟ ಅನುಭವಿಸಿದ್ದ. ಹಿತೈಷಿಗಳ ನೆರವಿನಿಂದ ಕೆಲಕಾಲ ಅಂತೂ ಇಂತೂ ಜೀವನ ಸಾಗಿತು. ಮಾನಸಿಕವಾಗಿ ಜರ್ಜರಿತನಾಗಿಬಿಟ್ಟ. ಆಗ ನೈತಿಕ ಒತ್ತಾಸೆ ನೀಡಿದವರು ಪತ್ನಿ ಯಾಸ್ಮಿನಾ. ತಡಮಾಡದೇ ತನ್ನದೇ ಆದ ‘ಬಾಬಿ ಫ್ಯಾರೆಲ್ ಆಫ್‌ ಬೋನಿ-ಎಮ್’ ಎಂಬ ಡಿಸ್ಕೊ–ಪಾಪ್ ತಂಡ ಕಟ್ಟಿ ಅನೇಕ ದೇಶಗಳಲ್ಲಿ ಸ್ಟೇಜ್ ಷೋ ಕೊಡತೊಡಗಿದರು. ಅದರೆ ಯಶಸ್ಸು ಮತ್ತು ಖ್ಯಾತಿಯ ಒತ್ತಡಗಳು ಇವರನ್ನು ಡ್ರಗ್ಸ್ ಮತ್ತು ಕುಡಿತಗಳೆಡೆಗೆ ಒಯ್ದುಬಿಟ್ಟವು. ಹೊರಸಂಬಂಧಗಳ ಆರೋಪ ಬಂತು. ಪತ್ನಿಯೊಡನೆ ಹೊಂದಾಣಿಕೆ ಸಾಧ್ಯವಾಗದೇ 1995ರಲ್ಲಿ ವಿಚ್ಛೇದನವಾಯ್ತು. ಕೊನೆಯ ಹತ್ತು ವರ್ಷಗಳಲ್ಲಿ ಹೃದಯದ ಸಮಸ್ಯೆ, ಏದುಸಿರು ಮತ್ತು ಹೊಟ್ಟೆಯ ತೊಂದರೆಗಳಿಂದ ಬಳಲುತ್ತಿದ್ದರೂ ಜೀವನದ ಕೊನೆಯ ದಿನದ ತನಕ ತನ್ನ ಪ್ರೀತಿಯ ವೃತ್ತಿಯನ್ನು ಬಿಡಲಿಲ್ಲ.

ಬಾಬಿಗೆ ಒಬ್ಬ ಮಗ, ಒಬ್ಬಳು ಮಗಳು. ಮಗಳು ಜನಿಲಿಯಾ ರ‍್ಯಾಪ್ ಹಾಡುಗಾರ್ತಿ. ತಂದೆಯ ಮರಣದ ಮರುವರ್ಷವೇ ಹಿಪ್-ಹಾಪ್ ಸಂಗೀತದ ವಿಭಾಗದಲ್ಲಿ ನೆದರ್‌ಲ್ಯಾಂಡಿನ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾಳೆ. ‘ಮೇಲ್ನೋಟಕ್ಕೆ ವಿಕ್ಷಿಪ್ತ ವ್ಯಕ್ತಿಯಾದರೂ ಬಾಬಿಯ ಮನಸ್ಸು ತುಂಬ ಒಳ್ಳೆಯದು’ ಎಂದಿದ್ದ ಆತನ ಮ್ಯಾನೇಜರ್ ಜಾನ್ ಸೀನ್.

ಇಂತಹ ಬಾಬಿ 2010ರ ಡಿಸೆಂಬರ್ 30 ರಂದು ಹೃದಯಾಘಾತದಿಂದ ತೀರಿಕೊಂಡರು. ಹಿಂದಿನ ದಿನ ರಷ್ಯಾದ ಸೇಂಟ್ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ಈತನ ಸ್ಟೇಜ್ ಷೋ ಕಾರ್ಯಕ್ರಮವಿತ್ತು. ಅಂದು ಹಾಡಿಕುಣಿದಿದ್ದ ಹಾಡುಗಳಲ್ಲಿ ಸೂಪರ್ ಹಿಟ್ ‘ರಾ ರಾ ರಾಸ್ಪುಟಿನ್’ ಕೂಡ ಒಂದು. (ಗ್ರೆಗರಿ ರಾಸ್ಪುಟಿನ್ ರಷ್ಯಾದಲ್ಲಿ 1896-1916ರ ನಡುವೆ ಬದುಕಿದ್ದ ವಿವಾದಿತ ದೇವಮಾನವ). ವಿಶೇಷವೇನು ಗೊತ್ತೆ? ರಾಸ್ಪುಟಿನ್‌ನ ಹುಟ್ಟೂರೂ ಇದೇ, ಸತ್ತಿದ್ದೂ ಇದೇ ದಿನ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT