‘ಯಾದವಗಿರಿ ಎಂದರೆ ರಾಮಕೃಷ್ಣ ಆಶ್ರಮ’ ಎಂಬುದು ಮೈಸೂರಿನಲ್ಲಿ ನಾಣ್ಣುಡಿಯಂತೆ ಪ್ರಸಿದ್ಧ. 1925ರಲ್ಲಿ ಸ್ಥಾಪನೆಯಾದ, ಕರ್ನಾಟಕದ ಮೂರನೇ ಅತಿ ಹಳೆಯ ಈ ಆಶ್ರಮಕ್ಕೆ ಈಗ ಶತಮಾನೋತ್ಸವದ ಸಂಭ್ರಮ.

ಯಾದವಗಿರಿಯ ಪ್ರಶಾಂತ ವಾತಾವರಣದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಹಾಗೂ ಶಾರದಾ ಮಾತೆಯ ಅಧ್ಯಾತ್ಮ ಶಕ್ತಿಯ ಸಾರವೆಲ್ಲವನ್ನೂ ಹೀರಿಕೊಂಡು ಧ್ಯಾನಸ್ಥವಾಗಿ ನಿಂತಂತೆ ಕಾಣುವ ಆಶ್ರಮದ ಒಳ ಹೊಕ್ಕರೆ ಪ್ರವೇಶ ದ್ವಾರದಲ್ಲೇ ಹೂದೋಟ, ಪುಸ್ತಕ ಮಳಿಗೆ ಸ್ವಾಗತಿಸುತ್ತದೆ.

ಅಲ್ಲಿಂದ ಎಡಭಾಗಕ್ಕೆ ನಡೆದರೆ ಇಕ್ಕೆಲಗಳಲ್ಲಿ ಸದ್ದಿಲ್ಲದೆ ನಗುವ ಹೂ ಗಿಡಗಳು ಪ್ರಾರ್ಥನಾ ಮಂದಿರಕ್ಕೆ ಕರೆದೊಯ್ಯುತ್ತವೆ. ಧ್ಯಾನಕ್ಕೆ ಕುಳಿತರೆ ಸಮಯವೇ ಮರೆತುಹೋಗುವಂಥ ಮೌನ ಹೊದ್ದ ತಾಣ. ಧ್ಯಾನ ಮುಗಿಸಿದವರು, ಓದುವ ಆಸಕ್ತಿ ಇದ್ದರೆ ಗ್ರಂಥಾಲಯಕ್ಕೆ ಹೋಗಬಹುದು. ಸ್ವಯಂಸೇವಕ ಸನ್ಯಾಸಿಗಳನ್ನು ಭೇಟಿ ಮಾಡಬಹುದು. ಆಶ್ರಮದ ಆ ವಾತಾವರಣದಲ್ಲಿ ಸಾಂತ್ವನದ ಗಾಳಿ ತಣ್ಣಗೆ ಬೀಸುತ್ತದೆ.

ಆಶ್ರಮ ಎಂದರೆ ಇದಿಷ್ಟೇ ಎಂದುಕೊಂಡರೆ ತಪ್ಪಾಗುತ್ತದೆ. ಇದು ಕಣ್ಣಿಗೆ ಕಾಣುವ ಆಶ್ರಮ. ಶಿಕ್ಷಣ, ಅಧ್ಯಾತ್ಮ, ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಆಶ್ರಮದ ಪರಿಶ್ರಮ, ಕಾರ್ಯಕ್ಷೇತ್ರ ಕಣ್ಣೋಟವನ್ನೂ ಮೀರಿದ್ದು.

ಆಶ್ರಮದ ನೂರು ವರ್ಷದ ಚರಿತ್ರೆಯು ಮೈಸೂರು ನಗರದ ಸಮಗ್ರ ಅಭಿವೃದ್ಧಿಯ ಚರಿತ್ರೆಯನ್ನೂ ಹೇಳುತ್ತದೆ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೂ ಆಶ್ರಮವು ಆಡಳಿತಗಾರರಿಂದ ನೆರವು ಪಡೆದು ಸಮುದಾಯ ಸೇವೆಯ ದಾರಿಯಲ್ಲಿ ಮುನ್ನಡೆದಿರುವುದನ್ನೂ ಸೂಚಿಸುತ್ತದೆ.

ಮೈಸೂರು ರಾಜವಂಶಸ್ಥರಿಗೂ ಆಶ್ರಮಕ್ಕೂ ಅವಿನಾಭಾವ ನಂಟು. 1892ರಲ್ಲಿ ಸ್ವಾಮಿ ವಿವೇಕಾನಂದರು ಶಿಕಾಗೋ ವಿಶ್ವಧರ್ಮ ಸಮ್ಮೇಳನಕ್ಕೆ ತೆರಳುವ ಮುನ್ನ ಮೈಸೂರಿಗೆ ಭೇಟಿ ನೀಡಿದ್ದು, ಆಶ್ರಮ ಸ್ಥಾಪನೆಗೆ ಮೂಲ ಪ್ರೇರಣೆ. ಅವರು ಚಾಮರಾಜ ಒಡೆಯರ್ ಅವರ ಆತಿಥ್ಯ ಸ್ವೀಕರಿಸಿದ್ದರು. ಆ ಸಂದರ್ಭದಲ್ಲಿ ಉಪನ್ಯಾಸಗಳನ್ನು ನೀಡಿದ್ದ, ವಿದ್ವಾಂಸರೊಂದಿಗೆ ಚರ್ಚಿಸಿದ್ದ ಭವ್ಯ ನೆನಪುಗಳೂ ಇವೆ.

ಮೊದಲಿಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಶ್ರಮಕ್ಕೆಂದು ಎರಡು ಎಕರೆ ಜಾಗ ಕೊಟ್ಟಿದ್ದು ಯಾದವಗಿರಿಯಲ್ಲಿಯೇ. ಅದುವರೆಗೂ ಸ್ವಾಮಿ ಸಿದ್ದೇಶ್ವರಾನಂದರ ಸತತ ಪ್ರಯತ್ನದಿಂದ ಆಶ್ರಮದ ಚಟುವಟಿಕೆಗಳು ದಿವಾನ್ಸ್ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದವು. ರಾಮಕೃಷ್ಣ ಮಹಾಸಂಘದ ಸನ್ಯಾಸಿಗಳಿಗೆ ಪ್ರತಿ ವರ್ಷ ವೇದಾಂತ ಗ್ರಂಥಗಳ ಬಗ್ಗೆ ತರಬೇತಿ ನೀಡಲು ಆಶ್ರಮದ ಆವರಣದಲ್ಲಿ ‘ಸ್ಟಡಿ ಸರ್ಕಲ್ ಹೋಂ’ ಸ್ಥಾಪನೆಗೂ ಮಹಾರಾಜರು 30ರ ದಶಕದಲ್ಲಿ ಧನ ಸಹಾಯ ನೀಡಿದ್ದರು. ಜಯಚಾಮರಾಜ ಒಡೆಯರ್ ಕೂಡ ಈ ನೆರವನ್ನು ಮುಂದುವರಿಸಿದ್ದರು. ಈ ಅಧ್ಯಯನ ಪರಂಪರೆ ಈಗಲೂ ಮುಂದುವರಿದಿದೆ.

ಅಧ್ಯಾತ್ಮ ಸಾಧನೆಯ ಗುರಿಯಿಂದ ಶುರುವಾದ ಆಶ್ರಮವು ಸಮುದಾಯ ಶಿಕ್ಷಣದ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡಿರುವುದು ವಿಶೇಷ. ಆಶ್ರಮದ ಆರಂಭದ ದಿನಗಳಲ್ಲೇ, ಇಂಟರ್ ಮೀಡಿಯಟ್ನಲ್ಲಿ ಅನುತ್ತೀರ್ಣರಾದವರಿಗೆ ಶಿಕ್ಷಣ, ಗ್ರಾಮ ಸ್ವಚ್ಛತೆ, ವಯಸ್ಕರ ಶಿಕ್ಷಣ, ಕೈದಿಗಳಿಗೆ ಮೌಲ್ಯ ಶಿಕ್ಷಣದಂತ ಕಾರ್ಯಕ್ರಮಗಳೂ ನಡೆದಿದ್ದವು.

ವಿದ್ಯಾರ್ಥಿ ನಿಲಯದಿಂದ ಶಾಲೆಯವರೆಗೆ...

ದೇಶಕ್ಕೆ ಸ್ವಾತಂತ್ರ್ಯ ದೊರಕಿ ಎರಡು ವರ್ಷದ ಬಳಿಕ ಆಶ್ರಮವು ‘ಶ್ರೀ ರಾಮಕೃಷ್ಣ ಸ್ಟುಡೆಂಟ್ಸ್ ಹೋಂ’ ಅನ್ನು ಸ್ಥಾಪಿಸಿತ್ತು. ಅದೇ ನಂತರ ಶ್ರೀರಾಮಕೃಷ್ಣ ಬಾಲಕರ ವಸತಿ ವಿದ್ಯಾಶಾಲೆಯಾಗಿ ಮಾರ್ಪಾಡಾಯಿತು. ಶಾಲೆಯ ಶಂಕುಸ್ಥಾಪನೆ ಸಂದರ್ಭದಲ್ಲಿ ಅಂದಿನ ಮಹಾರಾಜ ಜಯಚಾಮರಾಜ ಒಡೆಯರ್ ‘ಹಾಸ್ಟೆಲ್ಗಳೂ ಹೆಚ್ಚಿವೆ. ಕಾಲೇಜುಗಳೂ ಹೆಚ್ಚಿವೆ. ಆದರೆ ಆಶ್ರಮವು ಬಾಲಕರಿಗೆ ಉನ್ನತ ಮೌಲ್ಯದ ಶಿಕ್ಷಣವನ್ನು ನೀಡುತ್ತಿದೆ’ ಎಂದು ಶ್ಲಾಘಿಸಿದ್ದರು.

‘ಎ ಸ್ಕೂಲ್ ವಿಥ್ ಎ ಪೂಲ್. ಇದು ಆ ಕಾಲಕ್ಕೇ ಈಜುಕೊಳವುಳ್ಳ ಶಾಲೆಯನ್ನು ಸ್ಥಾಪಿಸಿದ್ದು, ಕ್ರೀಡೆಗೆ ಕೊಟ್ಟ ಆದ್ಯತೆಗೆ ಸಾಕ್ಷಿ. ಸ್ವಾಮಿ ಶಾಂಭವಾನಂದರ ಕಾಳಜಿಯಿಂದ ಇದು ಸಾಧ್ಯವಾಯಿತು’ ಎನ್ನುತ್ತಾರೆ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ.

ಶಾಲೆಯೊಳಕ್ಕೆ ಹೋದರೆ ಮಾನವ ನಿರ್ಮಿತವಾದ ದಟ್ಟ ಕಾಡು ಸ್ವಾಗತಿಸುತ್ತದೆ. ಅಲ್ಲಿ ಕೃಷಿ ಚಟುವಟಿಕೆಗಳೂ ನಡೆಯುವುದು ವಿಶೇಷ. ವಿದ್ಯಾರ್ಥಿಗಳಲ್ಲಿ ಸೇವಾ ಅರಿವು ಮೂಡಿಸಲು ‘ಫ್ರೆಂಡ್ಸ್ ಆಫ್ ದಿ ಪೂರ್’ ಯೋಜನೆ ಎರಡು ದಶಕದಿಂದ ನಡೆದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ಐವತ್ತು ವರ್ಷದ ಹಿಂದೆ ಆಶ್ರಮವು ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಲಾರಂಭಿಸಿತ್ತು. ಈಗ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೂ ಇಲ್ಲಿ ಕಾರ್ಯಾಗಾರಗಳು ನಡೆಯುತ್ತವೆ.
ಆಶ್ರಮದ ಪ್ರಕಾಶನ ವಿಭಾಗವು ಐದು ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ.

ಆಶ್ರಮದ ಆಸುಪಾಸಿನ ಸರ್ಕಾರಿ ಶಾಲೆ ಮಕ್ಕಳಿಗೆ, ‘ಗದಾಧರ ಅಭ್ಯುದಯ ಪ್ರಕಲ್ಪ’ ಕಾರ್ಯಕ್ರಮದ ಅಡಿ, ಶಾಲೆಯ ನಂತರದ ವೇಳೆಯಲ್ಲಿ ಪೂರಕ ಶಿಕ್ಷಣ, ಲೇಖನ ಸಾಮಗ್ರಿ ಪೌಷ್ಟಿಕ ಆಹಾರ ವಿತರಣೆಯೂ ನಡೆದಿದೆ. ‘ವಿವೇಕ ಶಿಕ್ಷಣ’ ಕಾರ್ಯಕ್ರಮದ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಕುಗ್ರಾಮ ತೆಂಕಲಮೋಳೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಹಳ್ಳಿಗರ ಅಭ್ಯುದಯಕ್ಕಾಗಿ ‘ಶ್ರೀ ರಾಮಕೃಷ್ಣ ಸೇವಾ ಮಂದಿರ‘ ಶ್ರಮಿಸುತ್ತಿದೆ.

‘ಅಧ್ಯಾತ್ಮ, ಶಿಕ್ಷಣ, ನೈತಿಕತೆ ಮತ್ತು ಸಂಸ್ಕೃತಿ– ಈ ಮೂರು ಆಯಾಮಗಳಲ್ಲಿ ಆಶ್ರಮದ ಸೇವೆ ವಿಸ್ತರಿಸಿದೆ. ರಾಮಕೃಷ್ಣ ಆಶ್ರಮ, ಶ್ರೀ ರಾಮಕೃಷ್ಣ ವಿದ್ಯಾಶಾಲಾ, ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಗಳು ಅದಕ್ಕಾಗಿ ದುಡಿಯುತ್ತಿವೆ’ ಎನ್ನುತ್ತಾರೆ ಸ್ವಾಮಿ ಮುಕ್ತಿದಾನಂದ.

ಆಶ್ರಮದ ಶತಮಾನೋತ್ಸವವೊಂದಿಗೆ ಈಗ, ಆಶ್ರಮದ ‘ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆ’ಯ ಸ್ವರ್ಣ ಮಹೋತ್ಸವ, ‘ವಿವೇಕ ಪ್ರಭ’ ಮಾಸ ಪತ್ರಿಕೆ ಹಾಗೂ ‘ವಿವೇಕ ಶಿಕ್ಷಣ’ ರಜತ ಮಹೋತ್ಸವವೂ ಜೊತೆಯಾಗಿದೆ.

ಕುವೆಂಪು ನಂಟು..

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅವಳಿ ಸಂಸ್ಥೆಗಳ ಪ್ರಧಾನ ಕೇಂದ್ರವಾದ ಕೋಲ್ಕತ್ತಾ ಸಮೀಪದ ಬೇಲೂರು ಮಠದ ಶಾಖೆಗಳಲ್ಲಿ ಒಂದಾದ ಈ ಆಶ್ರಮದ ಸಂಸ್ಥಾಪಕರಾದ ಸ್ವಾಮಿ ಸಿದ್ದೇಶ್ವರಾನಂದರಿಗೆ ಕುವೆಂಪು ನಿಕಟವರ್ತಿಯಾಗಿದ್ದರು. ಸುಮಾರು 14 ವರ್ಷ ಕುವೆಂಪು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಆಶ್ರಮದಲ್ಲಿಯೇ ನೆಲೆಸಿದ್ದರು. ಅವರ ವ್ಯಕ್ತಿತ್ವ ವಿಕಾಸದಲ್ಲಿ ಆಶ್ರಮ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಅವರ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ ಕೃತಿಯಲ್ಲಿ ದಾಖಲಾಗಿದೆ. ಜಿ.ಎಸ್.ಶಿವರುದ್ರಪ್ಪ ಪ್ರಭುಶಂಕರ ಸಿಪಿಕೆ ಎಸ್.ಎಲ್.ಭೈರಪ್ಪ ಪ್ರಭುಪ್ರಸಾದ್ ದೇಜಗೌ..ಹೀಗೆ ಆಶ್ರಮದೊಂದಿಗೆ ನಿಕಟ ನಂಟು ಹೊಂದಿದ್ದ ಲೇಖಕರ ಪಟ್ಟಿಯೂ ದೊಡ್ಡದು.

ಆಯಸ್ಕಾಂತ ಶಕ್ತಿ

ಆಶ್ರಮದ ಆಯಸ್ಕಾಂತ ಶಕ್ತಿಗೆ ಮನಸೋಲದ ಭಕ್ತ–ಪ್ರವಾಸಿಗರು ಅತಿವಿರಳ. ಆಶ್ರಮದ ಎದುರಿಗೇ ಇತ್ತೀಚೆಗಷ್ಟೇ 90 ವರ್ಷ ಪೂರೈಸಿದ ಮೈಸೂರು ಆಕಾಶವಾಣಿ ಇದೆ. ಅನತಿ ದೂರದಲ್ಲೇ ‘ಮಾಲ್ಗುಡಿ ಡೇಸ್’ ಖ್ಯಾತಿಯ ಆರ್.ಕೆ.ನಾರಾಯಣ್ ಅವರ ಮನೆ ಕುವೆಂಪು ಅವರ ’ಉದಯರವಿ’ ಮನೆಯೂ ಇದೆ. ಇವೆಲ್ಲಕ್ಕೂ ಮುನ್ನ ಆಶ್ರಮವೇ ಪ್ರವಾಸಿಗರನ್ನು ಸೆಳೆಯುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.