ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ
Published 27 ನವೆಂಬರ್ 2023, 11:35 IST
Last Updated 27 ನವೆಂಬರ್ 2023, 11:35 IST
ಅಕ್ಷರ ಗಾತ್ರ

ಬೆಂಗಳೂರು: ಕೋಣಗಳ ಮಾಲೀಕರ ಪ್ರತಿಷ್ಠೆಯಾಗಿರುವ ಕಂಬಳದಲ್ಲಿ, ಅವುಗಳ ಅಲಂಕಾರಕ್ಕೂ ಭಾರೀ ಖರ್ಚು ಮಾಡಲಾಗುತ್ತದೆ. ಕೋಣಗಳ ವಿಚಾರದಲ್ಲಿ ಪ್ರತಿಯೊಂದರಲ್ಲೂ ಕಾಳಜಿ ಮಾಡುವ ಮಾಲೀಕರು, ಕಂಬಳದ ವೇಳೆ ಬಳಸುವ ಹಗ್ಗಗಳ ಬಗ್ಗೆಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ.

ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ. ಕೋಣಗಳ ಮಾಲೀಕರು ಪ್ರತಿಷ್ಠೆಗಾಗಿ ತಮ್ಮ ಆಯ್ಕೆಯ ಬಣ್ಣಗಳ ಹಗ್ಗಗಳನ್ನೇ ಬಳಸುತ್ತಾರೆ.

ಕಂಬಳ ಸ್ಪರ್ಧೆಯಲ್ಲಿ ಪ್ರಸಿದ್ಧಿ ಪಡೆದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರ್ಕೂರು ಶಾಂತರಾಮ ಶೆಟ್ಟರ ಕೋಣಗಳು ಕಟ್ಟಿದ್ದ ಹಟ್ಟಿಯಲ್ಲಿ ವಿವಿಧ ಹಗ್ಗಗಳ ದರ್ಶನವಾಯಿತು. ಕಂಬಳ ಅಕಾಡೆಮಿಯ ನಿರ್ದೇಶಕ ಹಾಗೂ ಕಂಬಳ ಕರೆ ನಿರ್ಮಾಣದಲ್ಲಿ ಪ್ರಸಿದ್ಧಿ ಪಡೆದ ಅಪ್ಪಣ್ಣ ಅಲಿಯಾಸ್ ಜಾನ್ ಸಿರಿಲ್ ಡಿ’ಸೋಜಾ ಅವರು ಹಗ್ಗಗಳ ಬಳಕೆ ಬಗ್ಗೆ ತಿಳಿಸಿಕೊಟ್ಟರು.

ನೆತ್ತಿ ಹಗ್ಗ
ತುಳು ಭಾಷೆಯಲ್ಲಿ ನೆತ್ತಿ ಎಂದರೆ ಹಣೆ ಎಂದರ್ಥ. ಇದು ಕೋಣಗಳ ಅಲಂಕಾರಕ್ಕೆ ಬಳಸುವ ಹಗ್ಗ. ಒಂದು ಭಾಗದಲ್ಲಿ ವೃತ್ತಾಕಾರವಾಗಿದ್ದು, ಇನ್ನೊಂದು ತುದಿಯನ್ನು ಹಗ್ಗಗಳ ನೂಲುಗಳನ್ನು ಬಿಡಿಸಿ ಹೂವಿನಂತೆ ಮಾಡಲಾಗುತ್ತದೆ. ವೃತ್ತಾಕಾರವಾಗಿರುವ ಒಂದು ಬದಿಯನ್ನು ಕೋಣದ ಗಲ್ಲದ ಮೂಲಕ ಏರಿಸಿ, ಹೂವಿನಂತೆ ಇರುವ ಇನ್ನೊಂದು ಭಾಗವನ್ನು ಹಣೆಗೆ ಕಟ್ಟಲಾಗುತ್ತದೆ. ಹಗ್ಗದ ಮಧ್ಯದಲ್ಲಿ ಕೋಣದ ಮಾಲೀಕರ ಇಷ್ಟದ ವಿನ್ಯಾಸ ಇರುವ ಅಂಗೈಯಗಲದ ತೆಳು ಬೆಳ್ಳಿ ಬಟ್ಟಲು ಇರುತ್ತದೆ. ವಿಶಿಷ್ಟವಾಗಿ ನೆಯ್ದಿರುವ ಇದರ ದರ ₹10 ಸಾವಿರದವರೆಗೂ ಇದೆ.
ನೆತ್ತಿ ಹಗ್ಗ

ನೆತ್ತಿ ಹಗ್ಗ

ಕೋಂಟಿನ ಹಗ್ಗ
ನೊಗ ಹಾಗೂ ಕೋಣದ ಕುತ್ತಿಗೆಯನ್ನು ಕಟ್ಟಲು ಈ ಹಗ್ಗವನ್ನು ಬಳಸಲಾಗುತ್ತದೆ. 2-3 ಮೀಟರ್ ಉದ್ದ ಇರುವ ಈ ಹಗ್ಗದ ಮಧ್ಯಭಾಗದಲ್ಲಿ ವಿಶೇಷ ನೇಯ್ಗೆಯ ರಚನೆಗಳಿವೆ. ಒಂದು ತುದಿಯಲ್ಲಿ ಹಗ್ಗಗಳ ನೂಲುಗಳನ್ನು ಬಿಡಿಸಿ ಹೂವಿನ ಮಾದರಿಯನ್ನು ರಚಿಸಲಾಗುತ್ತದೆ. ನೊಗದ ತುದಿಯನ್ನು ಕೋಂಟು ಎನ್ನುವುದರಿಂದ ಇದಕ್ಕೆ ಕೋಂಟಿನ ಹಗ್ಗ ಎನ್ನುವ ಹೆಸರು ಬಂದಿದೆ.
ಕೋಂಟಿನ ಹಗ್ಗ

ಕೋಂಟಿನ ಹಗ್ಗ

ಕಣಕೆ ಹಗ್ಗ
ಈ ಹಗ್ಗವನ್ನು ಕುಂದಾಪುರ ಭಾಗದಲ್ಲಿ ತಳಕ್ಕೆ ಹಗ್ಗ ಎನ್ನುತ್ತಾರೆ. ಎರಡು ಕೋಣಗಳು ಅಗತ್ಯಕ್ಕಿಂತ ದೂರ ನಿಲ್ಲದ ಹಾಗೆ ನಿಯಂತ್ರಿಸಲು ಈ ಹಗ್ಗವನ್ನು ಎರಡೂ ಕೋಣಗಳ ಕುತ್ತಿಗೆಗೆ ಕಟ್ಟಲಾಗುತ್ತದೆ. ಸುಮಾರು ಒಂದು ಅಡಿ ಉದ್ದದ ಈ ಹಗ್ಗವನ್ನು ವಿಶೇಷ ವಿನ್ಯಾಸದೊಂದಿಗೆ ನೇಯಲಾಗುತ್ತದೆ. ಎರಡೂ ತುದಿಯಲ್ಲಿ ಇರುವ ವೃತ್ತಾಕಾರದ ಉರುಳಿಗೆ ಸಾಮಾನ್ಯ ಹಗ್ಗವನ್ನು ಬಳಸಿ ಕೋಣಗಳ ಕುತ್ತಿಗೆಗೆ ಕಟ್ಟಲಾಗುತ್ತದೆ.
ಕಣಕೆ ಹಗ್ಗ

ಕಣಕೆ ಹಗ್ಗ

ಓಡಿಸುವ ಹಗ್ಗ
ಹಗ್ಗ ವಿಭಾಗದಲ್ಲಿ ಸ್ಪರ್ಧೆ ಮಾಡುವ ಕೋಣಗಳನ್ನು ಓಡಿಸಲು ಈ ಹಗ್ಗವನ್ನು ಬಳಸಲಾಗುತ್ತದೆ, ಇದರ ಒಂದು ತುದಿಯನ್ನು ನೊಗಕ್ಕೆ ಕಟ್ಟಿದರೆ, ಇನ್ನೊಂದು ತುದಿಯನ್ನು ಓಡಿಸುವವ (ಕಂಬಳ ಜಾಕಿ) ಹಿಡಿದುಕೊಂಡಿರುತ್ತಾನೆ. ಓಡಿಸುವಾಗ ಕೈಯಿಂದ ಹಗ್ಗ ಜಾರದಿರಲಿ ಎಂದು ತೆಂಗಿನ ನಾರಿನಿಂದ ಈ ಹಗ್ಗವನ್ನು ತಯಾರಿಸಲಾಗುತ್ತದೆ. ಹಗ್ಗದ ಕೊನೆಗೆ ಹೂವಿನ ರೀತಿಯ ವಿನ್ಯಾಸ ಇರುತ್ತದೆ.

ಈ ಹಗ್ಗಗಳನ್ನು ಕೈಯಲ್ಲಿಯೇ ನೇಯ್ದು ತಯಾರಿಸಲಾಗುತ್ತದೆ. ಮೀನುಗಾರರು ಬಳಸುವ ಹಗ್ಗವನ್ನು ಬಳಸಿ ಈ ಹಗ್ಗಗಳನ್ನು ನೇಯಲಾಗುತ್ತದೆ. ಸಾಮಾನ್ಯ ಹಗ್ಗಗಳಿಗಿಂತ ಇದು ಕೆ.ಜಿಗೆ ₹150-200 ತುಟ್ಟಿ. ಮಂಗಳೂರಿನ ಬಂದರ್‌ನ ದಕ್ಕೆಯಿಂದ ಈಗ ಹಗ್ಗಗಳನ್ನು ತಂದು ನೇಯಲಾಗುತ್ತದೆ. ಯಂತ್ರಗಳ ಮೂಲಕ ಈ ಹಗ್ಗ ನೇಯುವುದು ಸಾಧ್ಯವಿಲ್ಲ. ಇಡೀ ಕಂಬಳದಲ್ಲಿ ಈ ಹಗ್ಗ ನೇಯುವವರು 10 ಮಂದಿ ಮಾತ್ರ. ಕಂಬಳ ಅಕಾಡೆಮಿಯಲ್ಲಿ ಇದಕ್ಕೆ ವಿಶೇಷ ತರಬೇತಿ ಕೂಡ ನೀಡಲಾಗುತ್ತದೆ ಎಂದರು ಅಪ್ಪಣ್ಣ.

ನೆತ್ತಿ ಹಗ್ಗದೊಂದಿಗೆ ಅಪ್ಪಣ್ಣ

ನೆತ್ತಿ ಹಗ್ಗದೊಂದಿಗೆ ಅಪ್ಪಣ್ಣ

ಓಡಿಸುವವರು ಹಾಗೂ ಮಾಲೀಕರು ಬಳಸುವ ಬೆತ್ತ

ಓಡಿಸುವವರು ಹಾಗೂ ಮಾಲೀಕರು ಬಳಸುವ ಬೆತ್ತ

ಹಗ್ಗದಂತೆ ಕಂಬಳದ ಬೆತ್ತಗಳಲ್ಲಿ ವಿವಿಧ ಬಗೆ ಇವೆ. ಮಾಲೀಕರು ಹಾಗೂ ಜಾಕಿಗಳು ಓಡಿಸುವ ಬೆತ್ತಗಳು ಬೇರೆ ಬೇರೆ. ಮಾಲೀಕರ ಬೆತ್ತಗಳನ್ನು ಉಣ್ಣೆ ಹಾಗೂ ಹತ್ತಿಯ ನೂಲುಗಳ ಮೂಲಕ ವಿನ್ಯಾಸ ಮಾಡಲಾಗುತ್ತದೆ. ಬೆತ್ತದ ತುದಿಯಲ್ಲಿ ಉಂಡೆಯಂಥ ರಚನೆ ಇದ್ದು, ಇದನ್ನು ಉಣ್ಣೆಯಿಂದ ಮಾಡಲಾಗುತ್ತದೆ. ಕೆಲವು ಕೋಣಗಳ ಮಾಲೀಕರು ಅದಕ್ಕೆ ಬೆಳ್ಳಿಯ ಲೇಪನ ಕೂಡ ಮಾಡಿಸುತ್ತಾರೆ. ಮಾಲೀಕರು ಬಳಸುವ ಬೆತ್ತದ ದರ ₹3 ರಿಂದ 25 ಸಾವಿರದವರೆಗೆ ಇದೆ. ಓಡಿಸುವವ ಬಳಸುವ ಬೆತ್ತ ₹600-800 ಬೆಳೆಬಾಳುತ್ತದೆ.
– ಅಪ್ಪಣ್ಣ, ಕಂಬಳ ಅಕಾಡೆಮಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT