ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನ ಜಾತ್ರೆಯಲ್ಲಿ ‘ಕೃಪಾದೃಷ್ಟಿ’

Last Updated 4 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ನಾನು ನೇತ್ರದಾನ ಮಾಡಲು ಒಪ್ಪಿದ್ದೇನೆ, ನೀವು ಮಾಡಿ’ – ಈಚೆಗೆ ಕೊಪ್ಪಳದಲ್ಲಿ ನಡೆದ ಗವಿಮಠದ ಜಾತ್ರೆಯಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೀಗೆ ಕರೆಕೊಟ್ಟು, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ, ಜಾತ್ರೆಯ ಅಂಗಳದಲ್ಲಿ ರೆಡ್‌ಕ್ರಾಸ್ ಸಂಸ್ಥೆ ತೆರೆದಿದ್ದ ಕೌಂಟರ್‌ ಎದುರು ಭಕ್ತರು ಸಾಲಾಗಿ ನಿಂತು, ನೇತ್ರದಾನಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿದರು.

ಸುತ್ತಮುತ್ತಲಿನ ಹಳ್ಳಿಗಳಿಂದ ಜಾತ್ರೆಗೆಂದು ಕುಟುಂಬ ಸಹಿತರಾಗಿ ಬಂದವರು, ಲಿಂಗಭೇದವಿಲ್ಲದೇ, ವಯೋಭೇದವಿಲ್ಲದೇ ನೇತ್ರದಾನದ ಪತ್ರಕ್ಕೆ ಸಹಿ ಹಾಕಿದರು. ಸ್ವಾಮೀಜಿಯವರ ಈ ಒಂದು ಹೇಳಿಕೆ, 1500ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸುವಂತೆ ಉತ್ತೇಜಿಸಿತು.

ಅಂದು ವರನಟ ಡಾ. ರಾಜ್‌ಕುಮಾರ್ ನೇತ್ರದಾನಕ್ಕೆ ನೋಂದಣಿ ಮಾಡಿಸಿ ‘ಅಭಿಮಾನಿ ದೇವರುಗಳನ್ನು’ ಉತ್ತೇಜಿಸಿದರೆ, ಇಂದು ಗವಿಮಠ ಶ್ರೀಗಳು, ತಾವೇ ನೇತ್ರದಾನಕ್ಕೆ ಮುಂದಾಗುವ ಮೂಲಕ ಸಾವಿರಾರು ಮಂದಿ ಭಕ್ತಸಮೂಹವನ್ನು ಉತ್ತೇಜಿಸುತ್ತಿದ್ದಾರೆ. ಜಾತ್ರೆ ಮುಗಿದರೂ, ರಕ್ತದಾನ, ದೇಹದಾನ ಮತ್ತು ನೇತ್ರದಾನಕ್ಕೆ ನೋಂದಣಿ ಮಾಡಿಸುತ್ತಿರುವ ಭಕ್ತರ ಸಂಖ್ಯೆ ಬೆಳೆಯುತ್ತಲೇ ಇದೆ.

ಸಾಮಾಜಿಕ ಜಾಗೃತಿಯ ಜಾತ್ರೆ
ಗವಿಮಠ ಜಾತ್ರೆ ಪ್ರತಿ ವರ್ಷ ಒಂದಲ್ಲ ಒಂದು ಸಾಮಾಜಿಕ ಕಾರ್ಯಕ್ಕೆ ಸಾಕ್ಷಿಯಾಗುತ್ತದೆ. ಇತ್ತೀಚೆಗೆ ನಡೆದ ಜಾತ್ರೆಯಲ್ಲಿ ‘ಕೃಪಾದೃಷ್ಟಿ’ ಎಂಬ ಶೀರ್ಷಿಕೆಯಡಿ ನೇತ್ರದಾನ ಶಿಬಿರ ಆಯೋಜಿಸಲಾಗಿತ್ತು. ಸ್ಥಳೀಯ ರೆಡ್‌ಕ್ರಾಸ್ ಸಂಸ್ಥೆ ಘಟಕ ಸಹಕಾರದೊಂದಿಗೆ ಈ ಶಿಬಿರ ನಡೆಯಿತು. ಇದಕ್ಕೂ ಮುನ್ನ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಪ್ಪಳದ ಪಬ್ಲಿಕ್‌ಗ್ರೌಂಡ್‌ನಿಂದ ಗವಿಮಠದವರೆಗೆ ಜಾಥಾ ನಡೆಸಿ, ಸಾರ್ವಜನಿಕರನ್ನು ನೇತ್ರದಾನಕ್ಕೆ ಆಹ್ವಾನಿಸುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದ್ದರು.

‘ಬದುಕಿರುವಾಗ ರಕ್ತದಾನ, ಸತ್ತ ಮೇಲೆ ನೇತ್ರದಾನ. ಹುಟ್ಟು, ಸಾವಿನಲ್ಲೂ ಬದುಕು ಸಾರ್ಥಕವಾಗಬೇಕು. ಇರುವಾಗ ನಾವು ಪ್ರಪಂಚ ನೋಡಿ ಆನಂದಿಸುತ್ತೇವೆ. ಸತ್ತ ಮೇಲೂ ನಮ್ಮ ಕಣ್ಣುಗಳು ಅಂಥ ಸೌಂದರ್ಯ ಸವಿಯಬೇಕೆಂದರೆ ನೇತ್ರದಾನ ಮಾಡಬೇಕು’ ಎಂದು ಶ್ರೀಗಳು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಭಕ್ತ ಸಮೂಹ, ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾಗಿದೆ.

‘ನಾನು ಕಣ್ಣುದಾನ ಮಾಡುವುದರಿಂದ ಇಬ್ಬರು ಅಂಧರ ಬಾಳು ಬೆಳಕಾಗುತ್ತದೆ. ಅವರ ಕನಸುಗಳೂ ಇಮ್ಮಡಿಯಾಗುತ್ತವೆ ಎಂಬುದು ಅರಿವಾಯಿತು. ನಾನು ಸ್ವಾರ್ಥ ಬಿಟ್ಟು ನೇತ್ರದಾನಕ್ಕೆ ನೋಂದಣಿ ಮಾಡಿಸಲು ಮುಂದಾದೆ. ಸತ್ತಾಗ ಮಣ್ಣಲ್ಲಿ ಮಣ್ಣಾಗುವ ಬದಲು ಮತ್ತೊಬ್ಬರ ಬಾಳಿಗೆ ಬೆಳಕಾಗುಲು ನನ್ನ ಕಣ್ಣುಗಳು ಬಳಕೆಯಾಗುತ್ತಿವೆ ಎಂಬುದೇ ಖುಷಿ’ ಎಂದು ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಕೊಪ್ಪಳದ ಯಮನೂರು ಸ್ವಾಮಿ ಕೊಲ್ಕಾರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಜಾತ್ರೆಯಲ್ಲಿ 2015 ರಿಂದ ಇಂಥ ಸಾಮಾಜಿಕ ಕಾರ್ಯ ಆರಂಭವಾಗಿದೆ. ಆ ವರ್ಷದ ಜಾತ್ರೆಯಲ್ಲಿ ಬಾಲ್ಯವಿವಾಹ ತಡೆಗೆ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ವರ್ಷ ಆರಂಭವಾದ ರಕ್ತದಾನ ಶಿಬಿರ, ಮುಂದೆ ಪ್ರತಿ ಜಾತ್ರೆಯಲ್ಲೂ ಮೂರು ದಿನದ ಕಾರ್ಯಕ್ರಮವಾಗಿ ರೂಪುಗೊಂಡಿತು. ಇಷ್ಟು ದಿನಗಳಲ್ಲಿ 600 ರಿಂದ 700 ಮಂದಿ ರಕ್ತದಾನ ಮಾಡಿದ್ದರು. ಈ ಐದು ವರ್ಷಗಳಲ್ಲಿ 3817 ಮಂದಿ ರಕ್ತದಾನ ಮಾಡಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಸುಕ್ಷೇತ್ರ ಇಟಗಿ ಮಠದ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ, ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

‘ರಕ್ತದಾನದಿಂದ ಹಲವು ಜೀವಗಳನ್ನು ಉಳಿಸಿದ ಪುಣ್ಯ ಲಭಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ನಮ್ಮ ರಕ್ತದಿಂದ ಜೀವದಾನ ಮಾಡಿದಂತಾಗುತ್ತದೆ. ರಕ್ತಕ್ಕಾಗಿ ಬ್ಲಡ್ ಬ್ಯಾಂಕ್‌ಗಳಿಗೆ ಅಲೆದಾಡಿದರೂ ಸಿಗದೆ ಇರುವಂತ ಪರಿಸ್ಥಿತಿ ಇದೆ. ಈ ಪವಿತ್ರ ಸ್ಥಳದಲ್ಲಿ ರಕ್ತದಾನ ಮಾಡಿರುವುದು ಹೆಮ್ಮೆ ಎನಿಸುತ್ತದೆ’ ಎನ್ನುತ್ತಾರೆ ಈ ಬಾರಿ ರಕ್ತದಾನ ಮಾಡಿರುವ ಗಂಗಾವತಿಯ ಅನ್ನಪೂರ್ಣಮ್ಮ ಮುದಗಲ್‌.

2016ಲ್ಲಿ ನಡೆದ ‘ಜಲದೀಕ್ಷೆ’ ಅಭಿಯಾನವೂ ಇದೇ ರೀತಿ ಪರಿಣಾಮ ಬೀರಿತ್ತು. ಆ ಅಭಿಯಾನದ ಫಲವಾಗಿ, ಗವಿಮಠದ ಕಲ್ಯಾಣಿ, ಕೆರೆ ಸ್ವಚ್ಛವಾಗಿ, ಮಳೆ ನೀರು ಸಂಗ್ರಹಿಸಲು ಅನುಕೂಲವಾಯಿತು. ಇದೇ ವೇಳೆ, ಸಾವಿರಾರು ಮಂದಿಯೊಂದಿಗೆ ಬೃಹತ್ ಜಲಜಾಗೃತಿ ಜಾಥಾವೂ ನಡೆಯಿತು. ಭಕ್ತರಲ್ಲೂ ಜಲಜಾಗೃತಿ ಮೂಡಿತು. ಅನೇಕರು ಮಳೆ ನೀರು ಸಂಗ್ರಹಿಸಿ ಬಳಸುವುದಕ್ಕೆ ಮುಂದಾದರು.

ಈ ವರ್ಷ ರಕ್ತದಾನದ ಜತೆಗೆ, ನೇತ್ರದಾನವೂ ಸೇರಿಕೊಂಡಿದೆ. ಈ ಪ್ರಕ್ರಿಯೆಯನ್ನು ಪ್ರತಿ ವರ್ಷವೂ ಮುಂದುವರಿಸುವ ಪ್ರಯತ್ನಗಳೂ ನಡೆಯುತ್ತಿವೆ. ನೇತ್ರದಾನ ಮಾಡುವಂಥ ಆಸಕ್ತರಿಗಾಗಿ ಆನ್‌ಲೈನ್ ವೆಬ್‌ಸೈಟ್ ಆರಂಭಿಸಲಾಗಿದೆ (ಜಾಲತಾಣ ವಿಳಾಸಕ್ಕೆ ಬಾಕ್ಸ್ ನೋಡಿ).

ನೋಂದಣಿ ಮಾಡಿಸುವುದು ಹೀಗೆ
www.ircskoppal.org
ಈ ವೆಬ್‌ಸೈಟ್ ಲಿಂಕ್‌ ಕ್ಲಿಕ್ ಮಾಡಿದರೆ, ಎರಡು ಮೆನು ಬರುತ್ತದೆ. ಒಂದು ಕಡೆ ‘ನೇತ್ರದಾನ’, ಇನ್ನೊಂದು ಕಡೆ ‘ರಕ್ತದಾನ’ ಎಂಬ ಆಪ್ಷನ್ ಬರುತ್ತದೆ. ಅದರಲ್ಲಿ ನೀವು ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವಿವರಗಳನ್ನು ಸೇರಿಸಬೇಕು.

ಇದರ ಜತೆಗೆ ವೆಬ್‌ಸೈಟ್ ಮೇಲ್ಭಾಗದಲ್ಲಿ ರಕ್ತದಾನ, ದೇಹದಾನ, ನೇತ್ರದಾನ ಮತ್ತು ಚರ್ಮದಾನದ ಆಯ್ಕೆಗಳನ್ನು ಕೊಡಲಾಗಿದೆ. ಇವುಗಳಲ್ಲಿ ನೀವು ಯಾವುದನ್ನೂ ಬೇಕಾದರೂ ಆಯ್ಕೆ ಮಾಡಿಕೊಂಡು, ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗೆ 9480375065, 9483035024 ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT