ಬೆಂಗಳೂರಿನ ವಿಜಯನಗರ ಚಂದ್ರಾ ಲೇಔಟ್ ಸ್ಪರ್ಧಾತ್ಮಕ ಪರೀಕ್ಷೆಗಳ ಹಬ್ ಆಗಿದೆ. ಅಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾವಿರಾರು ಯುವಕ–ಯುವತಿಯರು ನೌಕರಿಯ ಕನಸುಗಳನ್ನು ಬೆನ್ನಟ್ಟಿ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಈ ಭಾಗದಲ್ಲಿನಲ್ಲಿ ಅಪರೂಪದ ಚಿತ್ರಣ ಇಲ್ಲಿದೆ.

ಸಂಜೆ ನಾಲ್ಕೂವರೆ ಆಸುಪಾಸು. ಬೆಂಗಳೂರಿನ ವಿಜಯನಗರ ಮೆಟ್ರೊ ನಿಲ್ದಾಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಮಾರೇನಹಳ್ಳಿ ಮುಖ್ಯದ್ವಾರದ ಬಳಿ ಯುವಕ–ಯುವತಿಯರು ಗುಂಪು ಗುಂಪಾಗಿ ನಡೆದು ಹೋಗುತ್ತಿದ್ದರು. ಒಂದೊಂದು ಗುಂಪು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿತ್ತು. ಒಂದು ಗುಂಪು ಪಕ್ಕದಲ್ಲೇ ಇರುವ ಕಾಂಡಿಮೆಂಟ್ಸ್ನಲ್ಲಿ ಚಹಾ ಹೀರುತ್ತಾ ಹರಟಿದರೆ, ನಾಲ್ಕೈದು ಜನರ ತಂಡ ಸ್ಟೇಷನರಿ ಅಂಗಡಿಗೆ ನುಗ್ಗಿತು. ಇನ್ನು ಕೆಲವರು ಗ್ರಂಥಾಲಯ ಹೊಕ್ಕರೆ, ಕೆಲವಷ್ಟು ಮಂದಿ ಅಲ್ಲೇ ಇರುವ ಪಾರ್ಕ್ನಲ್ಲಿ ಕುಳಿತು ಗಹನ ಚರ್ಚೆಯಲ್ಲಿ ತೊಡಗಿಕೊಂಡರು. ರಸ್ತೆ ಬದಿಯಲ್ಲಿ ಹರಟೆ ಹೊಡೆಯುತ್ತ ನಿಂತವರೂ ಇದ್ದರು. ಕೆಲವರು ಅವಸರದಲ್ಲಿ ಸರಿದು ರಸ್ತೆಯ ಅಂಚಿನಲ್ಲಿ ಮಾಯವಾದರು.

ವಿಜಯನಗರ, ಹಂಪಿನಗರ, ಅತ್ತಿಗುಪ್ಪೆ ಹಾಗೂ ಚಂದ್ರಾ ಲೇಔಟ್ನಲ್ಲಿ ಪ್ರತಿ ಸಂಜೆ ಕಾಣುವ ದೃಶ್ಯಗಳಿವು.

ಅಲ್ಲಿರುವ ಹತ್ತಾರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಸಾವಿರಾರು ಆಕಾಂಕ್ಷಿಗಳು ಸಂಜೆ ವೇಳೆಗೆ ದಿನದ ಒತ್ತಡ ಬದಿಗಿಟ್ಟು ಕೆಲ ಹೊತ್ತು ನಿರುಮ್ಮಳರಾಗುತ್ತಾರೆ. ರಾಜ್ಯದ ವಿವಿಧ ಭಾಗಗಳ ಆಕಾಂಕ್ಷಿಗಳು ಇರುವುದರಿಂದ ಅಲ್ಲಿ ಸಂಸ್ಕೃತಿ ವೈವಿಧ್ಯದ ಅನಾವರಣವೂ ಆಗುತ್ತದೆ. ಬೆಳಗ್ಗಿನಿಂದ ಮಂದವಾಗಿ ಗೋಚರಿಸುತ್ತಿದ್ದ ಬೀದಿಗಳು ಕಳೆಗಟ್ಟುತ್ತವೆ. ಫುಡ್ ಸ್ಟ್ರೀಟ್ಗಳಿಗೆ ಹೊಸ ಚೈತನ್ಯ ಬರುತ್ತದೆ.

‘ವಿಜಯನಗರದ ಬೀದಿಗಳಲ್ಲಿ ಭವಿಷ್ಯದ ಸರ್ಕಾರಿ ಅಧಿಕಾರಿಗಳು ಓಡಾಡುತ್ತಿರುತ್ತಾರೆ’, ‘ವಿಜಯನಗರದಲ್ಲಿ
ಇಂದು ಹೊತ್ತು ಊಟಕ್ಕೆ ಪರದಾಡುವ ಆಕಾಂಕ್ಷಿಗಳು ಮುಂದೆ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ’ ಎನ್ನುವಷ್ಟರ ಮಟ್ಟಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ವಿಜಯನಗರ ಹೆಸರುವಾಸಿ. ಹಿಂದೆ ಐಎಎಸ್, ಐಪಿಎಸ್ ಪರೀಕ್ಷೆಯ ತರಬೇತಿಗೆ ದೆಹಲಿ, ರಾಜಸ್ಥಾನಕ್ಕೆ ಹೋಗಬೇಕಾಗಿತ್ತು. ಈಗ ಬೆಂಗಳೂರಿನಲ್ಲಿಯೇ ಸಿಗುತ್ತಿದೆ. ವಿಜಯನಗರದ ಸುತ್ತಮುತ್ತ ಇಂತಹ ಹತ್ತಾರು ಸಂಸ್ಥೆಗಳಿವೆ. ದೆಹಲಿಯ ರಾಜೇಂದ್ರನಗರ, ರಾಜಸ್ಥಾನದ ಕೋಟಾಗೆ ಪೈಪೋಟಿ ನೀಡುವಷ್ಟು ವಿಜಯನಗರ ಬೆಳೆಯುತ್ತಿದೆ. ಉತ್ತರ ಭಾರತದ ಸಂಸ್ಥೆಗಳು ಚಂದ್ರಾ ಲೇಔಟ್,
ವಿಜಯನಗರ ಭಾಗದಲ್ಲಿ ಶಾಖೆಗಳನ್ನು ತೆರೆದಿವೆ. ಆ ಮಟ್ಟಿಗೆ ಈ ಪ್ರದೇಶ ‘ಐಎಎಸ್, ಕೆಎಎಸ್ ಹಬ್’ಗಳಾಗಿ ಮಾರ್ಪಟ್ಟಿದೆ.

ವಿಜಯನಗರವೇ ಯಾಕೆ?

ಐಟಿ-ಬಿಟಿ, ಶಿಕ್ಷಣ, ಸಾಫ್ಟ್ವೇರ್ ಕಂಪನಿಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಚದುರಿದ್ದರೂ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಹೆಚ್ಚಿನ ಪ್ರಮಾಣದಲ್ಲಿ ವಿಜಯನಗರದ ಸುತ್ತಮುತ್ತಲೇ ಇವೆ. ನಗರದಲ್ಲಿರುವ ಇಂತಹ ಕೋಚಿಂಗ್ ಸಂಸ್ಥೆಗಳ ಪೈಕಿ ಬಹುತೇಕ ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ ಅಥವಾ ಅವುಗಳ ಶಾಖೆಯೊಂದು ವಿಜಯನಗರದಲ್ಲಿ ಇದೆ. ‘ಇಲ್ಲಿನ ಸುರಕ್ಷಿತ ಹಾಗೂ ಶಾಂತ ಪರಿಸರವೇ ಇದನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವನ್ನಾಗಿ ಮಾಡಿದೆ’ ಎಂದು ‘ಸ್ಪರ್ಧಾ ವಿಜೇತ’ ಸಂಸ್ಥೆಯ ಮುಖ್ಯಸ್ಥ ಕೆ.ಎಂ ಸುರೇಶ್ ಅರ್ಥೈಸುತ್ತಾರೆ.

ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕೆಂಗೇರಿಗೆ ಬಸ್, ಮೆಟ್ರೊ ಸಂಪರ್ಕ ಇದೆ. ಟ್ರಾಫಿಕ್ ಸಮಸ್ಯೆ ಕಡಿಮೆ. ವಸತಿ ಪ್ರದೇಶ ವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಬೇಕಾದ ಶಾಂತ ವಾತಾವರಣ ಇದೆ. ಮೂಲ ಸೌಕರ್ಯಗಳ ಲಭ್ಯತೆ, ವೈವಿಧ್ಯಮಯ ಆಹಾರ ಸಂಸ್ಕೃತಿ, ಮನೆಯಂಥ ವಾತಾವರಣ, ಕಡಿಮೆ ಜೀವನ ನಿರ್ವಹಣಾ ವೆಚ್ಚ ವಿದ್ಯಾರ್ಥಿಗಳಿಗೆ ಪೂರಕವಾಗಿದೆ.

ಮಾರೇನಹಳ್ಳಿ ಸುತ್ತಮುತ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳು 2000ನೇ ಇಸವಿ ಆಸುಪಾಸಿನಲ್ಲಿ ಪ್ರಾರಂಭವಾದವು. ಅಲ್ಲಿ ತರಬೇತಿ ಪಡೆದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆರಂಭಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಕಾಂಕ್ಷಿಗಳ ಒಲವು ಹೆಚ್ಚುತ್ತಿದ್ದಂತೆಯೇ, ಕೋಚಿಂಗ್ ಸೆಂಟರ್ಗಳ ಸಂಖ್ಯೆಯೂ ಹೆಚ್ಚಾಗತೊಡಗಿದವು. ವಿದ್ಯಾರ್ಥಿಗಳ ಹರಿವು ಹೆಚ್ಚಾದಂತೆ ಮನೆಗಳು ಪಿ.ಜಿಗಳಾಗಿ ರೂಪಾಂತರಗೊಂಡವು. ಸ್ಟೇಷನರಿ, ಪುಸ್ತಕದಂಗಡಿಗಳ ಸಂಖ್ಯೆ ಏರತೊಡಗಿದವು. ಹೋಟೆಲ್, ಬೇಕರಿ ಉದ್ಯಮಗಳು ಗರಿಗೆದರಿದವು. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಖಾಸಗಿ ಗ್ರಂಥಾಲಯಗಳು ತಲೆ ಎತ್ತಿದವು. ಸಂಜೆ ಬೀದಿಬದಿಯ ಆಹಾರ ಉದ್ಯಮ ಚುರುಕು ಪಡೆಯಿತು. ವಿಜಯನಗರದ ಸಂಸ್ಥೆಗಳಲ್ಲಿಯೇ ತರಬೇತಿ ಪಡೆದು ಗುರಿ ಸಾಧಿಸಿದವರ ಯಶೋಗಾಥೆಗಳು ಬಾಯಿ ಮಾತಿನ ಮೂಲಕ ಹರಿದಾಡಿ ವಿಜಯನಗರ ಪ್ರದೇಶವು ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವಾಗಿದೆ. ಈ ಸಂಸ್ಥೆಗಳು ನೀಡುವ ಫಲಿತಾಂಶ, ಅದೇ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದುದೂ ಕೂಡ ವಿಜಯನಗರ ‘ಬೆಂಗಳೂರಿನ ರಾಜೇಂದ್ರ ನಗರ’ವಾಗಲು ಕಾರಣ ಎನ್ನುವುದು ಸಂಸ್ಥೆ ನಡೆಸುತ್ತಿರುವ ಬಹುತೇಕರ ಅಭಿಪ್ರಾಯ. ಕಾರ್ಡ್ ರಸ್ತೆಯ ಇಕ್ಕೆಲಗಳಲ್ಲೂ ಇಂತಹ ಸಂಸ್ಥೆಗಳು, ಅವುಗಳ ಶಾಖೆಗಳಿವೆ.

ಕೆಎಎಸ್ ಸಹಿತ ರಾಜ್ಯ ಮಟ್ಟದ ಪರೀಕ್ಷೆಗಳಿಗೆ ತರಬೇತಿ ನೀಡುವ ಉತ್ತಮ ಸಂಸ್ಥೆಗಳಿದ್ದರೂ, ಐಎಎಸ್, ಐಪಿಎಸ್ ಮುಂತಾದ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಸಂಸ್ಥೆಗಳು ಅಡಿಯಿಟ್ಟಿದ್ದು 2013ರಲ್ಲಿ. ಅಲ್ಲಿಯವರೆಗೂ ಯುಪಿಎಸ್ಸಿ ತರಬೇತಿಗಾಗಿ ಕನ್ನಡಿಗರು ದೆಹಲಿ, ರಾಜಸ್ಥಾನ, ಹೈದರಾಬಾದ್ ಆಶ್ರಯಿಸಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ದೆಹಲಿ, ಕೋಟಾದ ಸಂಸ್ಥೆಗಳಿಗೆ ಪೈಪೋಟಿ ನೀಡಿ, ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿವೆ.

‘2013ರಲ್ಲಿ ಪಠ್ಯಕ್ರಮ ಬದಲಾಗಿದ್ದರಿಂದ ಯುಪಿಎಸ್ಸಿ ಪೂರ್ಣಗೊಳಿಸಲಾಗದೇ ನಾನೇ ಸಂಸ್ಥೆಯೊಂದನ್ನು ಹುಟ್ಟು ಹಾಕಿದೆ. ಇದು ಈ ಭಾಗದಲ್ಲಿ ಯುಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಥಾಪಿಸಲಾದ ಮೊದಲ ಸಂಸ್ಥೆ. ಮೊದಲ ಬ್ಯಾಚ್ನಲ್ಲೇ ರ್ಯಾಂಕ್ ಬಂತು. 2016ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಬಂತು. ಇದು ಬೆಂಗಳೂರಿನ ಬಗ್ಗೆ ದೇಶದ ಗಮನ ಸೆಳೆಯಿತು. ಕೋಚಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ನಂಬಿಕೆ ಬಂತು. ತರಬೇತಿಗಾಗಿ ಉತ್ತರ ಭಾರತಕ್ಕೆ ಹೋಗುತ್ತಿದ್ದವರೆಲ್ಲಾ ಬೆಂಗಳೂರಿನತ್ತ ಮುಖ ಮಾಡಿದರು. ಒಂದೇ ಬೀದಿಯಲ್ಲಿ ಏಳೆಂಟು ಸಂಸ್ಥೆಗಳು ಸ್ಥಾಪನೆಯಾಗುವಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಯಿತು. ಚಂದ್ರಾ ಲೇಔಟ್ನಲ್ಲೇ 40-50 ಸಂಸ್ಥೆಗಳಿರಬಹುದು. ಇದೀಗ ದೆಹಲಿ ಬಿಟ್ಟರೆ ಯುಪಿಎಸ್ಸಿ ಕೋಚಿಂಗ್ಗೆ ಬೆಂಗಳೂರೇ ನಂತರದ ಆಯ್ಕೆ’ ಎಂದು ಚಂದ್ರಾ ಲೇಔಟ್ ‘ಬೆಂಗಳೂರಿನ ಯುಪಿಎಸ್ಸಿ ಹೃದಯಭಾಗ’ ಆಗಿದ್ದರ ಬಗ್ಗೆ ಇನ್ಸೈಟ್ ಸಂಸ್ಥೆಯ ಸ್ಥಾಪಕ ವಿನಯ್ಕುಮಾರ್ ಜಿ.ಬಿ ವಿವರ ನೀಡುತ್ತಾರೆ.

ಈಗ ತರಬೇತಿ ಸಂಸ್ಥೆ ಸ್ಥಾಪಿಸಿದವರಲ್ಲಿ ಬಹುತೇಕರು ಹಿಂದೊಮ್ಮೆ ಪರೀಕ್ಷೆ ಬರೆದವರು, ಸಂದರ್ಶನ ಎದುರಿಸಿದವರೇ ಎನ್ನುವುದು ವಿಶೇಷ. ಹೀಗಾಗಿ ಪರೀಕ್ಷಾ ತಯಾರಿ ವಿಧಾನದ ಬಗ್ಗೆ ಸಮಗ್ರ ತರಬೇತಿ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು, ಸಮಯ ನಿರ್ವಹಣೆ, ಪರೀಕ್ಷೆ, ಸಂದರ್ಶನ ಎದುರಿಸುವ ಬಗ್ಗೆಯೂ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತದೆ. ಈ ಹಿಂದೆ ಇದೇ ಸಂಸ್ಥೆಗಳಲ್ಲಿ ಕಲಿತು ಅಧಿಕಾರಿಯಾದವರಿಂದ ಸಿಗುವ ಮಾರ್ಗದರ್ಶನ ಆಕಾಂಕ್ಷಿಗಳನ್ನು ಮತ್ತಷ್ಟು ಹುರಿಗೊಳಿಸುತ್ತದೆ.

ವಿದ್ಯಾರ್ಥಿಗಳ ಜೀವನ ಶೈಲಿ ಹೇಗೆ?

ಅಧಿಕಾರಿಯಾಗುವ ಕನಸು ಹೊತ್ತು ಊರು ಬಿಟ್ಟು ಬಂದಿರುವ ಆಕಾಂಕ್ಷಿಗಳು ಶಿಸ್ತಿನ ಜೀವನ ಶೈಲಿ ಅಳವಡಿಸಿಕೊಳ್ಳಲೇಬೇಕು. ಪಠ್ಯಕ್ರಮ ಆರಂಭಿಸುವುದಕ್ಕೂ ಮುನ್ನ ಇವರನ್ನು ಇವುಗಳಿಗೆ ಅಣಿಗೊಳಿಸಲಾಗುತ್ತದೆ. ವಿವಿಧ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದ ಬಂದಿರುವ ವಿದ್ಯಾರ್ಥಿಗಳು ನಗರ ಬದುಕಿಗೆ ಹೊಂದಿಕೊಳ್ಳುವ ಸವಾಲಿನೊಂದಿಗೆ ತಯಾರಿ ನಡೆಸಬೇಕು. ಇಂತಹ ಪರೀಕ್ಷೆಗೆ ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಿಂದ ಹೆಚ್ಚಿನ ಆಕಾಂಕ್ಷಿಗಳು ಬರುತ್ತಾರೆ. ಬಡತನದ ಹಿನ್ನೆಲೆ ಇರುವ ಆಕಾಂಕ್ಷಿಗಳು ತರಬೇತಿ ಸಂಸ್ಥೆಯ ಶುಲ್ಕ ಪಾವತಿಸುವ ಜೊತೆಗೆ ಹಲವು ವರ್ಷ ದೈನಂದಿನ ಖರ್ಚನ್ನೂ ಸರಿದೂಗಿಸಿಕೊಂಡು ಹೋಗಬೇಕು. ಪೋಷಕರಿಗೆ ಹೊರೆಯಾಗದಂತೆ ಬದುಕುವುದು ಕೂಡ ಅನಿವಾರ್ಯ.

‘ಬೆಳಗ್ಗೆ ಆರು ಗಂಟೆಗೆ ಗ್ರಂಥಾಲಯಕ್ಕೆ ಹೋಗಿ ನಾಲ್ಕೈದು ಪತ್ರಿಕೆ ಓದುತ್ತೇನೆ. ಬಹುತೇಕ ದಿನ ಬೆಳಗಿನ ಉಪಾಹಾರ ಒಂದು ಕಪ್ ಚಹಾ ಹಾಗೂ ಬ್ರೆಡ್. ಮಧ್ಯಾಹ್ನ ಹಾಗೂ ರಾತ್ರಿಯ ಊಟ ಇಂದಿರಾ ಕ್ಯಾಂಟೀನ್ನಲ್ಲಿ. ಪಿ.ಜಿಯಲ್ಲಿ ಓದಲು ಅನುಕೂಲ ಇಲ್ಲದಿರುವುದರಿಂದ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುತ್ತೇನೆ. ಊರಿಗೆ ಹೋಗಿಬಂದು ಏಳು ತಿಂಗಳಾಯಿತು’ ಎಂದು ಮೂರು ವರ್ಷಗಳಿಂದ ಕೆಎಎಸ್ ಪರೀಕ್ಷೆಗೆ ತಯಾರಾಗುತ್ತಿರುವ ಶಹಾಪುರ ತಾಲ್ಲೂಕಿನ ಆಕಾಂಕ್ಷಿಯೊಬ್ಬರು ಹೇಳುತ್ತಾರೆ.

ಆರ್ಥಿಕ ಸ್ಥಿತಿ ಚೆನ್ನಾಗಿರುವ ವಿದ್ಯಾರ್ಥಿಗಳು ಬಾಡಿಗೆ ಮನೆ ಮಾಡಿಕೊಂಡು, ಊಟಕ್ಕಾಗಿ ಮೆಸ್ ಅನ್ನು ಆಶ್ರಯಿಸುತ್ತಾರೆ. ಉತ್ತರ ಕರ್ನಾಟಕ ಶೈಲಿಯ ಊಟ ಸ್ವಲ್ಪ ತುಟ್ಟಿಯಾಗಿರುವುದರಿಂದ ಬೀದಿಬದಿ ಗಾಡಿಗಳಲ್ಲಿ ಊಟ ಸೇವಿಸುವವರೂ ಇದ್ದಾರೆ. ಹೋಟೆಲ್ಗಳಲ್ಲಿ, ಸ್ಟೇಷನರಿ ಅಂಗಡಿಗಳಲ್ಲಿ, ಬೇಕರಿಗಳಲ್ಲಿ, ಕ್ಯಾಟರಿಂಗ್ ಸೇವೆಗಳಲ್ಲಿ ಪಾರ್ಟ್ಟೈಮ್ ಕೆಲಸ ಮಾಡಿಕೊಂಡು ತರಬೇತಿ ಪಡೆಯುವವರೂ ಇದ್ದಾರೆ. ಅಕ್ಕಪಕ್ಕದ ಕಲ್ಯಾಣ ಮಂಟಪಗಳಲ್ಲಿ ಮದುವೆ ಇದ್ದರೆ ಆ ದಿನದ ಮಧ್ಯಾಹ್ನದ ಊಟ ಮುಗಿಸುವ ಬಡವರೂ ಇದ್ದಾರೆ. ಸಣ್ಣಪುಟ್ಟ ವ್ಯಾಪಾರ ಆರಂಭಿಸಿ ಅದರಿಂದ ಬರುವ ಆದಾಯದಲ್ಲಿ ಬೋಧನಾ ಶುಲ್ಕ ಪಾವತಿಸುವವರು ಕೆಲವರು. ವರ್ಷಗಳು ಕಾದು ಪರೀಕ್ಷೆ ಪಾಸು ಮಾಡಲಾಗದೇ ಉದ್ಯಮ ಆರಂಭಿಸಿದ, ಕಲಿತ ಸಂಸ್ಥೆಯಲ್ಲೇ ಬೋಧಕರಾಗಿ ಕೆಲಸ ಮಾಡುವವರೂ ಸಿಕ್ಕರು. ನಗರ ಜೀವನಕ್ಕೆ ಆಕರ್ಷಿತರಾಗಿ ದಾರಿ ತಪ್ಪಿದವರ ಕಥೆಗಳನ್ನು ಹೋಟೆಲ್ ಮಾಲೀಕರೊಬ್ಬರು ಹೇಳಿದರು.

‘ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ಹಗಲು–ರಾತ್ರಿ ಅಧ್ಯಯನ ಮಾಡಿದೆ. ಮೊದಲ ವರ್ಷ ಮನೆಯಿಂದ ಬೆಂಬಲ ಸಿಗುತ್ತದೆ. ಬಳಿಕ ಮನೆಯವರ ಒತ್ತಡ, ಇನ್ನೂ ಮುಗಿದಿಲ್ಲವೇ ಎನ್ನುವ ಸ್ನೇಹಿತರ ಪ್ರಶ್ನೆಗಳನ್ನು ಎದುರಿಸುವುದೇ ದೊಡ್ಡ ಸವಾಲು. ಪ್ರಯತ್ನಗಳು ಫಲ ಕೊಡದೆ ಹೋದಾಗ ಖಿನ್ನತೆಗೆ ಒಳಗಾಗಿ ತಲೆಗೂದಲು ಉದುರಿತ್ತು. ಇದೀಗ ಒಂದು ವರ್ಷ ವಿರಾಮ ತೆಗೆದುಕೊಂಡು, ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ಪರೀಕ್ಷಾ ತಯಾರಿ ನಡೆಸುತ್ತಿದ್ದೇನೆ’ ಎಂದು ತಮ್ಮ ಅನುಭವ ಬಿಚ್ಚಿಟ್ಟರು ಚಿಕ್ಕಮಗಳೂರಿನ ಐಶ್ವರ್ಯ.

ಉತ್ತರ ಕರ್ನಾಟಕದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಒಲವು ಹೆಚ್ಚು. ಹೊಲ ಇದ್ದರು ನೀರಿನ ಕೊರತೆ ಹಾಗೂ ಇತರ ಸವಾಲುಗಳಿಂದಾಗಿ ಕನಿಷ್ಠ ಒಬ್ಬ ಮಗನಾದರೂ ‘ಸಾಹೇಬ’ರಾಗಬೇಕು ಎನ್ನುವುದು ಪೋಷಕರ ಅಭಿಲಾಷೆ. ಇದಕ್ಕಾಗಿ ಹೊಲ ಮಾರಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುತ್ತಾರೆ. ಕೈಯಲ್ಲಿ ಅರ್ಜಿ ಹಿಡಿದುಕೊಂಡು, ಕಣ್ಣು ತುಂಬಾ ಕನಸುಗಳನ್ನು ಹೊತ್ತುಕೊಂಡು ಚಂದ್ರಾ ಲೇಔಟ್ನ ಹಲವು ಸಂಸ್ಥೆಗಳಲ್ಲಿ ಪ್ರವೇಶಾತಿಗಾಗಿ ಭೇಟಿ ನೀಡುವ ಉತ್ತರ ಕರ್ನಾಟಕದ ಯುವಕ–ಯುವತಿಯರನ್ನು ಕಾಣಬಹುದು. ಹುಬ್ಬಳ್ಳಿ, ಧಾರವಾಡದಲ್ಲಿ ತರಬೇತಿ ಸಂಸ್ಥೆಗಳಿದ್ದರೂ ಗುಣಮಟ್ಟದ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾರೆ.

‘ಕೆಎಎಸ್ಗೆಂದು ಬರುವ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕಾನ್ಸ್ಟೇಬಲ್ ಪರೀಕ್ಷೆ ಬರೆಯಲೂ ಸಿದ್ಧರಿರುತ್ತಾರೆ. ಆದರೆ ಸರ್ಕಾರ ಪರೀಕ್ಷೆ ನಡೆಸುವುದಿಲ್ಲ. ಪದೇ ಪದೇ ನಡೆಯುವ ಪರೀಕ್ಷಾ ಅಕ್ರಮ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಮಸುಕಾಗಿಸುತ್ತದೆ. ಪ್ರಯತ್ನ ಜಾರಿಯಲ್ಲಿರುವಾಗಲೇ ಗರಿಷ್ಠ ವಯಸ್ಸು ಮೀರಿ ಹೋಗುತ್ತದೆ. ವಯಸ್ಸು ಹೆಚ್ಚಾದರೆ ಖಾಸಗಿ ವಲಯಗಳಲ್ಲೂ ಕೆಲಸ ಸಿಗುವುದು ಕಷ್ಟ. ಕೌಶಲ ರಹಿತ ಶಿಕ್ಷಣದಿಂದಾಗಿ ಉದ್ಯೋಗ ಸಮಸ್ಯೆಯಾದರೆ, ಖಾಸಗಿಯಲ್ಲಿರುವ ಅನಿಶ್ಚಿತತೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯತ್ತ ಮುಖ ಮಾಡಿಸುತ್ತದೆ. ಆದರೆ ಸರ್ಕಾರಿ ವಲಯದಲ್ಲಿರುವ ಭ್ರಷ್ಟಾಚಾರ ಅವರ ಭವಿಷ್ಯವನ್ನೇ ನುಂಗಿ ಹಾಕುತ್ತದೆ’ ಎನ್ನುತ್ತಾರೆ ವಿಜಯನಗರದಲ್ಲಿ ‘ಎನ್ಸಿಸಿ ತರಬೇತಿ ಸಂಸ್ಥೆ’ ನಡೆಸುವ ನಾಗಪ್ಪ.

ತಾಳ್ಮೆ, ಛಲದ ಪಾಠ..

‘ಲೋಕ ಸೇವಾ ಆಯೋಗದ ಪರೀಕ್ಷೆ ಬರೆಯುವವರಿಗೆ ತಾಳ್ಮೆ ಹಾಗೂ ಛಲ ಇರಬೇಕು’ ಎನ್ನುತ್ತಲೇ ತಮ್ಮ ಯಶಸ್ಸಿನ ಪಯಣವನ್ನು ಹಂಚಿಕೊಂಡರು ಕೋಲಾರ ಜಿಲ್ಲೆಯ ಇರಗಸಂದ್ರದ ರೈತ ಕುಟುಂಬದ ಮಧು. ಇವರು ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಕನಸು ಕಟ್ಟಿಕೊಂಡು, ಸತತ ಪ್ರಯತ್ನ ಮಾಡಿ ಈಗ ಅದನ್ನು ನನಸು ಮಾಡುವ ಹಂತ ತಲುಪಿದ್ದಾರೆ.

2020ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿಗೆ ಪ್ರಯತ್ನ ಮಾಡಿದಾಗ ಪ್ರಿಲಿಮ್ಸ್ ಪಾಸ್ ಮಾಡಲೂ ಆಗಿರಲಿಲ್ಲ. ಮರುವರ್ಷ ಮಾಡಿದ ಪ್ರಯತ್ನದಲ್ಲಿ ಸಂದರ್ಶನ ಕೊಟ್ಟರೂ 31 ಅಂಕಗಳಿಂದಾಗಿ ಹಿನ್ನಡೆಯಾಗಿತ್ತು. 2022ರಲ್ಲಿ ಈ ಅಂತರ 25 ಅಂಕಗಳಿಗೆ ಬಂದಿಳಿಯಿತು. ಆದರೂ ಛಲಬಿಡದೇ 2023ರಲ್ಲಿ ಮರಳಿ ಯತ್ನ ಮಾಡಿದ್ದ ಮಧುಗೆ ನಾಲ್ಕನೇ ಪ್ರಯತ್ನ ಭಾರಿ ಆಘಾತ ನೀಡಿತ್ತು. ಪ್ರಿಲಿಮ್ಸ್ ಪಾಸು ಮಾಡಲಾಗಲಿಲ್ಲ. 2024ರಲ್ಲಿ ಭಾರತ ಮಟ್ಟದಲ್ಲಿ 544ನೇ ರ್ಯಾಂಕ್ ಪಡೆದು ಐಆರ್ಎಸ್ ಅಧಿಕಾರಿಯಾದರು. ಆದರೆ ತಾನು ಗುರಿ ಇಟ್ಟಿರುವ ಐಎಎಸ್ಗಾಗಿ ಈ ವರ್ಷ ಮತ್ತೊಮ್ಮೆ ಪರೀಕ್ಷೆ ಬರೆದಿದ್ದಾರೆ. ಮೇನ್ಸ್ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ಅವರು, ಈ ಬಾರಿ ಐಎಎಸ್ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

‘ಆರಂಭದಲ್ಲಿ ಹಣಕಾಸಿನ ತೊಂದರೆ ಇತ್ತು. ಮೊದಲ ವರ್ಷ ಮನೆಯವರು ಖರ್ಚಿಗೆ ಹಣ ಕಳುಹಿಸಿಕೊಡುತ್ತಿದ್ದರು. ಬಳಿಕ ಪಾರ್ಟ್ಟೈಮ್ ಕೆಲಸ ಮಾಡುತ್ತಾ ಓದಿದೆ. ನನ್ನ ಖರ್ಚಿಗೆ ಬೇಕಾಗುವಷ್ಟು ಹಣ ಹುಟ್ಟುತ್ತಿತ್ತು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸಾಧಿಸಲು ಆಗುತ್ತದೆ’ ಎಂದರು ಮಧು.

ವಿಜಯನಗರ, ಚಂದ್ರಾ ಲೇಔಟ್ನಲ್ಲಿ ಸುತ್ತಾಡುವಾಗ ನನಗೆ ಈ ಆಕಾಂಕ್ಷಿಗಳ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಕನಸುಗಳೇ ಮೆರವಣಿಗೆ ಹೊರಟಂತೆ ಕಾಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.