ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆ ಮದ್ದು

Last Updated 7 ಡಿಸೆಂಬರ್ 2019, 1:46 IST
ಅಕ್ಷರ ಗಾತ್ರ

ನವೆಂಬರ್ ಮೂರನೇ ವಾರದಿಂದ ಪ್ರಾರಂಭಗೊಂಡು ಜನವರಿ ಮೂರನೇ ವಾರದವರೆಗೆ ಅರ್ಥಾತ್ ಎರಡು ತಿಂಗಳು ಹೇಮಂತ ಋತುವಿನ ಸಮಯ. ಅದನ್ನೇ ನಾವು ಚಳಿಗಾಲ ಎನ್ನುತ್ತೇವೆ ಹೇಮಂತ ಎಂದರೆ ಹಿಮವಂತ ಎಂದರ್ಥ. ಹಿಮ ಪ್ರಧಾನವಾದ ಈ ಋತುವಿನಲ್ಲಿ ಚಳಿ ಜಾಸ್ತಿ. ಚಳಿಯ ಪ್ರಭಾವದಿಂದ ವಾತಾವರಣದಲ್ಲಿ ಶೀತಗುಣ ಅಧಿಕಗೊಳ್ಳುತ್ತದೆ. ಶೀತದಿಂದ ಕಫ ಮತ್ತು ವಾತ ದೋಷಗಳು ಉಲ್ಬಣಗೊಳ್ಳುತ್ತವೆ.

ಚಳಿಗಾಲದಲ್ಲಿ ಪ್ರಧಾನವಾಗಿ ಕಾಡುವ ಹಾಗೂ ಉಲ್ಬಣಗೊಳ್ಳುವ ಸಮಸ್ಯೆಗಳು

* ಮಂಡಿನೋವು ಹಾಗೂ ಸೊಂಟನೋವು

* ಕೆಮ್ಮು ಮತ್ತು ಆಸ್ತಮಾ

* ಚರ್ಮ ವಿಕಾರಗಳದ ಶೀತಪಿತ್ತ (ಅರ್ಟಿಕೇರಿಯಾ) ಮತ್ತು ಕಿಟಿಭ (ಸೋರಿಯಾಸಿಸ್)

* ಕೇಶ ವಿಕಾರಗಳು, ಒಣ ಚರ್ಮ ಇತ್ಯಾದಿ

ಚಳಿಗಾಲವನ್ನು ವಿಸರ್ಗಕಾಲವೆಂದು ಪರಿಗಣಿಸುವ ಕಾರಣ ಈ ಸಮಯದಲ್ಲಿ ಭೂಮಿಯಲ್ಲಿನ ಬಲ ಅಧಿಕಗೊಳ್ಳುವುದರಿಂದ ಮನುಷ್ಯ ಮತ್ತು ಪ್ರಾಣಿಪಕ್ಷಿಗಳಲ್ಲಿ ಸಹಜವಾಗಿ ಬಲ ವೃದ್ಧಿಗೊಳ್ಳುವುದು. ಅಂದರೆ ಇತರೆ ಋತುಗಳಿಗೆ ಹೋಲಿಸಿದರೆ ಚಳಿಗಾಲದ ಉತ್ತಮ ವಾತಾವರಣ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಲಾಭದಾಯಕ.

ಸ್ವಾಸ್ಥ್ಯರಲ್ಲಿ ಅಂದರೆ ಆರೋಗ್ಯವಂತರಲ್ಲಿ ಸಹಜವಾಗಿ ಬಲ, ಹುಮ್ಮಸ್ಸು ಇತ್ಯಾದಿಗಳು ಹೇಮಂತ ಋತುವಿನಲ್ಲಿ ನೋಡಬಹುದು. ಅದೇ ವಾತ ಹಾಗು ಕಫ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಸಹಜವಾಗಿ ಅನಾರೋಗ್ಯ ಉಲ್ಬಣಗೊಳ್ಳುವುದು ಸಾಮಾನ್ಯ.

ಸಂಧಿವಾತ, ಆಮವಾತ, ಸೊಂಟನೋವು, ಸಯಾಟಿಕಾ, ಕೆಮ್ಮು, ಆಸ್ತಮಾ (ಉಬ್ಬಸ), ಸೋರಿಯಾಸಿಸ್, ಒಣಚರ್ಮ, ಒರಟು ಕೂದಲು, ತಲೆಹೊಟ್ಟು, ಅರ್ಟಿಕೇರಿಯಾ ಇತ್ಯಾದಿ ಸಮಸ್ಯೆಗಳು ಉದ್ಭವಗೊಳ್ಳಲು ಮತ್ತು ಉಲ್ಬಣಗೊಳ್ಳಲು ಈ ಹವಾಮಾನ ಕಾರಣ.

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?

ಕಾಯಿಲೆ ಬರದಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆ. ಬಂದಾಗ ಕೂಡಲೆ ಉಪಶಮನ ಮಾಡಿಕೊಳ್ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಚಳಿಗಾದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಈ ಸೂತ್ರಗಳನ್ನು ಅನುಸರಿಸಿದರೆ ಹೆಚ್ಚು ಲಾಭ.

* ಬಿಸಿ ನೀರಿನ ಸೇವನೆ

* ನಿತ್ಯ ಅಭ್ಯಂಗ ಅಥವಾ ವಾರಕ್ಕೆ ಮೂರು ಬಾರಿ ಅಭ್ಯಂಗ

* ಈ ಋತುವಿನಲ್ಲಿ ಹಸಿವು ಹೆಚ್ಚಿರುವ ಕಾರಣ ಮಧುರವಾದ ಹಾಗೂ ಸ್ನಿಗ್ಧವಾದ ಬಿಸಿ ಆಹಾರವನ್ನು ಸೇವಿಸಿ

* ಮೊಸರು, ಮಜ್ಜಿಗೆ ಹಾಗೂ ಹಣ್ಣುಗಳನ್ನು ಸೇವಿಸುವಾಗ ಕಾಳುಮೆಣಸಿನ ಪುಡಿ ಮತ್ತು ಸೈಂಧವ ಉಪ್ಪನ್ನು ಬಳಸಿ

* ಉಷ್ಣದಾಯಕ ಉಡುಗೆ ಮತ್ತು ಬಿಸಿ ಅಡುಗೆ ಅತಿಮುಖ್ಯ.

* ಮೆಣಸು ಸಾರು, ಹುರಳಿ ಕಟ್ಟಿನ ಸಾರು, ಬೇಯಿಸಿದ ತರಕಾರಿಗಳು, ಒಣಹಣ್ಣುಗಳು ಇತ್ಯಾದಿ ಆಹಾರ ಪದಾರ್ಥಗಳ ಸೇವನೆ ಉತ್ತಮ

* ವ್ಯಾಯಾಮ ಹೆಚ್ಚು ಸೂಕ್ತ

* ಬಿಸಿಲು ಆರಂಭಗೊಳ್ಳುವಾಗ ವಾಕಿಂಗ್ ಒಳ್ಳೆಯದು

* ಬಿಸಿ ನೀರಿನ ಸ್ನಾನ ಹೆಚ್ಚು ಉಪಯುಕ್ತ

ಯಾವುದು ಬೇಡ?

* ತಂಗಳು ಆಹಾರ ಹಾಗೂ ಥಂಡಿ ಪದಾರ್ಥಗಳ ಸೇವನೆ

* ಬೇಕರಿ ಮತ್ತು ಜಂಕ್ ಪದಾರ್ಥಗಳ ಸೇವನೆ

* ಶೀತ ಹಾಗೂ ವಾತ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆ

* ಆಲೂಗೆಡ್ಡೆ, ಹಲಸಿನಹಣ್ಣು, ಮೊಸರು, ಅಡಿಕೆ ಸೇವನೆ, ಕಹಿ ಮತ್ತು ಒಗರು ಪದಾರ್ಥಗಳು, ಐಸ್ ಕ್ರೀಂ, ತಣ್ಣೀರು ಸೇವನೆ ಇತ್ಯಾದಿ

* ಹಗಲು ನಿದ್ದೆ, ಅಧಿಕ ನಿದ್ದೆ, ಜಾಗರಣೆ ಇತ್ಯಾದಿ

* ತಣ್ಣೀರಿನ ಸ್ನಾನ, ಆಲಸ್ಯ ಇತ್ಯಾದಿ

ಬಿಸಿ ನೀರಿನ ಮಹತ್ವ

ಸಾಮಾನ್ಯವಾಗಿ ಜನರಲ್ಲಿ ಒಂದು ತಪ್ಪು ಕಲ್ಪನೆ ಇದೆ. ನೀರನ್ನು ಶುದ್ಧೀಕರಿಸುವ ಯಂತ್ರಗಳಲ್ಲಿನ ನೀರನ್ನು ಬಳಸಿದರೆ ಹೆಚ್ಚು ಸೂಕ್ತ ಹಾಗೂ ಅದು ಬಿಸಿ ನೀರಿಗೆ ಸಮ ಎಂದು ಭಾವಿಸುತ್ತಾರೆ. ಸಂಸ್ಕಾರವಿಲ್ಲದ ತಣ್ಣೀರು ಎಷ್ಟೇ ಶುದ್ಧವಾಗಿದ್ದರೂ ಅದು ಬಿಸಿನೀರಿಗೆ ಸಮವಾಗಲು ಸಾಧ್ಯವಿಲ್ಲ. ತಣ್ಣೀರಿನಲ್ಲಿ ಶೀತಗುಣ ಪ್ರಧಾನವಾಗಿರುತ್ತದೆ. ಅಂತೆಯೇ ನೀರಿನ ಸಾಂದ್ರತೆ (ತೂಕ) ಬಿಸಿನೀರಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ. ತಣ್ಣೀರಿನಲ್ಲಿ ಸಾಂದ್ರತೆ ಹಾಗು ಶೀತಗುಣ ಹೆಚ್ಚಿರುವ ಕಾರಣ ಅದು ಕಫದೋಷವನ್ನು ವೃದ್ಧಿಸುತ್ತದೆ ಹಾಗೂ ವಾತವನ್ನು ಉಲ್ಬಣಗೊಳಿಸುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಸಮಸ್ಯೆಗಳಲ್ಲಿ ತಣ್ಣೀರಿನ ಸೇವನೆ ಸಹಜವಾಗಿ ಅಪಥ್ಯವಾಗಿರುತ್ತದೆ.

ಜನಸಾಮಾನ್ಯರಲ್ಲಿರುವ ಮತ್ತೊಂದು ತಪ್ಪು ಗ್ರಹಿಕೆಯೆಂದರೆ ಬಿಸಿನೀರಿನ ಸೇವನೆಯಿಂದ ದೇಹಕ್ಕೆ ಬಲ ಸಿಗುವುದಿಲ್ಲ ಎಂದು. ಇದು ತಪ್ಪು, ಬಿಸಿ ನೀರನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಅನೇಕ ರೋಗಗಳನ್ನು ಮಣಿಸಬಲ್ಲ ದಿವ್ಯ ಅಸ್ತ್ರ.

ಬಿಸಿನೀರಿನ ಬಳಕೆಯಲ್ಲಿ ಕಂಡು ಬರುವ ಮತ್ತೊಂದು ವ್ಯತ್ಯಯ ಎಂದರೆ ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯುಯುವುದು ಇಲ್ಲವೇ ಸ್ವಲ್ಪ ಬಿಸಿ ಮಾಡಿದ ನೀರನ್ನು ಬಿಸಿ ನೀರೆಂದು ಕುಡಿಯುವುದು. ಹೀಗೆ ಮಾಡುವುದರಿಂದ ಯವುದೇ ಪ್ರಯೋಜನವಿಲ್ಲ. ನೀರನ್ನು ಚೆನ್ನಾಗಿ ಕುದಿಸಿ (100 ಡಿ.ಸೆ.ವರೆಗೆ). ನಂತರ ಕುಡಿಯಲು ಹಿತಕರವಾಗುವಂತೆ ಆರಿಸಿ ಸೇವಿಸುವುದು ಹೆಚ್ಚು ಪರಿಣಾಮಕಾರಿ.

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಉಪಯುಕ್ತವಾದದ್ದು ಅಭ್ಯಂಗ. ಬಿಸಿ ಆಹಾರ ಸೇವನೆ ಮತ್ತು ಮಧುರ, ಸ್ನಿಗ್ಧ ಆಹಾರದ ಬಳಕೆ ಈ ಸಮಯದಲ್ಲಿ ಆರೋಗ್ಯವನ್ನು ರಕ್ಷಿಸುವಲ್ಲಿ ಹೆಚ್ಚು ಲಾಭದಾಯಕ.

ಮನೆ ಮದ್ದು

ನೆಗಡಿ, ಕೆಮ್ಮು, ದಮ್ಮು ಇದ್ದಲ್ಲಿ: ಕಾಳುಮೆಣಸು ಪುಡಿ 1/2 ಚಮಚ+ ಹಸಿಶುಂಠಿ ರಸ 1/4 ಚಮಚ + ತುಳಸಿ ರಸ 1 ಚಮಚ+ ಸ್ವಲ್ಪ ಜೇನುತುಪ್ಪ ಬೆರೆಸಿ ನಿತ್ಯ 2–3 ಬಾರಿ ಸೇವಿಸಿ.

ಒಣಕೆಮ್ಮು:ಒಣದ್ರಾಕ್ಷಿ ಅಥವಾ ಅತಿಮಧುರವನ್ನು ಆಗಿಂದಾಗ್ಗೆ ಸ್ವಲ್ಪ ಸ್ವಲ್ಪ ಸೇವಿಸಿ. ವೀಳ್ಯದೆಲೆ ರಸ ಅಥವಾ ದೊಡ್ಡಪತ್ರೆ ರಸಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಕಫಯುಕ್ತ ಕೆಮ್ಮಿನಲ್ಲಿ ಸೇವಿಸಬಹುದು

ಮಂಡಿನೋವು, ಸೊಂಟನೋವು ಇತ್ಯಾದಿಗಳಲ್ಲಿ: ಎಳ್ಳೆಣ್ಣೆ ಇಲ್ಲವೆ ಹರಳೆಣ್ಣೆಯನ್ನು 3–4 ಚಮಚ ಬಿಸಿ ಮಾಡಿ ನೋವಿರುವ ಜಾಗಕ್ಕೆ ಲೇಪಿಸಿ ಹಿತವಾಗಿ ತೀಡಿ. ನಂತರ ಕಲ್ಲುಪ್ಪು ಇಲ್ಲವೆ ಮರಳಿನಿಂದ ಶಾಖ ನೀಡಿ. ಆಮವಾತದಲ್ಲಿ (ರುಮಟೈಡ್ ಆರ್ಥರೈಟಿಸ್‌ನಲ್ಲಿ) ಸಂಧಿಗಳಿಗೆ ಎಣ್ಣೆ ಹಚ್ಚುವುದು ನಿಷಿದ್ಧ. ಕೇವಲ ಮರಳಿನ ಶಾಖವನ್ನು ಹಿತವಾಗಿ ತೆಗೆದುಕೊಳ್ಳುವುದು ಲಾಭದಾಯಕ.

ಬಿಸಿನೀರಿನ ಮಹತ್ವ

* ಕಫ, ವಾತ ರೋಗಗಳಲ್ಲಿ ಹಿತಕಾರಿ

* ನೆಗಡಿ, ಜ್ವರ, ಅಸ್ತಮಾ, ಕೆಮ್ಮು ಇತ್ಯಾದಿಗಳಲ್ಲಿ ಬಿಸಿ ನೀರಿನ ಸೇವನೆ ಕಡ್ಡಾಯ

* ಮೂತ್ರವಿಕಾರಗಳಲ್ಲಿ ಮೂತ್ರಕೋಶ ಹಾಗೂ ಕಿಡ್ನಿಗಳ ಶುದ್ಧಿಗಾಗಿ ಬಿಸಿ ನೀರು ಬಳಕೆ ಫಲಪ್ರದ

* ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆಯುಬ್ಬರ ಇವುಗಳಲ್ಲಿ ಬಿಸಿ ನೀರಿಗೆ ಸಾಟಿಯಿಲ್ಲ

* ಮಂಡಿನೋವು, ಸೊಂಟನೋವು, ಸರ್ವಾಂಗ ಸಂಧಿವಾತ, ಆಮವಾತ ಇತ್ಯಾದಿಗಳಲ್ಲಿ ಹೆಚ್ಚು ಲಾಭದಾಯಕ

* ಕಿಟಿಭ, ಅರ್ಟಿಕೇರಿಯಾ ಇತ್ಯಾದಿಗಳಲ್ಲಿ ಬಿಸಿನೀರು ಸ್ನಾನಕ್ಕೂ, ಪಾನಕ್ಕೂ ಹಿತಕರ

* ನವಜ್ವರದಲ್ಲಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿನೀರಿನ ಸೇವನೆ ಅಮೃತಕ್ಕೆ ಸಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT