‘ಲೈಂಗಿಕ ಅಲ್ಪಸಂಖ್ಯಾತರು ಸಹಜವಾಗಿ ಬದುಕಲು ಅದೆಷ್ಟು ಶತಮಾನಗಳು ಕಾಯಬೇಕು?’ ಇಂಥ ಪ್ರಶ್ನೆಯನ್ನು ಕೇಳುವ ಮಾನವ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತರ ಕುರಿತಾದ ಸಮಾಜದ ತಿರಸ್ಕಾರದ ಬಗೆಯನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ರಶ್ಮಿ ಎಸ್ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಮಾಯಾ, ಚಿನ್ಮಯ್ ಜೊತೆಗೆ ನಾನೂ, ಅವಿನ್ ಬೆಂಗಳೂರಿನ ಕೋರಮಂಗಲದಲ್ಲಿರುವ ಪಾಸ್ಪೋರ್ಟ್ ಕಚೇರಿಗೆ ಹೋಗಿದ್ದೆವು. ಅಲ್ಲಿ ಸಾಲಿನಲ್ಲಿ ನಿಂತಾಗಲೇ ತರತಮದ ಕಿರಿಕಿರಿ ಶುರುವಾಯಿತು. ಜನರು ನಮ್ಮನ್ನ ನೋಡಿ, ಗುಸುಗುಸು ಮಾತಾಡೋದು, ನಗೋದು ಮಾಡುತ್ತಿದ್ದರು. ನಾವೇನು ಮನುಷ್ಯರೇ ಅಲ್ವೇನೋ ಎಂಬಂತೆ ಅವರ ವರ್ತನೆ ಇತ್ತು. ಸಾಲಿನಲ್ಲಿ ನಮ್ಮ ಹಿಂದೆ ಮುಂದೆ ನಿಲ್ಲಲೂ ಹಿಂಜರೆದಂತೆ ಬೇರೆಯೇ ಸಾಲನ್ನು ಮಾಡುವಂತೆ ಮಾಡುತ್ತಿದ್ದರು.

ಸಂದರ್ಶನಕ್ಕೆ ಹೋದ ಮಾಯಾ ಐದಾರು ನಿಮಿಷಗಳಲ್ಲಿ ಕಣ್ಣೀರು ಹಾಕಿಕೊಂಡೇ ಆಚೆ ಬಂದರು. ನಂತರ ಚಿನ್ಮಯ್ ಅವರಂತೂ ಅಳುತ್ತಲೇ ಹೊರಬಂದರು. ಅವರಿಗೆ ಮುಜುಗರವಾಗುವಂಥ ಪ್ರಶ್ನೆಗಳನ್ನು ಕೇಳಿದ್ದೂ ಅಲ್ಲದೆ, ಪರಿಪರಿಯಾಗಿ ಅವಮಾನಿಸಿದ್ದರು.

ನಾನು ಒಳ ಹೋದಾಗಲೂ ಅವಿನ್ ಅಪ್ಪನ ಹೆಸರು ಕೇಳಿದರು. ಅವಿನ್ ನನಗೆ ದತ್ತು ಪುತ್ರ. ನನ್ನ ಸಂಗಾತಿಯಿಂದ ನಾನು ವಿಚ್ಛೇದನ ಪಡೆದಿರುವೆ. ನಮ್ಮ ಬದುಕಿನಿಂದ ಸಂಗಾತಿಯ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿರುವೆ. ಆಧಾರ್ ಕಾರ್ಡ್ನಲ್ಲಿ ಅವಿನ್ ಅಪ್ಪನ ಹೆಸರಿಲ್ಲ. ಆಧಾರ್ ಕಾರ್ಡ್ನಲ್ಲಿ ಇದ್ದಂತೆಯೇ ಪಾಸ್ಪೋರ್ಟ್ ಕೊಡಿ ಎಂದು ಕೇಳಿಕೊಂಡೆ. ಏಕಾಏಕಿ ಅಲ್ಲಿದ್ದ ಮಹಿಳಾ ಸಿಬ್ಬಂದಿ ಜೋರು ಮಾಡಲು ಆರಂಭಿಸಿದವರು, ‘ಅಪ್ಪನ ಹೆಸರಿಲ್ಲದೆ ಕೊಡಲಾಗದು’ ಎಂಬ ಹಟ ಹಿಡಿದರು.

ನಾನು ವಿಚ್ಛೇದಿತೆ ಎಂದಾಗ, ‘ನೀವೆಲ್ಲ ಯಾವ ಸುಖಕ್ಕೆ ಮದುವೆಯಾಗ್ತೀರಿ? ಹೇಗೆ ಸಂಭೋಗಿಸುವಿರಿ.. ಈ ಸುಖಗಳಿಲ್ಲದೆಯೇ ವಿಚ್ಛೇದನವಾಯಿತೆ’ ಎಂಬೆಲ್ಲ ವೈಯಕ್ತಿಕ ನಿಂದನೆಗೆ ಇಳಿದರು. ನನಗೋ ನನ್ನ ಕಣ್ಮುಂದೆ ನಮ್ಮ ದಾಂಪತ್ಯ ಬದುಕು ಬಂದು ಹೋಯಿತು. ಮದುವೆಯಾಗುವಾಗಲೂ ಇದು ನನ್ನ ಹಕ್ಕು ಎಂಬುದನ್ನು ಪ್ರತಿಪಾದಿಸಿ ಮದುವೆಯಾಗಿದ್ದೆ. ಮಗು ಬೇಕೆನಿಸಿದಾಗಲೂ ದತ್ತು ಪಡೆಯಲು ಹೋರಾಟ ಮಾಡಿಯೇ ಪಡೆದಿದ್ದೆ. ಸಾಂಗತ್ಯದಲ್ಲಿ ಸುಖವಲ್ಲ, ನೆಮ್ಮದಿ ಇಲ್ಲದಂತಾದಾಗ ಧೈರ್ಯದಿಂದ ಆಚೆ ಬಂದೆ. ವಿಚ್ಛೇದನ ಪಡೆಯಲೂ ಹೋರಾಟ ಮಾಡಿದ್ದೆ. ಎಲ್ಲ ದಾಖಲೆಗಳಿಂದಲೂ ಹೆಸರು ಬದಲು ಮಾಡಿದ್ದೆ. ಆಧಾರ್ ಕಾರ್ಡಿನಲ್ಲಿಯೂ ಅವಿನ್ಗೆ ನನ್ನ ಹೆಸರು ಮಾತ್ರ ಇದೆ. ಪಾಸ್ಪೋರ್ಟ್ ಕಚೇರಿಯವರು ನೋಡಬೇಕಿರುವುದು ಆಧಾರ್ ಕಾರ್ಡ್ನಲ್ಲಿರುವ ಹೆಸರಿಗೂ ಅವಿನ್ ಹೆಸರಿಗೂ ಸಾಮ್ಯವಿದೆಯೇ ಎಂದು. ನನ್ನ ವೈಯಕ್ತಿಕ ಬದುಕಿನಲ್ಲಿ ಇಣುಕುವ, ಕೆಟ್ಟದಾಗಿ ಕೆಣಕುವ ಅಗತ್ಯವೇ ಇರಲಿಲ್ಲ. ಆದರೂ ಅವರ ದಾರ್ಷ್ಟ್ಯ ನೋಡಿ..!

ಇದ್ಯಾವುದೂ ನಿಮಗೆ ಸಂಬಂಧಿಸಿದ್ದಲ್ಲ. ಜನರ ಖಾಸಗೀತನದ ಹಕ್ಕು ಅಂತ ಒಂದಿದೆ. ಅದರ ಬಗ್ಗೆ ಗೊತ್ತಿಲ್ಲವೆಂದರೆ ಇಂಥ ಅಪಸವ್ಯದ ಪ್ರಶ್ನೆಗಳನ್ನು ಕೇಳಬೇಡಿ ಎಂದು ಪ್ರತಿಕ್ರಿಯಿಸಿದೆ. ನನ್ನಿಂದ ಇಂಥ ಪ್ರತಿಕ್ರಿಯೆ ಆಕೆ ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಅದು ತೀರ ತಮ್ಮ ಅಹಂಕಾರಕ್ಕೆ ಬೀಸಿದ ಚಾಟಿಯೇಟಿನಂತೆ ಎಂದು ಭಾವಿಸಿದ ಅವರು, ‘ಮಗುವಿಗೆ ತಂದೆಯ ಹೆಸರಿಲ್ಲದೆ ಪಾಸ್ಪೋರ್ಟ್ ನೀಡುವುದು ಸಾಧ್ಯವೇ ಇಲ್ಲ, ನಡೀರಿ ಆಚೆ’ ಎಂದು ದಬ್ಬಾಳಿಕೆ ಮಾಡಿದರು. ನಮ್ಮ ಖಾಸಗೀತನವನ್ನು ಗೌರವಿಸದಷ್ಟು ವ್ಯವಸ್ಥೆ ಜಡ್ಡುಗಟ್ಟಿದರೆ ಹೇಗೆ? ಲೈಂಗಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಹೀಗಳೆದರೆ ಹೇಗೆ.. ನಾವು ಮನುಷ್ಯರಲ್ಲವೇ?

‘ನಿಮ್ಮ ಧ್ವನಿ ಗಂಡಸಿನಂತಿದೆಯಲ್ಲ, ಹೇಗೆ ಮದುವೆಯಾದ್ರಿ? ಯಾರು ನಿಮಗೆ ದತ್ತು ಕೊಟ್ಟಿದ್ದು?’ ಎಂಬ ಪ್ರಶ್ನೆಗಳನ್ನೆಲ್ಲ ಮಾಡಿದ್ರು.. ಇವು ಕೇವಲ ಆ ವ್ಯಕ್ತಿಯ ಪ್ರಶ್ನೆಗಳಾಗಿರಲಿಲ್ಲ. ಸಮಾಜದ ಪ್ರಶ್ನೆಗಳಿವು. ಪ್ರಶ್ನೆಯಷ್ಟೇ ಅಲ್ಲ, ಕೆಟ್ಟ ಕುತೂಹಲವಿದು. ಸಮಾಜದ ಚೌಕಟ್ಟಿನಲ್ಲಿ ನಾವು ಬದುಕಲು ಅನರ್ಹರು ಎಂಬಂತೆ ಬಿಂಬಿಸುತ್ತಲೇ ಬಂದಿದೆಯಲ್ಲ. ನಾನು ಕುಗ್ಗಿ ಹೋಗಿದ್ದೆ. ಅವಮಾನವನ್ನು ನುಂಗಲು ಆಗುತ್ತಿರಲಿಲ್ಲ. ನನಗಿಂತ ಮೊದಲು ಅವರೇಕೆ ಕಣ್ಣೀರು ಹಾಕಿಕೊಂಡು ಹೋದರು ಎಂಬುದು ಮನವರಿಕೆ ಆಯಿತು. ಆದರೆ ನಾನೂ ಕಣ್ಣೀರು ಸುರಿಸುತ್ತ ನಿಲ್ಲಬೇಕೆ?

ಇಷ್ಟಕ್ಕೂ ಈ ಪ್ರಶ್ನೆಗಳು ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಕೇಳಿದ್ದಾಗಿರಲಿಲ್ಲ. ಇದರ ಹಿಂದೆ ಸಮಾಜದ ದೃಷ್ಟಿಕೋನವಿತ್ತು. ಒಂದೆರಡು ನಿಮಿಷ ಸುಧಾರಿಸಿಕೊಂಡೆ. ಅಕ್ಕೈಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ಇದೂ ಸಿಗುವುದಿಲ್ಲ. ಇದಕ್ಕೂ ಹೋರಾಡಬೇಕು. ಗಟ್ಟಿಯಾಗುವ ಎಂದು ನಿರ್ಧರಿಸಿದೆ.

ವಿಚ್ಛೇದನದ ವಿಷಯ ಬಂತಲ್ಲ, ಒಂದು ವಿಷಯ ಸ್ಪಷ್ಟಪಡಿಸುವೆ.

ನಮ್ಮಂಥವರು ಮದುವೆಯಾಗಿ ಸುಭದ್ರ ಸಂಸಾರ ಮಾಡಿಕೊಂಡಿರಬೇಕು ಎಂದು ಬಯಸಿಯೇ ವ್ಯವಸ್ಥೆಯ ವಿರುದ್ಧ ಹೋರಾಡಿ, ಕಾನೂನು ಬದ್ಧಳಾಗಿ ಮದುವೆಯಾದೆ. ಆದರೆ ಕೌಟುಂಬಿಕ ಹಿಂಸೆ ಹೆಚ್ಚಾದಾಗ ಅದರಿಂದ ಕಾನೂನುಬದ್ಧ ರೀತಿಯಲ್ಲಿ ಆಚೆ ಬಂದೆ. ಆತ್ಮಗೌರವಕ್ಕೆ ಧಕ್ಕೆ ಬಂದಲ್ಲಿ, ನಿಮ್ಮ ದೇಹವನ್ನು ತಮ್ಮ ಸ್ವತ್ತು ಎಂಬಂತೆ ದಂಡಿಸುತ್ತಿದ್ದರೆ, ಆ ಹಿಂಸೆ ಸಹಿಸುವ ಅಗತ್ಯವಿಲ್ಲ. ಬಹುತೇಕ ಮಹಿಳೆಯರು, ನಮ್ಮ ಆಯ್ಕೆ ಇದು ಎಂಬಂತೆ ಸಹಿಸಿಕೊಳ್ಳುತ್ತಾರೆ. ಬಾಂಧವ್ಯದಿಂದ ಆಚೆ ಬಂದು ಬದುಕಲಾರೆ ಎಂಬ ತೀರ್ಮಾನ ಕೈಗೊಂಡಿರುತ್ತಾರೆ. ಏಕಾಂಗಿಯಾಗಿ ಬದುಕುವಲ್ಲಿ ಸವಾಲುಗಳಿವೆ. ಆದರೆ ಹಿಂಸೆ ಸಹಿಸುವುದಕ್ಕಿಂತ ಚೂರು ಧೈರ್ಯ ಇದ್ದರೆ ಸಾಕು. ನಾನು, ನನ್ನ ಮೇಲಿನ ದೌರ್ಜನ್ಯವನ್ನು ವಿರೋಧಿಸಿ, ಆ ಬಂಧದಿಂದ ಆಚೆ ಬಂದೆ. ಅವಿನ್ ನನ್ನ ಜವಾಬ್ದಾರಿಯಾಗಿದ್ದ. ನನ್ನ ಸಂಗಾತಿ ತನ್ನ ಯಾವ ಕರ್ತವ್ಯಗಳನ್ನೂ ನಿಭಾಯಿಸಲಿಲ್ಲ, ಖರ್ಚು ವೆಚ್ಚದಲ್ಲಿ ತನ್ನ ಪಾಲುದಾರಿಕೆಯನ್ನು ತೋರಲಿಲ್ಲ. ಆಗ ಆ ಹೆಸರನ್ನಿಟ್ಟುಕೊಂಡು ಏನು ಪ್ರಯೋಜನವೆಂದು, ಹೆಸರನ್ನು ತೆಗೆದುಹಾಕಿದೆ. ಇಷ್ಟು ಮಾತ್ರದ ಆತ್ಮಾಭಿಮಾನವನ್ನೂ ತೋರದಿದ್ದರೆ ಹೇಗೆ?

ಇದನ್ನೆಲ್ಲ ಆ ಹೆಣ್ಣುಮಗಳಿಗೆ ಬಿಡಿಸಿ ಹೇಳಬೇಕಿತ್ತಾ? ಹೇಳಿದ್ದರೆ ಅರ್ಥ ಆಗ್ತಿತ್ತಾ? ನಮ್ಮ ಸಮಾಜದಲ್ಲಿ ಈಗಲೂ ಹೊಡಿಬಡಿ ಮಾಡುವುದು, ಹಿಂಸೆ ಕೊಡುವುದು ಗಂಡನಾದವನ ಸಹಜ ವರ್ತನೆ ಎಂಬಂತೆಯೇ ಬೆಳೆಸಿಕೊಂಡು ಬರಲಾಗಿದೆ.

ಇರಲಿ, ಇದೆಲ್ಲ ಪಕ್ಕಕ್ಕಿರಿಸಿ, ಅವಿನ್ ಪಾಸ್ಪೋರ್ಟ್ ವಿಷಯವನ್ನು ಕೈಗೆತ್ತಿಕೊಳ್ಳಬೇಕಿತ್ತು. ಕೂಡಲೇ ನೆನಪಾಗಿದ್ದು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿರುವ ಸುಧೀಂದ್ರ ಅವರು. ಅವರ ಬಳಿ ಪರಿಸ್ಥಿತಿಯನ್ನು ವಿವರಿಸಿದೆ. ಅವರೊಂದಿಗೆ ಸಮಾಲೋಚಿಸಿದ ಮೇಲೆ ದಾರಿ ಸ್ಪಷ್ಟವಾಗತೊಡಗಿತು. ನಂತರ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ವೈಷ್ಣವಿ ಅವರೊಟ್ಟಿಗೆ ಮಾತಾಡಿದೆ. ಅವರನ್ನು ಭೇಟಿ ಮಾಡಿದೆ. ಅವರು ಪಾಸ್ಪೋರ್ಟ್ ಕಚೇರಿಗೆ ಕರೆ ಮಾಡಿದರು.

ಅಲ್ಲಿ ಭಾರತೀಯ ವಿದೇಶಾಂಗ ಅಧಿಕಾರಿ ಕೃಷ್ಣ ಅವರು ತಮ್ಮ ಕಚೇರಿಗೆ ಕರೆಯಿಸಿಕೊಂಡರು. ನಾನು, ಮಾಯಾ, ಚಿನ್ನು ರಾಠೋಡ್ ಹಾಗೂ ಅವಿನ್ ಒಟ್ಟಿಗೆ ಹೋದೆವು. ಅವರು ಅಂದು ನಡೆದ ಘಟನೆಯನ್ನು ಕೇಳಿದರು. ಹಳಹಳಿಸಿದರು. ತಾವೇ ಖುದ್ದಾಗಿ ಎಲ್ಲ ಪ್ರಕ್ರಿಯೆಗಳನ್ನೂ ಮುಗಿಸಿಕೊಟ್ಟರು.

ಅದಾದ ಕೆಲವು ದಿನಗಳಿಗೆ ಅವಿನ್ ಹೆಸರಿನ ಪಾಸ್ಪೋರ್ಟು ಕೈ ಸೇರಿತು. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳೂ ಸಿಕ್ಕವು. ನನ್ನ ಕಷ್ಟವನ್ನು, ಅವಮಾನವನ್ನು ಹೀಗೆ ಹಗುರವಾಗಿ ಬದಿಗಿರಿಸಿ, ನನ್ನ ಅಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆ ಬರದಂತೆ ನಡೆಸಿಕೊಂಡ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿ ವರ್ಗಕ್ಕೆ ಋಣಿ.

ನನ್ನ ಮುಂದಿನ ಪೀಳಿಗೆ ಇಂಥ ಅವಮಾನವನ್ನು ಅನುಭವಿಸಲಿಕ್ಕಿಲ್ಲ. ಚಂದದ ಬದುಕು, ಸಂಘರ್ಷವಿಲ್ಲದ, ಸಮಾಧಾನದ ಬದುಕು ಅವರದ್ದಾಗಬಹುದು. ನಾನು ಆಶಾವಾದಿ. ಹೋರಾಡದೇ ನನಗೇನೂ ಸಿಕ್ಕಿಲ್ಲ. ಆದರೆ ನನ್ನ ಹೋರಾಟದ ಫಲ ಮುಂದಿನ ತಲೆಮಾರಿಗೆ ಸಿಗಲಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.