ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧಗಳ ಹೆಜ್ಜೆ ಗುರುತಿನ ಮ್ಯೂಸಿಯಂ

Published 17 ಆಗಸ್ಟ್ 2024, 23:37 IST
Last Updated 17 ಆಗಸ್ಟ್ 2024, 23:37 IST
ಅಕ್ಷರ ಗಾತ್ರ

ರಾಜಸ್ಥಾನದ ಜೈಸಲ್ಮೇರ್ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸುಂದರ ನಗರವಾಗಿದ್ದು, ಕೋಟೆಗಳು, ಸುಂದರವಾದ ಮರಳು ದಿಬ್ಬಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿ. ಮರಳುಗಾಡಿನಲ್ಲಿ ಮೋಜು ಮಸ್ತಿಗಾಗಿ ಈ ನಗರಕ್ಕೆ ಬರುವವರೇ ಹೆಚ್ಚು. ಆದರೆ ಇಲ್ಲಿ ಮರೆಯದೇ ನೋಡಬೇಕಾದ ‘ಜೈಸಲ್ಮೇರ್ ಯುದ್ಧ ವಸ್ತುಸಂಗ್ರಹಾಲಯ’ವೂ ಇದೆ. ‘ಜೈಸಲ್ಮೇರ್ ವಾರ್ ಮ್ಯೂಸಿಯಂ’ ಎಂದು ಕರೆಯಲ್ಪಡುವ ಈ ಸಂಗ್ರಹಾಲಯ ಜೈಸಲ್ಮೇರ್-ಜೋಧ್‌ಪುರ ಹೆದ್ದಾರಿಯಲ್ಲಿ, ಜೈಸಲ್ಮೇರ್‌ನಿಂದ 10 ಕಿ.ಮೀ ದೂರದ ಥೈಯಾಟ್‌ನಲ್ಲಿದೆ.

ಭಾರತೀಯ ಸೈನಿಕರ ಅಗಾಧಶಕ್ತಿ ಮತ್ತು ಯುದ್ಧಕಾಲದಲ್ಲಿ ಅವರ ಶೌರ್ಯ ಸಾಹಸಗಳು ಮತ್ತು ತ್ಯಾಗಗಳನ್ನು ಪ್ರದರ್ಶಿಸುವ ಈ ವಸ್ತುಸಂಗ್ರಹಾಲಯ, ದೇಶದ ಮಿಲಿಟರಿ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವವರು ಭೇಟಿ ನೀಡಲೇಬೇಕಾದ ಸ್ಥಳ. ಇಲ್ಲಿಗೆ ಭೇಟಿ ಕೊಟ್ಟ ನಂತರ ಸೈನಿಕರ ಬಲಿದಾನದ ಬಗ್ಗೆ ಹೆಮ್ಮೆ ಎನಿಸುತ್ತದೆ.

ಜೈಸಲ್ಮೇರ್ ವಾರ್ ಮ್ಯೂಸಿಯಂನ ಪರಿಕಲ್ಪನೆ ಲೆಫ್ಟಿನೆಂಟ್ ಜನರಲ್ ಬಾಬಿ ಮ್ಯಾಥ್ಯೂಸ್ ಅವರದ್ದು. ಇದನ್ನು ಸಾಕಾರಗೊಳಿಸಿದ್ದು ಭಾರತೀಯ ಸೇನೆಯ ಡೆಸರ್ಟ್‌ ಕಾರ್ಪ್ಸ್‌ ತಂಡ. ಈ ವಸ್ತುಸಂಗ್ರಹಾಲಯವನ್ನು ಭಾರತೀಯ ವಾಸ್ತುಶಿಲ್ಪಿ ಜಸ್ಬೀರ್ ಸಾಹ್ನಿ ವಿನ್ಯಾಸಗೊಳಿಸಿದ್ದಾರೆ. ಈ ಸಂಗ್ರಹಾಲಯವನ್ನು 1965ರ ಭಾರತ–ಪಾಕಿಸ್ತಾನ ಯುದ್ಧದ ಸುವರ್ಣ ಮಹೋತ್ಸವದ ಸ್ಮರಣಾರ್ಥ 2015ರ ಆಗಸ್ಟ್ 24ರಂದು ರಾಷ್ಟ್ರಕ್ಕೆ ಸಮರ್ಪಿಸಲಾಯಿತು.

ಯುದ್ಧಗಳಲ್ಲಿ ಬಳಸಲಾದ ಟ್ಯಾಂಕರ್‌ಗಳ ಪ್ರದರ್ಶನ 
ಯುದ್ಧಗಳಲ್ಲಿ ಬಳಸಲಾದ ಟ್ಯಾಂಕರ್‌ಗಳ ಪ್ರದರ್ಶನ 

1971ರಲ್ಲಿ ನಡೆದ ಲೋಂಗೇವಾಲಾ ಕದನ ಸೇರಿದಂತೆ ಹಲವಾರು ಕದನಗಳಿಗೆ ಸಾಕ್ಷಿಯಾದ ಜೈಸಲ್ಮೇರ್ ಜಿಲ್ಲೆಯನ್ನು ಈ ಸಂಗ್ರಹಾಲಯದ ಸ್ಥಾಪನೆಗಾಗಿ ಆಯ್ಕೆ ಮಾಡಲಾಯಿತು. ಜೈಸಲ್ಮೇರ್ ಮಿಲಿಟರಿ ಸ್ಟೇಷನ್‌ನೊಳಗೆ 15 ಎಕರೆ ವಿಸ್ತೀರ್ಣವನ್ನು ಹೊಂದಿದ ಪ್ರದೇಶದಲ್ಲಿ ಜೈಸಲ್ಮೇರ್ ವಾರ್ ಮ್ಯೂಸಿಯಂ ನಿರ್ಮಿಸಲಾಗಿದೆ.

ವಸ್ತುಸಂಗ್ರಹಾಲಯವು ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಶೌರ್ಯ ಪ್ರಶಸ್ತಿ ಪುರಸ್ಕೃತರ ಗೌರವಾರ್ಥ ಅವರ ಹೆಸರನ್ನು ಕೆತ್ತಿದ ಗೋಡೆಯನ್ನು ಹೊಂದಿದೆ. ಇಂಡಿಯನ್ ಆರ್ಮಿ ಹಾಲ್ ಮತ್ತು ಲಾಂಗೇವಾಲಾ ಹಾಲ್ ಎಂಬ ಎರಡು ದೊಡ್ಡ ಮಾಹಿತಿ ಪ್ರದರ್ಶನ ಸಭಾಂಗಣಗಳು, ಧ್ವನಿ ಬೆಳಕಿನ ಕೊಠಡಿ ಹೊಂದಿದೆ. ಜೈಸಲ್ಮೇರ್ ಯುದ್ಧ ವಸ್ತುಸಂಗ್ರಹಾಲಯವು ಭಾರತದ ಶ್ರೀಮಂತ ಮಿಲಿಟರಿ ಇತಿಹಾಸವನ್ನು ಪ್ರದರ್ಶಿಸಲು ಮತ್ತು ಭಾರತೀಯ ಯೋಧರ ಅಪ್ರತಿಮ ಸಾಹಸವನ್ನು ಪರಿಚಯಿಸಲು ಮಾಡಿದ ವಿಶಿಷ್ಟ ಪರಿಕಲ್ಪನೆಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಮಾಡಿದ ತ್ಯಾಗದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.

ಯುದ್ಧ ಟ್ರೋಫಿಗಳು ಮತ್ತು ವಿಂಟೇಜ್ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಭಿತ್ತಿಚಿತ್ರಗಳು ಮತ್ತು ಆ ಸಮಯದಲ್ಲಿ ಬಳಸಲಾದ ಬಂದೂಕುಗಳು ಇತ್ಯಾದಿ ಶಸ್ತ್ರಾಸ್ತ್ರಗಳಿವೆ. 1971ರ ಇಂಡೋ–ಪಾಕ್ ಯುದ್ಧದ (ಲೋಂಗೇವಾಲಾ ಸಮರ) ಸಮಯದಲ್ಲಿ ಬಳಸಲಾದ ಭಾರತೀಯ ವಾಯುಪಡೆಯ ಫೈಟರ್ ವಿಮಾನವನ್ನು ನೋಡಬಹುದು. ಯೋಧರ ಸಾಹಸಗಾಥೆಯನ್ನು ಸಾಕ್ಷ್ಯಚಿತ್ರದ ಮೂಲಕ ತೋರಿಸಲಾಗುತ್ತದೆ. ಕಾರ್ಗಿಲ್‌ ಕದನದ ಬೃಹತ್ ಪ್ರತಿಕೃತಿಯನ್ನೂ ನಿರ್ಮಿಸಿರುವುದು ವಿಶೇಷ. ಯುದ್ಧ ಟ್ಯಾಂಕ್‌ಗಳು ಮತ್ತಿತರ ಮಿಲಿಟರಿ ವಾಹನಗಳನ್ನು ವಿಶಾಲವಾದ ಬಯಲಿನಲ್ಲಿ ನೋಡಬಹುದು.

ಲೋಂಗೇವಾಲಾ ಹಾಲ್: ಡಿಸೆಂಬರ್ 4, 1971ರ ರಾತ್ರಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಲೋಂಗೇವಾಲಾ ಕದನ ಕುರಿತ ಮಾಹಿತಿಯನ್ನು ಈ ಹಾಲ್ ಪ್ರದರ್ಶಿಸುತ್ತದೆ. ಆ ಯುದ್ಧದ ಸಮಯದಲ್ಲಿ ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಗಳನ್ನು ಸಹ ಪ್ರದರ್ಶಿಸಲಾಗಿದೆ. ಇಲ್ಲಿ ಇರಿಸಲಾದ 106ಮಿ.ಮಿ ಆರ್‌.ಸಿ.ಎಲ್‌ ಗನ್ ಲೋಂಗೇವಾಲಾ ಕದನದ ಸಮಯದಲ್ಲಿ ಸೇನೆಯ ರಕ್ಷಾಕವಚದ ರೀತಿ ಕಾರ್ಯನಿರ್ವಹಿಸಿ, ಆಕ್ರಮಣವನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.

ಲೋಂಗೇವಾಲಾ ಸಮರದ ಸಮಯದಲ್ಲಿ ಬಳಸಲಾದ ಭಾರತೀಯ ವಾಯುಪಡೆಯ ಫೈಟರ್‌ ಮಾದರಿ
ಲೋಂಗೇವಾಲಾ ಸಮರದ ಸಮಯದಲ್ಲಿ ಬಳಸಲಾದ ಭಾರತೀಯ ವಾಯುಪಡೆಯ ಫೈಟರ್‌ ಮಾದರಿ

ಇಂಡಿಯನ್ ಆರ್ಮಿ ಹಾಲ್

ಭಾರತೀಯ ಸೇನಾ ಸಭಾಂಗಣವು 1947-48ರ ಭಾರತ-ಪಾಕಿಸ್ತಾನ ಯುದ್ಧ, 1962ರ ಚೀನಾ-ಭಾರತ ಯುದ್ಧ, 1965ರ ಇಂಡೋ-ಪಾಕಿಸ್ತಾನ ಯುದ್ಧ ಮತ್ತು 1999ರ ಭಾರತ-ಪಾಕಿಸ್ತಾನ ಯುದ್ಧಗಳ (ಕಾರ್ಗಿಲ್‌ ಸಂಘರ್ಷ) ಕುರಿತದ್ದಾಗಿದೆ. ಈ ಸಭಾಂಗಣವು ಭಾರತೀಯ ಸೇನೆಯು ವಿವಿಧ ಯುದ್ಧಗಳಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು, ಭಾರತೀಯ ವಾಯುಪಡೆಯ ಹಂಟರ್ ಏರ್‌ಕ್ರಾಫ್ಟ್ ಮತ್ತು ಇತರೆ ಉಪಕರಣಗಳನ್ನು ಪ್ರದರ್ಶಿಸುತ್ತದೆ.

ಕಾರ್ಗಿಲ್‌ ಸ್ಮಾರಕ

ಆಪರೇಷನ್ ವಿಜಯ್ ನಡೆದ ಕಾರ್ಗಿಲ್‌ ಬೆಟ್ಟಗಳ ಪ್ರತಿಕೃತಿಯನ್ನು ಇಲ್ಲಿ ವಿಶೇಷವಾಗಿ ನಿರ್ಮಿಸಲಾಗಿದೆ. ಆ ದುರ್ಗಮ ಪ್ರದೇಶದಲ್ಲಿ ಕಾದಾಡಿ, ಶತ್ರುಗಳನ್ನು ಹಿಮ್ಮೆಟ್ಟಿಸಿದ ಸೈನಿಕರು ಭಾರತದ ಬಾವುಟವನ್ನು ಹಾರಿಸಿದ ರೀತಿಯನ್ನು ಕಂಡು ಮೈ ನವಿರೇಳುತ್ತದೆ. ಅದರ ಮುಂದೆ ನಿಂತು ಫೋಟೊ ತೆಗೆದುಕೊಳ್ಳುವುದರಲ್ಲಿ ನಿರತರಾದ ಪ್ರವಾಸಿಗರ ಮುಖ ಚಹರೆಗಳನ್ನು ನೋಡುವುದೇ ಒಂದು ಸಂಭ್ರಮ.

ಕಾರ್ಗಿಲ್‌ ಯುದ್ಧ

ಕಾಶ್ಮೀರದ ಕಾರ್ಗಿಲ್‌ ಜಿಲ್ಲೆ ಮತ್ತು ನಿಯಂತ್ರಣರೇಖೆಯಿರುವ ಪ್ರದೇಶಗಳಲ್ಲಿ ಮೇ 3,1999 ರಿಂದ ಜುಲೈ 26, 1999 ರ ನಡುವೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಯುದ್ಧವನ್ನು ಕಾರ್ಗಿಲ್‌ ಸಂಘರ್ಷ ಎಂದು ಹೇಳಲಾಗುತ್ತದೆ. ಆಪರೇಷನ್ ವಿಜಯ್ ಎಂದೂ ಸಹ ಕರೆಯಲಾಗುತ್ತದೆ. ಈ ಯುದ್ಧದ ನೆನಪಿನಲ್ಲಿ ವಿಜಯೋತ್ಸವದ ದಿನವಾದ ಜುಲೈ 26 ಅನ್ನು  ‘ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್‌ ಯುದ್ಧಕ್ಕೆ ಈ ವರ್ಷ ರಜತ ಮಹೋತ್ಸವದ ಸಂಭ್ರಮ.

ಯುದ್ಧಗಳಲ್ಲಿ ಬಳಸಿದ್ದ ಒಂದು ಶಸ್ತ್ರಸಜ್ಜಿತ ಟ್ಯಾಂಕರ್
ಯುದ್ಧಗಳಲ್ಲಿ ಬಳಸಿದ್ದ ಒಂದು ಶಸ್ತ್ರಸಜ್ಜಿತ ಟ್ಯಾಂಕರ್
ಕಾರ್ಗಿಲ್‌ ಮಾದರಿ - ಆಪರೇಷನ್ ವಿಜಯ್ ನೆನಪಿನ ಸ್ಮಾರಕ
ಕಾರ್ಗಿಲ್‌ ಮಾದರಿ - ಆಪರೇಷನ್ ವಿಜಯ್ ನೆನಪಿನ ಸ್ಮಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT