ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಚಿತ್ತ ಕಲಕುವ ಚಿತ್ತಾಲರ ಕಾವ್ಯ

Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಗಂಗಾಧರ ಚಿತ್ತಾಲರು ಹುಟ್ಟಿ ಈ ತಿಂಗಳ 12ಕ್ಕೆ ನೂರು ವರ್ಷಗಳು ತುಂಬಲಿದೆ ( ಜನನ:12-11-1923). ಈ ಸಂದರ್ಭದಲ್ಲಿ ಅವರ ಕೊಡುಗೆಯನ್ನು ನೆನೆಯುವುದು ಅತ್ಯಂತ ಔಚಿತ್ಯಪೂರ್ಣ.

***

ಕಾದಂಬರಿ ಕ್ಷೇತ್ರದ ವಿಶಿಷ್ಟ ಸಾಧಕ ಯಶವಂತ ಚಿತ್ತಾಲ ಮತ್ತು ಕಾವ್ಯ ಕ್ಷೇತ್ರದ ಅಪೂರ್ವ ಸಾಧಕ ಗಂಗಾಧರ ಚಿತ್ತಾಲ ಸೋದರರ ತವರೂರಾದ ಹನೇಹಳ್ಳಿಗೆ ಕನ್ನಡ ಸಾಹಿತ್ಯದ ನಕ್ಷೆಯಲ್ಲಿ ಶಾಶ್ವತವಾದ ಸ್ಥಾನವಿದೆ.

ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೆನಿಸಿದ ಗಂಗಾಧರ ಚಿತ್ತಾಲರು ಸಿಂಧ್, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕವೂ ಸೇರಿದ ಆಗಿನ ಇಡೀ ಮುಂಬೈ ಪ್ರಾಂತಕ್ಕೇ ಎಸ್.ಎಸ್.ಎಲ್‌.ಸಿಯಲ್ಲಿ ಮೊದಲ ರ‍್ಯಾಂಕ್ ಗಳಿಸುವ ಮೂಲಕ ಒಂದು ಹೊಸ ದಾಖಲೆಯನ್ನೇ ಸ್ಥಾಪಿಸಿದವರು. ಬಿ.ಎ. ಪರೀಕ್ಷೆಯ ನಂತರದಲ್ಲಿ ಭಾರತ ಸರ್ಕಾರದ ಐ.ಎ ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಕೌಂಟ್ಸ್ ಇಲಾಖೆಯಲ್ಲಿ ಅತ್ಯುನ್ನತ ಅಧಿಕಾರಿಯಾಗಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸಿ, 1977ರಲ್ಲಿ ಸೇವಾ ನಿವೃತ್ತರಾಗಿ ಮುಂಬೈಯಲ್ಲಿ ನೆಲೆಸಿದರು. ಅಷ್ಟೇನೂ ಹೆಚ್ಚಲ್ಲದ 65ನೇ ವಯಸ್ಸಿನಲ್ಲಿ ಆರೋಗ್ಯದ ಮೂರ್ತರೂಪವೆಂಬಂತಿದ್ದ ಚಿತ್ತಾಲರು ಪಾರ್ಕಿನ್ಸನ್ ವ್ಯಾಧಿಗೆ ತುತ್ತಾದದ್ದು ನಿಜಕ್ಕೂ ದುರ್ದೈವವೇ ಸರಿ.

ಚಿತ್ತಾಲರು ಬರೆದದ್ದು ‘ಕಾಲದ ಕರೆ’, ‘ಮನುಕುಲದ ಹಾಡು’, ‘ಹರಿವ ನೀರಿದು’ ಮತ್ತು ‘ಸಂಪರ್ಕ’ ಎಂಬ ನಾಲ್ಕು ಕವನ ಸಂಕಲನಗಳಿಂದ ಸೇರಿ ಒಟ್ಟು 72 ಕವಿತೆಗಳನ್ನಷ್ಟೇ. ಆದರೆ ಅವುಗಳಲ್ಲಿನ ಬಹಳಷ್ಟು ಕವಿತೆಗಳು ಕಾವ್ಯ ಪ್ರೇಮಿಗಳ ಚಿತ್ತವನ್ನು ಬಗೆ ಬಗೆಯಾಗಿ ಕಲಕುತ್ತ ಅನನ್ಯವಾದ ರೀತಿಯಲ್ಲಿ ಸಹೃದಯರ ಹೃದಯವನ್ನು ಸೆರೆಹಿಡಿಯುತ್ತ ಕನ್ನಡ ಕಾವ್ಯದ ಶ್ರೀಮಂತಿಕೆಯನ್ನು ಅಪೂರ್ವರೀತಿಯಲ್ಲಿ ಹೆಚ್ಚಿಸಿವೆ. ಎಂ. ಎನ್. ರಾಯ್ ಅವರ ರ‍್ಯಾಡಿಕಲ್ ಹ್ಯೂಮನಿಸಂನಿಂದ ಆಕರ್ಷಿತರಾಗಿ ಮಾನವತಾವಾದದ ಚಿಂತನೆಗಳನ್ನು ಅಳವಡಿಸಿಕೊಂಡ ಅವರ ಚಿಂತನಪರ ಕವಿತೆಗಳು ಒಂದೆಡೆ ನಮ್ಮ ಚಿತ್ತವನ್ನು ಕಲಕುತ್ತವಾದರೆ, ಇನ್ನೊಂದೆಡೆ ಅವರ ಮರ್ಮಸ್ಪರ್ಶಿ ಚರಮಗೀತೆಗಳು ಹೃದಯವನ್ನು ತಳಮಳಕ್ಕೆ ಈಡುಮಾಡುತ್ತವೆ.

ನವೋದಯ ಕಾವ್ಯ ತನ್ನ ಉತ್ತುಂಗವನ್ನು ತಲುಪಿ ನಂತರದಲ್ಲಿ ರೂಢಿಯ ಜಾಡಿಗೆ ಬಿದ್ದಿದ್ದ, ಆದರೆ ನವ್ಯ ಇನ್ನೂ ಸ್ಪಷ್ಟವಾಗಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸದಿದ್ದ ಸಂಧಿಕಾಲದಲ್ಲಿ ಬಂದ ಅವರ ಮೊದಲ ಕವನ ಸಂಕಲನ ‘ಕಾಲದ ಕರೆ’ಯನ್ನು ಪ್ರಬುದ್ಧ ಕರ್ನಾಟಕದಲ್ಲಿ ವಿಸ್ತಾರವಾಗಿ ವಿಮರ್ಶಿಸುತ್ತ(1948) ಅಡಿಗರು, ಜೀವನದ ಬಗೆಗಿನ ಚಿಂತನೆ ಹಾಗೂ ಮುನುಷ್ಯ ಬದುಕಿನಲ್ಲಿ ಪ್ರಧಾನವಾದ ಪಾತ್ರವಹಿಸುವ ಸಾಮಾಜಿಕ ರಾಜಕೀಯ ವಿಚಾರಗಳ ಚಿಂತನೆ ಅವರ ಕಾವ್ಯದ ಮೂಲ ದ್ರವ್ಯ ಎಂದು ಹೇಳಿ ಅವರ ಕಾವ್ಯದ ಮನೋಧರ್ಮವನ್ನು ಗುರುತಿಸಿದರು. ಅವರ ಈ ಕವನ ಸಂಕಲನದಿಂದ ‘ಕಾಗೆಗಳ ಬಳಗದಲ್ಲಿ ನಿಜವಾದ ಕೋಗಿಲೆಯನ್ನು ಕಂಡಷ್ಟು ಖುಷಿಯಾಯಿತು’ ಎಂದು ಹೇಳಿ, ಕವಿಯಾಗಿ ಚಿತ್ತಾಲರ ಮಹತ್ವವನ್ನು ಅಡಿಗರು ಅಂದೇ ಗುರುತಿಸಿದ್ದರು. ಆಗ ಬಂದ ಸ್ವಾತಂತ್ರ್ಯದ ಬಗ್ಗೆ ಅವರ ದೃಷ್ಟಿ ಅದೆಷ್ಟು ವಾಸ್ತವದಿಂದ ಕೂಡಿತ್ತೆಂಬುದಕ್ಕೆ ಈ ಸಾಲುಗಳು ಸಾಕು:
ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು ಬಂತೆ| ಹಣದ ಮಕ್ಕಳ ಮನೆಯ ಸೂಳೆಯಾಗಿ? ಒಳಗೊಳಗೆ ಕುದಿದೆದ್ದ ಜೀವ ಕನಲುವುದು ‘ಈ| ಮೋಸಮಾಟವ ಸುಡುವೆ ಹೋಳಿಯಾಗಿ (ದೀಪೋತ್ಸವ).

ಬದುಕಿನ ಮೂಲ ಸ್ವರೂಪ ಕುರಿತು ಆರಂಭವಾದ ಈ ಚಿಂತನೆ ಅವರ ಮೂರನೆಯದಾದ ‘ಹರಿವ ನೀರಿದು’ ಕವನ ಸಂಕಲನದ ಬಹುತೇಕ ಎಲ್ಲ ಕವನಗಳಲ್ಲಿ ಘನೀಭೂತಗೊಂಡಿದೆ. ಅಸ್ತಿತ್ವವಾದದ ಚಿಂತನೆಗಳು ಇಲ್ಲಿ ಹೆಪ್ಪುಗಟ್ಟಿವೆ. ನದಿಯ ಹಾಗೆ ನಿರಂತರವಾಗಿ ಕಾಲಾತೀತವಾಗಿ ಸಾಗುವ ಜೀವನ ಪ್ರವಾಹದಲ್ಲಿ ‘ಕಾಲಾಧೀನವಾಗಿ ಚರಿಸುವುದೊಂದೆ| ಬೆರಗಿನರ್ಭಕ ದೃಷ್ಟಿ ಚಾಚಿ ಅಭ್ಯಾಗತರ ತೆರದಿ ನೆಲಸುವುದೊಂದೆ|’ ಮಾನವ ಬದುಕಿನ ಮಿತಿ ಎಂಬ ವಿಚಾರವನ್ನು ಮಹತ್ವದ ಕವನ- ‘ಹರಿವ ನೀರಿದು’ದಲ್ಲಿ ಸಾರಿದ್ದಾರೆ. ಅವರ ಬಹುಮುಖ್ಯ ಕವನಗಳಲ್ಲೊಂದಾದ ‘ಕಾಮಸೂತ್ರ’ದಲ್ಲಿ ಶೀಲ ಅಶ್ಲೀಲಗಳ ಮೇರೆಯನ್ನು ಮೀರಿದ ಹಾಗೆ ಕಾಮದ ನಿಸ್ಸಂಕೋಚ ಅಭಿವ್ಯಕ್ತಿಯು ಕಾವ್ಯರೂಪ ತಳೆದಿದೆ. ಯೌವನದ ಚುಂಬಕ ಶಕ್ತಿಯ ಸೆಳೆತಕ್ಕೆ ಸಿಕ್ಕಿದ ಗಂಡು-ಹೆಣ್ಣು ಆ ಸೆಳೆತದ ಪ್ರಕ್ರಿಯೆಯಲ್ಲಿಯೇ ಮನುಕುಲದ ತಂದೆತಾಯಿಗಳಾಗಿ ಬದಲಾಗಿಬಿಡುವ ಪವಾಡವನ್ನು ಈ ಸಾಲುಗಳಲ್ಲಿ ಹಿಡಿದಿಟ್ಟಿದೆ:
‘ಯಾವ ಹಿಗ್ಗಿನ ಸೆಲೆಯೊ ನಮಗೆ ಸಿಲುಕಿ| ಇಳೆಯ ಮೂಲಕು ನಮ್ಮ ಬೇರು ನಿಲುಕಿ| ಭೂಗರ್ಭ ಸುರಿದಿತ್ತು ಜೊಲ್ಲು ಬಾಯಿ| ನಾವಂದು ಮನುಕುಲದ ತಾಯಿತಂದೆ|’

ಪ್ರಸಿದ್ಧ ಲೇಖಕ ದಿ. ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯನವರು ‘‘ಕವಿಯ ತನ್ಮಯ ಪ್ರಾಮಾಣಿಕತೆಯ ಮೂಲಕ ‘ಕಾಮಸೂತ್ರ’ ಒಂದು ಅದ್ಭುತ ಪ್ರಣಯಗೀತೆಯಾಗಿರುವುದು ಕನ್ನಡಿಗರ ಹೆಮ್ಮೆ” ಎಂದು ಇದನ್ನು ಪ್ರಶಂಸಿಸಿದ್ದಾರೆ.

ಅವರ ಅತ್ಯಂತ ಮಹತ್ವದ ಕವನ ಸಂಕಲನವಾದ ‘ಮನುಕುಲದ ಹಾಡು’ದಲ್ಲಿ ಕವಿಯ ವಾಸ್ತವ ಅನುಭವದ ಪಾರದರ್ಶಕ ಅಭಿವ್ಯಕ್ತಿ ಇದೆ. ಈ ಸಂಕಲನದಲ್ಲಿರುವ ಅವರ ಶ್ರೇಷ್ಠ ಕವನವಾದ ‘ದುಃಖಗೀತ’ದ ವಸ್ತು ಅವರ ತಂದೆಯ ಆತ್ಮಹತ್ಯೆಯಿಂದಾದ ದುಃಖ. ದೇಹಕ್ಕೆ ಹತ್ತಿದ ವ್ಯಾಧಿಯ ಪೀಡೆ ತಾಳಲಾರದಾದಾಗ ಸಾಕು ಇನ್ನು ಈ ವೇದನೆ ಎಂದು ಬುದ್ಧಿಪೂರ್ವಕವಾಗಿ ನಿರ್ಧರಿಸಿ ತನ್ನನ್ನು ಇಚ್ಛಾಮರಣಕ್ಕೆ ಒಳಪಡಿಸಿಕೊಂಡದ್ದು ಹತ್ತು ಭಾಗಗಳಲ್ಲಿ ಹರಡಿಕೊಂಡಿದೆ. ಈ ಕವಿತೆಯಲ್ಲಿ- ‘ಅನ್ಯ ಕೇಂದ್ರಿತ ವಿಶ್ವದಲ್ಲಿ ಬೇರೂರಿಹುದು| ಆತ್ಮಕೇಂದ್ರಿತ ನಮ್ಮದೀ ಮರ್ತ್ಯ ಜೀವಿತ’ ಎಂಬ ಅಸ್ತಿತ್ವವಾದಿ ಚಿಂತನೆಯನ್ನು ಬಿತ್ತರಿಸುತ್ತ ಜೀವನದ ಸ್ವರೂಪ ಮತ್ತು ಅರ್ಥ ಕುರಿತಂತೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ, ಒಮ್ಮೊಮ್ಮೆ ಹತಾಶೆಯ ಮಾತುಗಳನ್ನಾಡಿದರೂ ಕೊನೆಗೆ ದೈವ ನಿರ್ಮಿತಿಯ ಕ್ರಮವನ್ನೊಪ್ಪಿಕೊಂಡೇ ಜೀವ ಕೊನೆಗೆ ‘ನೀ ಕೊಟ್ಟೆ ಇದ, ಮತ್ತೆ ನೀನೆ ಇದ ಮರಳಿ ಕೋ’ ಎಂದು ಜೀವಾಧಾರಕನಿಗೆ ನಮಿಸಿ ತೆರಳುತ್ತದೆ. ದೈವ, ಜೀವ, ವಿಧಿ ಇವುಗಳ ಬಗೆಗಿನ ಜಿಜ್ಞಾಸೆ ಕವನದುದ್ದಕ್ಕೂ ನಡೆದಿದೆ. ವಿಧಿಗೆ ಶರಣಾಗದೆ ವಿಧಿಯ ಮಿತಿ ಅರಿತು ನಾವು ಪಡೆದುದು ಇದು ಎಂದು ತಿಳಿದು ನಮ್ಮ ಕರ್ತೃತ್ವ ರೂಪುಗೊಳ್ಳಬೇಕೆಂಬ ಕವಿಯ ತಾತ್ವಿಕತೆ ಇದರ ಜೀವಾಳ. ‘ಕೊನೆಗೆ ಹೊರಡುವುದು ಆಮಿಷವೊ ಪೀಯೂಷವೊ ವಿಷವೊ ಬಲ್ಲವರಾರು?’ ಎಂದು ಪ್ರಶ್ನಿಸುವಲ್ಲಿಯೂ ಕೇಳಿಬರುವ ಧ್ವನಿ ಅಸಹಾಯಕ ವ್ಯಕ್ತಿಯ ಕುರುಡು ನಂಬಿಕೆಯಲ್ಲ, ಮಾನವನ ಪೌರುಷ ಪ್ರಜ್ಞೆಯ ಸತ್ವ ಭರಿತ ನುಡಿ.

ದುಃಖದ ಹೊರತಾಗಿಯೂ ಬದುಕಿದೆ ಎಂಬ ನಿಲುಗಡೆಗೆ ಬಂದ ಸಂದರ್ಭದಲ್ಲಿ ತಮ್ಮ ಜೀವನದ ಬಗೆಗಿನ ಸುದೀರ್ಘ ಚಿಂತನೆಯ, ತಮ್ಮ ಬದುಕಿನ ಮ್ಯಾನಿಫೆಸ್ಟೋ ಥರದ ಕವನ ‘ಹರಿವ ನೀರಿದು’ ಬರೆದರು. ಬಂದದ್ದೆಲ್ಲವನ್ನೂ ಕೊಂಡು ಬದುಕನ್ನು ಅರ್ಥಪೂರ್ಣವಾಗಿ ಮಾಡುವುದನ್ನೇ ಕರ್ಮವೆಂದು ಹೇಳುತ್ತಾರೆ. ಅನಂತಮೂರ್ತಿಯವರು ಇದನ್ನು ಚಿತ್ತಾಲರ ಸರ್ವಶಕ್ತಿಗಳೂ ಒದಗಿಬಂದಿರುವ ಕವನ ಎಂದು ಮುಕ್ತಕಂಠದಿಂದ ಮೆಚ್ಚುತ್ತಾರೆ.

ಹದಿನೇಳು ಕವನಗಳ ಅವರ ಕೊನೆಯ ಕವನ ಸಂಕಲನ ‘ಸಂಪರ್ಕ’ದಲ್ಲಿ ಪ್ರಧಾನವಾಗಿ ಕೇಳಿಬರುವುದು ಯಾತನೆಯ ದನಿ. ಪಾರ್ಕಿನ್ಸನ್ ವ್ಯಾಧಿಯಿಂದ ಕಂಗೆಡದೆ ತಮ್ಮ ನೋವು, ಹತಾಶೆಗಳಿಗೆ ಸಮರ್ಥವಾಗಿ ಕಾವ್ಯಾಭಿವ್ಯಕ್ತಿ ನೀಡುತ್ತಲೇ ಕಾವ್ಯ ಸಾರ್ಥಕ್ಯದ ಬಗ್ಗೆ ಚಿಂತಿಸಿದ್ದಾರೆ. ನೆಲದ ಸಂಪರ್ಕವೇ ಇಲ್ಲದ ಐದನೆಯ ಮಹಡಿಯಲ್ಲಿ ಮಕ್ಕಳು ಖಾಲಿ ಟಿನ್ನಿನಲ್ಲಿ ಬೀದಿಯ ದೂಳು ಒಟ್ಟುಗೂಡಿಸಿ, ಒಣಕಲು ಬೀಜ ಹೂಳಿ, ಬಾಟ್ಲಿ ನೀರಿನಲಿ ಪರ್ಜನ್ಯ ಸುರಿಸಿದ ಮಾತ್ರಕ್ಕೆ ‘ಕಣ್ಣಮುಂದೇ ತೆರೆದ ಅಮೃತೋದ್ಭವ ಪ್ರಹರ| ಚಿಣ್ಣರೊಲು ದೂಡಿ ಕೆಂಬೂದಿ ಹಣಿಕಿಕ್ಕಿ| ಇಣಿಕಿವೆ ಸುತ್ತ ನೂರಾರು ಅಂಕುರ!’- ಸೃಜನದ ಈ ಕೌತುಕವ ಕವಿ ನಿಯಾಳಿಸುತ್ತಾರೆ, ಅವುಗಳ ಸ್ಪರ್ಶ ಉರದಲುಮ್ಮಳ ಜೀಕಳಿ ಪುಳಕ ಹುಟ್ಟಿಸುತ್ತವೆ. ಕಾವ್ಯ ಮತ್ತು ಜೀವಚೈತನ್ಯ ಎಂಥದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಹೊರಹೊಮ್ಮಬಲ್ಲವು, ಎಂಬ ಅದಮ್ಯ ಆಶಾವಾದ ಅವರ ‘ಸಂಪರ್ಕ’ ಕವಿತೆಯಲ್ಲಿ ಹೀಗೆ ಮೂಡಿದೆ.

ಹೀಗೆ ಬದುಕಿನ ಅನುಭವಗಳನ್ನು ಕಾವ್ಯವಾಗಿಸುವ ದಿಸೆಯಲ್ಲಿ ಚಿಂತನಶೀಲತೆಯನ್ನು ಅಳವಡಿಸಿಕೊಳ್ಳುತ್ತ ಕನ್ನಡ ಕಾವ್ಯಕ್ಕೆ ಹಲವಾರು ಸಾರ್ಥಕವಾದ ಕವನಗಳನ್ನು ಕೊಡುಗೆಯಾಗಿ ಕೊಟ್ಟ ಚಿತ್ತಾಲರನ್ನು ಅವರು ಹುಟ್ಟಿ ನೂರು ತುಂಬಿದ ಈ ಪರ್ವದಿನದಂದು ನೆನೆಯುತ್ತ ಅವರಿಗೆ ಕೃತಜ್ಞತೆ ಹೇಳುವ ಸರದಿ ಕನ್ನಡಿಗರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT