ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀಜಗನ ಹೆಣಿಗೆ ಹರಿಶ್ಚಂದ್ರನ ಸರಿಗೆ - ಎಲ್ಲೆಲ್ಲೂ ಕೇಳಿ ಬರುತ್ತಿರುವ ಗೀಜಗ ಹಕ್ಕಿ ಹಾಡು

Published 18 ಜೂನ್ 2023, 0:20 IST
Last Updated 18 ಜೂನ್ 2023, 0:20 IST
ಅಕ್ಷರ ಗಾತ್ರ

ಸುಮಲತಾ ಎನ್.

ಗಾಯಕ ಸಂಚಿತ್ ಹೆಗಡೆ ಹಾಡಿರುವ, ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿರುವ ‘ಗೀಜಗ ಹಕ್ಕಿ...’ ಹಾಡು ಎಲ್ಲೆಲ್ಲೂ ಕೇಳಿಬರುತ್ತಿದೆ. ಕೋಕ್ ಸ್ಟುಡಿಯೊದಲ್ಲಿ ಪ್ರಸ್ತುತಪಡಿಸಿದ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಯೂ ಈ ಹಾಡಿಗೆ ದಕ್ಕಿದೆ.

‘ಗೀಜಗ ಹಕ್ಕಿ ಸುಳ್ ನೇಯೋದಿಲ್ವಂತೆ...’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅನುರಣಿಸುತ್ತಿರುವ ಈ ಹಾಡಿನ ಹಿಂದೆ ಹಲವು ವೈಶಿಷ್ಟಗಳು ಸೇರಿಕೊಂಡಿವೆ.

ಒಂದು, ವಿಶಿಷ್ಟ ಕಂಠದಿಂದ ಮನೆ ಮಾತಾಗಿರುವ ಯುವ ಗಾಯಕ ಸಂಚಿತ್ ಹೆಗಡೆ ಈ ಹಾಡು ಹಾಡಿರುವುದು. ಮತ್ತೊಂದು, ಭಿನ್ನ ಧಾಟಿಯ ಸಂಗೀತ ಹೊರತರುವ ಕೋಕ್ ಸ್ಟುಡಿಯೊಗೆ ಪದಾರ್ಪಣೆ ಮಾಡಿದ ಮೊದಲ ಕನ್ನಡ ಹಾಡು ಎನ್ನುವುದು. ಮಗದೊಂದು, ಈ ಹಾಡಿಗೆ ಸಂಚಿತ್ ಹೆಗಡೆ ಸ್ವತಃ ಸ್ವರ ಸಂಯೋಜನೆ ಮಾಡಿರುವುದು. ಕೊನೆಯದಾಗಿ, ಗೀಜಗ ಹಕ್ಕಿ ಮೂಲಕ ಸತ್ಯ ಹರಿಶ್ಚಂದ್ರನ ಸತ್ಯದ ಆದರ್ಶದ ಕಥೆಯನ್ನು ಈಗಿನ ಕಾಲಕ್ಕೆ, ಈಗಿನ ರೀತಿಯಲ್ಲೇ ಹೇಳಲು ಹೊರಟಿರುವುದು.

ಈ ಎಲ್ಲಾ ವಿಶೇಷಗಳು ಕೂಡಿ ಕನ್ನಡದಲ್ಲಿ ಭಿನ್ನ ಧಾಟಿಯ ಹಾಡೊಂದು ರೂಪುಗೊಂಡಿದೆ. ಕನ್ನಡಿಗರ ಮನಸ್ಸನ್ನೂ ತಟ್ಟುತ್ತಿದೆ. 

ಈ ಹಾಡು ರೂಪುಗೊಂಡಿದ್ದು ಹೇಗೆ? ಎಲ್ಲಿಯ ಗೀಜಗ ಹಕ್ಕಿ, ಎಲ್ಲಿಯ ಹರಿಶ್ಚಂದ್ರ? ಎಲ್ಲಿಯ ಯಕ್ಷಗಾನ, ಎಲ್ಲಿಯ ಆಧುನಿಕ ಸಂಗೀತ?– ಈ ಪ್ರಶ್ನೆಗಳಿಗೆ ಉತ್ತರದಂತೆ, ಆಸಕ್ತಿದಾಯಕ ಹಿನ್ನೆಲೆಯೊಂದಿದೆ.

ದೇಶದಲ್ಲಿನ ಭಿನ್ನ ಕಂಠ, ವಿಭಿನ್ನ ಶೈಲಿ–ಪ್ರಕಾರದ ಸಂಗೀತಕ್ಕೆ ವೇದಿಕೆಯಂತಿರುವ ‘ಕೋಕ್‌ ಸ್ಟುಡಿಯೊ ಭಾರತ್‌’ನ ಅಂಕುರ್ ತಿವಾರಿ ಅವರು ಗಾಯಕ ಸಂಚಿತ್ ಹೆಗಡೆ ಅವರನ್ನು ಸಂಪರ್ಕಿಸಿ, ಒಂದೊಳ್ಳೆ ಕಥೆ ನಿರೂಪಿಸುವಂಥ ಹಾಡು ಹೆಣೆಯುವ ಹೊಣೆಗಾರಿಕೆ ವಹಿಸಿದರು. ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ ಸಂಚಿತ್ ಮನಸ್ಸಿಗೆ ತಕ್ಷಣ ಹೊಳೆದದ್ದೇ ಸತ್ಯ ಹರಿಶ್ಚಂದ್ರನ ಕಥೆ. ಯಕ್ಷಗಾನದಲ್ಲಿ ಹರಿಶ್ಚಂದ್ರ ಪ್ರಸಂಗ ನೋಡಿ ಮೆಚ್ಚಿದ್ದ ಸಂಚಿತ್‌ ಅವರಲ್ಲಿ, ಇದನ್ನೇ ಫ್ಯೂಷನ್‌ ಸಂಗೀತದಲ್ಲಿ ರೆಕಾರ್ಡ್ ಮಾಡಿದರೆ ಹೇಗೆ ಎಂಬ ಆಲೋಚನೆ ಹುಟ್ಟಿಕೊಂಡಿತ್ತು. 

ಆ ಆಲೋಚನೆ ಹಾಡಾದ ಬಗೆಯನ್ನು ಸಂಚಿತ್ ಹಂಚಿಕೊಂಡಿದ್ದು ಹೀಗೆ...

ಹರಿಶ್ಚಂದ್ರನ ನೀತಿ; ಯಕ್ಷಗಾನದ ಪ್ರೀತಿ

ನನಗೆ ಯಕ್ಷಗಾನ ಎಂದರೆ ತುಂಬಾ ಪ್ರೀತಿ. ಇದರಲ್ಲಿನ ಹರಿಶ್ಚಂದ್ರ ಪ್ರಸಂಗ ನನ್ನನ್ನು ಬಹಳ ಸೆಳೆದಿತ್ತು ಕೂಡ. ಹೀಗಾಗಿ ಇದೇ ಪ್ರಸಂಗವನ್ನೇ ಫ್ಯೂಷನ್ ಸಂಗೀತದಲ್ಲಿ ನೀಡಿದರೆ ಹೇಗೆ ಅನಿಸಿತು. ನಿಸ್ತುಲ್ಲಾ ಮರ್ಫಿ, ಗೌತಮ್ ಹೆಬ್ಬಾರ್ ನನ್ನೊಂದಿಗೆ ಈ ಪ್ರಕ್ರಿಯೆಯಲ್ಲಿ ಕೂಡಿದರು. ಮುಂಬೈಯಲ್ಲಿ ಮೂವರೂ ಕನ್ನಡಿಗರು ಕುಳಿತು ಈ ಹಾಡಿನ ಬಗ್ಗೆ ಚರ್ಚೆ ಮಾಡಲು ಶುರುವಿಟ್ಟುಕೊಂಡೆವು. 

ಈ ಸಮಾಜದಲ್ಲಿರುವ ಸುಳ್ಳು ದಾರಿಯಲ್ಲಿ ತುಂಬಾ ಸುಲಭವಾಗಿ ಸಾಗಬಹುದು. ಆದರೆ ಹಾಗೆ ಹೋಗುವುದು ಬೇಡ ಎಂಬ ಸಂದೇಶ ಇಟ್ಟುಕೊಂಡು, ಹರಿಶ್ಚಂದ್ರನ ಕಥೆಯನ್ನು ಪ್ರಾತಿನಿಧಿಕವಾಗಿ ಹಾಡಿನಲ್ಲಿ ಒಂದಾಗಿಸಿದೆವು. ನಾನು ಒಂದೆರಡು ಸಾಲು ಬರೆದೆ. ಇದೇ ತಿರುಳನ್ನಿಟ್ಟುಕೊಂಡು ನಾಗಾರ್ಜುನ ಶರ್ಮಾ ಹಾಡಿಗೆ ಸಾಹಿತ್ಯ ಬರೆದರು. ಹಾಡಿಗೆ ಸ್ವರ ಸಂಯೋಜನೆ ನನ್ನದು. ನಂತರ ಸಂಗೀತ ಸಂಯೋಜಕ ಚರಣ್ ರಾಜ್ ಅವರ ಬಳಿ ಹಾಡಿನ ಬಗ್ಗೆ ಪ್ರಸ್ತಾಪ ಮಾಡಿದೆ. ಹೀಗೊಂದು ಹಾಡು ಮಾಡುತ್ತಿದ್ದೇನೆ, ಪ್ರೊಡಕ್ಷನ್ ಸಹಾಯ ಬೇಕು ಎಂದೆ. ತುಂಬಾ ಪ್ರೀತಿಯಿಂದ ಒಪ್ಪಿಕೊಂಡರು.

ಈ ಹಾಡಿಗೆ ಯಕ್ಷಗಾನದ್ದೇ ಫ್ಲೇವರ್ ಬೇಕಿತ್ತು. ಇದಕ್ಕೆ ಪ್ರಸನ್ನ ಹೆಗಡೆಯವರ ಭಾಗವತ ದನಿ ಜೊತೆಯಾಯಿತು. ಅದು ಹಾಡಿಗೆ ಅನನ್ಯ ಶೈಲಿ ಕೊಟ್ಟಿತು. ಬೇರೆ ಬೇರೆ ಕಡೆಯ ಹಲವು ಕಲಾವಿದರು ಇದರಲ್ಲಿ ತೊಡಗಿಕೊಂಡರು, ಮಕ್ಕಳು ಹಾಡಿದರು. ಸಾಕಷ್ಟು ಸಂಗೀತ ವಾದ್ಯಗಳ ತಂತು ಹಾಡಿನಲ್ಲಿ ಬೆರೆಯಿತು. ಶಾಸ್ತ್ರೀಯ–ಆಧುನಿಕ ಸಂಗೀತ ಎರಡೂ ಒಂದಾದವು. ಇವೆಲ್ಲವೂ ಕೂಡಿ ಹಾಡೊಂದು ಹೆಣೆದುಕೊಂಡಿತು. 

ಈ ಹಾಡಿನಲ್ಲಿ ಗೀಜಗ ಹಕ್ಕಿ ಪ್ರಸ್ತಾಪ ಬಂದಿದ್ದು ಆಕಸ್ಮಿಕವಾಗಿ. ರೆಕಾರ್ಡಿಂಗ್‌ಗೆ ಅರ್ಧ ಗಂಟೆ ಮುಂಚೆ ಗೀಜಗ ಹಕ್ಕಿ ಪ್ರಸ್ತಾಪ ಹಾಡಿನಲ್ಲಿ ಸೇರಿಕೊಂಡಿತು. ನನ್ನ ಸೋದರ ಸಂಬಂಧಿಗೆ ಪಕ್ಷಿಗಳ ಬಗ್ಗೆ ತುಂಬಾ ಆಸಕ್ತಿ. ಅವನು ಗೀಜಗ ಹಕ್ಕಿ ಬಗ್ಗೆ ಮಾತನಾಡಿದ್ದ. ಅದು ಅಂದವಾಗಿ ಗೂಡು ನೇಯುವ ಬಗ್ಗೆಯೂ ಹೇಳಿದ್ದ. ಇದನ್ನೇ ಹಾಡಿಗೆ ಹೆಣೆದೆವು. ‘ಗೀಜಗ ಹಕ್ಕಿ ಸುಳ್ ನೇಯೋದಿಲ್ವಂತೆ’ ಎಂದು ಸತ್ಯ ಹರಿಶ್ಚಂದ್ರನ ಆದರ್ಶ ಹಕ್ಕಿಯೊಂದಿಗೆ ಹಾಡಾಯಿತು. 

ಚರಣ್‌ರಾಜ್ ಮಾರ್ಗದರ್ಶನ

ಈ ಹಾಡು ಹುಟ್ಟುವಲ್ಲಿ ಸಂಗೀತ ನಿರ್ದೇಶಕ ಚರಣ್‌ರಾಜ್ ಅವರ ಪಾತ್ರವೂ ಹಿರಿದು. ಸಿನಿಮಾ ಸಂಗೀತದಲ್ಲಿ ಚರಣ್‌ರಾಜ್–ಸಂಚಿತ್ ಹೆಗ್ಡೆ ಜೋಡಿ ಮೋಡಿಯನ್ನೇ ಮಾಡಿದೆ, ಯುವ ಕೇಳುಗರ ಚಿತ್ತ ಕದ್ದಿದೆ. ಇದೀಗ ಮತ್ತೆ ಈ ಜೋಡಿ ‘ಗೀಜಗ ಹಕ್ಕಿ’ ಮೂಲಕ ಸದ್ದು ಮಾಡಿದೆ. ಚರಣ್ ರಾಜ್ ಮಾರ್ಗದರ್ಶನದಲ್ಲಿ ಈ ಹಾಡು ಒಂದು ಸುಂದರ ರೂಪ ತಳೆದಿದೆ.

‘ಈ ಹಾಡಿನ ನಿರ್ಮಾಣಕ್ಕೆ ನಾನು ಮಾರ್ಗದರ್ಶನ ಮಾಡಿದೆ ಅಷ್ಟೆ. ಹಾಡಿಗೆ ಇನ್‌ಸ್ಟ್ರುಮೆಂಟೇಷನ್ ಮಾಡಿದೆ. ಹಾಡಿನ ಪರಿಕಲ್ಪನೆ, ಸಂಗೀತ ಸಂಯೋಜನೆ ಹಿಂದೆ ಸಂಚಿತ್ ಹೆಗಡೆ ಪರಿಶ್ರಮ ಸಾಕಷ್ಟಿದೆ. ಸಾಕಷ್ಟು ಕಲಾವಿದರನ್ನೊಳಗೊಂಡ ಈ ತಂಡದ ಪ್ರತಿಯೊಬ್ಬರೂ ಹಾಡಿನ ಯಶಸ್ಸಿನಲ್ಲಿ ಪಾಲುದಾರರು’ ಎಂದು ಖುಷಿಯಿಂದ ಹೇಳುತ್ತಾರೆ ಚರಣ್ ರಾಜ್.

ಸದ್ಯ ಗೀಜಗ ಹಕ್ಕಿಯ ಈ ಹಾಡು ಕನ್ನಡಿಗರ ಕಿವಿ ತುಂಬುತ್ತಿದೆ. ಬೇರೆ ಭಾಷಿಗರ ಚಿತ್ತವೂ ಕನ್ನಡದತ್ತ ವಾಲುವಂತೆ ಮಾಡಿದೆ.

ಕಂಠದಲ್ಲೇ ಗೂಡು ಕಟ್ಟುವಾಗ...
ಕಂಠದಲ್ಲೇ ಗೂಡು ಕಟ್ಟುವಾಗ...
ಕೋಕ್‌ ಸ್ಟುಡಿಯೊ
ಕೋಕ್‌ ಸ್ಟುಡಿಯೊ
ಚರಣ್‌ ರಾಜ್‌
ಚರಣ್‌ ರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT