ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

Published : 4 ಆಗಸ್ಟ್ 2024, 0:01 IST
Last Updated : 4 ಆಗಸ್ಟ್ 2024, 0:01 IST
ಫಾಲೋ ಮಾಡಿ
Comments

ಅದು ಆಷಾಢದ ಒಂದು ಮುಂಜಾನೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ಹೂವಿನ‌ ಮಾರುಕಟ್ಟೆ ಸಮೀಪಿಸುತ್ತಿದ್ದಂತೆಯೇ ವಾಹನಗಳ ಸಂಖ್ಯೆ ಏರತೊಡಗಿದವು. ಜೊತೆಗೇ ಸಾಗುತ್ತಿದ್ದ ಬಹುತೇಕ‌ ಬಿಎಂಟಿಸಿ ಬಸ್ಸುಗಳ ಬೋರ್ಡ್‌ಗಳು ‘ಕೆ.ಆರ್.ಮಾರುಕಟ್ಟೆ’ ಎಂದು ತೋರುತ್ತಿದ್ದವು. ಗಾಡಿ ನಿಲ್ಲಿಸಿ ಮಾರುಕಟ್ಟೆ ಕಡೆ ನಡೆಯುತ್ತಿದ್ದಂತೆ, ಹೂವಿನ ಸುವಾಸನೆ ಬೆರೆತ ಗಾಳಿ ಮೂಗಿಗೆ ಹಿತವಾಗಿ ಬಡಿಯಿತು. ಅದೇ ಗುಂಗಿನಲ್ಲಿದ್ದಾಗ, ‘ಎಷ್ಟು ಬೇಕಣ್ಣ..? ಮಾರಿಗೆ ಮೂವತ್ತು ರೂಪಾಯಿ..’ ಕನಕಾಂಬರವನ್ನು ನೇಯ್ದು ಗುಡ್ಡೆ ಹಾಕಿದ್ದ ಮಹಿಳೆಯೊಬ್ಬರ ಮಾತು ಮುಗಿಯುವುದಕ್ಕೂ ಮುನ್ನವೇ ಪಕ್ಕದಲ್ಲಿ ಇನ್ನೊಂದು ಧ್ವನಿ ತೂರಿ ಬಂತು, ‘ಇಲ್ಲಿ ಬಾರಣ್ಣ, ಹಾರಕ್ಕೆ ನಲ್ವತ್ತು ರೂಪಾಯಿ’ ಮಲ್ಲಿಗೆಹಾರ ಮಾರುತ್ತಿದ್ದ ಮಹಿಳೆಯೊಬ್ಬರ ಒತ್ತಾಯ. ಪಕ್ಕದಲ್ಲೇ ಚಳಿಗೆ ಮುದುಡಿದ್ದ ಮಹಿಳೆಯೊಬ್ಬರ ಕ್ಷೀಣಧ್ವನಿ, ‘ಒಂದಕ್ಕೆ ಐದು ರೂಪಾಯಿ, ಬೋಣಿ ಮಾಡಪ್ಪ’. ಅವರ ಮುಂದಿದ್ದ ಬುಟ್ಟಿಯಲ್ಲಿ ತಾವರೆ ಹೂವುಗಳಿದ್ದವು. ‘ನೂರು ಗ್ರಾಮ್‌ಕ ಮುಪ್ಪದ್ರುವಾ, ಇಂಗ್ ವಾ’ ಚೀಲದಲ್ಲಿ ಹಳದಿ ಗುಲಾಬಿಗಳನ್ನು ರಾಶಿ ಹಾಕಿದ್ದವಳ ಮನವಿ. ಬಣ್ಣ ಬಣ್ಣದ ಹೂಗಳಿಂದ ನೇಯ್ದು ಮಾಡಿದ ಹಾರಗಳನ್ನು ಹಿಡಿದ ಯುವಕನೊಬ್ಬ ‘ಲೇಲೋ ಭಯ್ಯ, ಸಾಠ್ ರುಪಾಯ’ ಎಂದು ಬೆನ್ನುಬಿದ್ದ. ‘ಸೈಡೇ…’ ಎಂದು ಕೂಗುತ್ತಾ ಬಂದ ಕೂಲಿಯೊಬ್ಬ ಜನಜಂಗುಳಿಯಲ್ಲಿ ಸರಿದು ಮಾಯವಾದ. ವಿವಿಧ ಆಕಾರದ ಹತ್ತಾರು ಚೀಲಗಳನ್ನು ಎಡಗೈಗೆ ಸಿಲುಕಿಸಿಕೊಂಡು, ಬಲಗೈಯಲ್ಲಿ ಬೀಡಿ ಸೇದುತ್ತಿದ್ದ ವೃದ್ಧರೊಬ್ಬರು ಗಿರಾಕಿಗಾಗಿ ಕಾಯುತ್ತಿದ್ದರು. ತಮಗೆ ಬೇಕಾದ ಹೂವುಗಳನ್ನು ಅರಸುತ್ತಿದ್ದ ಗ್ರಾಹಕರು, ಚೌಕಾಶಿ ಮಾಡಿ ಖರೀದಿಸಿ, ಒಂದಿಷ್ಟು ಉಳಿತಾಯ ಮಾಡಿದ ನೆಮ್ಮದಿ ತಮ್ಮದಾಗಿಸಿಕೊಂಡು ಮುಂದೆ ಸಾಗುತ್ತಿದ್ದರು.

ಬಸ್ ನಿಲ್ದಾಣದ ಕಡೆಯಿಂದ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಕೆಂಪು, ಹಳದಿ, ಬಿಳಿ, ಕೇಸರಿ ಬಣ್ಣದ ಗುಲಾಬಿಗಳನ್ನು ಬುಟ್ಟಿಗಳಲ್ಲಿ ತುಂಬಿಕೊಂಡು ಬಂದ ರೈತರು, ವರ್ತಕರು ಗ್ರಾಹಕರನ್ನು ಕಂಡಕೂಡಲೇ ಬೆಲೆ ಹೇಳಿ ಕರೆಯುತ್ತಾರೆ. ತಾವೇ ಬೆಳೆದು ಮಾರಾಟ ಮಾಡುವ ರೈತರು, ರೈತರಿಂದ ಖರೀದಿ ಮಾಡಿ ತಂದವರು ಗುಲಾಬಿಗಳನ್ನು 20 ಹೂವುಗಳ ಕಟ್ಟುಗಳಾಗಿ ಕಟ್ಟಿ, ಅದಕ್ಕೊಂದು ದರ ನಿಗದಿ ಪಡಿಸುತ್ತಾರೆ. ಹಸಿರುಮನೆಯಲ್ಲಿ ಬೆಳೆದ ಗುಲಾಬಿಗಳನ್ನು ಗುಚ್ಛದಂತೆ ಕಟ್ಟಿ‌ ಮಾರಾಟ ಮಾಡುತ್ತಾರೆ. ‘ಈಗ ಕಟ್ಟಿಗೆ 20 ರೂಪಾಯಿ ನಡೆಯುತ್ತಿದೆ. ಹಬ್ಬದ ಸೀಸನ್‌ ಶುರುವಾದ್ರೆ 200 ರೂಪಾಯಿವರೆಗೂ ಹೋಗುತ್ತದೆ’ ಎಂದರು ಗುಲಾಬಿ ವ್ಯಾಪಾರಿ ಮೂರ್ತಿ. ಹೊಸಕೋಟೆ, ಚಿಕ್ಕತಿರುಪತಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಇಲ್ಲಿಗೆ ಗುಲಾಬಿ ಬರುತ್ತದೆ.

ಮಾರುಕಟ್ಟೆ ಸಂಕೀರ್ಣದತ್ತ ಹೆಜ್ಜೆ ಹಾಕಿದರೆ ಬಗೆ ಬಗೆಯ ಹೂಗಳ ದರ್ಶನವಾಗುತ್ತದೆ. ಮಲ್ಲಿಗೆ, ಜಾಜಿ, ಸೇವಂತಿ, ಕಮಲ, ಚೆಂಡು ಹೂ, ಸುಗಂಧರಾಜ, ಜರ್ಬೆರಾ, ಕೇದಗೆ, ಕನಕಾಂಬರ, ಸೂರ್ಯಕಾಂತಿ ಹೂವುಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು ಮಾರುತ್ತಾರೆ. ಹೀಗೆ ಮಾರಾಟ ಮಾಡುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು. ಮುಂಜಾನೆ ಎರಡು ಗಂಟೆಗೆ ಬಂದು ಮಂಡಿಯಲ್ಲಿ ಹೂವುಗಳನ್ನು ಖರೀದಿಸಿ ಮಾರಾಟ ಮಾಡುತ್ತಾರೆ. ರಸ್ತೆಬದಿಯಲ್ಲಿ ಬೆಳಿಗ್ಗೆ 9 ಗಂಟೆವರೆಗೂ ವ್ಯಾಪಾರ ಸಾಗುತ್ತದೆ. ಹೂ ಖಾಲಿಯಾದರೆ ನೆಮ್ಮದಿ. ಇಲ್ಲದಿದ್ದರೆ ಮುಂದಿನ ದಿನಕ್ಕೆ ಕಾಪಾಡುವ ತಲೆನೋವು. ತಲೆಮಾರುಗಳಿಂದ ಇದೇ ವ್ಯಾಪಾರ ಮಾಡಿಕೊಂಡು ಬಂದವರಿದ್ದಾರೆ. ಹಲವರಿಗೆ ಹೂವು ಸ್ವಾಭಿಮಾನದ ಬದುಕು ಕೊಟ್ಟಿದೆ. ಇದರಿಂದಲೇ ಬದುಕು ಕಟ್ಟಿಕೊಂಡವರ ಸಂಖ್ಯೆ ದೊಡ್ಡದಿದೆ.

‘ನಲವತ್ತು ವರ್ಷಗಳಿಂದ ಈ ವ್ಯಾಪಾರ ಬದುಕು ಕೊಟ್ಟಿದೆ. ಬೆಳಗ್ಗೆ ಮೂರು ಗಂಟೆಗೆ ಬರುತ್ತೇನೆ. ಮಾರುಕಟ್ಟೆ ಯಾವತ್ತೂ ಸಾಕೆನಿಸಿದ್ದಿಲ್ಲ. ಇವಳನ್ನು ಸಾಕಿದ್ದೇ ಈ ಕೆಲಸ ಮಾಡಿ’ ಎಂದು ಪಕ್ಕದಲ್ಲಿದ್ದ ಮಗಳು ರೇಖಾ ಕಡೆಗೆ ಕೈ ತೋರಿಸಿದರು ಲಕ್ಷ್ಮೀ. ರೇಖಾರ ಮೂರು ಮಕ್ಕಳಲ್ಲಿ ದೊಡ್ಡವ ಎಸ್ಸೆಸ್ಸೆಲ್ಸಿ. ಇನ್ನಿಬ್ಬರು ಹೆಣ್ಣುಮಕ್ಕಳು ಮೂರನೇ ತರಗತಿ ಹಾಗೂ ಎಲ್.ಕೆ.ಜಿಯಲ್ಲಿ ಓದುತ್ತಿದ್ದಾರೆ. ಹೂವಿನ ವ್ಯಾಪಾರದಿಂದಲೇ ಮಕ್ಕಳ‌ ಶಿಕ್ಷಣ ಸಾಗಿದೆ.

ಮೊಗ್ಗಿನ ಜಡೆ, ದಿಂಡು, ಹಾರ, ತುಳಸಿ, ಅಲಂಕಾರಿಕ ಸೊಪ್ಪುಗಳನ್ನು ಮಾರುವವರಲ್ಲೂ ಮಹಿಳೆಯರ ಸಂಖ್ಯೆ ಅಧಿಕ. ಗ್ರಾಹಕರ ದುಂಬಾಲು ಬಿದ್ದು, ಚೌಕಾಶಿ ಮಾಡಿ ಹೂವುಗಳನ್ನು ಗ್ರಾಹಕರಿಗೆ ದಾಟಿಸಿ, ಹಣ ಎಣಿಸಿ ಕೈಚೀಲದಲ್ಲಿ ಇರಿಸಿಕೊಂಡು ಮತ್ತೆ ಕೂಗುವ ‘ಪ್ರಕ್ರಿಯೆ’ ಶುರುವಾಗುತ್ತದೆ. ಯಾರಿಗೋ ಫೋನ್ ಮಾಡಿ ಅವರ ವ್ಯಾಪಾರ ವಿಚಾರಿಸುವ, ರೇಟು ಕೇಳುವ, ಮಕ್ಕಳ ಕಾಳಜಿ ವಹಿಸಿ ಮನೆಯವರೊಂದಿಗೆ ಮಾತನಾಡುವ ಮಹಿಳಾ ವ್ಯಾಪಾರಿಗಳೂ ಕಣ್ಣಿಗೆ ಬಿದ್ದರು.

ತಾವರೆ ಹೂವು 
ತಾವರೆ ಹೂವು 

‘ಕ್ರಿಕೆಟ್ ಅಭ್ಯಾಸಕ್ಕೆ ಆರು ಗಂಟೆಗೆ ಮಗ ತೆರಳಬೇಕು. ಯಜಮಾನರಿಗೆ ಕರೆ ಮಾಡಿ ನೆನಪಿಸಿದೆ’ ಮೊಗ್ಗಿನ ಜಡೆಗಳನ್ನು ಮಾರುತ್ತಿದ್ದ ಬನಶಂಕರಿಯ ಸಾವಿತ್ರಿ ಮಾತು ಮುಗಿಸುವುದಕ್ಕೂ, ಸೋನೆ ಮಳೆ ಶುರುವಾಯಿತು. ಐದು ನಿಮಿಷದ ಮಳೆ ಇಡೀ ಮಾರುಕಟ್ಟೆಯ ಚಹರೆಯನ್ನೇ ಬದಲಿಸಿತು. ಹೂವುಗಳನ್ನು ರಕ್ಷಿಸುವಲ್ಲಿ ವ್ಯಾಪಾರಿಗಳು ತಲ್ಲೀನರಾದರೆ, ಖರೀದಿ ಮುಗಿಸಿ ಹೊರಡುವ ಧಾವಂತದಲ್ಲಿ ಗ್ರಾಹಕರಿದ್ದರು. ಮಳೆಯಿಂದ ತಪ್ಪಿಸಿಕೊಳ್ಳಲು ಕಟ್ಟಡಗಳ ಚಾವಣಿಯ ಕೆಳಗೆ ಆಶ್ರಯ ಪಡೆಯುವವರ ಬಳಿ ಟೀ, ಬನ್ನು‌, ಬಿಸ್ಕತ್ತು ಮಾರುವವನ ವ್ಯಾಪಾರ ಭರ್ಜರಿಯಾಗಿ ಸಾಗಿತ್ತು. ತಲೆಗೆ ಪ್ಲಾಸ್ಟಿಕ್ ಚೀಲ ಕಟ್ಟಿ ಹಮಾಲಿಯವನ ಕೆಲಸ ಸಾಗುತ್ತಲೇ ಇತ್ತು. ಇಲ್ಲಿಂದ ಖರೀದಿ ಮಾಡಿ ದೇವಸ್ಥಾನಗಳ ಮುಂದೆ ಮಾರುವವರು ಆಟೊದವನ ಮರ್ಜಿಗಾಗಿ ಕಾಯುತ್ತಿದ್ದರು.

ಮಾರುಕಟ್ಟೆ ಸಂಕೀರ್ಣದೊಳಗೆ ತೆರಳಿದರೆ ಅಲ್ಲಿ ಹೂವುಗಳ ಬೇರೆಯದೇ ಲೋಕ ಅನಾವರಣಗೊಳ್ಳುತ್ತದೆ. ವಿವಿಧ ಹೂವುಗಳಿಂದ ಕಟ್ಟಿರುವ ಬಗೆ ಬಗೆಯ ಹಾರಗಳು ಕಣ್ಮನ ಸೆಳೆಯುತ್ತವೆ. ಹಾರ ಕಟ್ಟುವವರ ಕಸುಬುದಾರಿಕೆ, ಪರಿಪೂರ್ಣತೆ, ನೈಪುಣ್ಯತೆ ಬೆರಗುಗೊಳಿಸುತ್ತವೆ. ಉದ್ದಕ್ಕೆ ಇರುವ ಅಂಗಡಿಗಳ ಮುಂದೆ ಸಾಲಾಗಿ ತೂಗಿರುವ ವಿವಿಧ ಗಾತ್ರಗಳ ಹಾರಗಳನ್ನು ನೋಡುವುದೇ ಚೆಂದ. ಎತ್ತರದ ನೆಲಹಾಸು ಇರುವ ಅಂಗಡಿಯೊಳಗೆ ಕುಳಿತು ಮಾಲೆ ಕಟ್ಟುವವರ ಕಣ್ಣಲ್ಲಿ ಹಲವು ಕನಸುಗಳಿದ್ದವು. ಗುಲಾಬಿ, ಸೇವಂತಿ, ಕಮಲ, ಕನಕಾಂಬರದ ವಿವಿಧ ಗಾತ್ರಗಳ ಮಾಲೆಗಳು ಮೆರವಣಿಗೆ ಹೊರಟಂತಿತ್ತು. ದೇವರ ಅಲಂಕಾರಕ್ಕೆ, ಶುಭಕಾರ್ಯಗಳಿಗೆ ಹಾರಗಳ ತಲಾಶೆಯಲ್ಲಿ ಬಂದವರು ವ್ಯಾಪಾರ‌ ಕುದುರಿಸುತ್ತಿದ್ದರು. ‘ಇಲ್ಲಿಂದ ರಾಜ್ಯ ವಿವಿಧ ಭಾಗಗಳಿಗೆ ಹಾರಗಳು ಹೋಗುತ್ತವೆ. ಪಕ್ಕದ ಆಂಧ್ರ, ತೆಲಂಗಾಣ ತಮಿಳುನಾಡು, ಕೇರಳಕ್ಕೂ ಕಳುಹಿಸಿಕೊಡುತ್ತೇವೆ. ಹಬ್ಬ ಹಾಗೂ ಚುನಾವಣೆ ಸಮದಲ್ಲಿ ಬೇಡಿಕೆ ಹೆಚ್ಚು’ ಎನ್ನುವುದು ವ್ಯಾಪಾರಿಯೊಬ್ಬರ ಮಾತು.

ಅಂಗಡಿಯೊಂದರಿಂದ ಗುಂಜೂರಿನ ಪಟೇಲಮ್ಮ ದೇವಿಯ ಅಲಂಕಾರಕ್ಕೆ ಐದಾರು ಬೃಹತ್ ಗಾತ್ರ ಹಾರಗಳನ್ನು ಸಮಿತಿ ಸದಸ್ಯರು ಖರೀದಿ ಮುಗಿಸುವುದರೊಳಗೆ ಕೂಲಿಯೊಬ್ಬ ಎಲ್ಲಿಂದಲೋ ಪ್ರತ್ಯಕ್ಷನಾಗಿದ್ದ. ‘15 ವರ್ಷದಿಂದ ಕೂಲಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಊರಲ್ಲಿ ದಿನದ ಕಮಾಯಿ ₹200 ದಾಟುವುದಿಲ್ಲ. ಇಲ್ಲಿ ₹1 ಸಾವಿರದವರೆಗೂ ದುಡಿಯುತ್ತೇನೆ’ ಎಂದು ಪಶ್ಚಿಮ ಬಂಗಾಳದ ಪುರ್ನಿಯಾದ ಅರ್ಶಾದ್ ಹೇಳಿದರು.

ಅಲ್ಲಿಯೇ ಪಕ್ಕದಲ್ಲಿರುವ ಮಂಡಿಯಲ್ಲಿ ಹೂವುಗಳನ್ನು ಗುಡ್ಡೆ ಹಾಕಿ, ಕೆ.ಜಿ ಲೆಕ್ಕದಲ್ಲಿ ಮಾರಲಾಗುತ್ತದೆ. ಹರಾಜಿನಲ್ಲಿ ಕೊಳ್ಳುವವರೂ ಇದ್ದಾರೆ. ಮಾರುಕಟ್ಟೆ ದೊಡ್ಡ ವ್ಯಾಪಾರಿಗಳು ಹಿಡಿತದಲ್ಲಿದೆ. ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಕೈಗಾಡಿ ತಳ್ಳಿಕೊಂಡು ಬರುವ ಬಿಬಿಎಂಪಿಯ ಪೌರ ಕಾರ್ಮಿಕರು ಮಾರುಕಟ್ಟೆಯನ್ನು ಒಪ್ಪವಾಗಿಸುತ್ತಾರೆ. ದಿನದ ಎರಡನೇ ಭಾಗದ ವ್ಯವಹಾರ ಆರಂಭವಾಗುತ್ತದೆ.

ಸಾಮರಸ್ಯಕ್ಕೂ ಮಾದರಿ

ಸಾವಿರಾರು ಕುಟುಂಬಗಳ ಆಧಾರಸ್ತಂಭವಾಗಿರುವ ಈ ಮಾರುಕಟ್ಟೆ, ಧಾರ್ಮಿಕ‌ ಸಾಮರಸ್ಯದ ಪ್ರತೀಕವೂ ಹೌದು. ಒಂದು ಕಾಲದಲ್ಲಿ ಯುದ್ಧಭೂಮಿಯಾಗಿದ್ದ ಈ ಸ್ಥಳ ಈಗ ಸಹಬಾಳ್ವೆಯ ತಾಣವಾಗಿದೆ. ಜಾಮಿಯ ಮಸೀದಿಯ ಮಿನಾರಗಳಿಂದ ಕೇಳಿಬರುವ ಮುಂಜಾನೆ ಅಜಾನ್ ವೇಳೆ ಭಕ್ತಿಯಿಂದ ಕಣ್ಣು‌ ಮುಚ್ಚುವ ಸಣ್ಣಮ್ಮ, ಉದ್ಭವಮೂರ್ತಿ ಮಹಾಗಣಪತಿ ದೇವಸ್ಥಾನದ ಘಂಟೆ ನಾದಕ್ಕೆ ಭಕ್ತಿಪರವಶರಾಗುವ ಲಿಯಾಕತ್ ಅಲಿ ನಡುವೆ ಯಾವುದೇ ಗೋಡೆಗಳಿಲ್ಲ. ಅಂಗಡಿಯೊಳಗಿನ ಸ್ಪೀಕರ್‌ಗಳಲ್ಲಿ ಸುಪ್ರಭಾತ, ಕುರಾನ್ ಶ್ಲೋಕಗಳು ಮೊಳಗುತ್ತವೆ. ಧರ್ಮ, ಭಾಷೆ, ಪ್ರಾದೇಶಿಕತೆ, ಜಾತಿಯ ಸೋಂಕುಗಳ ದುರ್ಗಂಧವನ್ನು ಬಗೆಬಗೆಯ ಹೂವುಗಳ ಸುಗಂಧ ಮುಚ್ಚಿಹಾಕಿದೆ.

ಮಾರುಕಟ್ಟೆ ಪ್ರದಕ್ಷಿಣೆ ಮುಗಿಸಿ ಟೌನ್‌ಹಾಲ್‌ ಕಡೆ ಹೊರಟರೆ, ದಾರಿಯ ಇಕ್ಕೆಲಗಳಲ್ಲೂ ಹೂಗುಚ್ಛ ವ್ಯಾಪಾರಿಗಳ ಸಾಲು.. ಗುಚ್ಛಗಳ ಜೊತೆ ಸೆಲ್ಫಿ ಕ್ಲಿಕ್ಕಿಸುವ ಹರೆಯದ ಹುಡುಗ ಹುಡುಗಿಯರು, ರೀಲ್ಸ್ ಪ್ರಿಯರು ತಮ್ಮದೇ ಲೋಕದಲ್ಲಿ ಮುಳುಗಿದ್ದರು. ವ್ಲಾಗರ್‌ಗಳ ಪ್ರಶ್ನೆಗಳಿಗೆ ಉತ್ತರಿಸುತ್ತಲೇ, ಗ್ರಾಹಕರೊಂದಿಗೆ ವ್ಯವಹರಿಸುವ ವ್ಯಾಪಾರಿಗಳೂ ಸಿಗುತ್ತಾರೆ. ವ್ಯಾಪಾರ ಕಡಿಮೆ ಇದ್ದವರ ಮೋರೆಯಲ್ಲಿ ಬೇಸರದ ಗೆರೆಗಳು ಕಾಣಿಸುತ್ತವೆ. ಮಾಲು ಖಾಲಿಯಾದವರು ಹಣ ಎಣಿಸಿ ಸಂತೋಷದಿಂದ ಹೊರಡಲು ಅಣಿಯಾಗುತ್ತಿರುತ್ತಾರೆ. ಮೂಗಿಗೆ ಬಡಿದ ಸುವಾಸನೆಯನ್ನು ಆಘ್ರಾಣಿಸಿ ಹೊರಟರೆ, ಹೂವಿನ ಗುಂಗು ಕೆಲಹೊತ್ತು ನಿಮ್ಮನ್ನು ಆವರಿಸುತ್ತದೆ.

ಮಾರುಕಟ್ಟೆಯಲ್ಲಿ ಹೂವಿನ ಮಾರಾಟದ ಭರಾಟೆ 
ಮಾರುಕಟ್ಟೆಯಲ್ಲಿ ಹೂವಿನ ಮಾರಾಟದ ಭರಾಟೆ 
ಕೆ.ಆರ್‌.ಮಾರುಕಟ್ಟೆ ಇತಿಹಾಸ
‘ಸಿಟಿ ಮಾರ್ಕೆಟ್’ ಎಂದು ಕರೆಸಿಕೊಳ್ಳುವ ಕೆ.ಆರ್.ಮಾರುಕಟ್ಟೆ ನಿರ್ಮಾಣವಾಗಿದ್ದು 1928ರಲ್ಲಿ. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು. ಈ ಮಾರುಕಟ್ಟೆಗೆ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಲಾಗಿದೆ. ಮೊದಲು ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡ ತಮ್ಮ ಸಂಬಂಧಿ ಸಿದ್ದಿ ಹೆಸರಿನಲ್ಲಿ ಕಟ್ಟಿದ್ದ ‘ಸಿದ್ದಿಕಟ್ಟೆ ಕೆರೆ’ ಇತ್ತು. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮತ್ತು ಟಿಪ್ಪು ಸುಲ್ತಾನ್ ನಡುವೆ ನಡೆದ ಮೂರನೇ ಆಂಗ್ಲೋ–ಮೈಸೂರು ಯುದ್ಧದ ವೇಳೆ ರಣಭೂಮಿಯಾಗಿತ್ತು. 1905 ಆಗಸ್ಟ್ 5ರಂದು ಏಷ್ಯಾದಲ್ಲೇ ಮೊದಲು ವಿದ್ಯುತ್‌ ದೀಪ ಬೆಳಗಿದ್ದು ಇದೇ ಪ್ರದೇಶದಲ್ಲಿ ಎಂದು ಇತಿಹಾಸ ಕುರಿತು ಒಲವಿರುವ ಧರ್ಮೇಂದ್ರಕುಮಾರ್‌ ಅರೇನಹಳ್ಳಿ ಮಾಹಿತಿ ನೀಡಿದರು. ಈಗಿರುವ ಮೂರು ಮಹಡಿಯ ಕಟ್ಟಡ ನಿರ್ಮಾಣವಾಗಿದ್ದು 90ರ ದಶಕದಲ್ಲಿ.

‘ಮೂಲಸೌಕರ್ಯಗಳು ಬೇಕು’

ಮಾರುಕಟ್ಟೆ ಶತಮಾನದ ಹೊಸ್ತಿಲಿನಲ್ಲಿದ್ದರೂ, ಮೂಲಸೌಕರ್ಯ ಇಲ್ಲ ಎನ್ನುವುದು ಹಲವರ ದೂರು. ದೊಡ್ಡ ಮಾರುಕಟ್ಟೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರು ಇದರಿಂದ ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಎಟಿಎಂ ಬೇಕು, ಸಂಕೀರ್ಣದೊಳಗೆ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ಬೇಕು, ಒಳಗೆ ಬರಲು ಸರಿಯಾದ ದಾರಿ ಇಲ್ಲ, ಸ್ಮಾರ್ಟ್ ಸಿಟಿ ಯೋಜನೆಯಡಿ ಬಂದರೂ ಅಂಥದ್ದೇನೂ ಪ್ರಗತಿ ಕಂಡಿಲ್ಲ, ವಿಶ್ರಾಂತಿ ಸ್ಥಳಗಳಿಲ್ಲ, ತುರ್ತು ಆರೊಗ್ಯ ಸೇವೆ ಇಲ್ಲ ಎನ್ನುವುದು ಹಲವು ವರ್ತಕರ, ಗ್ರಾಹಕರ ಅಹವಾಲು. ಮಾರುಕಟ್ಟೆಯನ್ನು ಇನ್ನಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಹಲವರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT